
ಪರೀಕ್ಷೆ ವೇಳೆ ಮೊಬೈಲ್ ಬಳಕೆ ಆರೋಪ: ಐಐಟಿ ಬಾಂಬೆ ವಿದ್ಯಾರ್ಥಿ ಆತ್ಮಹತ್ಯೆ- ವಿದ್ಯಾರ್ಥಿಗಳ ಪ್ರತಿಭಟನೆ
ಸಾಹಿಲ್ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸಿದ್ದ ಎಂದು ಸಂಸ್ಥೆ ತಿಳಿಸಿದೆ.
ಪರೀಕ್ಷೆ ವೇಳೆ ಮೊಬೈಲ್ ಫೋನ್ ಬಳಸಿದ ಆರೋಪದ ಬೆನ್ನಲ್ಲೇ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಶುಕ್ರವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊವೈ ಕ್ಯಾಂಪಸ್‌ನಲ್ಲಿ ಕಳೆದ ಆರು ತಿಂಗಳಲ್ಲಿ ನಡೆದ ಮೂರನೇ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಎನರ್ಜಿ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಲ್ಲಿ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಹಿಲ್ ಎಂಬ ವಿದ್ಯಾರ್ಥಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ ಉತ್ತರಗಳನ್ನು ಪಡೆಯಲು ಪ್ರಯತ್ನಿಸಿದ್ದ ಎಂದು ಸಂಸ್ಥೆ ತಿಳಿಸಿದೆ.
ಆದರೆ, ಈ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಯ ವಿರುದ್ಧ ಯಾವುದೇ ಶಿಸ್ತು ಕ್ರಮ ಆರಂಭಿಸಿರಲಿಲ್ಲ ಎಂದು ಐಐಟಿ ಬಾಂಬೆ ಹೇಳಿದೆ. ಪರೀಕ್ಷೆಯ ಬಳಿಕ ಬೋಧಕರು ಹಾಗೂ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಯೊಂದಿಗೆ ಈ ಕುರಿತು ಚರ್ಚಿಸಿ, ಸಲಹೆ ನೀಡಿದ್ದರು. ಈ ಘಟನೆಯಿಂದ ಅವರ ಶೈಕ್ಷಣಿಕ ಭವಿಷ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಭರವಸೆ ನೀಡಿದ್ದರು.
ಚರ್ಚೆಯ ಬಳಿಕ ವಿದ್ಯಾರ್ಥಿ ತನ್ನ ವಸತಿ ನಿಲಯದ ಕೊಠಡಿಗೆ ತೆರಳಿದ್ದರು. ಬಳಿಕ ಸಂಜೆ ಅವರು ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ವಿದ್ಯಾರ್ಥಿಯ ಸಾವಿಗೆ ಐಐಟಿ ಬಾಂಬೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ವಿದ್ಯಾರ್ಥಿಯ ಸ್ನೇಹಿತರು, ಸಹಪಾಠಿಗಳು, ಬೋಧಕರು ಸೇರಿದಂತೆ ಘಟನೆಯಿಂದ ಪ್ರಭಾವಿತರಾದವರಿಗೆ ಅಗತ್ಯ ಬೆಂಬಲ ನೀಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ವಿದ್ಯಾರ್ಥಿಯ ಸಾವಿಗೆ ಕಾರಣವಾದ ಪರಿಸ್ಥಿತಿಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದೆ.
ವಿದ್ಯಾರ್ಥಿಗಳ ಪ್ರತಿಭಟನೆ
ವಿದ್ಯಾರ್ಥಿಯ ಸಾವಿನ ಬಳಿಕ ಐಐಟಿ ಬಾಂಬೆಯ ಹಲವು ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿ, ಸಂಸ್ಥೆಯ ಆಡಳಿತದಿಂದ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಸ್ಪಷ್ಟ ಉತ್ತರಗಳನ್ನು ಒತ್ತಾಯಿಸಿದರು. "ಇಂದು ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆಡಳಿತದಿಂದ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಉತ್ತರಗಳನ್ನು ಕೇಳುವುದು ನಮ್ಮ ಉದ್ದೇಶ" ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.
ಇದು ಮೊದಲ ಘಟನೆ ಅಲ್ಲ ಎಂದಿರುವ ಮತ್ತೊಬ್ಬ ವಿದ್ಯಾರ್ಥಿ, "ಈ ವರ್ಷವೇ ನಾಲ್ಕು ಘಟನೆಗಳು ನಡೆದಿವೆ. ಕಳೆದ ಎರಡು ತಿಂಗಳಲ್ಲಿ ಎರಡು ಘಟನೆಗಳು ನಡೆದಿವೆ. ಇಂತಹ ಘಟನೆಗಳು ಏಕೆ ನಡೆಯುತ್ತಿವೆ, ಇದರ ಹಿಂದಿನ ಕಾರಣಗಳೇನು ಎಂಬುದು ನಮಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಕ್ಯಾಂಪಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಆಡಳಿತದ ನಡುವೆ ಮಾತುಕತೆ ಕೂಡ ನಡೆಯಿತು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ದತ್ತಾತ್ರೇಯ ನಲವಾಡೆ ತಿಳಿಸಿದ್ದಾರೆ.
"ಇಂದು ಐಐಟಿ ಪೊವೈಯಲ್ಲಿ ವಿದ್ಯಾರ್ಥಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಕೆಲ ಐಐಟಿ ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಐಐಟಿ ಆಡಳಿತ ಮಾತುಕತೆ ನಡೆಸುತ್ತಿದ್ದು, ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

