
11 ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಗೆ 325 ರೂ. ದರ- ಆಸ್ಪತ್ರೆ ಬಿಲ್ ಬಗ್ಗೆ ಆಘಾತಕಾರಿ ಸಂಗತಿ ಬಯಲು
ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿ ಬೆಲೆ ಮತ್ತು ಗರಿಷ್ಠ ಮಾರಾಟದ ಬೆಲೆಯ ನಡುವಿನ ಭಾರಿ ವ್ಯತ್ಯಾಸವನ್ನು ಮಹಾರಾಷ್ಟ್ರ ಎಫ್‌ಡಿಎ ಮುಖ್ಯಸ್ಥ ತುಕಾರಾಂ ಮುಂಡೆ ಬಹಿರಂಗಪಡಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಂದ ವೈದ್ಯಕೀಯ ಸಾಮಗ್ರಿಗಳ ಹೆಸರಿನಲ್ಲಿ ಭಾರಿ ಮೊತ್ತದ ಹಣ ವಸೂಲಿ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ. ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತದ ಮುಖ್ಯಸ್ಥ ತುಕಾರಾಂ ಮುಂಡೆ ಅವರು ಆಸ್ಪತ್ರೆಗಳಲ್ಲಿ ಬಳಸುವ ಕೆಲವು ವೈದ್ಯಕೀಯ ಸಾಮಗ್ರಿಗಳ ಖರೀದಿ ಬೆಲೆ ಮತ್ತು ಗರಿಷ್ಠ ಚಿಲ್ಲರೆ ಬೆಲೆಯ ನಡುವೆ ಭಾರಿ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಆಸ್ಪತ್ರೆಗಳಲ್ಲಿ ಬಳಸುವ ವೈದ್ಯಕೀಯ ಸಾಮಗ್ರಿಗಳ ಕುರಿತು ನಡೆಸಿದ ಸಮೀಕ್ಷೆಯ ಅಂಕಿಅಂಶಗಳನ್ನು ಮುಂಧೆ ಹಂಚಿಕೊಂಡಿದ್ದಾರೆ. ಇದರ ಪ್ರಕಾರ, 11.05 ರೂ.ಕ್ಕೆ ಖರೀದಿಸಿದ ಐವಿ ದ್ರಾವಣ ನೀಡುವ ಸೆಟ್‌ಗೆ 325 ರೂ. ದರ ನಿಗದಿಪಡಿಸಲಾಗಿದೆ. ಅಂದರೆ ಖರೀದಿ ಬೆಲೆಗೆ ಹೋಲಿಸಿದರೆ ಶೇಕಡಾ 2,841ರಷ್ಟು ಹೆಚ್ಚಳವಾಗಿದೆ.
ಅದೇ ರೀತಿ 6.75 ರೂ.ಗಳಿಗೆ ಖರೀದಿಸಿದ ಸಿರಿಂಜ್‌ಗೆ 57.20 ರೂ.ಗರಿಷ್ಠ ದರ ನಿಗದಿಯಾಗಿದ್ದರೆ, 29.41 ರೂ.ಗಳಿಗೆ ಖರೀದಿಸಿದ ಕ್ಯಾಥೆಟರ್‌ಗೆ 310 ರೂ. ಬೆಲೆ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳಿಗೆ ಇಂತಹ ಸಾಮಗ್ರಿಗಳ ಬೆಲೆಯನ್ನು ಹೋಲಿಕೆ ಮಾಡಲು ಅಥವಾ ಪರ್ಯಾಯ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಮಾನ್ಯವಾಗಿ ಅವಕಾಶ ಇರುವುದಿಲ್ಲ. ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಅನಿವಾರ್ಯವಾಗಿ ಬಳಸಬೇಕಾದ ವೈದ್ಯಕೀಯ ಸಾಮಗ್ರಿಗಳ ಬೆಲೆ ನಿಜವಾದ ಖರೀದಿ ಬೆಲೆಯೇ ಅಥವಾ ಅದಕ್ಕೆ ಭಾರಿ ಲಾಭಾಂಶ ಸೇರಿಸಲಾಗಿದೆಯೇ ಎಂಬುದನ್ನು ರೋಗಿಗಳಿಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮುಂಡೆ ಹೇಳಿದ್ದಾರೆ.
ವೈದ್ಯಕೀಯ ಸಾಮಗ್ರಿಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು ತಯಾರಕರು ಮತ್ತು ವಿತರಕರು ಪೂರೈಕೆ ಸರಪಳಿಯ ಆರಂಭಿಕ ಹಂತದಲ್ಲೇ ನಿಗದಿಪಡಿಸುತ್ತಾರೆ. ಆದರೆ ಈ ಬೆಲೆ ಮತ್ತು ವ್ಯಾಪಾರ ಖರೀದಿ ಬೆಲೆಯ ನಡುವೆ ದೊಡ್ಡ ಅಂತರವಿರಬಹುದು. ಇದರಿಂದ ರೋಗಿಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುತ್ತಿದೆ ಎಂದು ಅವರು ಹೇಳಿದ್ದಾರೆ.
ಇನ್ನು ಔಷಧಗಳ ಬೆಲೆ ನಿಯಂತ್ರಣಕ್ಕೂ ವೈದ್ಯಕೀಯ ಸಾಮಗ್ರಿಗಳ ಬೆಲೆ ನಿಯಂತ್ರಣಕ್ಕೂ ವ್ಯತ್ಯಾಸವಿದೆ. ಔಷಧ ಬೆಲೆ ನಿಯಂತ್ರಣ ಆದೇಶ, 2013ರ ಅಡಿಯಲ್ಲಿ ನಿಗದಿತ ಔಷಧಗಳಿಗೆ ಗರಿಷ್ಠ ಬೆಲೆ ಮಿತಿ ಇದೆ. ಆದರೆ ಬಹುತೇಕ ವೈದ್ಯಕೀಯ ಉಪಕರಣಗಳು ಮತ್ತು ಚಿಕಿತ್ಸೆಯಲ್ಲಿ ಬಳಸುವ ಸಾಮಗ್ರಿಗಳಿಗೆ ಇದೇ ರೀತಿಯ ಬೆಲೆ ನಿಯಂತ್ರಣ ಇಲ್ಲ ಎಂದು ಮುಂಡೆ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಾಮಗ್ರಿಗಳ ವ್ಯಾಪಾರ ಖರೀದಿ ಬೆಲೆ ಮತ್ತು ಘೋಷಿತ ಗರಿಷ್ಠ ಚಿಲ್ಲರೆ ಬೆಲೆಯ ನಡುವಿನ ಅನುಮತಿಸಬಹುದಾದ ಅಂತರಕ್ಕೆ ಸ್ಪಷ್ಟ ಮಾರ್ಗಸೂಚಿ ರೂಪಿಸುವಂತೆ ಔಷಧೀಯ ಇಲಾಖೆ ಹಾಗೂ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇಂತಹ ಕ್ರಮಗಳಿಂದ ವೈದ್ಯಕೀಯ ಸಾಮಗ್ರಿಗಳ ಬೆಲೆಯಲ್ಲಿ ಇರುವ ಅಂತರವನ್ನು ನಿಯಂತ್ರಿಸುವುದರ ಜೊತೆಗೆ, ರೋಗಿಗಳಿಗೆ ಬೆಲೆಗಳ ಕುರಿತು ಅಗತ್ಯ ಮಾಹಿತಿ ಲಭ್ಯವಾಗುವಂತೆ ಮಾಡಬಹುದು ಎಂದು ತುಕಾರಾಂ ಮುಂಡೆ ಹೇಳಿದ್ದಾರೆ.

