
ಹೈಡ್ರೋಜನ್ ರೈಲು
ದೇಶದ ಮೊದಲ ಹಸಿರು ಹೈಡ್ರೋಜನ್ ರೈಲು ಯಶಸ್ವಿ ಪ್ರಾಯೋಗಿಕ ಸಂಚಾರ; ಶೀಘ್ರದಲ್ಲೇ ಪ್ರಯಾಣಕ್ಕೆ ಮುಕ್ತ!
ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಜೂ. 26 ರಂದು ಈ ಐತಿಹಾಸಿಕ ಪ್ರಾಯೋಗಿಕ ಸಂಚಾರ ನಡೆದಿದೆ. ಈ ವೇಳೆ ರೈಲು ಗಂಟೆಗೆ ಗರಿಷ್ಠ 120 ಕಿ.ಮೀ. ವೇಗವನ್ನು ತಲುಪುವ ಮೂಲಕ ತನ್ನ ಅದ್ಭುತ ಕ್ಷಮತೆಯನ್ನು ಪ್ರದರ್ಶಿಸಿದೆ.
ಭಾರತೀಯ ರೈಲ್ವೆ ಇತಿಹಾಸದಲ್ಲಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ಮಹತ್ವದ ಮೈಲಿಗಲ್ಲೊಂದು ಸ್ಥಾಪನೆಯಾಗಿದೆ. ಪರಿಸರ ಮಾಲಿನ್ಯಕ್ಕೆ ಶಾಶ್ವತ ಮುಕ್ತಿ ಹಾಡುವ ನಿಟ್ಟಿನಲ್ಲಿ, ದೇಶದ ಮೊಟ್ಟಮೊದಲ ‘ಹಸಿರು ಹೈಡ್ರೋಜನ್’ ಆಧಾರಿತ ರೈಲು ಹರಿಯಾಣದಲ್ಲಿ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದೆ.
ನವದೆಹಲಿ ಮತ್ತು ಹರಿಯಾಣದ ಜಿಂದ್ ನಡುವೆ ನಡೆದ ಈ ವಿಶೇಷ ಕಾರ್ಯಾಚರಣೆಯಲ್ಲಿ ರೈಲಿನ ತುರ್ತು ಬ್ರೇಕಿಂಗ್ ವ್ಯವಸ್ಥೆ ಹಾಗೂ ಸ್ಥಿರತೆಯ ಪರೀಕ್ಷೆಗಳು ಸಂಪೂರ್ಣ ಯಶಸ್ವಿಯಾಗಿವೆ. ಭವಿಷ್ಯದ ಅತ್ಯಾಧುನಿಕ ಹಾಗೂ ವಾಣಿಜ್ಯ ಬಳಕೆಗೆ ರೈಲನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ಇಟ್ಟಿರುವ ಅತ್ಯಂತ ಮಹತ್ವದ ಹೆಜ್ಜೆ ಇದಾಗಿದೆ.
ಗಂಟೆಗೆ 120 ಕಿ.ಮೀ ವೇಗ!
ಹರಿಯಾಣದ ಜಿಂದ್-ಸೋನಿಪತ್ ಮಾರ್ಗದಲ್ಲಿ ಜೂ. 26 ರಂದು ಈ ಐತಿಹಾಸಿಕ ಪ್ರಾಯೋಗಿಕ ಸಂಚಾರ ನಡೆದಿದೆ. ಈ ವೇಳೆ ರೈಲು ಗಂಟೆಗೆ ಗರಿಷ್ಠ 120 ಕಿ.ಮೀ. ವೇಗವನ್ನು ತಲುಪುವ ಮೂಲಕ ತನ್ನ ಅದ್ಭುತ ಕ್ಷಮತೆಯನ್ನು ಪ್ರದರ್ಶಿಸಿದೆ. ಆದರೆ, ಭವಿಷ್ಯದಲ್ಲಿ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಇದರ ಸಾಮಾನ್ಯ ಕಾರ್ಯಾಚರಣೆಯ ವೇಗವನ್ನು ಗಂಟೆಗೆ 75 ಕಿ.ಮೀ. ಗೆ ನಿಗದಿಪಡಿಸಲು ಯೋಜಿಸಲಾಗಿದೆ. ಇತ್ತೀಚೆಗಷ್ಟೇ ರೈಲ್ವೆ ಮಂಡಳಿಯು ಈ 10 ಬೋಗಿಗಳ ರೈಲಿಗೆ ಹಸಿರು ನಿಶಾನೆ ತೋರಿದ್ದು, ಶೀಘ್ರದಲ್ಲೇ ಇದು ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.
ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಹೆಮ್ಮೆಯ ಸ್ಥಾನ
ಈ ಅಭೂತಪೂರ್ವ ಸಾಧನೆಯೊಂದಿಗೆ ಭಾರತವು ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಅಮೆರಿಕ, ಜರ್ಮನಿ, ಜಪಾನ್ ಮತ್ತು ಚೀನಾದಂತಹ ಬಲಿಷ್ಠ ದೇಶಗಳ ಸಾಲಿಗೆ ಹೆಮ್ಮೆಯಿಂದ ಸೇರ್ಪಡೆಯಾಗಿದೆ. ಈ ರೈಲಿನ ತಂತ್ರಜ್ಞಾನ ಅತ್ಯಂತ ವಿಶಿಷ್ಟ ಮತ್ತು ಆಕರ್ಷಕವಾಗಿದೆ. ಈ ರೈಲಿಗೆ ಚಲಿಸಲು ಹೊರಗಿನಿಂದ ಯಾವುದೇ ವಿದ್ಯುತ್ ಲೈನ್ ಅಥವಾ ಡೀಸೆಲ್ ಎಂಜಿನ್ ಬೇಕಿಲ್ಲ. ಇದು ತನ್ನ ವಿದ್ಯುತ್ತನ್ನು ತಾನೇ ಉತ್ಪಾದಿಸಿಕೊಳ್ಳುತ್ತದೆ!
ತಂತ್ರಜ್ಞಾನದ ಮಾರ್ಪಾಡು
ಪ್ರಸ್ತುತ ಚಾಲ್ತಿಯಲ್ಲಿರುವ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ರೈಲನ್ನೇ ಮಾರ್ಪಡಿಸಿ, ಅದಕ್ಕೆ ಹೈಡ್ರೋಜನ್ ಇಂಧನ ಕೋಶಗಳನ್ನು ಅಳವಡಿಸಲಾಗಿದೆ. ರೈಲಿನಲ್ಲಿ ಶೇಖರಿಸಿಟ್ಟಿರುವ ಹೈಡ್ರೋಜನ್ ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ಬೆರೆಸಿ ರಾಸಾಯನಿಕ ಕ್ರಿಯೆಗೆ ಒಳಪಡಿಸಲಾಗುತ್ತದೆ. ಈ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುವ ವಿದ್ಯುತ್ ಮೂಲಕ ರೈಲಿನ ಮೋಟಾರ್‌ಗಳು ಸರಾಗವಾಗಿ ಚಲಿಸುತ್ತವೆ.
ಶೂನ್ಯ ಮಾಲಿನ್ಯ
ಈ ಇಡೀ ಪ್ರಕ್ರಿಯೆಯಲ್ಲಿ ಪರಿಸರಕ್ಕೆ ಮಾರಕವಾಗುವ ಯಾವುದೇ ಇಂಗಾಲದ ಡೈಆಕ್ಸೈಡ್ ಅಥವಾ ವಿಷಕಾರಿ ಹೊಗೆ ಹೊರಸೂಸುವುದಿಲ್ಲ. ಇದರ ಬದಲಾಗಿ ಕೇವಲ ನೀರು ಮತ್ತು ಹಬೆ ಮಾತ್ರ ಪರಿಸರಕ್ಕೆ ಬಿಡುಗಡೆಯಾಗುತ್ತದೆ! ಸ್ವದೇಶಿ ತಂತ್ರಜ್ಞಾನ ಮತ್ತು ಜಲಜನಕ ಮರುಪೂರಣ ವ್ಯವಸ್ಥೆಈ ಅತ್ಯಾಧುನಿಕ ತಂತ್ರಜ್ಞಾನವನ್ನು ಹೈದರಾಬಾದ್ ಮೂಲದ ಮೇಧಾ ಸರ್ವೋ ಡ್ರೈವ್ಸ್ ಕಂಪನಿಯು, ಕೆನಡಾದ ಬಲ್ಲಾರ್ಡ್ ಪವರ್ ಸಿಸ್ಟಮ್ಸ್ ಸಂಸ್ಥೆಯ ಜೊತೆಗೂಡಿ ಸಂಪೂರ್ಣ ಸ್ವದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿದೆ.
