
ವರ್ಷಾಂತ್ಯದ ರಜಾ ಪ್ರವಾಸದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನಯಾನ ಸಂಸ್ಥೆ ದೆಹಲಿಯಿಂದ ಕೌಲಾಲಂಪುರಕ್ಕೆ ಡಿಸೆಂಬರ್ 20ರಿಂದ ದೈನಂದಿನ ನೇರ ವಿಮಾನ ಸೇವೆ ಆರಂಭಿಸಲಿದೆ.
ಆಗ್ನೇಯ ಏಷ್ಯಾಕ್ಕೆ ಇಂಡಿಗೋ ವಿಮಾನ ಸಂಪರ್ಕ ವಿಸ್ತರಣೆ; ಡಿ.20ರಿಂದ ಕೌಲಾಲಂಪುರಕ್ಕೆ ನೇರ ಹಾರಾಟ
ಇಂಡಿಗೋ ಪ್ರಸ್ತುತ 430ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದ್ದು, ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತಿದೆ. ದೇಶೀಯವಾಗಿ 95ಕ್ಕೂ ಹೆಚ್ಚು ಹಾಗೂ ಅಂತಾರಾಷ್ಟ್ರೀಯವಾಗಿ 40ಕ್ಕೂ ಹೆಚ್ಚು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದೆ.
ವರ್ಷಾಂತ್ಯದ ರಜಾ ಪ್ರವಾಸದ ಹಿನ್ನೆಲೆಯಲ್ಲಿ ಭಾರತದ ಪ್ರಮುಖ ವಿಮಾನಯಾನ ಸಂಸ್ಥೆ ಇಂಡಿಗೋ ಆಗ್ನೇಯ ಏಷ್ಯಾದೊಂದಿಗಿನ ವಿಮಾನ ಸಂಪರ್ಕವನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ. ದೆಹಲಿಯಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ಡಿಸೆಂಬರ್ 20ರಿಂದ ಪ್ರತಿದಿನ ನೇರ ವಿಮಾನ ಸೇವೆ ಆರಂಭಿಸುವುದಾಗಿ ಸಂಸ್ಥೆ ಪ್ರಕಟಿಸಿದೆ.
ಇದರ ಜೊತೆಗೆ ಸಿಂಗಾಪುರ ಮತ್ತು ಬ್ಯಾಂಕಾಕ್‌ಗೆ ಹೆಚ್ಚುವರಿ ವಿಮಾನ ಸೇವೆಗಳನ್ನು ಪರಿಚಯಿಸಲಿದೆ. ಡಿಸೆಂಬರ್ 20ರಿಂದ ದೆಹಲಿ-ಸಿಂಗಾಪುರ ಮಾರ್ಗದಲ್ಲಿ ಪ್ರತಿದಿನ ಹೆಚ್ಚುವರಿ ವಿಮಾನ ಹಾರಾಟ ಆರಂಭವಾಗಲಿದ್ದು, ವಾರದ ಒಟ್ಟು ನಿರ್ಗಮನಗಳ ಸಂಖ್ಯೆ 14ಕ್ಕೆ ಏರಿಕೆಯಾಗಲಿದೆ. ಡಿಸೆಂಬರ್ 28ರಿಂದ ದೆಹಲಿ-ಬ್ಯಾಂಕಾಕ್ ಮಾರ್ಗದಲ್ಲಿ ವಾರಕ್ಕೆ ಹೆಚ್ಚುವರಿ ಐದು ವಿಮಾನಗಳನ್ನು ಪರಿಚಯಿಸಲಾಗುತ್ತದೆ. ಇದರಿಂದ ಈ ಮಾರ್ಗದ ವಾರದ ಒಟ್ಟು ವಿಮಾನಗಳ ಸಂಖ್ಯೆ 19ಕ್ಕೆ ಹೆಚ್ಚಲಿದೆ.
ದೆಹಲಿಯಿಂದ ಅಂತಾರಾಷ್ಟ್ರೀಯ ಸಂಪರ್ಕಕ್ಕೆ ಮತ್ತಷ್ಟು ಬಲ
ಪ್ರಸ್ತುತ ಇಂಡಿಗೋ ದೆಹಲಿಯಿಂದ ಥಾಯ್ಲೆಂಡ್, ಸಿಂಗಾಪುರ, ವಿಯೆಟ್ನಾಂ ಮತ್ತು ಇಂಡೋನೇಷ್ಯಾಗೆ ವಾರಕ್ಕೆ 50ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿದೆ. ಇದೀಗ ಕೌಲಾಲಂಪುರವನ್ನು ಹೊಸ ಮಾರ್ಗವಾಗಿ ಸೇರ್ಪಡೆಗೊಳಿಸುವುದರೊಂದಿಗೆ ಆಗ್ನೇಯ ಏಷ್ಯಾದ ಪ್ರಮುಖ ಪ್ರವಾಸೋದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರಗಳಿಗೆ ಭಾರತದ ಸಂಪರ್ಕ ಮತ್ತಷ್ಟು ಸುಧಾರಿಸಲಿದೆ.
