ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ದೇಹದಲ್ಲಿ ಹೃದಯ, ಮೆದುಳೇ ಮಾಯ!
x

ವೆನೆಜುವೆಲಾದಲ್ಲಿ ಮೃತಪಟ್ಟ ಭಾರತೀಯ ನಾವಿಕನ ದೇಹದಲ್ಲಿ ಹೃದಯ, ಮೆದುಳೇ ಮಾಯ!

ವೆನೆಜುವೆಲಾದಲ್ಲಿ ನಿಗೂಢವಾಗಿ ಮೃತಪಟ್ಟ ಉತ್ತರ ಪ್ರದೇಶದ ಮರ್ಚೆಂಟ್ ನೇವಿ ಉದ್ಯೋಗಿ ರಾಕೇಶ್ ಚೌಹಾಣ್ ಅವರ ಮೃತದೇಹ ಭಾರತಕ್ಕೆ ಬಂದಾಗ ಭೀಕರ ಸತ್ಯ ಬಯಲಾಗಿದೆ.


Click the Play button to hear this message in audio format

ಕಳೆದ ಮೇ ತಿಂಗಳಲ್ಲಿ ದಕ್ಷಿಣ ಅಮೆರಿಕಾದ ವೆನೆಜುವೆಲಾದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾದ 33 ವರ್ಷದ ಭಾರತೀಯ ನಾವಿಕ ರಾಕೇಶ್ ಚೌಹಾಣ್ ಅವರ ಸಾವು ಇದೀಗ ಭೀಕರ ತಿರುವು ಪಡೆದುಕೊಂಡಿದೆ. ವೆನೆಜುವೆಲಾದಿಂದ ಭಾರತಕ್ಕೆ ತರಲಾದ ಅವರ ಮೃತದೇಹವನ್ನು ಉತ್ತರ ಪ್ರದೇಶದಲ್ಲಿ ಮರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ, ದೇಹದ ಒಳಗಿದ್ದ ಪ್ರಮುಖ ಅಂಗಾಂಗಗಳೇ ಮಾಯವಾಗಿರುವುದು ಬೆಳಕಿಗೆ ಬಂದಿದೆ! ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಅಂಗಾಂಗ ಕಳ್ಳತನದ ಜಾಲದ ಶಂಕೆಯನ್ನು ಮೂಡಿಸಿದೆ.

ಉತ್ತರ ಪ್ರದೇಶದ ಡಿಯೋರಿಯಾ ನಿವಾಸಿಯಾದ ರಾಕೇಶ್ ಚೌಹಾಣ್ ಮರ್ಚೆಂಟ್ ನೇವಿ ಉದ್ಯೋಗಿಯಾಗಿದ್ದು, ನವೆಂಬರ್ 2025 ರಲ್ಲಿ 'ಎಕ್ಸ್‌ಫಿನಿಟಿ' ಕಂಪನಿಯ ಮೂಲಕ ವೆನೆಜುವೆಲಾಗೆ ಹಡಗಿನಲ್ಲಿ ಕೆಲಸಕ್ಕೆ ತೆರಳಿದ್ದರು. ಮೇ ತಿಂಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ವೆನೆಜುವೆಲಾ ಸರ್ಕಾರ ಯಾವುದೇ ಅಧಿಕೃತ ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡದೆ ಕೇವಲ ಶವವನ್ನು ಭಾರತಕ್ಕೆ ಕಳುಹಿಸಿಕೊಟ್ಟಿತ್ತು.

