ವಿಶ್ವದ ಅತಿದೊಡ್ಡ ನೌಕಾ ಕಸರತ್ತಿನಲ್ಲಿ ಭಾರತೀಯ ನೌಕಾಪಡೆಯ ಬಲ ಪ್ರದರ್ಶನ
'ರಿಮ್ ಆಫ್ ದಿ ಪೆಸಿಫಿಕ್' ಎನ್ನುವುದು ಅಮೆರಿಕದ ಪೆಸಿಫಿಕ್ ಫ್ಲೀಟ್ ಆಯೋಜಿಸುವ ಜಾಗತಿಕ ನೌಕಾ ಕಸರತ್ತು. 1971 ರಲ್ಲಿ ಪ್ರಾರಂಭವಾದ ಈ ಸರಣಿಯ ಕಸರತ್ತು, ಇದೀಗ 30ನೇ ಆವೃತ್ತಿಯನ್ನು ತಲುಪಿದೆ.
ಜಾಗತಿಕ ಕಡಲ ಭದ್ರತೆಯ ವಿಷಯದಲ್ಲಿ ಭಾರತೀಯ ನೌಕಾಪಡೆಯು ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಹವಾಯಿಯಲ್ಲಿ ನಡೆಯುತ್ತಿರುವ ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ಪ್ರತಿಷ್ಠಿತ ಬಹುರಾಷ್ಟ್ರೀಯ ನೌಕಾ ಕಸರತ್ತಾದ 'ರಿಮ್ ಆಫ್ ದಿ ಪೆಸಿಫಿಕ್' (RIMPAC - 2026) ನಲ್ಲಿ ಭಾರತೀಯ ನೌಕಾಪಡೆಯು ಸಕ್ರಿಯವಾಗಿ ಭಾಗವಹಿಸುತ್ತಿದೆ. ಈ ಬಾರಿಯ ಕಸರತ್ತು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಅಂತರ್ಗತ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತದ ಬದ್ಧತೆಯನ್ನು ಸಾರುವ ವೇದಿಕೆಯಾಗಿದೆ.
'ರಿಮ್ ಆಫ್ ದಿ ಪೆಸಿಫಿಕ್' ಎನ್ನುವುದು ಅಮೆರಿಕದ ಪೆಸಿಫಿಕ್ ಫ್ಲೀಟ್ ಆಯೋಜಿಸುವ ಜಾಗತಿಕ ನೌಕಾ ಕಸರತ್ತು. 1971 ರಲ್ಲಿ ಪ್ರಾರಂಭವಾದ ಈ ಸರಣಿಯ ಕಸರತ್ತು, ಇದೀಗ 30ನೇ ಆವೃತ್ತಿಯನ್ನು ತಲುಪಿದೆ. ಜೂನ್ 24 ರಿಂದ ಜುಲೈ 31 ರವರೆಗೆ ಹವಾಯಿಯನ್ ದ್ವೀಪಗಳಲ್ಲಿ ನಡೆಯುತ್ತಿರುವ ಈ ಬಾರಿಯ ಸಮರಾಭ್ಯಾಸವು "ಪಾಲುದಾರರು: ಸಂಯೋಜಿತ ಮತ್ತು ಸಿದ್ಧ" ಎಂಬ ಧ್ಯೇಯವಾಕ್ಯದಡಿ ನಡೆಯುತ್ತಿದೆ. ಈ ಮಹತ್ತರ ಕಸರತ್ತಿನಲ್ಲಿ 30 ರಾಷ್ಟ್ರಗಳು, 30ಕ್ಕೂ ಹೆಚ್ಚು ಯುದ್ಧನೌಕೆಗಳು, ಐದು ಜಲಾಂತರ್ಗಾಮಿ ನೌಕೆಗಳು, 15 ರಾಷ್ಟ್ರೀಯ ಭೂಪಡೆಗಳು ಮತ್ತು 206ಕ್ಕೂ ಹೆಚ್ಚು ವಿಮಾನಗಳು ಪಾಲ್ಗೊಂಡಿವೆ. ಒಟ್ಟು 30 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಈ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದು, ಇದು ಸಾಗರಗಳ ರಕ್ಷಣೆಯಲ್ಲಿ ಅಂತರರಾಷ್ಟ್ರೀಯ ಸಹಕಾರದ ಮಹತ್ವವನ್ನು ಎತ್ತಿ ತೋರಿಸುತ್ತದೆ.
