ಭಾರತದಲ್ಲಿ ವಾಸ್ತವ್ಯಕ್ಕೆ ಹೊಸ ಕಟ್ಟುಪಾಡು: 180 ದಿನಗಳ ಮಿತಿ ಮೀರಿದರೆ ನೋಂದಣಿ ಕಡ್ಡಾಯ
x

ಭಾರತದಲ್ಲಿ ವಾಸ್ತವ್ಯಕ್ಕೆ ಹೊಸ ಕಟ್ಟುಪಾಡು: 180 ದಿನಗಳ ಮಿತಿ ಮೀರಿದರೆ ನೋಂದಣಿ ಕಡ್ಡಾಯ

ವೀಸಾ ಅವಧಿಯ 180 ದಿನಗಳು ಮುಗಿದ ನಂತರದ 14 ದಿನಗಳೊಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಅವಧಿಯನ್ನು ಮೀರುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲ್ಪಡುತ್ತದೆ


Click the Play button to hear this message in audio format

ಭಾರತವು ತನ್ನ ರಾಷ್ಟ್ರೀಯ ಭದ್ರತೆ ಮತ್ತು ಆಡಳಿತಾತ್ಮಕ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಲಸೆ ನಿಯಮಗಳನ್ನು ಕಾಲಕಾಲಕ್ಕೆ ನವೀಕರಿಸುತ್ತಾ ಬಂದಿದೆ. 2025ನೇ ಸಾಲಿನ ಹೊಸ ನಿಯಮಾವಳಿಗಳು ಮುಖ್ಯವಾಗಿ ವಿದೇಶಿ ಪ್ರಜೆಗಳ ವಾಸ್ತವ್ಯದ ಮೇಲ್ವಿಚಾರಣೆ ಮತ್ತು ಪೌರತ್ವದ ನಿಖರತೆಯನ್ನು ಖಾತ್ರಿಪಡಿಸುವ ಉದ್ದೇಶವನ್ನು ಹೊಂದಿವೆ. ಹೊಸ ನಿಯಮದ ಪ್ರಕಾರ, ಭಾರತಕ್ಕೆ ವೀಸಾದ ಮೇಲೆ ಬರುವ ವಿದೇಶಿಯರು ದೇಶದಲ್ಲಿ ನಿರಂತರವಾಗಿ ಅಥವಾ ಒಂದು ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆಯಾಗಿ 180 ದಿನಗಳಿಗಿಂತ ಹೆಚ್ಚು ಕಾಲ ಉಳಿಯಲು ಬಯಸಿದರೆ, ಅತಿ ಕಠಿಣ ನಿಬಂಧನೆಗಳನ್ನು ಪಾಲಿಸಬೇಕಾಗುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಈ ಹಿಂದೆ ಇದ್ದ ನಿಯಮಗಳಿಗಿಂತ ಭಿನ್ನವಾಗಿ, ಈಗ 180 ದಿನಗಳ ಅವಧಿ ಮುಗಿಯುವ ಮುನ್ನವೇ ವಿದೇಶಿಯರು ವೀಸಾ ವಿಸ್ತರಣೆಗಾಗಿ ನೋಂದಾಯಿಸಿಕೊಳ್ಳಬೇಕು. ವೀಸಾ ಅವಧಿಯ 180 ದಿನಗಳು ಮುಗಿದ ನಂತರದ 14 ದಿನಗಳೊಳಗೆ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈ ಅವಧಿಯನ್ನು ಮೀರುವುದು ಕಾನೂನುಬಾಹಿರ ಚಟುವಟಿಕೆ ಎಂದು ಪರಿಗಣಿಸಲ್ಪಡುತ್ತದೆ. ಹೊಸ ನಿಯಮವು ಅತ್ಯಂತ ಮುಖ್ಯವಾದ ಬದಲಾವಣೆಯೆಂದರೆ, ವೀಸಾ ವಿಸ್ತರಣೆಯು ಇನ್ನು ಮುಂದೆ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಇನ್ನು ಮುಂದೆ ಕೇವಲ 'ತುರ್ತು ಸಂದರ್ಭಗಳಲ್ಲಿ' ಮಾತ್ರ ವೀಸಾ ವಿಸ್ತರಣೆಗೆ ಅವಕಾಶ ನೀಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಇದು ಅನಿರ್ದಿಷ್ಟ ಕಾಲ ಭಾರತದಲ್ಲಿ ನೆಲೆಸುವ ಪ್ರವೃತ್ತಿಗೆ ಕಡಿವಾಣ ಹಾಕಲಿದೆ.

