Is India becoming a global hotspot? 44 degrees in April, 20 cities scorching!
x

ಸಾಂದರ್ಭಿಕ ಚಿತ್ರ

ಗ್ಲೋಬಲ್ 'ಹಾಟ್‌'ಸ್ಪಾಟ್ ಆಗುತ್ತಿದೆಯೇ ಭಾರತ? ಏಪ್ರಿಲ್‌ನಲ್ಲೇ 44 ಡಿಗ್ರಿ, 20 ನಗರಗಳು ಕಾದ ಕೆಂಡ!

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಮುಂಬರುವ ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ 45 ರಿಂದ 48 ಡಿಗ್ರಿ ಸೆಲ್ಸಿಯಸ್ ವರೆಗೂ ತಲುಪುವ ಸಾಧ್ಯತೆಯಿದೆ.


Click the Play button to hear this message in audio format

ಭಾರತೀಯ ಬೇಸಿಗೆಯ ಝಳ ಹೊಸದೇನಲ್ಲ. ಬ್ರಿಟಿಷರ ಕಾಲದಲ್ಲೇ ಬಿರುಬಿಸಿಲಿನಿಂದ ಪಾರಾಗಲು ಬೇಸಿಗೆಯ ಹಿಲ್ ಸ್ಟೇಷನ್‌ಗಳನ್ನು ಹುಡುಕಿಕೊಂಡು ಹೋಗುವ ಪರಿಪಾಠವಿತ್ತು. ಆದರೆ, 2026ರ ಏಪ್ರಿಲ್ ತಿಂಗಳಲ್ಲಿ ನಾವು ಎದುರಿಸುತ್ತಿರುವ ತಾಪಮಾನ ಕೇವಲ ಋತುಮಾನದ ಬದಲಾವಣೆಯಾಗಿರದೆ, ಗಂಭೀರ ಹವಾಮಾನ ಬಿಕ್ಕಟ್ಟಾಗಿ ಪರಿಣಮಿಸಿದೆ.

ಪ್ರಸ್ತುತ ವಿಶ್ವದ 25 ಅತಿ ಬಿಸಿಯಾದ ನಗರಗಳ ಪೈಕಿ 20 ನಗರಗಳು ಭಾರತದಲ್ಲಿಯೇ ಇವೆ ಎಂಬುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು, ಈ ಹಿಂದೆ ಆಫ್ರಿಕಾ ಮತ್ತು ಅರೇಬಿಯನ್ ಪರ್ಯಾಯ ದ್ವೀಪಗಳಲ್ಲಿದ್ದ 'ಗ್ಲೋಬಲ್ ಹಾಟ್‌ಸ್ಪಾಟ್' ಪಟ್ಟವನ್ನು ಇದೀಗ ಭಾರತ ತನ್ನದಾಗಿಸಿಕೊಳ್ಳುವ ಆತಂಕ ಎದುರಾಗಿದೆ.

ಕುದಿಯುತ್ತಿರುವ ಭಾರತ: ಎಲ್ಲೆಲ್ಲಿ ಎಷ್ಟು ತಾಪಮಾನ?

ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಮುಂಬರುವ ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ತಾಪಮಾನ 45 ರಿಂದ 48 ಡಿಗ್ರಿ ಸೆಲ್ಸಿಯಸ್ ವರೆಗೂ ತಲುಪುವ ಸಾಧ್ಯತೆಯಿದೆ.

ಉತ್ತರ ಪ್ರದೇಶ ಸುಡುತ್ತಿದೆ: ಏಪ್ರಿಲ್ 18ರ ಡೇಟಾ ಪ್ರಕಾರ, ಯುಪಿಯ ವಾರಣಾಸಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಉಂಚಾಹರ್, ಪ್ರಯಾಗ್‌ರಾಜ್, ಜೌನ್‌ಪುರ, ಅಮೇಠಿ, ಅಜಂಗಢ ಸೇರಿದಂತೆ ಹಲವು ನಗರಗಳು 44 ಡಿಗ್ರಿ ತಾಪಮಾನದೊಂದಿಗೆ ಕಾದ ಕಾವಲಿಯಾಗಿವೆ.

ಮಹಾರಾಷ್ಟ್ರದಲ್ಲಿ ಝಳ: ಮಹಾರಾಷ್ಟ್ರದ ವಿದರ್ಭ ಭಾಗದ ಅಕೋಲ, ಅಮರಾವತಿ, ವಾರ್ಧಾ ಮತ್ತು ನಾಗ್ಪುರದಲ್ಲಿ 43 ರಿಂದ 44.2 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಮರಾಠವಾಡದ ಸೊಲ್ಲಾಪುರ, ಮಾಲೆಗಾಂವ್ ಮತ್ತು ಬೀಡ್‌ನಲ್ಲಿ ತಾಪಮಾನ 43 ಡಿಗ್ರಿ ಗಡಿ ದಾಟಿದೆ.