ಭಾರತದ ಭಾಗವಹಿಸುವಿಕೆ: P-8i ವಿಮಾನದ ಪಾತ್ರ
ಭಾರತೀಯ ನೌಕಾಪಡೆಯು ತನ್ನ ಅತ್ಯಾಧುನಿಕ P-8i 'ಲಾಂಗ್ ರೇಂಜ್ ಮ್ಯಾರಿಟೈಮ್ ರೆಕನೈಸನ್ಸ್ ಅಂಡ್ ಆಂಟಿ-ಸಬ್ಮೆರೀನ್ ವಾರ್‌ಫೇರ್' ವಿಮಾನವನ್ನು ಈ ಕಸರತ್ತಿಗೆ ಕಳುಹಿಸಿದೆ. ಈ ವಿಮಾನವು ಕಡಲ ಗಸ್ತು ಮತ್ತು ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗಳಲ್ಲಿ ವಿಶ್ವದ ಅತ್ಯುತ್ತಮ ತಂತ್ರಜ್ಞಾನಗಳಲ್ಲಿ ಒಂದಾಗಿದೆ. ಶತ್ರುಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆ ಹಚ್ಚುವುದು, ದೀರ್ಘಾವಧಿಯವರೆಗೆ ಕಡಲ ಗಡಿಗಳನ್ನು ಕಾಯುವುದು ಮತ್ತು ಸಮುದ್ರದಲ್ಲಿನ ಚಲನವಲನಗಳ ಮೇಲೆ ನಿಗಾ ಇಡುವುದು ಇದರ ಕೆಲಸ. ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಎಕ್ಸ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಈ ಪಾಲ್ಗೊಳ್ಳುವಿಕೆಯು ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಭಾರತ ನೀಡುವ ಆದ್ಯತೆಯನ್ನು ಸೂಚಿಸುತ್ತದೆ.
ಕಸರತ್ತಿನ ಉದ್ದೇಶ ಮತ್ತು ಪ್ರಾಮುಖ್ಯತೆ
ಈ ಕಸರತ್ತು ಕೇವಲ ಶಸ್ತ್ರಾಸ್ತ್ರಗಳ ಪ್ರದರ್ಶನವಲ್ಲ; ಬದಲಾಗಿ ಇದು ವಿವಿಧ ರಾಷ್ಟ್ರಗಳ ನೌಕಾಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಬಲಪಡಿಸುವ ವೇದಿಕೆಯಾಗಿದೆ ಎಂದು ಯುಎಸ್ ನೌಕಾಪಡೆಯ ಕಮಾಂಡರ್ ವೈಸ್ ಅಡ್ಮಿರಲ್ ಜೆಫ್ ಜಬ್ಲಾನ್ ಹೇಳಿದ್ದಾರೆ. ವಾಸ್ತವಿಕ ಯುದ್ಧ ಸನ್ನಿವೇಶಗಳನ್ನು ಸೃಷ್ಟಿಸಿ ತರಬೇತಿ ನೀಡುವುದರಿಂದ, ತುರ್ತು ಸಂದರ್ಭಗಳಲ್ಲಿ ವಿವಿಧ ದೇಶಗಳ ನೌಕಾಪಡೆಗಳು ಒಟ್ಟಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಸಾಗರ ಮಾರ್ಗಗಳ ಸುರಕ್ಷತೆ, ಕಡಲ್ಗಳ್ಳತನ ನಿಗ್ರಹ ಮತ್ತು ವಿಪತ್ತು ನಿರ್ವಹಣೆಯಲ್ಲಿ ರಾಷ್ಟ್ರಗಳ ನಡುವೆ ಬಾಂಧವ್ಯ ಬೆಳೆಸುವುದು ಇದರ ಪ್ರಮುಖ ಗುರಿ ಎಂದಿದ್ದಾರೆ.
