Parliment Session| ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲದ ಮಧ್ಯೆ ಮೂರು ಮಸೂದೆ ಮಂಡನೆ
x

Parliment Session| ಸಂಸತ್ತಿನಲ್ಲಿ ವಿಪಕ್ಷಗಳ ಗದ್ದಲದ ಮಧ್ಯೆ ಮೂರು ಮಸೂದೆ ಮಂಡನೆ

"2023ರಲ್ಲೇ ಸಂವಿಧಾನದ 334(A) ವಿಧಿಗೆ ತಿದ್ದುಪಡಿ ತಂದು ಒಮ್ಮತ ಮೂಡಿಸಲಾಗಿತ್ತು. ಹಾಗಿರುವಾಗ ಈಗಿನ ಲೋಕಸಭಾ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ತರಲು ಸರ್ಕಾರಕ್ಕೆ ಇರುವ ಅಡ್ಡಿಯಾದರೂ ಏನು?" ಎಂಬುದು ಕಾಂಗ್ರೆಸ್‌ ಪ್ರಶ್ನೆ.


ಲೋಕಸಭೆಯಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲದ ನಡುವೆಯೂ ಕೇಂದ್ರ ಸರ್ಕಾರ ಮಹಿಳಾ ಮೀಸಲಾತಿ, ಸೀಮಾ ನಿರ್ಣಯ ಮಸೂದೆ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ-2026 ಮಂಡನೆ ಮಾಡಿದೆ. ಈ ಮಸೂದೆಗಳ ಮೂಲಕ ಚುನಾವಣಾ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಉದ್ದೇಶವಿದೆ ಎಂದು ಕೇಂದ್ರ ಸರ್ಕಾರ ಹೇಳಿದರೆ, ವಿರೋಧ ಪಕ್ಷಗಳು ಇದನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿ ಆಕ್ರೋಶ ವ್ಯಕ್ತಪಡಿಸಿವೆ.

ಲೋಕಸಭೆ ಸ್ಥಾನಗಳ ಸಂಖ್ಯೆ 850ಕ್ಕೆ ಏರಿಕೆ

ದೇಶದ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯ ಸ್ಥಾನಗಳನ್ನು 543 ರಿಂದ 850ಕ್ಕೆ ಹೆಚ್ಚಿಸುವ ಕ್ಷೇತ್ರ ಪುನರ್ ವಿಂಗಡಣೆ ಮಸುದೆಯನ್ನು ಸರ್ಕಾರದ ಮಂಡನೆ ಮಾಡಿದೆ. ಆ ಮೂಲಕ ರಾಜ್ಯಗಳಿಂದ 815 ಸದಸ್ಯರು, ಕೇಂದ್ರಾಡಳಿತ ಪ್ರದೇಶಗಳಿಂದ 35 ಸದಸ್ಯರು ಸಂಸತ್ತಿಗೆ ಆಯ್ಕೆಯಾಗಬಹುದಾಗಿದೆ. ಇದೇ ಮಾದರಿಯಲ್ಲಿ ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನೂ ವಿಸ್ತರಿಸುವ ಉದ್ದೇಶವಿದ್ದು, ಇದು 'ಕ್ಷೇತ್ರ ಪುನರ್ವಿಂಗಡಣೆ' ಪ್ರಕ್ರಿಯೆ ಮುಗಿದ ನಂತರವಷ್ಟೇ ಕಾರ್ಯರೂಪಕ್ಕೆ ಬರಲಿದೆ.

2026 ರ ಜನಗಣತಿಗಾಗಿ ಕಾಯದೇ ಲಭ್ಯವಿರುವ ಜನಗಣತಿ ಆಧಾರದ ಮೇಲೆ ಡಿಲಿಮಿಟೇಶನ್ ಪ್ರಕ್ರಿಯೆ ಪೂರ್ಣಗೊಳಿಸಲು ಸಂವಿಧಾನದ 81 ಮತ್ತು 82 ನೇ ವಿಧಿಗಳಿಗೆ ತಿದ್ದುಪಡಿ ಸೂಚಿಸಲಿದೆ. 2029 ರ ಚುನಾವಣೆ ನಂತರ ಜಾರಿಗೆ ಬರುವಂತೆ ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತರುವುದು ಮಸೂದೆಯ ಉದ್ದೇಶವಾಗಿದೆ.

ಗಡಿ ನಿರ್ಣಯ ಮಸೂದೆ 2026

ಇದು 2002ರ ಹಳೆಯ ಕಾಯ್ದೆ ರದ್ದುಗೊಳಿಸಲಿದೆ. ಹೊಸ ಡಿಲಿಮಿಟೇಶನ್ ಆಯೋಗವು 2011ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಗಡಿಯನ್ನು ಮರು ವ್ಯಾಖ್ಯಾನಿಸಲಿದೆ.

ಈ ಮಸೂದೆಯು ಹೊಸ ಡಿಲಿಮಿಟೇಶನ್ ಆಯೋಗವನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಈ ಆಯೋಗವು ಕ್ಷೇತ್ರಗಳ ಗಡಿಗಳನ್ನು ಮರು ವ್ಯಾಖ್ಯಾನಿಸುತ್ತದೆ. 2011ರ ಜನಗಣತಿ ದತ್ತಾಂಶ ಆಧರಿಸಿ ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಸ್ಥಾನಗಳನ್ನು ನಿಗದಿ ಮಾಡಲಿದೆ.

