ವಿದೇಶಿ ವಿನಿಮಯದ ಒತ್ತಡ ತಗ್ಗಿಸಲಿದೆಯೇ ಆಂಧ್ರದ ಜೊನ್ನಗಿರಿ ಚಿನ್ನದ ಗಣಿ?
x
ಚಂದ್ರಬಾಬು ನಾಯ್ಡು

ವಿದೇಶಿ ವಿನಿಮಯದ ಒತ್ತಡ ತಗ್ಗಿಸಲಿದೆಯೇ ಆಂಧ್ರದ ಜೊನ್ನಗಿರಿ ಚಿನ್ನದ ಗಣಿ?

ಅಮೆರಿಕ-ಇರಾನ್ ಯುದ್ಧ ಆರಂಭವಾದಾಗಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 50 ರಷ್ಟು ಜಿಗಿದಿದ್ದು, ಪ್ರತಿ ಬ್ಯಾರೆಲ್‌ಗೆ 105 ಡಾಲರ್ ತಲುಪಿದೆ. ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನಿಂದಾಗಿ ಕಚ್ಚಾ ತೈಲ ಆಮದು ಮೌಲ್ಯ 123 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.


ಜಾಗತಿಕ ರಾಜಕೀಯ ಬಿಕ್ಕಟ್ಟು ಹಾಗೂ ಆರ್ಥಿಕ ಒತ್ತಡದ ನಡುವೆಯೇ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜೊನ್ನಗಿರಿಯಲ್ಲಿ (ಜೊನ್ನಗಿರಿ ಗೋಲ್ಡ್ ಫೀಲ್ಡ್ಸ್ – JGF) ಖಾಸಗಿ ವಲಯದ ದೇಶದ ಮೊದಲ ಚಿನ್ನದ ಗಣಿ ತನ್ನ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದೆ.

ದೇಶದ ಆರ್ಥಿಕತೆಯನ್ನು ಕಚ್ಚಾ ತೈಲ ಮತ್ತು ಚಿನ್ನದ ಆಮದು ವೆಚ್ಚದಿಂದ ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಕರೆ ನೀಡಿದ ಬೆನ್ನಲ್ಲೇ ಜೊನ್ನಗಿರಿ ಗೋಲ್ಡ್‌ ಫೀಲ್ಡ್‌ ಆರಂಭವಾಗಿರುವುದು ಆಶಾಭಾವ ಮೂಡಿಸಿದೆ. ಅಲ್ಲದೇ ವಿದೇಶಿ ವಿನಿಮಯಕ್ಕೆ ರಾಮಬಾಣವಾಗಲಿದೆ ಎಂಬ ಮಾತುಗಳು ಆರ್ಥಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಚಿನ್ನ ಖರೀದಿಗೆ ಮಿತಿ ಹೇರಲು ಮೋದಿ ಮನವಿ

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಬೃಹತ್ ಬಿಜೆಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದ ವಿದೇಶಿ ವಿನಿಮಯದ ಮೇಲಿನ ಒತ್ತಡ ಕಡಿಮೆ ಮಾಡಲು ಕನಿಷ್ಠ ಒಂದು ವರ್ಷದವರೆಗೆ ಅತಿಯಾದ ಚಿನ್ನದ ಖರೀದಿಯನ್ನು ಮಿತಿಗೊಳಿಸುವಂತೆ ಭಾರತೀಯರಲ್ಲಿ ಮನವಿ ಮಾಡಿದ್ದರು.

ಕಳೆದ ಫೆಬ್ರವರಿಯಲ್ಲಿ ಅಮೆರಿಕ-ಇರಾನ್ ಯುದ್ಧ ಆರಂಭವಾದಾಗಿನಿಂದ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ. 50 ರಷ್ಟು ಜಿಗಿದಿದ್ದು, ಪ್ರತಿ ಬ್ಯಾರೆಲ್‌ಗೆ 105 ಡಾಲರ್ ತಲುಪಿದೆ. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನಿಂದಾಗಿ ಭಾರತದ ಕಚ್ಚಾ ತೈಲ ಆಮದು ಮೌಲ್ಯ 123 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಇದೇ ವೇಳೆ, 2026ರ ಸಾಲಿನಲ್ಲಿ ಭಾರತದ ಚಾಲ್ತಿ ಖಾತೆ ಕೊರತೆಯು (CAD) 84 ಶತಕೋಟಿ ಡಾಲರ್ ತಲುಪಲಿದೆ ಎಂದು ಐಎಂಎಫ್ (IMF) ಅಂದಾಜಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಭಾರತ ಚಿನ್ನದ ಆಮದಿಗಾಗಿಯೇ 72 ಶತಕೋಟಿ ಡಾಲರ್ ಖರ್ಚು ಮಾಡಿದ್ದು, ಚೀನಾ ಬಿಟ್ಟರೆ ವಿಶ್ವದಲ್ಲೇ 2ನೇ ಅತಿ ದೊಡ್ಡ ಆಮದು ದೇಶವಾಗಿದೆ. ಈ ಗಂಭೀರ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ಈ ಕರೆ ನೀಡಿದ್ದರು.

