ನಾಗ್ಪುರ: ಐಎಎಫ್ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ, ಮತಾಂತರ ಯತ್ನ: ಇಬ್ಬರ ಬಂಧನ
x

ನಾಗ್ಪುರದಲ್ಲಿ ಐಎಎಫ್ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ ಹಾಗೂ ಬಲವಂತದ ಮತಾಂತರ ಯತ್ನ

ನಾಗ್ಪುರ: ಐಎಎಫ್ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ, ಮತಾಂತರ ಯತ್ನ: ಇಬ್ಬರ ಬಂಧನ

ನಾಗ್ಪುರದಲ್ಲಿ ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿ, ಬ್ಲ್ಯಾಕ್‌ಮೇಲ್ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Click the Play button to hear this message in audio format

ಭಾರತೀಯ ವಾಯುಪಡೆ (IAF) ಅಧಿಕಾರಿಯೊಬ್ಬರ ಪತ್ನಿಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಿ, ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಲಕ್ಷಾಂತರ ರೂಪಾಯಿ ಹಣ ವಸೂಲಿ ಹಾಗೂ ಬಲವಂತದ ಮತಾಂತರಕ್ಕೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.

ಈ ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯು ತನಗಾಗುತ್ತಿದ್ದ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ "ನನ್ನನ್ನು ಬಿಟ್ಟುಬಿಡಿ" ಎಂದು ಗೋಳಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ಪ್ರಮುಖ ಸಾಕ್ಷಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿರುವ ಧಾರ್ಮಿಕ ಮುಖಂಡನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ 24 ವರ್ಷದ ಮಹಿಳೆಯ ಪತಿ ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿದ್ದು, ಸದ್ಯ ಬೇರೆ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯು ನಾಗ್ಪುರದಲ್ಲಿ ಪ್ರಾಪರ್ಟಿ ಡೀಲಿಂಗ್ ವ್ಯವಹಾರ ನಡೆಸುತ್ತಿದ್ದರು. ಕಳೆದ ವರ್ಷದ ಫೆಬ್ರವರಿಯಲ್ಲಿ ಆಕೆಯ ಹಳೆಯ ಸಹಪಾಠಿಯಾಗಿದ್ದ ಅಯ್ಯಾಜ್ ತಾಜ್ ಮದಾರೆ ಎಂಬಾತ ಸೈಟ್ ಖರೀದಿಸುವ ನೆಪದಲ್ಲಿ ಮಹಿಳೆಯನ್ನು ವರ್ಧಾ ರಸ್ತೆಯ ಹೋಟೆಲ್‌ಗೆ ಕರೆಸಿಕೊಂಡಿದ್ದನು. ಅಲ್ಲಿ ಆಕೆಗೆ ನೀಡಿದ ಜ್ಯೂಸ್‌ನಲ್ಲಿ ಮಾದಕ ದ್ರವ್ಯ ಬೆರೆಸಿ, ಆಕೆ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ಎಸಗಿದ್ದಲ್ಲದೆ, ಆ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ. ಆ ಬಳಿಕ ಆ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಾ ನಿರಂತರವಾಗಿ ಲೈಂಗಿಕ ಶೋಷಣೆ ನಡೆಸಿದ್ದಲ್ಲದೆ, ಸುಮಾರು 3.09 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡಿದ್ದಾಗಿ ಸಂತ್ರಸ್ತೆ ಆರೋಪಿಸಿದ್ದಾರೆ.

ಅಷ್ಟಕ್ಕೇ ನಿಲ್ಲದ ಆರೋಪಿಗಳು, ಮಹಿಳೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ತೀವ್ರ ಒತ್ತಡ ಹೇರಿದ್ದಾರೆ. ಕಳೆದ ಮೇ ತಿಂಗಳಲ್ಲಿ ಆರೋಪಿ ಅಯ್ಯಾಜ್, ಮಹಿಳೆಯನ್ನು ಕಲ್ಮೇಶ್ವರ್ ಎಂಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಅಮೀನ್ ಶೇಖ್ ಮತ್ತು ಮಧ್ಯಪ್ರದೇಶದ ತಾಮಿಯಾ ನಿವಾಸಿ ಹಜರತ್ ಮೌಲಾನಾ ಎಂಬುವವರಿಗೆ ಪರಿಚಯಿಸಿದ್ದನು. ಅಲ್ಲಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ, ಆಕೆ ಮತಾಂತರಗೊಂಡಿದ್ದಾಳೆ ಎಂದು ಘೋಷಿಸಲಾಗಿತ್ತು. ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿ ಅಯ್ಯಾಜ್ ಮಹಿಳೆಯ ಕೈಗಳನ್ನು ಬಲವಂತವಾಗಿ ಹಿಡಿದುಕೊಂಡು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ ಆಕೆಯ ಮುಖಕ್ಕೆ ಊದುತ್ತಿರುವುದು ಮತ್ತು ಮಹಿಳೆಯು ತಡೆಯಲಾರದೆ "ನನ್ನನ್ನು ಬಿಟ್ಟುಬಿಡಿ" ಎಂದು ಜೋರಾಗಿ ಅಳುತ್ತಿರುವುದು ಕಂಡುಬಂದಿದೆ. ಮತಾಂತರ ಪ್ರಕ್ರಿಯೆ ಮುಗಿದ ನಂತರ ಅಲ್ಲಿ ಆಕೆಯ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಲು ಯತ್ನಿಸಲಾಗಿತ್ತು ಎಂದು ಮಹಿಳೆ ದೂರಿದ್ದಾರೆ.

ಕೆಲ ದಿನಗಳ ಹಿಂದೆ ಕರ್ತವ್ಯ ಮುಗಿಸಿ ಮನೆಗೆ ಮರಳಿದ ಪತಿಗೆ ಮಹಿಳೆಯು ತನಗಾದ ಸಂಪೂರ್ಣ ಅನ್ಯಾಯ ಮತ್ತು ದೌರ್ಜನ್ಯವನ್ನು ವಿವರಿಸಿದ್ದಾರೆ. ತಕ್ಷಣವೇ ದಂಪತಿ ಸೋನೇಗಾಂವ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಪೊಲೀಸರು ಅತ್ಯಾಚಾರ, ಸುಲಿಗೆ, ಬಲವಂತದ ಮತಾಂತರ ಯತ್ನ ಹಾಗೂ ಮಹಾರಾಷ್ಟ್ರದ ಮಾಟಮಂತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಅಯ್ಯಾಜ್ ಮದಾರೆ ಮತ್ತು ಅಮೀನ್ ಶೇಖ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯವು ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ತಲೆಮರೆಸಿಕೊಂಡಿರುವ ಹಜರತ್ ಮೌಲಾನಾ ಪತ್ತೆಗಾಗಿ ಪೊಲೀಸರು ವಿಶೇಷ ತಂಡವನ್ನು ರಚಿಸಿ ತನಿಖೆ ಮುಂದುವರಿಸಿದ್ದಾರೆ.


Read More
Next Story