
ಸಿನಿಮಾ ಆರಂಭಕ್ಕೂ ಮುನ್ನ 22 ನಿಮಿಷ ಜಾಹೀರಾತು ಪ್ರಸಾರ ಮಾಡಿದ್ದಕ್ಕೆ ಗ್ರಾಹಕ ನ್ಯಾಯಾಲಯ 75 ಸಾವಿರ ರೂ. ದಂಡ ವಿಧಿಸಿದೆ.
ಚಿತ್ರಕ್ಕೂ ಮುನ್ನ 22 ನಿಮಿಷ ಜಾಹೀರಾತು; ಥಿಯೇಟರ್ಗೆ 75 ಸಾವಿರ ರೂ. ದಂಡ
ಜಾಹೀರಾತುಗಳಿಗಾಗಿ ಇಷ್ಟು ಸಮಯ ವ್ಯರ್ಥ ಮಾಡಲಾಗಿದೆ ಎಂದು ಆರೋಪಿಸಿದ ಸಿನಿಮಾ ವೀಕ್ಷಕರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಜಾಹೀರಾತುಗಳು ಪ್ರಸಾರವಾಗುವುದು ಸಾಮಾನ್ಯ. ಆದರೆ ಹೈದರಾಬಾದ್ನ ಚಿತ್ರಮಂದಿರವೊಂದರಲ್ಲಿ 22 ನಿಮಿಷಕ್ಕೂ ಹೆಚ್ಚು ಕಾಲ ಜಾಹೀರಾತು ಹಾಗೂ ಬ್ರ್ಯಾಂಡ್ ಪ್ರಚಾರಗಳನ್ನು ಪ್ರಸಾರ ಮಾಡಿದ್ದಕ್ಕೆ ಗ್ರಾಹಕ ನ್ಯಾಯಾಲಯ 75 ಸಾವಿರ ರೂ. ದಂಡ ವಿಧಿಸಿದೆ.
ಘಟನೆ 2025ರ ಸೆಪ್ಟೆಂಬರ್ನಲ್ಲಿ ನಡೆದಿದ್ದು, ವ್ಯಕ್ತಿಯೊಬ್ಬರು ಹೈದರಾಬಾದ್ನ ಚಿತ್ರಮಂದಿರದಲ್ಲಿ ಧನುಷ್ ಮತ್ತು ನಾಗಾರ್ಜುನ ಅಭಿನಯದ ಕುಬೇರ ಸಿನಿಮಾ ವೀಕ್ಷಿಸಲು ತೆರಳಿದ್ದರು. ರಾತ್ರಿ 10.35ಕ್ಕೆ ಸಿನಿಮಾ ಆರಂಭವಾಗಬೇಕಿತ್ತು. ಆದರೆ ಚಿತ್ರಮಂದಿರದಲ್ಲಿ ಸುದೀರ್ಘವಾಗಿ ಜಾಹೀರಾತು ಮತ್ತು ಬ್ರ್ಯಾಂಡ್ ಪ್ರಚಾರಗಳನ್ನು ಪ್ರಸಾರ ಮಾಡಿದ್ದರಿಂದ ಸಿನಿಮಾ ಸುಮಾರು 20 ನಿಮಿಷ ತಡವಾಗಿ ಆರಂಭವಾಗಿತ್ತು.
ಗ್ರಾಹಕ ನ್ಯಾಯಾಲಯದ ಮೊರೆ
ಜಾಹೀರಾತುಗಳಿಗಾಗಿ ಇಷ್ಟು ಸಮಯ ವ್ಯರ್ಥ ಮಾಡಲಾಗಿದೆ ಎಂದು ಆರೋಪಿಸಿದ ಚಿತ್ರಪ್ರೇಮಿ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ನಿಗದಿತ ಸಮಯಕ್ಕೆ ಟಿಕೆಟ್ ಖರೀದಿಸಿ ಬಂದಿದ್ದರೂ ದೀರ್ಘಕಾಲ ಜಾಹೀರಾತುಗಳನ್ನು ವೀಕ್ಷಿಸುವಂತೆ ಮಾಡಲಾಗಿದೆ ಎಂದು ಅವರು ದೂರಿದ್ದರು.
25 ಸಾವಿರ ರೂ. ಪರಿಹಾರ, 50 ಸಾವಿರ ರೂ. ದಂಡ
ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯವು ಚಿತ್ರಮಂದಿರಕ್ಕೆ ಒಟ್ಟು 75 ಸಾವಿರ ರೂ. ಪಾವತಿಸುವಂತೆ ಆದೇಶಿಸಿದೆ. ಇದರಲ್ಲಿ ಚಿತ್ರ ವೀಕ್ಷಕರಿಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಮತ್ತೊಂದು 50 ಸಾವಿರ ರೂ.ಗಳನ್ನು ಜಿಲ್ಲಾ ಗ್ರಾಹಕ ಪೀಠಕ್ಕೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.
ಈ ಪ್ರಕರಣದ ಬಳಿಕ ಸಿನಿಮಾ ಪ್ರದರ್ಶನಕ್ಕೂ ಮುನ್ನ ದೀರ್ಘಕಾಲ ಜಾಹೀರಾತು ಪ್ರಸಾರ ಮಾಡುವ ಪದ್ಧತಿ ಮತ್ತೊಮ್ಮೆ ಚರ್ಚೆಗೆ ಬಂದಿದೆ. ನಿಗದಿತ ಸಮಯಕ್ಕೆ ಸಿನಿಮಾ ವೀಕ್ಷಿಸಲು ಬರುವ ಪ್ರೇಕ್ಷಕರಿಗೆ ಇಂತಹ ವಿಳಂಬ ತೊಂದರೆ ಉಂಟುಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