ದೇಶದ ಮೊದಲ ಹೈಡ್ರೋಜನ್ ಘಟಕ
ಹರಿಯಾಣದ ಜಿಂದ್‌ನಲ್ಲಿ ದೇಶದ ಮೊಟ್ಟಮೊದಲ ಜಲಜನಕ ಸಂಗ್ರಹಣೆ ಮತ್ತು ಇಂಧನ ತುಂಬುವ ಘಟಕವನ್ನು ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಪ್ರತಿದಿನ 420 ರಿಂದ 430 ಕೆ.ಜಿ ಹೈಡ್ರೋಜನ್ ಉತ್ಪಾದಿಸಿ ರೈಲಿಗೆ ಇಂಧನ ಭರ್ತಿ ಮಾಡಲಾಗುತ್ತದೆ. ಒಮ್ಮೆ ಪೂರ್ಣ ಪ್ರಮಾಣದಲ್ಲಿ ಇಂಧನ ಭರ್ತಿಯಾದರೆ, ಈ ರೈಲು ಸುಮಾರು 250 ಕಿ.ಮೀ. ದೂರವನ್ನು ಕ್ರಮಿಸಬಲ್ಲದು. ರೈಲಿನ ಎರಡೂ ತುದಿಗಳಲ್ಲಿ ಹೈಡ್ರೋಜನ್ ಕೋಣೆಗಳಿದ್ದು, ಹೆಚ್ಚುವರಿ ವಿದ್ಯುತ್ ಶೇಖರಿಸಿಡಲು ಬ್ಯಾಟರಿಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಸುರಕ್ಷತೆ ಮತ್ತು ಮೇಲ್ವಿಚಾರಣೆ
ಇಂಧನ ಮರುಪೂರಣ ವ್ಯವಸ್ಥೆಯ ಸಂಪೂರ್ಣ ಮೇಲ್ವಿಚಾರಣೆಗಾಗಿ 24/7 ತರಬೇತಿ ಪಡೆದ ಪ್ರಮಾಣೀಕೃತ ಸಿಬ್ಬಂದಿಯನ್ನು ನೇಮಿಸಲಾಗಿದೆ. ಆರಂಭಿಕ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ತಾಂತ್ರಿಕ ತೊಂದರೆ ಆಗದಂತೆ ತಜ್ಞ ತಾಂತ್ರಿಕ ಸಿಬ್ಬಂದಿ ರೈಲಿನಲ್ಲೇ ಇರಲಿದ್ದಾರೆ. ಯೋಜನೆಯ ವೆಚ್ಚ ಹಾಗೂ ಭವಿಷ್ಯದ ಗುರಿಈ ತಂತ್ರಜ್ಞಾನವು ಆರಂಭದಲ್ಲಿ ದುಬಾರಿಯೆನಿಸಿದರೂ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಲಾಭದಾಯಕವಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ 2030ರ ಶುದ್ಧ ಇಂಧನ ಗುರಿ ಮತ್ತು ‘ನೆಟ್ ಝೀರೋ’ ಸಾಧನೆಗೆ ಈ ಹೈಡ್ರೋಜನ್ ರೈಲು ಯೋಜನೆಯು ದಾರಿದೀಪವಾಗಲಿದೆ. ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಮತ್ತು ಇಂಧನ ಬೇಡಿಕೆ ಇರುವ ದೇಶಕ್ಕೆ, ಪರಿಸರಕ್ಕೆ ಕಿಂಚಿತ್ತೂ ಹಾನಿ ಮಾಡದ ಈ ಸರಳ ತಂತ್ರಜ್ಞಾನವು ಪ್ರಕೃತಿ ನೀಡಿದ ವರದಾನವೇ ಸರಿ. ಇದು ಮುಂಬರುವ ದಿನಗಳಲ್ಲಿ ಸುಲಭ ದರದಲ್ಲಿ ಪರಿಸರಸ್ನೇಹಿ ಸಾರಿಗೆ ಮತ್ತು ಸರಕು ಸಾಗಣೆಗೆ ಹೊಸ ಕ್ರಾಂತಿಯನ್ನು ಸೃಷ್ಟಿಸಲಿದೆ.

