ಭಾರತೀಯ ರೈಲ್ವೆಯಲ್ಲಿ 1.27 ಕೋಟಿ ಬೆಡ್‌ರೋಲ್‌ ಕಿಟ್‌ ಮಾಯ; 104 ಕೋಟಿ ರೂ.ಗೂ ಹೆಚ್ಚು ನಷ್ಟ
x

ಭಾರತೀಯ ರೈಲ್ವೆಯಲ್ಲಿ 1.27 ಕೋಟಿ ಬೆಡ್‌ರೋಲ್‌ ಕಿಟ್‌ ಮಾಯ; 104 ಕೋಟಿ ರೂ.ಗೂ ಹೆಚ್ಚು ನಷ್ಟ

ಆರ್‌ಟಿಐ ಮಾಹಿತಿ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಬೆಡ್‌ರೋಲ್‌ ವಸ್ತುಗಳ ಕಳ್ಳತನದಿಂದ ರೈಲ್ವೆಯ ಬೆಡ್‌ರೋಲ್‌ ಗುತ್ತಿಗೆದಾರರಿಗೆ ಸುಮಾರು 104.51 ಕೋಟಿ ರೂ. ನಷ್ಟ ಉಂಟಾಗಿದೆ.


ಭಾರತೀಯ ರೈಲ್ವೆಯ ಎಸಿ (AC) ಬೋಗಿಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರಿಗೂ ಎರಡು ಬೆಡ್‌ಶೀಟ್‌, ಒಂದು ದಿಂಬು, ದಿಂಬಿನ ಕವರ್‌, ಒಂದು ಕಂಬಳಿ ಹಾಗೂ ಮುಖ ಒರೆಸಿಕೊಳ್ಳುವ ಟವೆಲ್‌ ಒಳಗೊಂಡ ಬೆಡ್‌ರೋಲ್‌ ಕಿಟ್‌ ನೀಡಲಾಗುತ್ತದೆ. ಆದರೆ, ಸಾವಿರ ಪ್ರಯಾಣಿಕರಲ್ಲಿ ಕನಿಷ್ಠ ಒಬ್ಬರು ಈ ವಸ್ತುಗಳಲ್ಲಿ ಒಂದನ್ನಾದರೂ ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿರುವುದು ಆತಂಕಕಾರಿ ಅಂಶವಾಗಿ ಹೊರಹೊಮ್ಮಿದೆ.

ದ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕೋವಿಡ್‌ ಬಳಿಕ 2022ರ ಜನವರಿಯಿಂದ ಬೆಡ್‌ರೋಲ್‌ ಸೇವೆ ಸಂಪೂರ್ಣ ಪುನರಾರಂಭವಾದ ನಂತರದಿಂದ 2026ರ ಮೇ ತಿಂಗಳವರೆಗೆ ದೇಶದಾದ್ಯಂತ ಒಟ್ಟು 1.27 ಕೋಟಿ ಬೆಡ್‌ರೋಲ್‌ ವಸ್ತುಗಳು ಕಳುವಾಗಿವೆ. ಈ ಅವಧಿಯಲ್ಲಿ ಕಳ್ಳತನದ ಪ್ರಮಾಣವು 2022ರಿಂದ 2025ರ ನಡುವೆ 56 ಶೇಕಡಾ ಹೆಚ್ಚಳ ಕಂಡಿದೆ.

ಈ ಮಾಹಿತಿ ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಭಾರತೀಯ ರೈಲ್ವೆಯ 69 ವಿಭಾಗಗಳಿಂದ ಕೋರಲಾಗಿತ್ತು. ಅವುಗಳಲ್ಲಿ 16 ರೈಲ್ವೆ ವಲಯಗಳ 54 ವಿಭಾಗಗಳು ಮಾಹಿತಿ ನೀಡಿವೆ.

104.51 ಕೋಟಿ ರೂ. ನಷ್ಟ

ಆರ್‌ಟಿಐ ಮಾಹಿತಿ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ಬೆಡ್‌ರೋಲ್‌ ವಸ್ತುಗಳ ಕಳ್ಳತನದಿಂದ ರೈಲ್ವೆಯ ಬೆಡ್‌ರೋಲ್‌ ಗುತ್ತಿಗೆದಾರರಿಗೆ ಸುಮಾರು 104.51 ಕೋಟಿ ರೂ. ನಷ್ಟ ಉಂಟಾಗಿದೆ. ರೈಲ್ವೆ ಅಧಿಕಾರಿಯೊಬ್ಬರು ಇದನ್ನು ಗಂಭೀರ ಸಮಸ್ಯೆ ಎಂದು ಕರೆದಿದ್ದು, ಕಳ್ಳತನ ತಡೆಗಟ್ಟಲು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಯಾಣಿಕರ ನೆಚ್ಚಿನ ಗುರಿ ಯಾವುದು?

