ಪೈರಸಿಗೆ ಬ್ರೇಕ್: ಟೆಲಿಗ್ರಾಂ ಆ್ಯಪ್‌ಗೆ ಕೇಂದ್ರ ಸರ್ಕಾರ ಬಿಗ್‌ ಶಾಕ್
x

ಪೈರಸಿಗೆ ಬ್ರೇಕ್: ಟೆಲಿಗ್ರಾಂ ಆ್ಯಪ್‌ಗೆ ಕೇಂದ್ರ ಸರ್ಕಾರ ಬಿಗ್‌ ಶಾಕ್

ಟೆಲಿಗ್ರಾಂನಲ್ಲಿ ಚಲನಚಿತ್ರಗಳು ಮತ್ತು ಒಟಿಟಿ ವೆಬ್ ಸೀರೀಸ್‌ಗಳ ಪೈರಸಿ ಲಿಂಕ್ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಟೆಲಿಗ್ರಾಂ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದೆ.


ಭಾರತೀಯ ಚಿತ್ರರಂಗ ಹಾಗೂ ಒಟಿಟಿ (OTT) ವಲಯಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಆನ್‌ಲೈನ್ ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರ ಈಗ ಬಿಗಿ ಕ್ರಮಕ್ಕೆ ಮುಂದಾಗಿದೆ. ಜನಪ್ರಿಯ ಮೆಸೇಜಿಂಗ್ ಆಪ್ ಆದ ಟೆಲಿಗ್ರಾಂನಲ್ಲಿ ಹೊಸ ಸಿನಿಮಾಗಳು ಮತ್ತು ವೆಬ್ ಸೀರೀಸ್‌ಗಳು ವ್ಯಾಪಕವಾಗಿ ಪೈರಸಿ ರೂಪದಲ್ಲಿ ಹರಿದಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕಂಪನಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.

ತಕ್ಷಣವೇ ಈ ಕುರಿತು ಸೂಕ್ತ ಕ್ರಮ ಕೈಗೊಂಡು, ಮುಂದಿನ 15 ದಿನಗಳ ಒಳಗಾಗಿ ಕೈಗೊಂಡ ಕ್ರಮಗಳ ವರದಿಯನ್ನು ಸಲ್ಲಿಸುವಂತೆ ಟೆಲಿಗ್ರಾಂ ಸಂಸ್ಥೆಗೆ ಕಡಕ್ ನಿರ್ದೇಶನ ನೀಡಲಾಗಿದೆ.

ಒಟಿಟಿ ಕಂಟೆಂಟ್, ಸಿನಿಮಾಗಳ ಪೈರಸಿಗೆ ಸಿಗುತ್ತಾ ಮುಕ್ತಿ?

ಚಿತ್ರಮಂದಿರ ಹಾಗೂ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಹೊಸ ಚಲನಚಿತ್ರಗಳು ಮತ್ತು ವೆಬ್ ಸೀರೀಸ್‌ಗಳನ್ನು ಅನಧಿಕೃತವಾಗಿ ಹಂಚಿಕೊಳ್ಳುತ್ತಿರುವ ಟೆಲಿಗ್ರಾಂ ಚಾನೆಲ್‌ಗಳು ಮತ್ತು ಗ್ರೂಪ್‌ಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಕಾಪಿರೈಟ್ ಉಲ್ಲಂಘನೆಗಾಗಿ ಟೆಲಿಗ್ರಾಂ ಪ್ಲಾಟ್‌ಫಾರ್ಮ್ ದುರುಪಯೋಗವಾಗುವುದನ್ನು ತಡೆಯಲು ಮತ್ತು ಪೈರೇಟೆಡ್ ಲಿಂಕ್‌ಗಳ ಹಂಚಿಕೆಯನ್ನು ನಿಯಂತ್ರಿಸಲು ತನ್ನ ತಂತ್ರಜ್ಞಾನ ವ್ಯವಸ್ಥೆಯನ್ನು ಬಲಪಡಿಸುವಂತೆ ಕಂಪನಿಗೆ ತಿಳಿಸಲಾಗಿದೆ.

15 ದಿನಗಳ ಡೆಡ್‌ಲೈನ್

ಸಚಿವಾಲಯದ ಸೂಚನೆಗಳನ್ನು ಪಾಲಿಸಲು ಕೈಗೊಂಡಿರುವ ಕ್ರಮಗಳ ವಿವರವಾದ ವರದಿಯನ್ನು ನಿಗದಿತ 15 ದಿನಗಳ ಅವಧಿಯೊಳಗೆ ಸಬೂತು ಸಮೇತ ಸಲ್ಪಡಿಸಬೇಕು ಎಂದು ಸರ್ಕಾರ ಗಡುವು ವಿಧಿಸಿದೆ. ಭಾರತದ ಡಿಜಿಟಲ್ ಕ್ರಿಯೇಟರ್‌ ಎಕಾನಮಿ ಕಾಪಾಡುವುದು ಮತ್ತು ಮಾಧ್ಯಮ ಹಾಗೂ ಮನರಂಜನಾ ಉದ್ಯಮದ ಹಿತಾಸಕ್ತಿಗಳನ್ನು ರಕ್ಷಿಸುವುದು ಸರ್ಕಾರದ ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ. ಪೈರಸಿಯಿಂದಾಗಿ ಚಲನಚಿತ್ರ ನಿರ್ಮಾಪಕರು, ಪ್ರಸಾರಕರು, ಒಟಿಟಿ ಸಂಸ್ಥೆಗಳು, ವಿತರಕರು ಮತ್ತು ಹಕ್ಕುಸ್ವಾಮ್ಯ ಹೊಂದಿರುವವರು ಭಾರಿ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಹೊಸ ಸಿನಿಮಾಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಟೆಲಿಗ್ರಾಂನಂತಹ ಆ್ಯಪ್‌ಗಳಲ್ಲಿ ಉಚಿತವಾಗಿ ಸಿಗುತ್ತಿರುವುದರಿಂದ ಚಿತ್ರರಂಗ ಕಂಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಡಿಜಿಟಲ್ ಪೈರಸಿ ವಿರುದ್ಧ ಜಾರಿ ಕ್ರಮಗಳನ್ನು ಕಟ್ಟುನಿಟ್ಟಾಗಿಸಬೇಕು ಎಂದು ಚಿತ್ರರಂಗದ ಪ್ರಮುಖರು ಮತ್ತು ಉದ್ಯಮ ಸಂಸ್ಥೆಗಳು ಸರ್ಕಾರವನ್ನು ಸತತವಾಗಿ ಒತ್ತಾಯಿಸುತ್ತಿದ್ದವು.

ಕೇಂದ್ರದ ಕಟ್ಟುನಿಟ್ಟಿನ ಸಂದೇಶ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಈ ಇತ್ತೀಚಿನ ಕ್ರಮವು, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಾಪಿರೈಟ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಮತ್ತು ಅಕ್ರಮ ಕಂಟೆಂಟ್ ಶೇರ್‌ ಮಾಡುವುದನ್ನು ತಡೆಯಲು ಬಲವಾದ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ನಿಲುವನ್ನು ಸ್ಪಷ್ಟಪಡಿಸಿದೆ.

Read More
Next Story