Census 2027: ಕರ್ನಾಟಕದಲ್ಲಿ ನಾಳೆಯಿಂದ ಮನೆ ಗಣತಿ ಆರಂಭ: 33 ಪ್ರಶ್ನೆಗಳಿಗೆ ಮಾಹಿತಿ ನೀಡಲು ಸಿದ್ಧರಾಗಿ!
x
ಜನಗಣತಿ(2026)

Census 2027: ಕರ್ನಾಟಕದಲ್ಲಿ ನಾಳೆಯಿಂದ ಮನೆ ಗಣತಿ ಆರಂಭ: 33 ಪ್ರಶ್ನೆಗಳಿಗೆ ಮಾಹಿತಿ ನೀಡಲು ಸಿದ್ಧರಾಗಿ!

ಕರ್ನಾಟಕದಲ್ಲಿ ನಾಳೆಯಿಂದ ಜನಗಣತಿಯ ಮೊದಲ ಹಂತವಾದ 'ಮನೆ ಗಣತಿ' ಆರಂಭವಾಗಲಿದೆ. 2 ಲಕ್ಷ ಗಣತಿದಾರರು ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.


ದೇಶಾದ್ಯಂತ ಬಹುನಿರೀಕ್ಷಿತ 'ಜನಗಣತಿ-2027' ಪ್ರಕ್ರಿಯೆ ಚುರುಕುಗೊಂಡಿದೆ. ಕರ್ನಾಟಕದಲ್ಲಿ ನಾಳೆಯಿಂದ (ಏಪ್ರಿಲ್ 16) ಮೊದಲ ಹಂತದ 'ಮನೆ ಗಣತಿ ಮತ್ತು ಮನೆಗಳ ಪಟ್ಟಿ ತಯಾರಿಕೆ' ಕಾರ್ಯ ಅಧಿಕೃತವಾಗಿ ಆರಂಭವಾಗಲಿದೆ. ಏಪ್ರಿಲ್ 1 ರಿಂದ ನಡೆದಿದ್ದ 'ಸ್ವಯಂ ಗಣತಿ' ಬುಧವಾರಕ್ಕೆ (ಏ.15) ಮುಕ್ತಾಯವಾಗಿದ್ದು, ನಾಳೆಯಿಂದ ಗಣತಿದಾರರು ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಬರಲಿದ್ದಾರೆ.

ಗಣತಿಯ ಮೊದಲ ಹಂತದಲ್ಲಿ ಏನಿರಲಿದೆ?

ಸುಮಾರು 16 ವರ್ಷಗಳ ಸುದೀರ್ಘ ವಿರಾಮದ ಬಳಿಕ ನಡೆಯುತ್ತಿರುವ ಈ ಜನಗಣತಿಯು ಎರಡು ಹಂತಗಳಲ್ಲಿ ನಡೆಯಲಿದೆ. ಈಗ ನಡೆಯುತ್ತಿರುವುದು ಮೊದಲ ಹಂತದ ಪ್ರಕ್ರಿಯೆ. ಗಣತಿದಾರರು ಮನೆಯ ಸ್ಥಿತಿಗತಿ, ಲಭ್ಯವಿರುವ ಮೂಲಸೌಕರ್ಯಗಳು (ಕುಡಿಯುವ ನೀರು, ಶೌಚಾಲಯ ಇತ್ಯಾದಿ), ಆಸ್ತಿಪಾಸ್ತಿ ಮತ್ತು ಇತರ ವಸತಿ ವಿವರಗಳನ್ನು ಕಲೆಹಾಕಲಿದ್ದಾರೆ. ಈ ಹಂತದಲ್ಲಿ ಪ್ರತಿಯೊಂದು ಕುಟುಂಬಕ್ಕೆ ಒಟ್ಟು 33 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕರ್ನಾಟಕದ 31 ಜಿಲ್ಲೆಗಳಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಗಣತಿದಾರರನ್ನು ಈ ಕಾರ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ನಿಮ್ಮ ದತ್ತಾಂಶ ಸುರಕ್ಷಿತವೇ?