ಬೆಡ್‌ರೋಲ್‌ ಕಿಟ್‌ನಲ್ಲಿರುವ ಎಲ್ಲ ವಸ್ತುಗಳಲ್ಲಿ ಮುಖ ಒರೆಸಿಕೊಳ್ಳುವ ಟವೆಲ್‌ ಹೆಚ್ಚು ಕಳುವಾಗುತ್ತಿದೆ. ಗಾತ್ರದಲ್ಲಿ ಚಿಕ್ಕದಾಗಿರುವ ಕಾರಣ ಅದನ್ನು ಸುಲಭವಾಗಿ ಬ್ಯಾಗ್‌ನಲ್ಲಿ ಇರಿಸಿಕೊಳ್ಳಬಹುದಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಕಳುವಾದ ವಸ್ತುಗಳ ವಿವರ ಹೀಗಿದೆ:

• ಮುಖ ಒರೆಸುವ ಟವೆಲ್‌ – 46.54 ಲಕ್ಷ

• ಬೆಡ್‌ಶೀಟ್‌ – 41.13 ಲಕ್ಷ

• ದಿಂಬಿನ ಕವರ್‌ – 23.59 ಲಕ್ಷ

• ಕಂಬಳಿ – 12.95 ಲಕ್ಷ

• ದಿಂಬು – 2.76 ಲಕ್ಷ

ದಿಂಬು ಗಾತ್ರದಲ್ಲಿ ದೊಡ್ಡದಿರುವುದರಿಂದ ಅದನ್ನು ಕಳವು ಮಾಡುವವರ ಸಂಖ್ಯೆ ಅತ್ಯಂತ ಕಡಿಮೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯಾವ ರೈಲ್ವೆ ವಿಭಾಗಗಳಲ್ಲಿ ಹೆಚ್ಚು ಕಳ್ಳತನ?

ಆರ್‌ಟಿಐ ಮಾಹಿತಿಯ ಪ್ರಕಾರ, ಹೆಚ್ಚು ಬೆಡ್‌ರೋಲ್‌ ಕಳ್ಳತನ ದಾಖಲಾಗಿರುವ ವಿಭಾಗಗಳು ಇವು:

• ಬಿಕಾನೇರ್‌ – 25.76 ಲಕ್ಷ ವಸ್ತುಗಳು

• ರಾಂಚಿ – 9.31 ಲಕ್ಷ

• ದೆಹಲಿ – 8.21 ಲಕ್ಷ

• ಮುಂಬೈ – 8.17 ಲಕ್ಷ

• ಜೋಧ್‌ಪುರ್‌ – 8.09 ಲಕ್ಷ

• ಅಹಮದಾಬಾದ್‌ – 6.94 ಲಕ್ಷ

ಹೆಚ್ಚುವರಿ ವೆಚ್ಚದ ಹೊರೆ

ರೈಲ್ವೆ ವಕ್ತಾರರ ಪ್ರಕಾರ, ಎಸಿ ಬೋಗಿಗಳಲ್ಲಿ ಬೆಡ್‌ರೋಲ್‌ ವಿತರಣೆ ಮಾಡುವ ಹೊಣೆಗಾರಿಕೆ ಗುತ್ತಿಗೆ ಸಂಸ್ಥೆಗಳ ಮೇಲಿದೆ. ಪ್ರಯಾಣದ ಬಳಿಕ ವಸ್ತುಗಳ ಕೊರತೆ ಕಂಡುಬಂದರೆ ಅದರ ವೆಚ್ಚವನ್ನು ಗುತ್ತಿಗೆ ಸಂಸ್ಥೆಗಳೇ ಭರಿಸಬೇಕಾಗುತ್ತದೆ.

ಪ್ರಯಾಣಿಕರಿಂದ ಆಗುತ್ತಿರುವ ನಿರಂತರ ಕಳ್ಳತನದ ಕಾರಣ ಕೊರತೆಯನ್ನು ಭರ್ತಿ ಮಾಡಲು ಹೆಚ್ಚುವರಿ ಬೆಡ್‌ರೋಲ್‌ ಸೆಟ್‌ಗಳನ್ನು ಖರೀದಿಸಬೇಕಾಗುತ್ತಿದ್ದು, ಇದರಿಂದ ವೆಚ್ಚ ಮತ್ತಷ್ಟು ಹೆಚ್ಚುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Read More
Next Story