
ಇಂಡಿಗೋ ವಿಮಾನ
ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನದ ತುರ್ತು ಭೂಸ್ಪರ್ಶ: ಎಂಜಿನ್ ವೈಫಲ್ಯದ ಶಂಕೆ
ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದ್ದು, ಲ್ಯಾಂಡಿಂಗ್ ಬಳಿಕ ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲಾಗಿದೆ.
ಶನಿವಾರ ಬೆಳಿಗ್ಗೆ ವಿಶಾಖಪಟ್ಟಣಂನಿಂದ ದೆಹಲಿಗೆ ಆಗಮಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಎಂಜಿನ್ ವೈಫಲ್ಯದ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ.
ಬೆಳಿಗ್ಗೆ 10. 53 ರ ಸುಮಾರಿಗೆ ವಿಮಾನದ ಪೈಲಟ್‌ಗಳು ತುರ್ತು ಭೂಸ್ಪರ್ಶದ ಬಗ್ಗೆ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ, ರನ್‌ವೇ 28 ಅನ್ನು ಹೈ-ಅಲರ್ಟ್‌ನಲ್ಲಿರಿಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಅಗ್ನಿಶಾಮಕ ದಳದ ವಾಹನಗಳು ಹಾಗೂ ತುರ್ತು ಸೇವಾ ಸಿಬ್ಬಂದಿಗಳನ್ನು ಸ್ಥಳಕ್ಕೆ ರವಾನಿಸಲಾಯಿತು.
ಎಲ್ಲಾ ಪ್ರಯಾಣಿಕರು ಸೇಫ್
ಬೆಳಿಗ್ಗೆ 11 ಗಂಟೆ ಸುಮಾರಿಗೆ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ವಿಮಾನದಲ್ಲಿ ಒಟ್ಟು 161 ಪ್ರಯಾಣಿಕರು ಇದ್ದರು ಎಂದು ವರದಿಯಾಗಿದ್ದು, ಲ್ಯಾಂಡಿಂಗ್ ಬಳಿಕ ಎಲ್ಲರನ್ನೂ ಸುರಕ್ಷಿತವಾಗಿ ಹೊರತರಲಾಗಿದೆ. ಈ ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ವಿಮಾನಕ್ಕೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಪೈಲಟ್‌ಗಳ ಸಮಯಪ್ರಜ್ಞೆ ಹಾಗೂ ಅಧಿಕಾರಿಗಳ ತ್ವರಿತ ಕಾರ್ಯಾಚರಣೆಯಿಂದಾಗಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಪ್ರಸ್ತುತ, ವಿಮಾನಯಾನ ಸಂಸ್ಥೆಯು ತಾಂತ್ರಿಕ ದೋಷದ ಕುರಿತು ನಿಖರವಾದ ಕಾರಣವನ್ನು ಪತ್ತೆಹಚ್ಚಲು ಪರಿಶೀಲನೆ ನಡೆಸುತ್ತಿದೆ.