ಏನಿದು ಜೊನ್ನಗಿರಿ ಯೋಜನೆ?

ದೇಶದ ಆಮದು ಅವಲಂಬನೆ ತಗ್ಗಿಸುವ ನಿಟ್ಟಿನಲ್ಲಿ ಆಂಧ್ರಪ್ರದೇಶದ ಬರಪೀಡಿತ ಕರ್ನೂಲ್ ಜಿಲ್ಲೆಯ ಜೊನ್ನಗಿರಿ, ಎರ್ರಗುಡಿ ಮತ್ತು ಪಗಿದಿರಾಯ್ ಗ್ರಾಮಗಳ ವ್ಯಾಪ್ತಿಯ 598 ಹೆಕ್ಟೇರ್ ಪ್ರದೇಶದಲ್ಲಿ ಚಿನ್ನದ ಗಣಿ ತಲೆಎತ್ತಿದೆ. ಜಿಯೋಮೈಸೋರ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಭಿವೃದ್ಧಿಪಡಿಸಿರುವ ಈ ಯೋಜನೆಗೆ ತ್ರಿವೇಣಿ ಅರ್ಥ್ಮೂವರ್ಸ್ ಮತ್ತು ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಬೆಂಬಲ ನೀಡಿದ್ದು, 400 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಮಾಡಲಾಗಿದೆ.

ಪ್ರಸ್ತುತ 13.1 ಟನ್ ಪ್ರಮಾಣೀಕೃತ ಚಿನ್ನದ ನಿಕ್ಷೇಪ ಜೊನ್ನಗಿರಿಯಲ್ಲಿದ್ದು, ಪರಿಶೋಧನೆಯ ಬಳಿಕ ಇದು 42.5 ಟನ್ಗೆ ಏರಿಕೆಯಾಗುವ ಸಾಧ್ಯತೆಯಿದೆ. ಕೇವಲ 13 ತಿಂಗಳಲ್ಲೇ ಸಂಸ್ಕರಣಾ ಘಟಕವನ್ನು ನಿರ್ಮಿಸಲಾಗಿದೆ. ಮುಂಬರುವ 15 ವರ್ಷಗಳಲ್ಲಿ ವಾರ್ಷಿಕ 1 ಸಾವಿರ ಕೆ.ಜಿ ಸಂಸ್ಕರಿಸಿದ ಚಿನ್ನವನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ. ಪ್ರಸಕ್ತ ವರ್ಷದಲ್ಲಿ 600 ಕೆ.ಜಿ. ಹಾಗೂ ಎರಡನೇ ವರ್ಷದಲ್ಲಿ 1,500 ಕೆ.ಜಿ. ಚಿನ್ನದ ಉತ್ಪಾದನೆಯ ನಿರೀಕ್ಷೆ ಇದೆ.

KGF ನಿಂದ JGF ಮಾಡುವ ಗುರಿ

ಈ ಐತಿಹಾಸಿಕ ಯೋಜನೆಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ರಾಜ್ಯದ ಹೆಮ್ಮೆಯ ವಿಜಯ ಎಂದು ಬಣ್ಣಿಸಿದ್ದಾರೆ.