ಪೋಸ್ಟ್‌ಮಾರ್ಟಮ್ ವರದಿ ನೋಡಿ ಬೆಚ್ಚಿಬಿದ್ದ ವೈದ್ಯರು

ಮಗನ ಸಾವಿನ ಬಗ್ಗೆ ಅನುಮಾನಗೊಂಡ ತಂದೆ ರಾಮ್ ದೇವ್ ಚೌಹಾಣ್ ಅವರು ಜಿಲ್ಲಾಧಿಕಾರಿಗಳ (DM) ಅನುಮತಿ ಪಡೆದು ಜೂನ್ 4 ರಂದು ಡಿಯೋರಿಯಾದಲ್ಲಿ ಮರು ಮರಣೋತ್ತರ ಪರೀಕ್ಷೆ ನಡೆಸಲು ಕೋರಿದರು. ಪೊಲೀಸರ ಸಮ್ಮುಖದಲ್ಲಿ ವೈದ್ಯರ ತಂಡ ಶವ ಪರೀಕ್ಷೆ ನಡೆಸಿದಾಗ ಇಡೀ ವೈದ್ಯಕೀಯ ಲೋಕವೇ ಬೆಚ್ಚಿಬೀಳುವಂತಹ ಸತ್ಯ ಹೊರಬಂದಿದೆ. ರಾಕೇಶ್ ಅವರ ಮೃತದೇಹದಲ್ಲಿ ಒಂದೇ ಒಂದು ಆಂತರಿಕ ಅಂಗಾಂಗವೂ ಇರಲಿಲ್ಲ!

ವರದಿಯ ಪ್ರಕಾರ ಮೆದುಳು ಮತ್ತು ಬೆನ್ನುಹುರಿ, ಹೃದಯ ಮತ್ತು ಎರಡು ಶ್ವಾಸಕೋಶಗಳು, ಲಿವರ್, ಮೂತ್ರಪಿಂಡಗಳು (ಕಿಡ್ನಿ) ಮತ್ತು ಮೇದೋಜ್ಜೀರಕ ಗ್ರಂಥಿ , ಗುಲ್ಮ (ಪ್ಲೀಹ), ಜಠರ ಮತ್ತು ಕರಳುಗಳು, ಥೈರಾಯ್ಡ್, ಗಂಟಲಕುಳಿ ಮತ್ತು ಶ್ವಾಸನಾಳ ರಾಕೇಶ್‌ ದೇಹದಿಂದ ಕಾಣೆಯಾಗಿರುವ ಪ್ರಮುಖ ಅಂಗಗಳು

ವೈದ್ಯರ ರಿಪೋರ್ಟ್‌ನಲ್ಲಿ ಏನಿದೆ?:

"ದೇಹದ ಕುತ್ತಿಗೆಯಿಂದ ಕೆಳಭಾಗದವರೆಗೆ ಭೀಕರವಾಗಿ ಹೊಲಿಯಲಾಗಿತ್ತು (22 ಸ್ಟಿಚ್‌ಗಳು) ಹಾಗೂ ತಲೆಯ ಹಿಂಭಾಗದಲ್ಲಿ ಕಿವಿಯಿಂದ ಕಿವಿಗೆ 21 ಸ್ಟಿಚ್‌ಗಳಿದ್ದವು. ದೇಹದಲ್ಲಿ ಯಾವುದೇ ಜೀವಂತ ಅವಧಿಯ ಗಾಯದ ಗುರುತುಗಳಿಲ್ಲ. ಶವವನ್ನು ಸುಮಾರು ಒಂದು ತಿಂಗಳ ಕಾಲ ಡೀಪ್ ಫ್ರೀಜ್‌ನಲ್ಲಿ ಇಡಲಾಗಿತ್ತು. ಆದರೆ ದೇಹದಲ್ಲಿ ಯಾವುದೇ ಆಂತರಿಕ ಅಂಗಾಂಗಗಳು ಇಲ್ಲದೇ ಇರುವ ಕಾರಣ ಸಾವಿಗೆ ನಿಖರವಾದ ಕಾರಣವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ" ಎಂದು ಯುಪಿ ವೈದ್ಯರು ವರದಿಯಲ್ಲಿ ಬರೆದಿದ್ದಾರೆ.

