Target of 500 million tonnes of steel production per year by 2047: Minister HDK
x
ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ

ಡಿಎಂಕೆ ಸ್ವಾರ್ಥಕ್ಕೆ ದಕ್ಷಿಣ ರಾಜ್ಯಗಳ ಹಿತ ಬಲಿ; ಕೇಂದ್ರ ಸಚಿವ ಎಚ್‌ಡಿಕೆ ಕಿಡಿ

ದಕ್ಷಿಣದ ರಾಜ್ಯಗಳಿಗೆ ತಿದ್ದುಪಡಿ ಮಸೂದೆಗಳಿಂದ ಅನ್ಯಾಯವಾಗುತ್ತಿದೆ ಎಂದು ಡಿಎಂಕೆ ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಹಾಗೆ ನೋಡಿದರೆ ಡಿಎಂಕೆಯಿಂದಲೇ ದಕ್ಷಿಣಕ್ಕೆ ಅನ್ಯಾಯವಾಗುತ್ತಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.


ತಮಿಳುನಾಡಿನ ಡಿಎಂಕೆ ಪಕ್ಷದ ರಾಜಕೀಯ ಸ್ವಾರ್ಥಕ್ಕೆ ದಕ್ಷಿಣದ ರಾಜ್ಯಗಳ ಹಿತ ಬಲಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ನವದೆಹಲಿ ಗೃಹ ಕಚೇರಿಯಲ್ಲಿ ಭಾನುವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆ ಮತ್ತು ಕಾಂಗ್ರೆಸ್ ಪಕ್ಷಗಳು ಜನರಲ್ಲಿ ವಿನಾಕಾರಣ ಗೊಂದಲ ಮೂಡಿಸಿ ಭೀತಿ ಸೃಷ್ಟಿಸುತ್ತಿವೆ ಎಂದು ಕಿಡಿಕಾರಿದ್ದಾರೆ.

ಈ ಮೊದಲು ಸಂವಿಧಾನ ತಿದ್ದುಪಡಿ ಮಸೂದೆಗಳಿಗೆ ಒಪ್ಪಿಗೆ ನೀಡಿದ್ದ ಡಿಎಂಕೆ, ನಂತರ ಯುಟರ್ನ್ ಹೊಡೆದಿದೆ. ಇದರಿಂದ ದಕ್ಷಿಣ ರಾಜ್ಯಗಳಿಗೆ ಪಾಲಿಗೆ ಬಂದಿದ್ದ ಬಂಗಾರದಂತಹ ಅವಕಾಶ ತಪ್ಪಿದೆ. ಕೆಲ ದಿನಗಳ ಹಿಂದೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಕರೆದಿದ್ದ ಸಭೆಯಲ್ಲಿ ಭಾಗಿಯಾಗಿದ್ದ ಡಿಎಂಕೆ ನಾಯಕರಿಗೆ ಮಹಿಳಾ ಮೀಸಲು ಹಾಗೂ ಕ್ಷೇತ್ರ ಮರು ವಿಂಗಡಣೆ ಮಸೂದೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಆ ಸಭೆಯಲ್ಲಿ ಭಾಗವಹಿಸಿದ್ದ ಸಮಾಜವಾದಿ ಪಕ್ಷವೂ ವಿರೋಧ ಮಾಡಿರಲಿಲ್ಲ. ಅದಾದ ಮೇಲೆ ಎರಡು-ಮೂರು ದಿನಗಳಲ್ಲಿ ಮಾಧ್ಯಮ ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರು, "ಈ ಮಸೂದೆಗಳನ್ನು ಪಾಸ್ ಮಾಡಲು ಜೂನ್ ತಿಂಗಳಲ್ಲಿ ಸಂಸತ್ ಅಧಿವೇಶನ ಕರೆಯಿರಿ" ಎಂದು ಕೇಂದ್ರಕ್ಕೆ ಸಲಹೆ ಮಾಡಿದ್ದರು. ಅಂದರೆ, ಅವರಿಗೆ ತಿದ್ದುಪಡಿ ಮಸೂದೆಗಳ ಬಗ್ಗೆ ಒಪ್ಪಿಗೆ ಇತ್ತು ಎಂದಾಯಿತಲ್ಲವೇ?, ಈ ಕೂಡಲೇ ಮಸೂದೆಗಳನ್ನು ಸಂಸತ್ತಿನಲ್ಲಿ ಅಂಗೀಕರಿಸಿದರೆ ಚುನಾವಣೆಯಲ್ಲಿ ತನಗೆ ಧಕ್ಕೆ ಆಗಬಹುದೆಂಬ ಕಾರಣಕ್ಕೆ ಆ ಪಕ್ಷವು ಮಸೂದೆಗಳಿಗೆ ಬೆಂಬಲ ನೀಡಲಿಲ್ಲ ಎಂದು ಕುಮಾರಸ್ವಾಮಿ ದೂರಿದ್ದಾರೆ.

