
ಪಾಸ್‌ಪೋರ್ಟ್ ಪೌರತ್ವ ಪುರಾವೆಯಲ್ಲ; ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವುದು ಹೇಗೆ?
'ಪೌರತ್ವ ಕಾಯ್ದೆ 1955'ರ ಅಡಿಯಲ್ಲಿ ಜನನ ದಾಖಲೆ ಮತ್ತು ಪೋಷಕರ ಪೌರತ್ವದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಲಾಗುತ್ತದೆ. ಎಸ್‌ಐಆರ್ ಹಿನ್ನೆಲೆಯಲ್ಲಿ ಉಂಟಾದ ಗೊಂದಲದಿಂದಾಗಿ ಎಂಇಎ ಇದನ್ನು ಹೇಳಿದೆ.
ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಪ್ರತಿಯೊಬ್ಬರಿಗೂ ಇದೊಂದು ಅಂತಿಮ ಪೌರತ್ವದ ದಾಖಲೆ ಎಂಬ ಭಾವನೆಯನ್ನು ದೂರ ಮಾಡಿರುವ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಭಾರತೀಯ ಪಾಸ್‌ಪೋರ್ಟ್ ಕೇವಲ ವಿದೇಶ ಪ್ರಯಾಣಕ್ಕಾಗಿ ಬಳಸುವ ದಾಖಲೆಯಷ್ಟೇ ಹೊರತು, ಅದು ಪೌರತ್ವದ ಅಂತಿಮ ಅಥವಾ ಸ್ವತಂತ್ರ ಪುರಾವೆಯಲ್ಲ ಎಂದು ಸ್ಪಷ್ಟಪಡಿಸಿದೆ.
ಸಚಿವಾಲಯದ ಇತ್ತೀಚಿನ ಸ್ಪಷ್ಟನೆಯು ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಉಂಟಾದ ಕಾನೂನು ಗೊಂದಲದ ಹಿನ್ನೆಲೆಯಲ್ಲಿ ಬಂದಿದೆ.ಪಾಸ್‌ಪೋರ್ಟ್ ಪಡೆಯುವಾಗ ಆಧಾರ್ ಅಥವಾ ಪ್ಯಾನ್ ಕಾರ್ಡ್‌ಗಳಂತಹ ಗುರುತಿನ ಚೀಟಿಗಳ ಆಧಾರದ ಮೇಲೆ ಸೂಕ್ತ ಪರಿಶೀಲನೆ ನಡೆಸಲಾಗುತ್ತದೆ. ಅಂದರೆ, ಪಾಸ್‌ಪೋರ್ಟ್ ಎಂಬುದು ಪೌರತ್ವದ ಆಧಾರದಲ್ಲಿ ಹುಟ್ಟಿಕೊಂಡ ದಾಖಲೆಯಲ್ಲ, ಬದಲಿಗೆ ಗುರುತಿನ ದಾಖಲೆಗಳ ಆಧಾರದ ಮೇಲೆ ಸಿಗುವ 'ಡೌನ್‌ಸ್ಟ್ರೀಮ್' ದಾಖಲೆಯಾಗಿದೆ. ಕಾನೂನು ದೃಷ್ಟಿಯಲ್ಲಿ ಪಾಸ್‌ಪೋರ್ಟ್ ಕೇಂದ್ರ ಸರ್ಕಾರದ ಆಸ್ತಿಯಾಗಿದೆ ಮತ್ತು ಸರ್ಕಾರ ಸೂಚಿಸಿದಾಗ ಅದನ್ನು ಹಿಂದಿರುಗಿಸಬೇಕಾಗುತ್ತದೆ. ಹೀಗಾಗಿ ಇದನ್ನು ಪೌರತ್ವದ ಸಾಬೀತು ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯಗಳು ಕೂಡ ಅಭಿಪ್ರಾಯಪಟ್ಟಿವೆ.
