
ಮತದಾನಕ್ಕೂ ಮುನ್ನ ಅಭ್ಯರ್ಥಿಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ EVM ಮತ್ತು VVPAT ಯಂತ್ರಗಳನ್ನು ಪರಿಶೀಲಿಸಲಾಗುತ್ತದೆ.
ಚುನಾವಣಾ ಪ್ರಕ್ರಿಯೆ ವಿಶ್ವದಲ್ಲೇ ಅತ್ಯಂತ ಪಾರದರ್ಶಕ: ಸಿಇಸಿ ಜ್ಞಾನೇಶ್ ಕುಮಾರ್
ಮತದಾನಕ್ಕೂ ಮುನ್ನ ಅಭ್ಯರ್ಥಿಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ EVM ಮತ್ತು VVPAT ಯಂತ್ರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಜ್ಞಾನೇಶ್ ಕುಮಾರ್ ವಿವರಿಸಿದರು.
ಭಾರತದ ಚುನಾವಣಾ ಪ್ರಕ್ರಿಯೆ ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದ ಪ್ರಕ್ರಿಯೆಗಳಲ್ಲಿ ಒಂದಾಗಿದ್ದು, ಮತದಾರರ ಪಟ್ಟಿ ಸಿದ್ಧಪಡಿಸುವುದರಿಂದ ಹಿಡಿದು ಮತ ಎಣಿಕೆಯವರೆಗೆ ಪ್ರತಿಯೊಂದು ಹಂತದಲ್ಲೂ ಪರಿಶೀಲನೆ ನಡೆಯುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಹಾಲ್‌ನಲ್ಲಿ ನಡೆದ ‘ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಹಾಗೂ ಅವರ ಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆಯ ವಿವಿಧ ಹಂತಗಳ ಪರಿಶೀಲನೆಯಲ್ಲಿ ಭಾಗವಹಿಸುತ್ತಾರೆ ಎಂದು ತಿಳಿಸಿದ್ದಾರೆ.
ಮತದಾರರ ಪಟ್ಟಿಯ ನಿರಂತರ ಪರಿಶೀಲನೆ
ರಾಜಕೀಯ ಪಕ್ಷಗಳು ಮತ್ತು ಅವರ ಬೂತ್ ಮಟ್ಟದ ಏಜೆಂಟ್‌ಗಳ ಸಹಭಾಗಿತ್ವದಲ್ಲಿ ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಗೈರುಹಾಜರಾಗಿರುವವರು, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು ಹಾಗೂ ವಿದೇಶಿ ನಾಗರಿಕರ ಹೆಸರುಗಳಂತಹ ಪ್ರಕರಣಗಳನ್ನು ಗುರುತಿಸುವ ಜವಾಬ್ದಾರಿ ಬೂತ್ ಮಟ್ಟದ ಅಧಿಕಾರಿಗಳ ಮೇಲಿದೆ. ಅದೇ ವೇಳೆ, ಅರ್ಹ ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗುಳಿಯದಂತೆ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.
ಇವಿಎಂ, ವಿವಿಪ್ಯಾಟ್‌ಗಳ ಪರಿಶೀಲನೆ
ಮತದಾನಕ್ಕೂ ಮುನ್ನ ಅಭ್ಯರ್ಥಿಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಅಣಕು ಮತದಾನದ ಮೂಲಕ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಪರಿಶೀಲಿಸಲಾಗುತ್ತದೆ ಎಂದು ಸಿಇಸಿ ವಿವರಿಸಿದ್ದಾರೆ.