"ಒಂದು ಕಾಲದಲ್ಲಿ ಚಿನ್ನದ ಗಣಿಗಾರಿಕೆಗೆ ಕೋಲಾರದ 'ಕೆಜಿಎಫ್' (KGF) ಹೆಸರಾಗಿತ್ತು. 2000ನೇ ಇಸವಿಯಲ್ಲಿ ಅದು ಮುಚ್ಚಿದ ಬಳಿಕ ದೇಶೀಯ ಉತ್ಪಾದನೆ ಕುಂಠಿತವಾಗಿತ್ತು. ಈಗ ಆ ಸ್ಥಾನವನ್ನು ನಮ್ಮ 'ಜೆಜಿಎಫ್' (JGF - ಜೊನ್ನಗಿರಿ ಗೋಲ್ಡ್ ಫೀಲ್ಡ್ಸ್) ತುಂಬಲಿದೆ" ಎಂದು ಸಿಎಂ ನಾಯ್ಡು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬರದಿಂದಾಗಿ 'ಕರುವು ಸೀಮಾ' (ಬರಡು ಭೂಮಿ) ಎಂದು ಕರೆಸಿಕೊಳ್ಳುತ್ತಿದ್ದ ರಾಯಲಸೀಮಾ ವಲಯವನ್ನು ಮತ್ತೆ 'ರತ್ನಗಳ ಸೀಮೆ'ಯನ್ನಾಗಿ ಪರಿವರ್ತಿಸಲು 1 ಲಕ್ಷ ಕೋಟಿ ರೂ. ಹೂಡಿಕೆಯ ಸಮಗ್ರ ಕ್ರಿಯಾ ಯೋಜನೆಯನ್ನು ಸರ್ಕಾರ ರೂಪಿಸಲಿದೆ. ಪ್ರತಿಯೊಂದು ಎಕರೆಗೂ ನೀರು ಒದಗಿಸಿ ತೋಟಗಾರಿಕಾ ಹಬ್ ಮಾಡುವುದರ ಜೊತೆಗೆ ರಕ್ಷಣೆ, ಬಾಹ್ಯಾಕಾಶ, ಏರೋಸ್ಪೇಸ್ ಮತ್ತು ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳನ್ನು ಇಲ್ಲಿಗೆ ತರಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ಬದಲಾಗಲಿದೆಯೇ ದೇಶದ ಗಣಿಗಾರಿಕೆ ಚಿತ್ರಣ?

ತ್ರಿವೇಣಿ ಅರ್ಥ್ಮೂವರ್ಸ್ನ ವ್ಯವಸ್ಥಾಪಕ ನಿರ್ದೇಶಕ ಬಿ. ಪ್ರಭಾಕರನ್ ಮಾತನಾಡಿ, "ಇದು ಕೇವಲ ಗಣಿಯಲ್ಲ, ದೇಶದ ಜವಾಬ್ದಾರಿಯುತ ಮತ್ತು ಜಾಗತಿಕ ಸ್ಪರ್ಧಾತ್ಮಕ ಗಣಿಗಾರಿಕೆಗೆ ಒಂದು ಹೊಸ ಮಾದರಿ" ಎಂದಿದ್ದಾರೆ. ಆಂಧ್ರದ ಗಣಿ ಇಲಾಖೆ ಪ್ರಧಾನ ಕಾರ್ಯದರ್ಶಿ ಮುಖೇಶ್ ಕುಮಾರ್ ಮೀನಾ ಅವರು ಇದನ್ನು ದೇಶದ ಗಣಿಗಾರಿಕಾ ಮಹತ್ವಾಕಾಂಕ್ಷೆಯ ಮಹತ್ವದ ಕ್ಷಣ ಎಂದಿದ್ದಾರೆ.

ʼಸೂಜಿ ಚಲಿಸುವುದು ಅಷ್ಟು ಸುಲಭವಲ್ಲʼ

ಪ್ರಸ್ತುತ ಭಾರತದ ವಾರ್ಷಿಕ ಚಿನ್ನದ ಬಳಕೆ ಬರೋಬ್ಬರಿ 800 ಟನ್‌ಗಳಷ್ಟಿದೆ. ಭಾರತದ ಏಕೈಕ ಸಕ್ರಿಯ ಸರ್ಕಾರಿ ಗಣಿಯಾದ ಕರ್ನಾಟಕದ 'ಹಟ್ಟಿ ಚಿನ್ನದ ಗಣಿ' ವರ್ಷಕ್ಕೆ ಕೇವಲ 1.5 ಟನ್ ಚಿನ್ನವನ್ನು ಮಾತ್ರ ನೀಡುತ್ತಿದೆ. ಹೀಗಾಗಿ ಜೊನ್ನಗಿರಿಯ 1 ಟನ್ ಉತ್ಪಾದನೆ ಸದ್ಯದ ಮಾರುಕಟ್ಟೆಯ ಅಗತ್ಯವನ್ನು ತಕ್ಷಣವೇ ಪೂರೈಸದಿದ್ದರೂ, ಇದು ಖಾಸಗಿ ವಲಯಕ್ಕೆ ದಾರಿದೀಪವಾಗಲಿದೆ ಎಂದು ಜಿಯೋಮೈಸೋರ್ ನಿರ್ದೇಶಕ ಡಾ. ಹನುಮ ಪ್ರಸಾದ್ ಮೋಡಲ್ ತಿಳಿಸಿದ್ದಾರೆ. ಮುಂದಿನ ದಶಕದಲ್ಲಿ ದೇಶದಲ್ಲೇ ವರ್ಷಕ್ಕೆ 50 ರಿಂದ 100 ಟನ್ ಚಿನ್ನ ಉತ್ಪಾದಿಸುವ ಮಹತ್ವಾಕಾಂಕ್ಷೆಗೆ ಇದು ಮೊದಲ ಹೆಜ್ಜೆಯಾಗಿದೆ.

Read More
Next Story