ಮೂಲ ದಾಖಲೆಗಳ ಗೊಂದಲ
ದೇಶದಲ್ಲಿ ಅನೇಕರು ಆಧಾರ್, ಮತದಾರರ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಪೌರತ್ವದ ಪುರಾವೆ ಎಂದುಕೊಳ್ಳುತ್ತಾರೆ. ಆದರೆ ಕಾನೂನಿನ ಪ್ರಕಾರ ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿ ಮತ್ತು ವಿಳಾಸದ ಪುರಾವೆ ಮಾತ್ರ. ಸುಪ್ರೀಂ ಕೋರ್ಟ್ ಇದನ್ನು ಪೌರತ್ವದ ದಾಖಲೆ ಎಂದು ಪರಿಗಣಿಸಿಲ್ಲ. ಮತದಾರರ ಗುರುತಿನ ಚೀಟಿ ಚುನಾವಣೆಯಲ್ಲಿ ಮತ ಚಲಾಯಿಸಲು ಮತ್ತು ಸ್ಥಳೀಯವಾಗಿ ವಾಸವಿರುವುದನ್ನು ಸಾಬೀತುಪಡಿಸಲು ಮಾತ್ರ. ಪ್ಯಾನ್ ಕಾರ್ಡ್ ಕೇವಲ ತೆರಿಗೆ ಪಾವತಿದಾರರನ್ನು ಗುರುತಿಸುವ ಸಂಖ್ಯೆಯಾಗಿದ್ದು, ಪೌರತ್ವವನ್ನು ಖಚಿತಪಡಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಪೌರತ್ವವನ್ನು ಕಾನೂನುಬದ್ಧವಾಗಿ ಸಾಬೀತುಪಡಿಸುವುದು ಹೇಗೆ?
ಭಾರತದಲ್ಲಿ ಪೌರತ್ವವು ಕೇವಲ ಇಲ್ಲಿ ಜನಿಸಿದ ತಕ್ಷಣ ಸಿಗುವ ಹಕ್ಕಲ್ಲ. 'ಪೌರತ್ವ ಕಾಯ್ದೆ 1955'ರ ಅಡಿಯಲ್ಲಿ ಜನನ ದಾಖಲೆ ಮತ್ತು ಪೋಷಕರ ಪೌರತ್ವದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸಲಾಗುತ್ತದೆ. ಜನವರಿ 26, 1950 ರಿಂದ ಜುಲೈ 1, 1987ರವರೆಗೆ ಅವಧಿಯಲ್ಲಿ ಜನಿಸಿದವರಿಗೆ ಅವರ ಜನನ ಪ್ರಮಾಣಪತ್ರವೇ ಪೌರತ್ವದ ಮೂಲ ದಾಖಲೆಯಾಗಿದೆ. ಜುಲೈ 1, 1987 ರಿಂದ ಡಿಸೆಂಬರ್ 3, 2004ರವರೆಗೆ ಜನನ ಪ್ರಮಾಣಪತ್ರದ ಜೊತೆಗೆ ಪೋಷಕರಲ್ಲಿ ಒಬ್ಬರು ಭಾರತೀಯ ಪ್ರಜೆಯಾಗಿರಬೇಕು. ಪೋಷಕರ ಜನನ ದಾಖಲೆ ಅಥವಾ ಶಾಲಾ ಪ್ರಮಾಣಪತ್ರಗಳು ಬೇಕಾಗುತ್ತವೆ. ಡಿಸೆಂಬರ್ 3, 2004ರ ನಂತರ ಇಬ್ಬರೂ ಪೋಷಕರು ಭಾರತೀಯರಾಗಿರಬೇಕು ಅಥವಾ ಒಬ್ಬರು ಭಾರತೀಯರಾಗಿದ್ದು ಇನ್ನೊಬ್ಬರು ಅಕ್ರಮ ವಲಸಿಗರಾಗಿರಬಾರದು. ಫಾರಿನರ್ಸ್ ಆಕ್ಟ್ 1946ರ ಸೆಕ್ಷನ್ 9ರ ಅನ್ವಯ, ವ್ಯಕ್ತಿಯೊಬ್ಬ ತಾನು ಭಾರತೀಯ ಪ್ರಜೆ ಎಂದು ಸಾಬೀತುಪಡಿಸುವ ಹೊಣೆಗಾರಿಕೆಯು ಸರ್ಕಾರದ ಮೇಲಲ್ಲ, ಬದಲಿಗೆ ಆ ವ್ಯಕ್ತಿಯ ಮೇಲಿದೆ.
ಮೂಲ ದಾಖಲೆಗಳು
ಕಾನೂನು ವಿವಾದಗಳು ಅಥವಾ ಸರ್ಕಾರಿ ಉದ್ಯೋಗಗಳ ಸಂದರ್ಭದಲ್ಲಿ ಮೂಲ ದಾಖಲೆಗಳನ್ನು ಹೊಂದಿರಲೇಬೇಕು.