ಆಂಧ್ರ ಹಾಗೂ ಒಡಿಶಾ: ಆಂಧ್ರಪ್ರದೇಶದ ಅನಂತಪುರದಲ್ಲಿ 43.4 ಡಿಗ್ರಿ ತಾಪಮಾನವಿದೆ. ಇನ್ನು ಒಡಿಶಾದ ಬೋಲಂಗೀರ್, ಸುಬರ್ಣಪುರ, ಮತ್ತು ಕಾಲಹಂಡಿ ಜಿಲ್ಲೆಗಳಲ್ಲಿ ತೀವ್ರ ಬಿಸಿಗಾಳಿ ಇರುವ ಕಾರಣ ಶಾಲೆಗಳನ್ನು ಮುಚ್ಚಲಾಗಿದೆ.

ಮರುಭೂಮಿ ರಾಜ್ಯ ರಾಜಸ್ಥಾನ: ಬಾರ್ಮರ್, ಫಲೋಡಿ, ಚುರು, ಬಿಕಾನೇರ್, ಮತ್ತು ಜೈಸಲ್ಮೇರ್‌ನಲ್ಲಿ 42 ಡಿಗ್ರಿ ಸೆಲ್ಸಿಯಸ್‌ಗೂ ಅಧಿಕ ತಾಪಮಾನ ದಾಖಲಾಗಿದೆ.

ಬಿಸಿಗಾಳಿ (Heatwave) ಅಂದರೇನು?

ಸಾಮಾನ್ಯವಾಗಿ ನಿರೀಕ್ಷಿತ ತಾಪಮಾನಕ್ಕಿಂತ ಅಸಹಜವಾಗಿ ಹೆಚ್ಚಿನ ತಾಪಮಾನ ದಾಖಲಾಗುವ ಅವಧಿಯನ್ನು 'ಬಿಸಿಗಾಳಿ' ಎಂದು ಕರೆಯಲಾಗುತ್ತದೆ. ಮೈದಾನ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 40 ಡಿಗ್ರಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ 30 ಡಿಗ್ರಿ ಸೆಲ್ಸಿಯಸ್ ತಲುಪಿದಾಗ ಹವಾಮಾನ ಇಲಾಖೆಯು ಅಧಿಕೃತವಾಗಿ ಬಿಸಿಗಾಳಿ ಎಂದು ಘೋಷಿಸುತ್ತದೆ.

ಭಾರತದಲ್ಲಿ ತಾಪಮಾನ ಹೆಚ್ಚಳಕ್ಕೆ ಕಾರಣಗಳೇನು?

'ಹೀಟ್ ಡೋಮ್' ಸೃಷ್ಟಿ: ಉಪಖಂಡದ ಮೇಲೆ ನಿರಂತರವಾದ ಅಧಿಕ-ಒತ್ತಡದ ವ್ಯವಸ್ಥೆಯು ನಿರ್ಮಾಣವಾಗಿದ್ದು, ಇದು ಬಿಸಿ ಗಾಳಿಯನ್ನು ಒಂದು ಕಡೆ ಬಂಧಿಸಿಡುವ 'ಹೀಟ್ ಡೋಮ್' (Heat Dome) ಅನ್ನು ಸೃಷ್ಟಿಸಿದೆ.

ಶುಷ್ಕ ಮಣ್ಣು ಮತ್ತು ಮೋಡಗಳ ಕೊರತೆ: ಒಣಗಿದ ಮಣ್ಣು ತ್ವರಿತವಾಗಿ ಬಿಸಿಯಾಗುತ್ತಿದೆ. ಮುಂಗಾರು ಪೂರ್ವ ಮಳೆಯ ವಿಳಂಬ ಮತ್ತು ಮೋಡಗಳಿಲ್ಲದ ಕಾರಣ ನೇರ ಸೌರ ವಿಕಿರಣವು ಭೂಮಿಯನ್ನು ನೇರವಾಗಿ ಸುಡುತ್ತಿದೆ.