ದಕ್ಷಿಣದ ರಾಜ್ಯಗಳಿಗೆ ತಿದ್ದುಪಡಿ ಮಸೂದೆಗಳಿಂದ ಅನ್ಯಾಯವಾಗುತ್ತಿದೆ ಎಂದು ಡಿಎಂಕೆ ಹೇಳುತ್ತಿರುವುದರಲ್ಲಿ ಸತ್ಯಾಂಶವಿಲ್ಲ. ಹಾಗೆ ನೋಡಿದರೆ ಡಿಎಂಕೆಯಿಂದಲೇ ದಕ್ಷಿಣಕ್ಕೆ ಅನ್ಯಾಯವಾಗುತ್ತಿದೆ. ಒಂದು ವೇಳೆ ಅನ್ಯಾಯ ಆಗುವುದೇ ಆಗಿದ್ದರೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಆಕ್ಷೇಪ ಎತ್ತಲಿಲ್ಲವೇಕೆ?, ನಾಯ್ಡು ಅವರಂತೂ ಮಸೂದೆಗಳಿಗೆ ಮುಕ್ತ ಬೆಂಬಲ ನೀಡಿದರು ಎಂದು ಕುಮಾರಸ್ವಾಮಿ ಮಾಧ್ಯಮಗಳ ಗಮನಕ್ಕೆ ಸೆಳೆದರು.

ಜನಸಂಖ್ಯೆ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿ, ರಾಷ್ಟ್ರೀಯ ನೀತಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತಂದಿರುವ ಐದೂ ರಾಜ್ಯಗಳಿಗೆ ಅನ್ಯಾಯ ಆಗಬಾರದೆಂಬ ಉದ್ದೇಶದಿಂದ ಕೇಂದ್ರವು ಎಲ್ಲರಿಗೂ ಸಮಾನ ನ್ಯಾಯ ನೀಡುವ ಸಲುವಾಗಿ ಪ್ರತೀ ರಾಜ್ಯದ ಲೋಕಸಭೆ ಕ್ಷೇತ್ರಗಳ ಸಂಖ್ಯೆಯನ್ನು ಸರಾಸರಿ ಶೇ 50 ರಷ್ಟು ಹೆಚ್ಚಿಸುವುದಾಗಿ ಹೇಳಿತು.