ವಿದೇಶಿ ಪೋಷಕರಿಗೆ ಜನಿಸುವ ಮಕ್ಕಳ ಸ್ಥಿತಿಗತಿ

ಹೊಸ ನಿಯಮಗಳು ಪೋಷಕರು ವಿದೇಶಿಯರಾಗಿರುವ ಕುಟುಂಬಗಳಿಗೆ ಸ್ವಲ್ಪ ಸಮಾಧಾನಕರವಾದ ಮತ್ತು ಸ್ಪಷ್ಟವಾದ ನಿಬಂಧನೆಗಳನ್ನು ಒದಗಿಸಿವೆ. ಈ ಹಿಂದೆ ಮಗುವಿನ ಜನನದ ನಂತರ, 30 ದಿನಗಳ ಒಳಗಾಗಿ ಪೋಷಕರು ಅಧಿಕಾರಿಗಳಿಗೆ ಮಾಹಿತಿ ನೀಡಿ, ಹೊಸ ವೀಸಾ ಅಥವಾ ನಿರ್ಗಮನ ಅನುಮತಿಯನ್ನು ಪಡೆಯಬೇಕಿತ್ತು. ಇದು ಪೋಷಕರಿಗೆ ಸಾಕಷ್ಟು ಕಾನೂನು ಗೊಂದಲಗಳನ್ನು ಸೃಷ್ಟಿಸುತ್ತಿತ್ತು. ಹೊಸ ಅಧಿಸೂಚನೆಯು, ಪೋಷಕರಲ್ಲಿ ಒಬ್ಬರು ಭಾರತೀಯರಾಗಿದ್ದು, ಮಗುವಿನ ಭಾರತೀಯ ಪೌರತ್ವವನ್ನು ಉಳಿಸಿಕೊಳ್ಳಲು ಬಯಸಿದರೆ, ಅಂತಹ ಸಂದರ್ಭದಲ್ಲಿ ಈ ವೀಸಾ ನಿಯಮಗಳು ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ದ್ವಿಪೌರತ್ವ ಅಥವಾ ಪೌರತ್ವದ ಹಕ್ಕಿನ ಕುರಿತಾದ ಗೊಂದಲಗಳನ್ನು ಪರಿಹರಿಸುತ್ತದೆ. ಒಂದು ವೇಳೆ ಮಗು ಜನನದ ನಂತರ ವಿದೇಶಿ ಪೌರತ್ವವನ್ನು ಪಡೆದರೆ, ಆ ಪೌರತ್ವ ಪಡೆದ 30 ದಿನಗಳೊಳಗೆ ಪೋಷಕರು ನೋಂದಣಿ ಅಧಿಕಾರಿಗೆ ಈ ಕುರಿತು ತಿಳಿಸಬೇಕು. ಇದು ದೇಶದ ಜನಸಂಖ್ಯಾ ದಾಖಲೆಗಳನ್ನು ನವೀಕರಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.

ಬದಲಾವಣೆಗಳ ಹಿಂದಿನ ಉದ್ದೇಶಗಳೇನು?

