
ಭ್ರಷ್ಟಾಚಾರಿಗಳಿಗೆ ಮರಣದಂಡನೆ ಪರಿಗಣಿಸುವಂತೆ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್ ಸರ್ಕಾರಕ್ಕೆ ಸಲಹೆ ನೀಡಿದರು.
ರಾಮಮಂದಿರ ದೇಣಿಗೆ ವಿವಾದ: ಭ್ರಷ್ಟಾಚಾರಿಗಳಿಗೆ ಮರಣದಂಡನೆ ವಿಧಿಸುವ ಬಗ್ಗೆ ಚಿಂತನೆ ನಡೆಸಿ ಎಂದ ಹೈಕೋರ್ಟ್
ರಾಮಮಂದಿರ ದೇಣಿಗೆ ವಿವಾದ ಉಲ್ಲೇಖಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್, ಭ್ರಷ್ಟಾಚಾರಿಗಳಿಗೆ ಮರಣದಂಡನೆ ಪರಿಗಣಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು.
ಅಯೋಧ್ಯೆಯ ರಾಮಮಂದಿರದ ದೇಣಿಗೆ ದುರ್ಬಳಕೆ ಆರೋಪದ ವಿಚಾರವನ್ನು ಪ್ರಸ್ತಾಪಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಅತುಲ್ ಶ್ರೀಧರನ್, ರಾಮಮಂದಿರದ ದೇಣಿಗೆ ಕಳ್ಳತನದಂತಹ ಘಟನೆ ನಡೆದರೂ ನಾಚಿಕೆ ಪಡದವರನ್ನು ಯಾವುದೂ ನಾಚಿಕೆಪಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರ ದೇಶದ ಎಲ್ಲ ವ್ಯವಸ್ಥೆಗಳಲ್ಲೂ ಆಳವಾಗಿ ಬೇರೂರಿರುವುದಾಗಿ ಹೇಳಿದ ನ್ಯಾಯಮೂರ್ತಿ, ಭ್ರಷ್ಟಾಚಾರ ತಡೆ ಕಾಯ್ದೆ-1988ಕ್ಕೆ ತಿದ್ದುಪಡಿ ಮಾಡಿ, ಭ್ರಷ್ಟಾಚಾರದಲ್ಲಿ ತಪ್ಪಿತಸ್ಥರಾಗುವವರಿಗೆ ಮರಣದಂಡನೆ ವಿಧಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದಾರೆ.
'ಭಾರತೀಯರ ಪ್ರಾಮಾಣಿಕತೆ ಅತ್ಯಂತ ಕೆಳಮಟ್ಟಕ್ಕೆ ತಲುಪಿದೆ'
ರಾಮಮಂದಿರದ ದೇಣಿಗೆ ದುರ್ಬಳಕೆ ವಿವಾದವನ್ನು ಉಲ್ಲೇಖಿಸಿದ ಅವರು, "ಇದು ಭಾರತೀಯರ ಪ್ರಾಮಾಣಿಕತೆ ಎಷ್ಟು ಕುಸಿದಿದೆ ಎಂಬುದಕ್ಕೆ ಸಂಕೇತವಾಗಿದೆ. ಭ್ರಷ್ಟಾಚಾರ ಈಗ ಸಾಮಾನ್ಯ ಸಂಗತಿಯಾಗಿದೆ. ಸಿಕ್ಕಿಬಿದ್ದಾಗ ಮಾತ್ರ ಅದನ್ನು ತಪ್ಪು ಎಂದು ಪರಿಗಣಿಸುವ ಪರಿಸ್ಥಿತಿ ನಿರ್ಮಾಣವಾಗಿದೆ" ಎಂದು ಬೇಸರ ವ್ಯಕ್ತಪಡಿಸಿದರು.
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ ಉಲ್ಲೇಖ
ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ 2025ರ ಭ್ರಷ್ಟಾಚಾರ ಸೂಚ್ಯಂಕದಲ್ಲಿ ಭಾರತ 182 ರಾಷ್ಟ್ರಗಳ ಪೈಕಿ 91ನೇ ಸ್ಥಾನದಲ್ಲಿದ್ದರೂ ಅದು ಕೂಡ ಸಮಾಜಕ್ಕೆ ನಾಚಿಕೆಯ ವಿಷಯವಾಗಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.
