
ಬಾರ್ಬಿಕ್ಯೂ ವೇಳೆ ನಡೆದ ಘಟನೆಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯವಿದೆಯೇ ಹಾಗೂ ಹೋಮ್‌ಸ್ಟೇಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಹನಿಮೂನ್ ವೇಳೆ ಬಾರ್ಬೆಕ್ಯೂ ಬೆಂಕಿ ತಾಗಿ ನವವಿವಾಹಿತೆಗೆ ಗಂಭೀರ ಗಾಯ
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಿಬ್ಬಂದಿಯೊಬ್ಬರು ಹೊತ್ತಿ ಉರಿಯುತ್ತಿದ್ದ ಬೆಂಕಿಗೆ ದಹನಕಾರಿ ದ್ರವದಂತೆ ಕಾಣುವ ವಸ್ತುವನ್ನು ಸುರಿಯುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ.
ಮದುವೆಯಾಗಿ ಕೇವಲ ಎರಡು ತಿಂಗಳಾಗಿದ್ದ ನವವಿವಾಹಿತ ದಂಪತಿಯ ಹನಿಮೂನ್ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ. ಪಶ್ಚಿಮ ಬಂಗಾಳದ ಸಿಟ್ಟಾಂಗ್‌ನ ಹೋಮ್‌ಸ್ಟೇಯೊಂದರಲ್ಲಿ ಬಾರ್ಬೆಕ್ಯೂ ವೇಳೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಯುವತಿ ನಿಖಿತಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರ ದೇಹದ ಸುಮಾರು ಶೇ.60ರಷ್ಟು ಭಾಗ ಸುಟ್ಟಿದ್ದು, ಸದ್ಯ ಸಿಲಿಗುರಿಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉತ್ತರ ದಿನಾಜ್‌ಪುರ ಮೂಲದ ನಿಖಿತಾ ಮತ್ತು ಅವರ ಪತಿ ಸೌವಿಕ್ ಸೆಪ್ಟೆಂಬರ್ 13ರಂದು ಸಿಟ್ಟಾಂಗ್ ಔರಾ ಹೋಮ್‌ಸ್ಟೇಗೆ ತೆರಳಿದ್ದರು. ರಾತ್ರಿ ಸುಮಾರು 8.22ಕ್ಕೆ ಹೋಮ್‌ಸ್ಟೇ ಸಿಬ್ಬಂದಿ ವ್ಯವಸ್ಥೆ ಮಾಡಿದ್ದ ಬಾರ್ಬೆಕ್ಯೂ ಕಾರ್ಯಕ್ರಮದಲ್ಲಿ ದಂಪತಿ ಭಾಗವಹಿಸಿದ್ದರು.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸಿಬ್ಬಂದಿಯೊಬ್ಬರು ಹೊತ್ತಿ ಉರಿಯುತ್ತಿದ್ದ ಬೆಂಕಿಗೆ ದಹನಕಾರಿ ದ್ರವದಂತೆ ಕಾಣುವ ವಸ್ತುವನ್ನು ಸುರಿಯುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಇದಾದ ತಕ್ಷಣ ಬೆಂಕಿ ಏಕಾಏಕಿ ಭಾರಿ ಪ್ರಮಾಣದಲ್ಲಿ ಹೊತ್ತಿಕೊಂಡಿದ್ದು, ನಿಖಿತಾ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಪತ್ನಿಯನ್ನು ರಕ್ಷಿಸಲು ಧಾವಿಸಿದ ಪತಿಗೂ ಗಾಯ
ಬೆಂಕಿ ಕಾಣಿಸಿಕೊಂಡ ಕೂಡಲೇ ಸೌವಿಕ್ ಪತ್ನಿಯನ್ನು ರಕ್ಷಿಸಲು ಧಾವಿಸಿದ್ದಾರೆ. ಈ ವೇಳೆ ಅವರ ಕೈಗಳಿಗೂ ಸಣ್ಣ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಆದರೆ ನಿಖಿತಾ ಅವರಿಗೆ ಗಂಭೀರ ಪ್ರಮಾಣದ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ಘಟನೆಯ ಬಳಿಕ ನಿಖಿತಾ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಲಾಗಿತ್ತೇ ಎಂಬ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಅವಘಡದ ಸಂದರ್ಭದಲ್ಲಿ ಹೋಮ್‌ಸ್ಟೇಯಲ್ಲಿ ತುರ್ತು ಪರಿಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಇರಲಿಲ್ಲ ಎಂದು ಸೌವಿಕ್ ಆರೋಪಿಸಿದ್ದಾರೆ.
ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆ ಇರಲಿಲ್ಲವೇ?
ಅವಘಡದ ಬಳಿಕ ತಕ್ಷಣದ ತುರ್ತು ನೆರವು ದೊರೆಯಲಿಲ್ಲ ಎಂದು ಸೌವಿಕ್ ದೂರಿದ್ದಾರೆ. ಹೋಮ್‌ಸ್ಟೇಯಲ್ಲಿ ಅಗ್ನಿಶಾಮಕ ಉಪಕರಣಗಳು, ಅಗ್ನಿಶಾಮಕ ಯಂತ್ರ ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಇರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನಿಖಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಒಂದು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು ಎನ್ನಲಾಗಿದೆ. ಬಳಿಕ ಸಿಲಿಗುರಿಯ ಆಸ್ಪತ್ರೆಗೆ ತಲುಪಲು ಸುಮಾರು ಮೂರು ಗಂಟೆಗಳ ಪ್ರಯಾಣ ಮಾಡಬೇಕಾಯಿತು. ಗಂಭೀರ ಸುಟ್ಟ ಗಾಯಗಳೊಂದಿಗೆ ನಿಖಿತಾ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿರುವ ಪೊಲೀಸರು
ಘಟನೆಗೆ ಸಂಬಂಧಿಸಿ ಸೌವಿಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಬಾರ್ಬೆಕ್ಯೂ ವೇಳೆ ಸಂಭವಿಸಿದ ಬೆಂಕಿ ಅವಘಡಕ್ಕೆ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣವಾಗಿದೆಯೇ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಅದೇ ರೀತಿ, ಹೋಮ್‌ಸ್ಟೇಯಲ್ಲಿ ಅಗತ್ಯ ಅಗ್ನಿಶಾಮಕ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ, ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅಗತ್ಯ ಉಪಕರಣಗಳು ಲಭ್ಯವಿದ್ದವೇ ಹಾಗೂ ಘಟನೆಗೆ ನಿಖರ ಕಾರಣವೇನು ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಯ ಬಳಿಕ ಘಟನೆಯ ಸಂಪೂರ್ಣ ಚಿತ್ರಣ ಸ್ಪಷ್ಟವಾಗುವ ನಿರೀಕ್ಷೆಯಿದೆ.