ಲೋಕಸಭೆಯಲ್ಲಿ ಈ ಬಗ್ಗೆ ಅಮಿತ್ ಶಾ ಅವರು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಅಂಕಿ-ಅಂಶಗಳ ಸಮೇತ ಮನಮುಟ್ಟುವಂತೆ ಹೇಳಿದರು. ಹಾಗಿದ್ದರೂ ಕಾಂಗ್ರೆಸ್ ಪಕ್ಷವು ತನ್ನ ಪ್ರತಿಷ್ಠೆಗಾಗಿ ತಾನೂ ದಾರಿ ತಪ್ಪಿದ್ದಲ್ಲದೆ, ತನ್ನ ಮಿತ್ರಪಕ್ಷಗಳನ್ನು ಕೂಡ ದಿಕ್ಕುತಪ್ಪಿಸಿತು. ಈಗ ದಕ್ಷಿಣದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಯಾರು ಸರಿಪಡಿಸುತ್ತಾರೆ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

5 ರಾಜ್ಯಗಳಿಗೆ ಅನ್ಯಾಯ ಆಗುತ್ತಿರಲಿಲ್ಲ

ಸ್ವತಃ ನಾನು ದಕ್ಷಿಣ ರಾಜ್ಯಗಳಿಂದ ಬಂದ ಜನಪ್ರತಿನಿಧಿ. ದಕ್ಷಿಣದ ಐದು ರಾಜ್ಯಗಳಿಗೆ ಸಿಗಲಿದ್ದ ಸುವರ್ಣಾವಕಾಶವನ್ನು ಡಿಎಂಕೆ ಹಾಳು ಮಾಡಿದೆ. ನಮಗೆ ಸಿಗಲಿದ್ದ ಉತ್ತಮ ಪಾಲು ಸಿಗದಂತೆ ಆ ಪಕ್ಷ ಅನ್ಯಾಯವೆಸಗಿದೆ. ಕರ್ನಾಟಕದ ಲೋಕಸಭೆ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಹೆಚ್ಚುತ್ತಿತ್ತು. ಈ ಅವಕಾಶ ತಪ್ಪಿಹೋಗಿದೆ. ಇದನ್ನು ಡಿಎಂಕೆ ಅಥವಾ ಕಾಂಗ್ರೆಸ್ ಪಕ್ಷಗಳಿಂದ ಸರಿಪಡಿಸಲು ಸಾಧ್ಯವೇ? ಈ ಬಗ್ಗೆ ರಾಹುಲ್ ಗಾಂಧಿ ಉತ್ತರಿಸಬೇಕಿದೆ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಪ್ರತೀ ರಾಜ್ಯಕ್ಕೂ ಶೇ.50ರ ಅನುಪಾತದಲ್ಲಿ ಕ್ಷೇತ್ರಗಳನ್ನು ಹೆಚ್ಚಿಸಿದಾಗ ಉತ್ತರದ ಕೆಲ ರಾಜ್ಯಗಳ ಸಂಖ್ಯೆಯ ಬಗ್ಗೆ ಸುಳ್ಳು ಸಂಕಥನಗಳನ್ನು ಸ್ವತಃ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ವ್ಯವಸ್ಥಿತವಾಗಿ ಹರಡಿದವು. ಡಿಎಂಕೆ ಹಠಮಾರಿತನದಿಂದ ಐದು ದಕ್ಷಿಣ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗಿದೆ. ನೆಹರು ಕಾಲದಿಂದ ನಡೆದುಕೊಂಡು ಬಂದ ಡಿಲಿಮಿಟೇಶನ್ ವ್ಯವಸ್ಥೆ ಸುಧಾರಣೆಗೆ ಬೆಂಬಲ ನೀಡುವ ಬದಲು, ತನ್ನ ರಾಜ್ಯದ ಮತದಾರರ ಗಮನವನ್ನು ಬೇರೆಡೆಗೆ ಸೆಳೆಯಲು ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡಿತು. ಕರ್ನಾಟಕ, ಕೇರಳಂ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಸ್ವತಃ ತಮಿಳುನಾಡಿಗೆ ಆಗಿರುವ ಈ ಐತಿಹಾಸಿಕ ಅನ್ಯಾಯಕ್ಕೆ ನೇರವಾಗಿ ಡಿಎಂಕೆ ಪಕ್ಷವೇ ಕಾರಣ ಎಂದು ಆರೋಪಿಸಿದ್ದಾರೆ.