ರಾಕೇಶ್ ಅವರ ಕುಟುಂಬಸ್ಥರು ಮರ್ಚೆಂಟ್ ನೇವಿ ಕಂಪನಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. "ಹಡಗಿನಲ್ಲಿ ಕೆಲಸ ಮಾಡುವಾಗ ರಾಕೇಶ್ ಕೆಳಗೆ ಬಿದ್ದಿದ್ದಾರೆ, ತೀವ್ರ ಗಾಯಗಳಾಗಿವೆ ಎಂದು ಮೊದಲು ಫೋನ್ ಮಾಡಿದ್ದರು. ಮಾರನೇ ದಿನವೇ ಆತ ಬದುಕುವುದು ಶೇ. 95 ರಷ್ಟು ಕಷ್ಟ ಎಂದರು. ಸಂಜೆಯ ವೇಳೆಗೆ ಆತ ಮೃತಪಟ್ಟಿದ್ದಾನೆ ಎಂದು ಖಚಿತಪಡಿಸಿದರು. ಬಿದ್ದ ಪೆಟ್ಟಿನಿಂದ ಸತ್ತಿದ್ದಾನೆ ಎಂದಿದ್ದ ಕಂಪನಿ, ಒಂದು ವಾರದಲ್ಲಿ ಶವ ತರುವುದಾಗಿ ಹೇಳಿ ಒಂದು ತಿಂಗಳು ತಡ ಮಾಡಿತು" ಎಂದು ರಾಕೇಶ್ ತಂದೆ ಆಕ್ರೋಶ ಹೊರಹಾಕಿದ್ದಾರೆ.

ಎಫ್‌ಎಸ್‌ಯುಐ (FSUI) ಆಕ್ರೋಶ

ಭಾರತೀಯ ನಾವಿಕರ ಒಕ್ಕೂಟ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ವಿದೇಶಗಳಲ್ಲಿ ಭಾರತೀಯ ಕಾರ್ಮಿಕರ ಮತ್ತು ನಾವಿಕರ ರಕ್ಷಣೆ ಎಲ್ಲಿದೆ? ಎಂದು ಪ್ರಶ್ನಿಸಿರುವ ಒಕ್ಕೂಟವು, "ಇದು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನಮ್ಮ ನಾವಿಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ವೆನೆಜುವೆಲಾ ಅಧಿಕಾರಿಗಳು ಮತ್ತು ಹಡಗಿನ ಕಂಪನಿ ಇದರ ಹೊಣೆ ಹೊರಬೇಕು. ವೆನೆಜುವೆಲಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ತಕ್ಷಣವೇ ಮಧ್ಯಪ್ರವೇಶಿಸಿ ಅಂತರರಾಷ್ಟ್ರೀಯ ಮಟ್ಟದ ಉನ್ನತ ತನಿಖೆ ನಡೆಸಿ, ಕುಟುಂಬಕ್ಕೆ ನ್ಯಾಯ ಹಾಗೂ ಸೂಕ್ತ ಪರಿಹಾರ ಕೊಡಿಸಬೇಕು" ಎಂದು ಸಾಮಾಜಿಕ ಜಾಲತಾಣ 'X' ನಲ್ಲಿ ಆಗ್ರಹಿಸಿದೆ.

ಸಾಮಾನ್ಯವಾಗಿ ಮೊದಲ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ಕೆಲವು ಅಂಗಾಂಶಗಳನ್ನು ಅಥವಾ ಕೆಲವೊಮ್ಮೆ ಅಂಗಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ, ಯಾವುದೇ ವಿವರಣೆ ಅಥವಾ ಅಧಿಕೃತ ಆಟೋಪ್ಸಿ ರಿಪೋರ್ಟ್ ನೀಡದೆ ಇಡೀ ಶರೀರದ ಎಲ್ಲಾ ಅಂಗಾಂಗಗಳನ್ನೇ ಖಾಲಿ ಮಾಡಿರುವುದು ಈ ಕರಾಳ ಸಾವಿನ ಹಿಂದೆ ಅಂತರರಾಷ್ಟ್ರೀಯ ಅಂಗಾಂಗ ಕಳ್ಳತನದ ಜಾಲ ಕೆಲಸ ಮಾಡಿರಬಹುದು ಎಂಬ ಅನುಮಾನವನ್ನು ದಟ್ಟವಾಗಿಸಿದೆ.

Read More
Next Story