ಜನನ ಪ್ರಮಾಣಪತ್ರ: ಇದು ನೋಂದಣಿ ಕಾಯ್ದೆ 1969ರ ಪ್ರಕಾರ ನೋಂದಣಿಯಾಗಿರಬೇಕು. ಒಂದು ವೇಳೆ ಜನನದ ಸಮಯದಲ್ಲಿ ನೋಂದಣಿ ಮಾಡದಿದ್ದರೆ, ಸ್ಥಳೀಯ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಗ್ರಾಮ ಪಂಚಾಯಿತಿಯಲ್ಲಿ 'ವಿಳಂಬಿತ ನೋಂದಣಿ' ಮಾಡಿಸಬೇಕು. ಇದಕ್ಕೆ ಪೋಷಕರ ಪ್ರಮಾಣಪತ್ರ, ದಾಖಲೆಗಳು ಲಭ್ಯವಿಲ್ಲ ಎಂಬ ನಾನ್-ಅವೇಬಿಲಿಟಿ ಸರ್ಟಿಫಿಕೇಟ್ ಮತ್ತು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಆದೇಶ ಬೇಕಾಗುತ್ತದೆ.
ವಾಸಸ್ಥಳ ಪ್ರಮಾಣಪತ್ರ: ನೀವು ನಿರ್ದಿಷ್ಟ ರಾಜ್ಯದ ಶಾಶ್ವತ ನಿವಾಸಿ ಎಂದು ಇದು ಸಾಬೀತುಪಡಿಸುತ್ತದೆ. ಆಯಾ ರಾಜ್ಯದ ಕಂದಾಯ ಕಚೇರಿ (ತಹಸೀಲ್ದಾರ್) ಮೂಲಕ ಇದನ್ನು ಪಡೆಯಬಹುದು. ಕನಿಷ್ಠ 10-15 ವರ್ಷಗಳ ಕಾಲ ಅಲ್ಲಿ ವಾಸವಿರುವುದಕ್ಕೆ ದಾಖಲೆಗಳಾದ ಭೂಮಿ ದಾಖಲೆಗಳು, ಶಾಲಾ ಬಿಡುಗಡೆ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ.
ಗೃಹ ಸಚಿವಾಲಯದ ಪೌರತ್ವ ಪ್ರಮಾಣಪತ್ರ: ನೊಂದಣಿ ಅಥವಾ ಸ್ವಾಭಾವಿಕೀಕರಣ ಮೂಲಕ ಪೌರತ್ವ ಪಡೆದವರು ಗೃಹ ಸಚಿವಾಲಯದ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಪೌರತ್ವ ಪ್ರಮಾಣಪತ್ರವನ್ನು ಪಡೆಯಬೇಕು. ಜಿಲ್ಲಾಧಿಕಾರಿಗಳ ಪರಿಶೀಲನೆ ಮತ್ತು ನಿಷ್ಠೆಯ ಪ್ರಮಾಣವಚನದ ಬಳಿಕ ಇದು ಸಿಗುತ್ತದೆ.
ಒಟ್ಟಾರೆ ನಾವು ಬಳಸುವ ದೈನಂದಿನ ದಾಖಲೆಗಳು ಪೌರತ್ವದ ಭರವಸೆಯನ್ನು ನೀಡಲಾರವು. ಪೌರತ್ವ ಎಂಬುದು ಸಾಂವಿಧಾನಿಕವಾಗಿ ಲಭಿಸುವ ಹಕ್ಕು, ಅದಕ್ಕಾಗಿ ಜನನ ದಾಖಲೆಗಳು ಮತ್ತು ವಂಶಾವಳಿ ಪೌರತ್ವದ ದಾಖಲೆಗಳನ್ನು ವ್ಯವಸ್ಥಿತವಾಗಿ ಕಾಪಿಟ್ಟುಕೊಳ್ಳುವುದು ಇಂದಿನ ದಿನಗಳಲ್ಲಿ ಅನಿವಾರ್ಯವಾಗಿದೆ. ಸರ್ಕಾರಿ ಸ್ಪಷ್ಟನೆಯು ಜನರಲ್ಲಿರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಿದ್ದು, ದಾಖಲೆಗಳ ನಿರ್ವಹಣೆಯಲ್ಲಿ ಎಚ್ಚರ ವಹಿಸಬೇಕೆಂಬ ಎಚ್ಚರಿಕೆಯ ಗಂಟೆಯಾಗಿದೆ.