ಕೇಂದ್ರಾಡಳಿತ ಪ್ರದೇಶಗಳ ತಿದ್ದುಪಡಿ

ದೆಹಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿ ವಿಧಾನಸಭೆಗಳಲ್ಲೂ ಮಹಿಳಾ ಮೀಸಲಾತಿ ಜಾರಿಗೆ ಇದು ದಾರಿ ಮಾಡಿಕೊಡಲಿದೆ. ಮಸೂದೆಯು ರಾಜ್ಯಗಳ ಶಾಸಕಾಂಗ ಸಭೆಗಳಲ್ಲಿ ಹಾಗೂ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿಯಂತಹ ಕೇಂದ್ರಾಡಳಿತ ಪ್ರದೇಶಗ ಳಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಜಾರಿಗೆ ತರಲು ದಾರಿ ಮಾಡಿಕೊಡುತ್ತದೆ. ಈ ಮೂರು ಮಸೂದೆಗಳನ್ನು ಪ್ರಾಥಮಿಕವಾಗಿ ಮಹಿಳಾ ಮೀಸಲಾತಿಯ ಅನುಷ್ಠಾನವನ್ನು ತ್ವರಿತಗೊಳಿಸಲು ಮತ್ತು ದೇಶದ ಚುನಾವಣಾ ರಚನೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ಮಾಡಲು ಪರಿಚಯಿಸಲಾಗುತ್ತಿದೆ.

ಸರ್ಕಾರದ ವಿರುದ್ಧ ವಿಪಕ್ಷಗಳ 'ಒಗ್ಗಟ್ಟಿನ' ಸಮರ

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆ ಮಂಡಿಸುತ್ತಿದ್ದಂತೆ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ತೀವ್ರ ವಿರೋಧ ವ್ಯಕ್ತಪಡಿಸಿದರು.

"ನಾವು ಮಹಿಳಾ ಮೀಸಲಾತಿಯ ಪರವಾಗಿದ್ದೇವೆ. ಆದರೆ ಸರ್ಕಾರ ಇದನ್ನು ತರುತ್ತಿರುವ ವಿಧಾನ ಮತ್ತು ಹಾಕಿರುವ ಷರತ್ತುಗಳು ರಾಜಕೀಯ ಪ್ರೇರಿತವಾಗಿವೆ. ಕ್ಷೇತ್ರ ಪುನರ್ವಿಂಗಡಣೆಯ ನೆಪದಲ್ಲಿ ಮೀಸಲಾತಿಯನ್ನು ವಿಳಂಬ ಮಾಡುವುದು ಸರ್ಕಾರದ ಅಸಲಿ ತಂತ್ರ ಎಂದು ಬುಧವಾರ ನಡೆದ ಸಮನ್ವಯ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇರ ವಾಗ್ದಾಳಿ ನಡೆಸಿದ್ದರು.

"2023ರಲ್ಲೇ ಸಂವಿಧಾನದ 334(A) ವಿಧಿಗೆ ತಿದ್ದುಪಡಿ ತಂದು ಒಮ್ಮತ ಮೂಡಿಸಲಾಗಿತ್ತು. ಹಾಗಿರುವಾಗ ಈಗಿನ ಲೋಕಸಭಾ ಚುನಾವಣೆಯಿಂದಲೇ ಮಹಿಳಾ ಮೀಸಲಾತಿ ಜಾರಿಗೆ ತರಲು ಸರ್ಕಾರಕ್ಕೆ ಇರುವ ಅಡ್ಡಿಯಾದರೂ ಏನು?" ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಪ್ರಶ್ನಿಸಿದ್ದರು.

ಸಂಘರ್ಷದ ಹಾದಿಯಲ್ಲಿ ಸಂಸತ್ತು

ಮಹಿಳೆಯರಿಗೆ ಅಧಿಕಾರ ನೀಡುವ ಮಸೂದೆಯ ಆಶಯಕ್ಕೆ ಎಲ್ಲ ಪಕ್ಷಗಳ ಒಪ್ಪಿಗೆಯಿದ್ದರೂ, ಅದರ 'ಅನುಷ್ಠಾನದ ಸಮಯ' ಮತ್ತು 'ವಿಧಾನ' ಈಗ ದೊಡ್ಡ ಜಿದ್ದಾಜಿದ್ದಿಗೆ ಕಾರಣವಾಗಿದೆ. ಮೋದಿ ಸರ್ಕಾರವು ಚುನಾವಣಾ ಲಾಭಕ್ಕಾಗಿ ವಿರೋಧ ಪಕ್ಷಗಳನ್ನು ನಿಗ್ರಹಿಸುತ್ತಿದೆ ಎಂದು ಆರೋಪಿಸಿರುವ ಮೈತ್ರಿಕೂಟದ ನಾಯಕರು, ಸಂಸತ್ತಿನ ಒಳಗೆ ಒಗ್ಗಟ್ಟಿನಿಂದ ಹೋರಾಡುವುದಾಗಿ ಘೋಷಿಸಿದ್ದಾರೆ. ವಿಪಕ್ಷಗಳ ಬೇಡಿಕೆಗೆ ಮಣಿದು ಷರತ್ತುಗಳನ್ನು ಸಡಿಲಿಸುತ್ತದೆಯೇ ಅಥವಾ ಸಂಸತ್ತಿನ ಸಂಘರ್ಷ ಬೀದಿಗೆ ಇಳಿಯುತ್ತದೆಯೇ ನೋಡಬೇಕಿದೆ.

Read More
Next Story