
ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಹೇಗ್ ಮಧ್ಯಸ್ಥಿಕೆ ನ್ಯಾಯಮಂಡಳಿ ಆದೇಶವನ್ನು ಭಾರತ ತಿರಸ್ಕರಿಸಿದೆ.
ಸಿಂಧೂ ಜಲ ಒಪ್ಪಂದ ವಿವಾದ: ಹೇಗ್ ನ್ಯಾಯಾಲಯದ ಆದೇಶ ತಿರಸ್ಕರಿಸಿದ ಭಾರತ
ಪಹಲ್ಗಾಮ್ ದಾಳಿಯ ಬಳಿಕ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದ್ದು, ಆ ಮೂಲಕ ಪಾಕಿಸ್ತಾನದ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಂಡಿತ್ತು. ಇದೀಗ ಹೇಗ್ ನ್ಯಾಯಾಲಯದ ಆದೇಶವನ್ನೂ ತಿರಸ್ಕರಿಸುವ ಮೂಲಕ ಈ ವಿಚಾರದಲ್ಲಿ ತನ್ನ ಹಿಂದಿನ ನಿಲುವನ್ನೇ ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಜಟಾಪಟಿಗೆ ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೇಗ್‌ನಲ್ಲಿರುವ ಮಧ್ಯಸ್ಥಿಕೆ ನ್ಯಾಯಮಂಡಳಿ ನೀಡಿರುವ ಆದೇಶವನ್ನು ಭಾರತ ತಿರಸ್ಕರಿಸಿದೆ. ವಿಶ್ವಬ್ಯಾಂಕ್ ರಚಿಸಿರುವ ಈ ನ್ಯಾಯಾಲಯದ ಸ್ಥಾಪನೆಯೇ ಸಿಂಧೂ ಜಲ ಒಪ್ಪಂದದ ನಿಯಮಗಳಿಗೆ ವಿರುದ್ಧವಾಗಿದೆ. ಹೀಗಾಗಿ ಅದರ ಯಾವುದೇ ಆದೇಶಕ್ಕೆ ಕಾನೂನು ಮಾನ್ಯತೆ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ.
ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ಎಕ್ಸ್‌ನಲ್ಲಿ ಭಾರತದ ನಿಲುವನ್ನು ಪ್ರಕಟಿಸಿದ್ದು, ‘ಕೋರ್ಟ್ ಆಫ್ ಆರ್ಬಿಟ್ರೇಷನ್’ ಅನ್ನು ಭಾರತ ಎಂದಿಗೂ ಮಾನ್ಯ ಮಾಡಿಲ್ಲ ಎಂದು ತಿಳಿಸಿದೆ. ನ್ಯಾಯಾಲಯದ ವಿಚಾರಣೆಯಲ್ಲೂ ಭಾರತ ಭಾಗವಹಿಸಿಲ್ಲ. ಹೀಗಾಗಿ ಅದರ ಆದೇಶಗಳನ್ನು ಪಾಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಿಂಧೂ ಜಲ ಒಪ್ಪಂದದ ಕುರಿತ ಯಾವುದೇ ನಿರ್ಧಾರ ಕೈಗೊಳ್ಳುವ ಸಾರ್ವಭೌಮ ಅಧಿಕಾರ ಭಾರತಕ್ಕಿದೆ. ಒಪ್ಪಂದವನ್ನು ಸದ್ಯ ಅಮಾನತಿನಲ್ಲಿಡುವ ಭಾರತದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಾಯಭಾರ ಕಚೇರಿ ತಿಳಿಸಿದೆ.
ಇದಕ್ಕೂ ಮುನ್ನ ಹೇಗ್‌ನ ಮಧ್ಯಸ್ಥಿಕೆ ನ್ಯಾಯಾಲಯ, ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಲು ಭಾರತ ನೀಡಿರುವ ಕಾರಣಗಳು ಒಪ್ಪಂದವನ್ನು ಸ್ಥಗಿತಗೊಳಿಸಲು ಅಥವಾ ರದ್ದುಗೊಳಿಸಲು ಸಮರ್ಥಿಸುವುದಿಲ್ಲ ಎಂದು ಹೇಳಿತ್ತು. ಒಪ್ಪಂದವನ್ನು ಜಾರಿಯಲ್ಲೇ ಮುಂದುವರಿಸಬೇಕು ಮತ್ತು ಭಾರತ ತನ್ನ ಬಾಧ್ಯತೆಗಳನ್ನು ಪಾಲಿಸಬೇಕು ಎಂದು ಸೂಚಿಸಿತ್ತು.
ನ್ಯಾಯಮಂಡಳಿಯ ಈ ನಿಲುವಿಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ಈ ನ್ಯಾಯಾಲಯವನ್ನು ರಚಿಸಲಾಗಿದೆ. ಆದ್ದರಿಂದ ಭಾರತದ ಸಾರ್ವಭೌಮ ನಿರ್ಧಾರಗಳ ಕುರಿತು ತೀರ್ಪು ನೀಡುವ ಯಾವುದೇ ಅಧಿಕಾರ ಅದಕ್ಕಿಲ್ಲ ಎಂದು ಎಂಇಎ ಹೇಳಿದೆ.
‘ಈ ನ್ಯಾಯಮಂಡಳಿಗೆ ಭಾರತದ ಮೇಲೆ ಯಾವುದೇ ನ್ಯಾಯವ್ಯಾಪ್ತಿ ಇಲ್ಲ. ಅದರ ಈಗಿನ ಅಥವಾ ಮುಂದಿನ ಯಾವುದೇ ಆದೇಶಗಳು ಭಾರತ ಕೈಗೊಳ್ಳುವ ಜಲ ಯೋಜನೆಗಳ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.
ಪಹಲ್ಗಾಮ್ ದಾಳಿ ಬಳಿಕ ಒಪ್ಪಂದ ಅಮಾನತು
2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರ ದಾಳಿಯ ಬಳಿಕ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತ್ತು. ಪಾಕಿಸ್ತಾನದಿಂದ ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತ ಹೇಳಿತ್ತು.
1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಸಿಂಧೂ ನದಿ ವ್ಯವಸ್ಥೆಯ ನೀರಿನ ಬಳಕೆ ಮತ್ತು ಹಂಚಿಕೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ಈ ಒಪ್ಪಂದ ಮಹತ್ವದ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತಿತ್ತು.
ಆದರೆ ಪಹಲ್ಗಾಮ್ ದಾಳಿಯ ಬಳಿಕ ಭಾರತ ಒಪ್ಪಂದವನ್ನು ಅಮಾನತುಗೊಳಿಸಿದ್ದು, ಪಾಕಿಸ್ತಾನದೊಂದಿಗಿನ ನೀರು ಹಂಚಿಕೆ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಕುರಿತು ತನ್ನ ನಿಲುವನ್ನು ಕಠಿಣಗೊಳಿಸಿದೆ. ಇದೀಗ ಹೇಗ್ ನ್ಯಾಯಾಲಯದ ಆದೇಶವನ್ನೂ ತಿರಸ್ಕರಿಸುವ ಮೂಲಕ ಈ ವಿಚಾರದಲ್ಲಿ ತನ್ನ ಹಿಂದಿನ ನಿಲುವನ್ನೇ ಭಾರತ ಮತ್ತೊಮ್ಮೆ ಸ್ಪಷ್ಟಪಡಿಸಿದೆ.