ಕೇಂದ್ರ ಗೃಹ ಸಚಿವಾಲಯವು ಈ ನಿಯಮಗಳನ್ನು ಜಾರಿಗೆ ತರಲು ಹಲವು ಪ್ರಮುಖ ಕಾರಣಗಳಿವೆ. ಭಾರತದಲ್ಲಿರುವ ವಿದೇಶಿಯರ ಮೇಲೆ ನಿಗಾ ಇಡುವುದು ಮತ್ತು ಅವರು ತಮ್ಮ ವೀಸಾ ಉದ್ದೇಶವನ್ನೇ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ಆನ್‌ಲೈನ್ ಪೋರ್ಟಲ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರುವುದು. ಕಾಗದ ರಹಿತ ಆಡಳಿತದ ಮೂಲಕ ಪ್ರಕ್ರಿಯೆಗಳನ್ನು ವೇಗಗೊಳಿಸುವುದು. ವೀಸಾ ಮುಗಿದರೂ ಅಕ್ರಮವಾಗಿ ನೆಲೆಸುವವರ ಸಂಖ್ಯೆಯನ್ನು ನಿಯಂತ್ರಿಸುವುದು ಮತ್ತು ಕಾನೂನುಬಾಹಿರ ಕೆಲಸಗಳಲ್ಲಿ ತೊಡಗುವವರನ್ನು ಪತ್ತೆ ಹಚ್ಚುವುದಾಗಿದೆ.

ಭಾರತದಲ್ಲಿ ನೆಲೆಸಿರುವ ವಿದೇಶಿಯರು ಮತ್ತು ಅನಿವಾಸಿ ಭಾರತೀಯರು ಕೆಲವು ಪ್ರಮುಖ ಅಂಶಗಳನ್ನು ಗಮನಿಸಬೇಕಾಗಿದೆ. ವೀಸಾ ವಿಸ್ತರಣೆಗೆ ಕೇವಲ ಅರ್ಜಿಯನ್ನು ಸಲ್ಲಿಸಿದರೆ ಸಾಲದು, ಅದಕ್ಕೆ ಪೂರಕವಾದ ಸಮರ್ಥನೀಯ ದಾಖಲೆಗಳನ್ನು (ಉದ್ಯೋಗ ಪತ್ರ, ವೈದ್ಯಕೀಯ ದಾಖಲೆ ಅಥವಾ ಶಿಕ್ಷಣದ ದಾಖಲೆ) ಸಿದ್ಧವಾಗಿಟ್ಟುಕೊಳ್ಳಬೇಕು. ಸ್ಥಳೀಯ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು ಅಗತ್ಯ. ಯಾವುದೇ ಬದಲಾವಣೆಗಳಿದ್ದಲ್ಲಿ ತಕ್ಷಣವೇ ಇ-ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಬೇಕು. 14 ದಿನಗಳ ಗಡುವಿನ ನಂತರವೂ ವೀಸಾ ವಿಸ್ತರಣೆ ಮಾಡದಿದ್ದರೆ, ಭಾರಿ ದಂಡ ಮತ್ತು ಗಡೀಪಾರು ಶಿಕ್ಷೆಗೆ ಒಳಗಾಗುವ ಸಾಧ್ಯತೆ ಇರುತ್ತದೆ.

ಈ ಹೊಸ ನಿಯಮವು ವಿದೇಶಿಯರಿಗೆ ಕಠಿಣವೆಂದು ಕಂಡರೂ, ಇದು ಕಾನೂನುಬದ್ಧವಾಗಿ ಇರುವವರಿಗೆ ಯಾವುದೇ ಅಡ್ಡಿಯಾಗುವುದಿಲ್ಲ. ಆದರೆ, ದೀರ್ಘಕಾಲದ ಯೋಜನೆಯೊಂದಿಗೆ ಭಾರತಕ್ಕೆ ಬರುವ ಪ್ರವಾಸಿಗರು, ಸಂಶೋಧಕರು ಮತ್ತು ಉದ್ಯೋಗಿಗಳು ತಮ್ಮ ಪ್ರಯಾಣದ ಯೋಜನೆಯನ್ನು ಈಗಿನಿಂದಲೇ ಬದಲಾಯಿಸಿಕೊಳ್ಳಬೇಕಾಗುತ್ತದೆ. 180 ದಿನಗಳ ಮಿತಿ ಎನ್ನುವುದು ಪ್ರವಾಸಿ ವೀಸಾದಲ್ಲಿ ಬರುವವರಿಗೆ ಹೆಚ್ಚು ಬಾಧಕವಾಗಲಿದೆ.

Read More
Next Story