
ಭಾರತೀಯ ನೌಕಾಪಡೆ ಹಡಗಿಗೆ ಪಾಕ್ ಹಡಗು ಡಿಕ್ಕಿ; ಪಾಕಿಸ್ತಾನದ ರಾಯಭಾರ ಕಚೇರಿಗೆ ಸಮನ್ಸ್
ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಈ ಡಿಕ್ಕಿ ಸಂಭವಿಸಿದೆ. ಘಟನೆಗೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸೇನಾ ಘಟಕಗಳು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಿದೆ.
ಅಂತರರಾಷ್ಟ್ರೀಯ ಜಲಪ್ರದೇಶದಲ್ಲಿ ಪಾಕಿಸ್ತಾನದ ನೌಕಾಪಡೆಯ ಹಡಗೊಂದು ಭಾರತೀಯ ನೌಕಾಪಡೆಯ ಹಡಗಿಗೆ ಡಿಕ್ಕಿ ಹೊಡೆದ ಘಟನೆಗೆ ಸಂಬಂಧಿಸಿದಂತೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಘಟನೆ ಕುರಿತು ಭಾರತ ವಿದೇಶಾಂಗ ಸಚಿವಾಲಯವು ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಉಸ್ತುವಾರಿ ಅಧಿಕಾರಿಗೆ ಸಮನ್ಸ್ ಜಾರಿಗೊಳಿಸಿದೆ.
ಘಟನೆಯಿಂದ ಯಾವುದೇ ದೊಡ್ಡ ಪ್ರಮಾಣದ ಹಾನಿ ಸಂಭವಿಸಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಆದರೆ, ಪಾಕಿಸ್ತಾನದ ನೌಕಾಪಡೆಯ ಹಡಗಿನ ವರ್ತನೆಯು 1991ರ ಏಪ್ರಿಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಸೇನಾ ಅಭ್ಯಾಸಗಳು, ಯುದ್ಧತಂತ್ರದ ಚಲನವಲನಗಳು ಹಾಗೂ ಸೈನಿಕರ ನಿಯೋಜನೆಗೆ ಮುಂಗಡ ಮಾಹಿತಿ ನೀಡುವ ಒಪ್ಪಂದದ 10ನೇ ವಿಧಿಗೆ ನೇರವಾಗಿ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಮುದ್ರದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸೇನಾ ಘಟಕಗಳು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಅಲ್ಲದೆ, ಉಭಯ ದೇಶಗಳ ನಡುವಿನ ಸಂಬಂಧಿತ ಒಪ್ಪಂದಗಳ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಸೂಚಿಸಿದೆ.
ಈ ಕುರಿತು ಪಾಕಿಸ್ತಾನದ ಸಂಬಂಧಿತ ಅಧಿಕಾರಿಗಳಿಗೆ ಭಾರತದ ಆಕ್ಷೇಪವನ್ನು ತಲುಪಿಸುವಂತೆ ಪಾಕಿಸ್ತಾನದ ಉಸ್ತುವಾರಿ ಅಧಿಕಾರಿಗೆ ಸೂಚಿಸಲಾಗಿದೆ. ಇದೇ ವೇಳೆ, ಇಸ್ಲಾಮಾಬಾದ್‌ನಲ್ಲಿರುವ ಭಾರತದ ಉಸ್ತುವಾರಿ ಅಧಿಕಾರಿಗೂ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಮುಂದೆ ಇದೇ ರೀತಿಯ ಆಕ್ಷೇಪ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