ದೊಡ್ಡ ಬ್ರದರ್, ಚಿಕ್ಕ ಬ್ರದರ್ ನಡುವೆ ಹೊಂದಾಣಿಕೆ ಇಲ್ಲ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಿತ್ತಾಡುತ್ತಿವೆ. ನಾವೇ ಸ್ವಂತ ಬಲದಿಂದ ಸರ್ಕಾರ ಮಾಡುತ್ತೇವೆ ಎಂದು ಆ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಹಾಗೆಯೇ, ತಮಿಳುನಾಡಿನಲ್ಲಿ ದೊಡ್ಡ ಬ್ರದರ್ (ಸ್ಟಾಲಿನ್) ಮತ್ತು ಚಿಕ್ಕ ಬ್ರದರ್ (ರಾಹುಲ್ ಗಾಂಧಿ) ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಚುನಾವಣೆ ಪ್ರಚಾರದಲ್ಲಿ ಯಾವುದೇ ಕಾರಣಕ್ಕೂ ಚಿಕ್ಕ ಬ್ರದರ್ ಜತೆ ವೇದಿಕೆ ಹತ್ತುವುದಿಲ್ಲ ಎಂದು ದೊಡ್ಡ ಬ್ರದರ್ ಶಪಥ ಮಾಡಿದ್ದಾರೆ. ವಾಸ್ತವ ಸ್ಥಿತಿ ಹೀಗಿರುವಾಗ ಈ ಮೈತ್ರಿಕೂಟದಿಂದ ರಾಷ್ಟ್ರದ ಜನತೆಗೆ, ಅದರಲ್ಲೂ ಮಹಿಳೆಯರಿಗೆ ನ್ಯಾಯ ಸಿಗುತ್ತದೆಯೇ? ಎಂದು ಸಚಿವ ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಕ್ಷೇತ್ರ ಮರು ವಿಂಗಡಣೆ ನಡೆಯುತ್ತಿರುವುದು ಇದೇ ಮೊದಲಲ್ಲ. ನೆಹರು ಅವರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಮೋದಿ ಅವರು ಬಂದು ಹೊಸದಾಗಿ ಮಾಡಿದ್ದಲ್ಲ. ಈ ಉದ್ದೇಶಕ್ಕಾಗಿ ರಚಿಸುವ ಆಯೋಗಕ್ಕೆ ರಾಜ್ಯ ವಿಧಾನಸಭೆಗಳ ಸ್ಪೀಕರ್ʼಗಳು ಹಾಗೂ ಲೋಕಸಭೆ ಸ್ಪೀಕರ್ ಸೇರಿ ಸದಸ್ಯರನ್ನು ನೇಮಕ ಮಾಡುತ್ತಾರೆ. ಆ ಆಯೋಗ ವರದಿ ನೀಡಿದ ನಂತರ ಅದರ ಬಗ್ಗೆ ಸಂಸತ್ತು ಅಂತಿಮ ನಿರ್ಧಾರ ಕೈಗೊಳ್ಳುತ್ತದೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ಸಲ ಕ್ಷೇತ್ರ ಮರು ವಿಂಗಡಣೆ ಆಗಿದೆ ಎನ್ನುವುದು ರಾಹುಲ್ ಗಾಂಧಿಗೆ ಗೊತ್ತಿಲ್ಲವೇ? ದುರಂತವೆಂದರೆ, ಈ ಪಕ್ಷಕ್ಕೆ ವ್ಯವಸ್ಥೆ ಮೇಲೆಯೇ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರದಲ್ಲಿ ಅರ್ಧದಷ್ಟಿರುವ ಮಹಿಳೆಯರಿಗೆ ಘೋರ ಅನ್ಯಾಯವನ್ನು ಕಾಂಗ್ರೆಸ್ ಮೈತ್ರಿಕೂಟ ಮಾಡಿದೆ. ಇದಕ್ಕೆ ಕ್ಷಮೆ ಇಲ್ಲ. ಮುಂದಿನ ದಿನಗಳಲ್ಲಿ ಮಹಿಳೆಯರೇ ಇವರಿಗೆಲ್ಲಾ ತಕ್ಕ ಶಾಸ್ತಿ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಂಗ್ರೆಸ್ಸಿಗೆ ಕುಟುಕಿದ ಕೇಂದ್ರ ಸಚಿವರು

ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬಿಬಿಎಂಪಿಯನ್ನು ತೆಗೆದು ಗ್ರೇಟರ್ ಬೆಂಗಳೂರು ಎಂದು ಮಾಡಿದೆ. ನಂತರ ಐದು ವಿಭಾಗಗಳು, ವಾರ್ಡ್ಗಳ ರಚನೆ ಹಾಗೂ ಕೆಟಗರಿ ಹಂಚಿಕೆ ಇವೆಲ್ಲವನ್ನು ಸರ್ವಪಕ್ಷಗಳನ್ನು ಕರೆದು ಚರ್ಚಿಸಿ ಮಾಡಿತೇ?, ತಮ್ಮಿಚ್ಛೆಗೆ ತಕ್ಕಂತೆ ಮಾಡಿದ ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಆದೇಶವಿತ್ತೋ ಅಥವಾ ನಗರದ ಜನರ ಒತ್ತಾಯವಿತ್ತೋ?, ಇಂಥ ಕಾಂಗ್ರೆಸ್ಸಿಗೆ ಮೋದಿ ಅವರನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಕುಮಾರಸ್ವಾಮಿ ಅವರು ಹರಿಹಾಯ್ದಿದ್ದಾರೆ.

ಜೆಡಿಎಸ್‌ಗೆ ಜಮೀರ್; ಗಾಳಿಸುದ್ದಿ ಎಂದ ಎಚ್‌ಡಿಕೆ

ಸಚಿವ ಜಮೀರ್ ಅಹಮದ್ ಅವರು ಜೆಡಿಎಸ್ ಪಕ್ಷಕ್ಕೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಕಾಂಗ್ರೆಸ್ ಪಕ್ಷದ ಯಾರೋಬ್ಬರೂ ನನ್ನ ಸಂಪರ್ಕದಲ್ಲಿ ಇಲ್ಲ. ಹಾಗಿದ್ದ ಮೇಲೆ ಅವರು ಪಕ್ಷ ಸೇರುವ ಮಾತೆಲ್ಲಿಂದ ಬರಬೇಕು?, ಇದೆಲ್ಲವೂ ಗಾಳಿಸುದ್ದಿಯಷ್ಟೇ ಎಂದು ತೆರೆ ಎಳೆದರು.

ಪಕ್ಷಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ನಾನು ತಾನೇ ನಿರ್ಧಾರ ಕೈಗೊಳ್ಳಬೇಕು. ನನ್ನ ಸಂಪರ್ಕಕ್ಕೇ ಯಾರೂ ಬಂದಿಲ್ಲ ಎಂದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇಕೆ ಬರುತ್ತದೆ ಎಂದು ಹೇಳಿದ್ದಾರೆ.

ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳ ಫಲಿತಾಂಶ ಏನಾಗುತ್ತದೋ ನೋಡೋಣ. ಅಲ್ಪಸಂಖ್ಯಾತರನ್ನು ನಾವೇ ರಕ್ಷಣೆ ಮಾಡುವವರು ಎನ್ನುವ ಕಾಂಗ್ರೆಸ್ ಯಾಕೆ ಗೊಂದಲ ಮಾಡುತ್ತಿದೆ. ಒಂದು ಸಮುದಾಯದ ಮೇಲೆ ಯಾಕೆ ಗದಾಪ್ರಹಾರ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

Read More
Next Story