
ಐಎಎಸ್ ಅಧಿಕಾರಿ ರಿಂಕು ದುಗ್ಗಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ: ಮರುನೇಮಕಕ್ಕೆ ತಡೆ
ನಾಯಿಯನ್ನು ವಾಯುವಿಹಾರಕ್ಕೆ ಕರೆದೊಯ್ಯಲು ದೆಹಲಿಯ ತ್ಯಾಗರಾಜ್ ಸ್ಟೇಡಿಯಂ ಖಾಲಿ ಮಾಡಿಸಿದ ಆರೋಪದ ಬಳಿಕ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರನ್ನು ಕಡ್ಡಾಯ ನಿವೃತ್ತಿ ಮೇಲೆ ಕಳುಹಿಸಲಾಗಿತ್ತು. ಇದೀಗ ಅವರ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಲು ದೆಹಲಿಯ ತ್ಯಾಗರಾಜ್ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ ಆರೋಪದ ವಿವಾದದ ಬಳಿಕ ಕೇಂದ್ರ ಸರ್ಕಾರ ಕಡ್ಡಾಯ ನಿವೃತ್ತಿ ನೀಡಿದ್ದ ಐಎಎಸ್ ಅಧಿಕಾರಿ ರಿಂಕು ದುಗ್ಗಾ ಅವರ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ರಿಂಕು ದುಗ್ಗಾ ಅವರಿಗೆ ಕಡ್ಡಾಯ ನಿವೃತ್ತಿ ನೀಡಿದ್ದ ಕೇಂದ್ರದ ನಿರ್ಧಾರವನ್ನು ರದ್ದುಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆ ಶುಕ್ರವಾರ ನಡೆಸಿತು.
ಈ ವೇಳೆ ರಿಂಕು ದುಗ್ಗಾ ಅವರಿಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್, “ಮುಂದಿನ ಆದೇಶದವರೆಗೆ ಪ್ರತಿವಾದಿಯ ಮರುನೇಮಕಕ್ಕೆ ತಡೆ ಮುಂದುವರಿಯಲಿದೆ” ಎಂದು ಸೆಪ್ಟೆಂಬರ್ 7ರಂದು ನೀಡಿದ ಆದೇಶದಲ್ಲಿ ತಿಳಿಸಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 13ಕ್ಕೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ವಾದ ಮಂಡಿಸಿದರು.
ಕಡ್ಡಾಯ ನಿವೃತ್ತಿ ಪ್ರಶ್ನಿಸಿದ್ದ ದುಗ್ಗಾ
ಕೇಂದ್ರ ಸರ್ಕಾರದ ಕಡ್ಡಾಯ ನಿವೃತ್ತಿ ಆದೇಶವನ್ನು ರಿಂಕು ದುಗ್ಗಾ ಅವರು ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT)ನಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ್ದ CAT, ಅವರನ್ನು ಸೇವೆಗೆ ಮರುನೇಮಕ ಮಾಡುವಂತೆ ಆದೇಶಿಸಿತ್ತು. ಬಳಿಕ ಕೇಂದ್ರ ಸರ್ಕಾರ ಈ ಆದೇಶವನ್ನು ಪ್ರಶ್ನಿಸಿದರೂ, ದೆಹಲಿ ಹೈಕೋರ್ಟ್ ಏಪ್ರಿಲ್ 15ರಂದು CAT ಆದೇಶವನ್ನು ಎತ್ತಿಹಿಡಿದಿತ್ತು.
2022ರಲ್ಲಿ ಭಾರಿ ವಿವಾದ
2022ರಲ್ಲಿ ರಿಂಕು ದುಗ್ಗಾ ಮತ್ತು ಅವರ ಪತಿ, ಅವರೂ ಕೂಡ ಐಎಎಸ್ ಅಧಿಕಾರಿಯಾಗಿದ್ದು, ತಮ್ಮ ಸಾಕು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಲು ತ್ಯಾಗರಾಜ್ ಕ್ರೀಡಾಂಗಣವನ್ನು ಖಾಲಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆಗೆ ಸಂಬಂಧಿಸಿದ ಛಾಯಾಚಿತ್ರಗಳು ಮತ್ತು ವರದಿಗಳು ಬಹಿರಂಗವಾದ ಬಳಿಕ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ಪ್ರಕರಣದಲ್ಲಿ ಶಿಸ್ತು ಕ್ರಮದ ವೇಳೆ ಅವರಿಗೆ ಸಣ್ಣ ಪ್ರಮಾಣದ ಶಿಕ್ಷೆ ವಿಧಿಸಲಾಗಿತ್ತು ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಅಲ್ಲದೆ, ಅನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರಾಗಿದ್ದ ಆರೋಪವನ್ನೂ ಪರಿಗಣಿಸಲಾಗಿತ್ತು. ಈ ಎರಡೂ ಅಂಶಗಳನ್ನು ರಿಂಕು ದುಗ್ಗಾ ಅವರನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸಲಾಗಿತ್ತು.
ಆದರೆ ಕಡ್ಡಾಯ ನಿವೃತ್ತಿಗೆ ಶಿಫಾರಸು ಮಾಡಿದ್ದ ಪರಿಶೀಲನಾ ಸಮಿತಿಯ ನಿರ್ಧಾರವನ್ನು ಎತ್ತಿಹಿಡಿಯಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಏಕೆಂದರೆ, ಅವರ ಸೇವಾ ದಾಖಲೆಯಲ್ಲಿದ್ದ ಹಲವು ಪ್ರಮುಖ ಅಂಶಗಳನ್ನು ಸಮಿತಿ ಪರಿಗಣಿಸಿರಲಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
ಸೇವೆಯಲ್ಲಿ ಕಾರ್ಯಕ್ಷಮತೆ ಇಲ್ಲದ ಅಥವಾ ‘ಡೆಡ್‌ವುಡ್’ ಎಂದು ಪರಿಗಣಿಸಲ್ಪಡುವ ಅಧಿಕಾರಿಗಳನ್ನು ಹೊರಗಿಡಲು ಕಡ್ಡಾಯ ನಿವೃತ್ತಿ ಎಂಬ ನಿಯಮವನ್ನು ಬಳಸಲಾಗುತ್ತದೆ. ಆದರೆ ರಿಂಕು ದುಗ್ಗಾ ಅವರ ಪ್ರಕರಣಕ್ಕೆ ಈ ತತ್ವ ಅನ್ವಯಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿತ್ತು. ಇದೀಗ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ರಿಂಕು ದುಗ್ಗಾ ಅವರ ಮರುನೇಮಕಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