ಈಗಾಗಲೇ ಬೆಂಗಳೂರಿನಿಂದ ಮತ್ತು ಚೆನ್ನೈನಿಂದ ಕೌಲಾಲಂಪುರಕ್ಕೆ ನೇರ ವಿಮಾನ ಸೇವೆಗಳನ್ನು ಇಂಡಿಗೋ ನಿರ್ವಹಿಸುತ್ತಿದೆ. ದೆಹಲಿಯಿಂದಲೂ ಈ ಸೇವೆ ಆರಂಭವಾಗುವುದರಿಂದ ಪ್ರಯಾಣಿಕರಿಗೆ ಮತ್ತೊಂದು ಆಯ್ಕೆ ಲಭ್ಯವಾಗಲಿದೆ.
ವೆಬ್‌ಸೈಟ್, ಆ್ಯಪ್ ಮೂಲಕ ಟಿಕೆಟ್ ಬುಕ್ಕಿಂಗ್
ಪ್ರಯಾಣಿಕರು ಇಂಡಿಗೋ ಅಧಿಕೃತ ವೆಬ್‌ಸೈಟ್, ಮೊಬೈಲ್ ಆ್ಯಪ್ ಅಥವಾ ಅಧಿಕೃತ ಟ್ರಾವೆಲ್ ಪಾಲುದಾರರ ಮೂಲಕ ಟಿಕೆಟ್ ಕಾಯ್ದಿರಿಸಬಹುದು. ಪ್ರಯಾಣಿಕರು ತಮ್ಮ ಆಯ್ಕೆಗೆ ಅನುಗುಣವಾಗಿ ಆಹಾರ, ಪಾನೀಯ ಸೇರಿದಂತೆ ವಿವಿಧ ಸೇವೆಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳುವ ಅವಕಾಶವನ್ನೂ ಸಂಸ್ಥೆ ಒದಗಿಸಿದೆ.
ಇಂಡಿಗೋಸ್ಟ್ರೆಚ್ ಬಿಸಿನೆಸ್ ಕ್ಯಾಬಿನ್ ಸೇವೆ ದೆಹಲಿ-ಸಿಂಗಾಪುರ ಮತ್ತು ದೆಹಲಿ-ಬ್ಯಾಂಕಾಕ್ ವಿಮಾನಗಳಲ್ಲಿ ಲಭ್ಯವಿದೆ. ಅಲ್ಲದೆ, UpFront ಮತ್ತು Flexi ಆಯ್ಕೆಗಳ ಮೂಲಕ ಆರಾಮದಾಯಕ ಆಸನಗಳು, ತಿಂಡಿಗಳು ಹಾಗೂ ಪ್ರಯಾಣದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಸೌಲಭ್ಯಗಳನ್ನು ಪಡೆಯಬಹುದು.
430ಕ್ಕೂ ಹೆಚ್ಚು ವಿಮಾನಗಳೊಂದಿಗೆ ಇಂಡಿಗೋ ಕಾರ್ಯಾಚರಣೆ
ಇಂಡಿಗೋ ಪ್ರಸ್ತುತ 430ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದ್ದು, ಪ್ರತಿದಿನ ಸುಮಾರು 2,200 ವಿಮಾನಗಳನ್ನು ನಿರ್ವಹಿಸುತ್ತಿದೆ. ದೇಶೀಯವಾಗಿ 95ಕ್ಕೂ ಹೆಚ್ಚು ಹಾಗೂ ಅಂತಾರಾಷ್ಟ್ರೀಯವಾಗಿ 40ಕ್ಕೂ ಹೆಚ್ಚು ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತಿದೆ. 2026ರ ಹಣಕಾಸು ವರ್ಷದಲ್ಲಿ 12.3 ಕೋಟಿಗೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.
2026ರ ಸ್ಕೈಟ್ರ್ಯಾಕ್ಸ್ ವಿಶ್ವ ವಿಮಾನಯಾನ ಪ್ರಶಸ್ತಿಗಳಲ್ಲಿ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಕಡಿಮೆ ದರದ ವಿಮಾನಯಾನ ಸಂಸ್ಥೆ ಎಂಬ ಗೌರವವನ್ನು ಇಂಡಿಗೋ ಪಡೆದುಕೊಂಡಿದೆ. ಜೊತೆಗೆ ಅತ್ಯುತ್ತಮ ಕ್ಯಾಬಿನ್ ಸಿಬ್ಬಂದಿ ಮತ್ತು ಸ್ವಚ್ಛ ವಿಮಾನಯಾನ ಸಂಸ್ಥೆ ಎಂಬ ಪ್ರಶಸ್ತಿಗಳನ್ನೂ ತನ್ನದಾಗಿಸಿಕೊಂಡಿದೆ.