'ಬುಲ್ಡೋಜರ್ ನ್ಯಾಯ' ಕುರಿತು ತೀವ್ರ ಆಕ್ಷೇಪ
ಆರೋಪಿಗಳ ಮನೆಗಳನ್ನು ನಗರಸಭೆ ನಿಯಮ ಉಲ್ಲಂಘನೆ ಹೆಸರಿನಲ್ಲಿ ನೆಲಸಮ ಮಾಡುವ "ಬುಲ್ಡೋಜರ್ ನ್ಯಾಯ" ಕುರಿತು ನೀಡಿದ ವಿಭಜಿತ ತೀರ್ಪಿನಲ್ಲಿ ನ್ಯಾಯಮೂರ್ತಿ ಶ್ರೀಧರನ್, ಅಪರಾಧ ನಡೆದ ತಕ್ಷಣ ಮನೆಗಳನ್ನು ಕೆಡವುವುದು ಸಮಾಜದ ಪ್ರತೀಕಾರದ ಮನೋಭಾವವನ್ನು ತೃಪ್ತಿಪಡಿಸುವ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟರು. ಈ ರೀತಿಯ ಮನೆ ಧ್ವಂಸ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಹಲವು ಕಡೆ ಅವನ್ನು ಲೆಕ್ಕಿಸದೇ ಕ್ರಮಗಳು ಮುಂದುವರಿಯುತ್ತಿವೆ. ಇದರಿಂದ ಕಾನೂನಿನ ಮೇಲಿನ ಗೌರವ ಕುಸಿಯುತ್ತಿದೆ ಎಂದು ಅವರು ಹೇಳಿದರು.
ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳೇ ಕಾರಣ
ಯಾವುದೇ ಅಕ್ರಮ ಕಟ್ಟಡ ಒಂದೇ ರಾತ್ರಿ ನಿರ್ಮಾಣವಾಗುವುದಿಲ್ಲ. ರಾಜಕೀಯ ಅಥವಾ ಆಡಳಿತಾತ್ಮಕ ಬೆಂಬಲ, ಲಂಚ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಇಂತಹ ಕಟ್ಟಡಗಳು ನಿರ್ಮಾಣವಾಗುತ್ತವೆ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು. ಅಕ್ರಮ ಕಟ್ಟಡಗಳಿಗೆ ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಒದಗಿಸುವ ಮೂಲಕ ಸರ್ಕಾರವೇ ಪರೋಕ್ಷವಾಗಿ ಅಪರಾಧಕ್ಕೆ ಕೈಜೋಡಿಸುತ್ತಿದೆ. ನಂತರ ಸಾಮಾನ್ಯ ಮನೆ ಖರೀದಿದಾರರೇ ಕಾನೂನು ಕ್ರಮದ ಹೊರೆ ಹೊರುತ್ತಾರೆ ಎಂದು ನ್ಯಾಯಮೂರ್ತಿ ಹೇಳಿದರು.
ಭ್ರಷ್ಟಾಚಾರದಿಂದ ಸಾಮಾಜಿಕ ಅಸಮಾನತೆ ಹೆಚ್ಚಳ
ಭ್ರಷ್ಟಾಚಾರದಿಂದ ಕೆಲವರ ಕೈಯಲ್ಲಿ ಮಾತ್ರ ಅಕ್ರಮ ಸಂಪತ್ತು ಕೇಂದ್ರೀಕೃತವಾಗುತ್ತಿದ್ದು, ಶ್ರೀಮಂತ-ಬಡವರ ನಡುವಿನ ಅಂತರ ಮತ್ತಷ್ಟು ವಿಸ್ತರಿಸುತ್ತದೆ. ಮುಂದಿನ ದಿನಗಳಲ್ಲಿ ಇದು ಸಾಮಾಜಿಕ ಅಶಾಂತಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ನ್ಯಾಯಮೂರ್ತಿ ಎಚ್ಚರಿಕೆ ನೀಡಿದರು.
ಸರ್ಕಾರಕ್ಕೆ ಕಠಿಣ ಕಾನೂನು ಕ್ರಮಗಳ ಸಲಹೆ
ದೇಶವನ್ನು ಭ್ರಷ್ಟಾಚಾರದ ಕಗ್ಗಂಟಿನಿಂದ ಹೊರತರುವುದು ಸರ್ಕಾರದ ನಿಜವಾದ ಉದ್ದೇಶವಾಗಿದ್ದರೆ, ಭ್ರಷ್ಟಾಚಾರ ತಡೆ ಕಾಯ್ದೆಗೆ ಕಠಿಣ ತಿದ್ದುಪಡಿ ತಂದು, ಅಗತ್ಯವಿದ್ದರೆ ಮರಣದಂಡನೆಯಂತಹ ಕಠಿಣ ಶಿಕ್ಷೆಗಳನ್ನೂ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಅತುಲ್ ಶ್ರೀಧರನ್ ಅಭಿಪ್ರಾಯಪಟ್ಟಿದ್ದಾರೆ.