ಜನಗಣತಿ ಸಂದರ್ಭದಲ್ಲಿ ಸಾರ್ವಜನಿಕರು ನೀಡುವ ವೈಯಕ್ತಿಕ ಮಾಹಿತಿ ಸಂಪೂರ್ಣ ಗೌಪ್ಯವಾಗಿರುತ್ತದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಮಾಹಿತಿಯನ್ನು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಪಡೆಯಲು ಅವಕಾಶವಿಲ್ಲ. ನ್ಯಾಯಾಲಯಗಳಲ್ಲಿ ಸಾಕ್ಷ್ಯವಾಗಿ ಬಳಸಲಾಗುವುದಿಲ್ಲ ಅಥವಾ ಬೇರೆ ಯಾವುದೇ ಖಾಸಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಿಲ್ಲ. ಜನರು ಯಾವುದೇ ಭಯವಿಲ್ಲದೆ ನಿಖರ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಮುಂದಿನ ಹಂತ ಯಾವಾಗ?

ಜನಸಂಖ್ಯೆಯ ನಿಜವಾದ ಎಣಿಕೆ ಮುಂದಿನ ವರ್ಷ ಅಂದರೆ 2027ರ ಫೆಬ್ರವರಿಯಲ್ಲಿ ನಡೆಯಲಿದೆ. ಆ ಸಮಯದಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜಾತಿ, ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಮತ್ತು ಶಿಕ್ಷಣದ ವಿವರಗಳನ್ನು ಪಡೆಯಲಾಗುತ್ತದೆ.

ಗಣತಿ ಕಾರ್ಯದ ನಡುವೆ ಕೇಳಿಬರುತ್ತಿರುವ ಅಸಮಾಧಾನಗಳು

ಜನಗಣತಿ ಪ್ರಕ್ರಿಯೆ ಆರಂಭವಾಗಿದ್ದರೂ, ಇದನ್ನು ನಿರ್ವಹಿಸುತ್ತಿರುವ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ ಈ ಕೆಳಗಿನ ಸಮಸ್ಯೆಗಳನ್ನು ಸಿಬ್ಬಂದಿ ಮುಂದಿಟ್ಟಿದ್ದಾರೆ:

1. ಅವೈಜ್ಞಾನಿಕ ಸ್ಥಳ ನಿಯೋಜನೆ: ಗಣತಿದಾರರು ವಾಸಿಸುವ ಅಥವಾ ಕೆಲಸ ಮಾಡುವ ಸ್ಥಳದಿಂದ 25 ರಿಂದ 50 ಕಿ.ಮೀ ದೂರದ ವಾರ್ಡ್‌ಗಳಿಗೆ ಗಣತಿ ಕಾರ್ಯಕ್ಕೆ ನಿಯೋಜಿಸಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.

2. ನೋಟಿಸ್ ಭೀತಿ: ತರಬೇತಿಗೆ ಹಾಜರಾಗಿದ್ದರೂ ಸಹ 'ಗೈರು ಹಾಜರಿ' ಎಂದು ದಾಖಲಿಸಿ ಅಮಾನತು ಮಾಡುವುದಾಗಿ ಜಿಬಿಎ (GBA) ಅಧಿಕಾರಿಗಳು ನೋಟಿಸ್ ನೀಡುತ್ತಿದ್ದಾರೆ ಎಂದು ಶಿಕ್ಷಕರು ಆರೋಪಿಸಿದ್ದಾರೆ.

3. ವಯೋಮಿತಿ ಕಡೆಗಣನೆ: ಅನಾರೋಗ್ಯ ಪೀಡಿತರು ಹಾಗೂ 58 ವರ್ಷ ಮೀರಿದವರನ್ನೂ ಗಣತಿ ಕಾರ್ಯಕ್ಕೆ ಹಚ್ಚಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

4. ವೇತನ ವಿಳಂಬ: ಗಣತಿ ಕೆಲಸಕ್ಕೆ ಟ್ರಜರಿ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿರುವುದರಿಂದ, ಸಂಬಳದ ಬಿಲ್‌ಗಳು ವಿಲೇವಾರಿಯಾಗದೆ ಅನೇಕ ಶಿಕ್ಷಕರಿಗೆ ಇನ್ನೂ ವೇತನ ತಲುಪಿಲ್ಲ.

5. ಹೆಚ್ಚುವರಿ ಕೆಲಸದ ಹೊರೆ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಮೌಲ್ಯಮಾಪನ ಕೆಲಸಗಳ ನಡುವೆಯೇ ಈ ಗಣತಿ ಕಾರ್ಯವನ್ನು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂಬುದು ಉಪನ್ಯಾಸಕರ ದೂರು.

Read More
Next Story