ಕಣ್ಮರೆಯಾಗುತ್ತಿರುವ ವಸಂತಕಾಲ (Spring): ಚಳಿಗಾಲ ಮತ್ತು ಬೇಸಿಗೆಯ ನಡುವಿನ ಪರಿವರ್ತನಾ ಕಾಲವಾದ 'ವಸಂತಕಾಲ' ಗಣನೀಯವಾಗಿ ಕುಗ್ಗುತ್ತಿದೆ. ಈ ವರ್ಷ ಫೆಬ್ರವರಿ ಅಂತ್ಯದಲ್ಲೇ ಪಶ್ಚಿಮ ಭಾರತದಲ್ಲಿ 40 ಡಿಗ್ರಿ ತಾಪಮಾನ ದಾಖಲಾಗಿದ್ದು ಇದಕ್ಕೆ ಸಾಕ್ಷಿ.

ಹೆಚ್ಚುತ್ತಿರುವ ಆರ್ದ್ರತೆ : ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ 'ಆರ್ದ್ರ ಬಿಸಿ'ಯ ಪ್ರಮಾಣ ಮಿತಿಮೀರುತ್ತಿದೆ. 80% ಆರ್ದ್ರತೆಯೊಂದಿಗೆ 38 ಡಿಗ್ರಿ ತಾಪಮಾನವಿದ್ದರೂ, ಅದು ದೇಹಕ್ಕೆ 48 ಡಿಗ್ರಿಯಷ್ಟು ಬಿಸಿಯ ಅನುಭವ ನೀಡುತ್ತದೆ. ಸಮುದ್ರದ ಮೇಲ್ಮೈ ತಾಪಮಾನ ಹೆಚ್ಚುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ.

ನಗರೀಕರಣದ ಬಿಸಿ: 'ಎಸಿ ಸಿಟಿ' ಎಂದೇ ಖ್ಯಾತಿಯಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿಯೂ ತ್ವರಿತ ನಗರೀಕರಣ ಮತ್ತು ಹಸಿರು ಹೊದಿಕೆಯ ನಾಶದಿಂದಾಗಿ ತಾಪಮಾನ 36-37 ಡಿಗ್ರಿ ಸೆಲ್ಸಿಯಸ್ ತಲುಪಿದೆ.

ಹಮ್ಮು-ಬಿಮ್ಮು ಬಿಡುತ್ತಿರುವ 'ಎಸಿ ಸಿಟಿ' ಬೆಂಗಳೂರು!

ಬೆಂಗಳೂರಿನ ಹವಾಮಾನವನ್ನೂ ಈ ಬಾರಿಯ ಬೇಸಿಗೆ ಬಿಟ್ಟಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಬೆಂಗಳೂರಿನ ಬಿಸಿಲಿಗೆ ಟ್ರೇನಲ್ಲಿಟ್ಟಿದ್ದ ಕ್ರಯಾನ್‌ಗಳು ಕರಗಿರುವ ದೃಶ್ಯವು ನಗರದ ತಾಪಮಾನದ ತೀವ್ರತೆಗೆ ಕನ್ನಡಿ ಹಿಡಿದಿದೆ.

ಡೇಟಾ ಹೇಳುವುದೇನು?

ಹವಾಮಾನ ಇಲಾಖೆಯ ದತ್ತಾಂಶಗಳ ಪ್ರಕಾರ, 2023 ರಲ್ಲಿ ಭಾರತದಲ್ಲಿ 230 ಬಿಸಿಗಾಳಿ ದಿನಗಳು (Heatwave days) ದಾಖಲಾಗಿದ್ದವು. ಆದರೆ 2024 ರಲ್ಲಿ ಅದು 554 ಕ್ಕೆ (ಎರಡರಷ್ಟು) ಏರಿಕೆಯಾಗಿತ್ತು. ಈಗ 2026ರ ಏಪ್ರಿಲ್‌ನಲ್ಲಿಯೇ ಈ ಪರಿಸ್ಥಿತಿ ಎದುರಾಗಿರುವುದು, ನಾವು ಎದುರಿಸುತ್ತಿರುವ ಹವಾಮಾನ ಬಿಕ್ಕಟ್ಟಿನ ಭೀಕರತೆಯನ್ನು ತೆರೆದಿಡುತ್ತಿದೆ. ಮುಂದಿನ ದಿನಗಳಲ್ಲಿ ಈ ಬಿಸಿಗಾಳಿಯಿಂದ ಆಸ್ಪತ್ರೆ, ಶಾಲೆ ಮತ್ತು ವಿದ್ಯುತ್ ಮೂಲಸೌಕರ್ಯಗಳು ಹೇಗೆ ಪಾರಾಗಲಿವೆ ಎಂಬುದೇ ಈಗಿರುವ ಬಹುದೊಡ್ಡ ಸವಾಲು.

Read More
Next Story