ಮತದಾನ ಪೂರ್ಣಗೊಂಡ ಬಳಿಕವೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಇವಿಎಂಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಅಗತ್ಯ ದಾಖಲೆಗಳಿಗೂ ಅವರಿಂದ ಸಹಿ ಪಡೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮತ ಎಣಿಕೆ ಸಂದರ್ಭದಲ್ಲಿ ಇವಿಎಂನಲ್ಲಿ ದಾಖಲಾದ ಮತಗಳನ್ನು ಅಭ್ಯರ್ಥಿಗಳ ಎಣಿಕೆ ಏಜೆಂಟ್‌ಗಳ ಸಮ್ಮುಖದಲ್ಲಿ ಫಾರಂ 17ಸಿನಲ್ಲಿ ನಮೂದಿಸಿರುವ ಮತಗಳೊಂದಿಗೆ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
18 ವರ್ಷ ತುಂಬಿದವರ ಹೆಸರು ಸೇರ್ಪಡೆ
ಮತದಾರರ ಪಟ್ಟಿಯ ನಿಖರತೆ ಮತ್ತು ಪಾರದರ್ಶಕತೆಯನ್ನು ಕಾಪಾಡಲು ಚುನಾವಣಾ ಆಯೋಗ ಕಾಲಕಾಲಕ್ಕೆ ವಿಶೇಷ ತೀವ್ರ ಪರಿಷ್ಕರಣೆ ನಡೆಸುತ್ತದೆ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಬೂತ್ ಮಟ್ಟದ ಅಧಿಕಾರಿಗಳು ಮತದಾರರ ಮನೆಗಳಿಗೆ ತೆರಳಿ ಅಗತ್ಯ ಮಾಹಿತಿಯನ್ನು ಪರಿಶೀಲಿಸುತ್ತಾರೆ. ದಾಖಲೆಗಳ ಪರಿಶೀಲನೆ, ಮ್ಯಾಪಿಂಗ್ ಮತ್ತು ವಿಚಾರಣೆ ಸೇರಿದಂತೆ ವಿವಿಧ ಪ್ರಕ್ರಿಯೆಗಳ ಮೂಲಕ ಮತದಾರರ ಪಟ್ಟಿಯನ್ನು ನಿಖರಗೊಳಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ.
18 ವರ್ಷ ಪೂರ್ಣಗೊಳಿಸಿರುವ ಪ್ರತಿಯೊಬ್ಬ ಅರ್ಹ ಭಾರತೀಯ ನಾಗರಿಕನ ಹೆಸರನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಯುವಜನರನ್ನು ಮತದಾರರ ಪಟ್ಟಿಗೆ ಸೇರಿಸುವುದು ದೇಶದ ಪ್ರಜಾಪ್ರಭುತ್ವಕ್ಕೆ ಸಲ್ಲಿಸುವ ಮಹತ್ವದ ಸೇವೆಯಾಗಿದೆ ಎಂದು ಅವರು ಹೇಳಿದ್ದಾರೆ.
ಯುವಜನರಲ್ಲಿ ಚುನಾವಣಾ ಸಾಕ್ಷರತೆಗೆ ಒತ್ತು
ಅಹಮದಾಬಾದ್‌ನಲ್ಲಿ ನಡೆದ ಐದನೇ ಪ್ರಾದೇಶಿಕ ಸಮ್ಮೇಳನದಲ್ಲಿ ‘ಚುನಾವಣಾ ಸಾಕ್ಷರತಾ ಕ್ಲಬ್‌ಗಳು’ ಮತ್ತು ‘ಇಸಿನೆಟ್’ ಕುರಿತು ಚರ್ಚೆ ನಡೆಯಿತು. ಯುವಜನರಲ್ಲಿ ಚುನಾವಣಾ ಸಾಕ್ಷರತೆ ಹಾಗೂ ಪ್ರಜಾಪ್ರಭುತ್ವದ ಅರಿವು ಹೆಚ್ಚಿಸುವ ಕುರಿತು ಸಮ್ಮೇಳನದಲ್ಲಿ ಗಮನ ಹರಿಸಲಾಯಿತು.
ಯುವಕರು ಇಸಿನೆಟ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ತಮ್ಮ ಕುಟುಂಬದವರು ಹಾಗೂ ಸುತ್ತಮುತ್ತಲಿನ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ನೋಂದಾಯಿಸಲು ನೆರವಾಗಬೇಕು ಎಂದು ಸಿಇಸಿ ಜ್ಞಾನೇಶ್ ಕುಮಾರ್ ಕರೆ ನೀಡಿದ್ದಾರೆ.