ತರಬೇತಿಯ ವ್ಯಾಪ್ತಿ
ರಿಮ್‌ಪ್ಯಾಕ್ 2026 ರಲ್ಲಿ ಸೇರ್ಪಡೆಗೊಂಡಿರುವ ತರಬೇತಿ ಕಾರ್ಯಕ್ರಮಗಳು ಅತ್ಯಂತ ವಿಸ್ತಾರವಾಗಿವೆ. ಜಲಾಂತರ್ಗಾಮಿ ವಿರೋಧಿ ಯುದ್ಧ, ವಾಯು ರಕ್ಷಣಾ ಕಾರ್ಯಾಚರಣೆಗಳು, ಕ್ಷಿಪಣಿ ಮತ್ತು ಬಂದೂಕು ತರಬೇತಿಯಾಗಿದೆ. ವಿಪತ್ತುಗಳ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡುವುದು, ಮಾನವೀಯ ನೆರವು ಒದಗಿಸುವುದು ಮತ್ತು ವೈದ್ಯಕೀಯ ಸೇವೆಗಳು ಮತ್ತು ಕಡಲ್ಗಳ್ಳತನ ನಿಗ್ರಹ, ಗಣಿಗಳನ್ನು ನಿಷ್ಕ್ರಿಯಗೊಳಿಸುವಿಕೆ ಮತ್ತು ಸ್ಫೋಟಕ ಶಸ್ತ್ರಾಸ್ತ್ರಗಳ ವಿಲೇವಾರಿ ಕುರಿತು ತರಬೇತಿ ನೀಡಲಾಗುತ್ತದೆ.
ಭಾರತೀಯ ನೌಕಾಪಡೆಯ ಮಹತ್ವ
ಭಾರತವು ಆಕ್ಟ್ ಈಸ್ಟ್ ನೀತಿಯನ್ನು ಅನುಸರಿಸುತ್ತಿರುವ ದೇಶವಾಗಿ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಕಡಲ ಭದ್ರತೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಭಾರತೀಯ ನೌಕಾಪಡೆಯು ಇಂತಹ ಜಾಗತಿಕ ಕಸರತ್ತುಗಳಲ್ಲಿ ಭಾಗವಹಿಸುವುದರಿಂದ ತಂತ್ರಜ್ಞಾನ ವಿನಿಮಯ, ಹೊಸ ಯುದ್ಧತಂತ್ರಗಳ ಕಲಿಕೆ ಮತ್ತು ಜಾಗತಿಕ ಸಮುದಾಯದಲ್ಲಿ ಭಾರತದ ನೌಕಾ ಶಕ್ತಿಯ ಗುರುತಿಸುವಿಕೆ ಸಾಧ್ಯವಾಗುತ್ತದೆ. ಈ ಸಮರಾಭ್ಯಾಸವು ಜಾಗತಿಕ ಸಾಗರಗಳು ಶಾಂತಿಯುತವಾಗಿರಬೇಕು ಮತ್ತು ಅಲ್ಲಿನ ಸಂಪನ್ಮೂಲಗಳನ್ನು ಸಂರಕ್ಷಿಸಬೇಕು ಎಂಬ ಆಶಯವನ್ನು ಹೊಂದಿದೆ. ಭಾರತೀಯ ನೌಕಾಪಡೆಯು ತನ್ನ ಅತ್ಯಾಧುನಿಕ P-8i ವಿಮಾನದೊಂದಿಗೆ ಈ ಜಾಗತಿಕ ವೇದಿಕೆಯಲ್ಲಿ ಸಿದ್ಧತೆ ಮತ್ತು ಪರಿಣತಿಯನ್ನು ಪ್ರದರ್ಶಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇದು ಭಾರತದ ರಕ್ಷಣಾ ನೀತಿಯು ಕೇವಲ ಸ್ವಯಂ ರಕ್ಷಣೆಗಷ್ಟೇ ಅಲ್ಲ, ಜಾಗತಿಕ ಭದ್ರತೆಯನ್ನು ಕಾಪಾಡುವ ಜವಾಬ್ದಾರಿಯನ್ನೂ ಒಳಗೊಂಡಿದೆ ಎಂಬುದನ್ನು ಜಗತ್ತಿಗೆ ಸಾರಿದೆ.

