
ಹಜ್ ಪ್ರಯಾಣ ದರ ಭಾರೀ ಪ್ರಮಾಣದಲ್ಲಿ ಏರಿಕೆ ವಿವಾದ: ವಿರೋಧ ಪಕ್ಷಗಳಿಂದ ತೀವ್ರ ಆಕ್ರೋಶ
ವಿಮಾನಯಾನ ಕಂಪನಿಗಳ ಒಟ್ಟು ವೆಚ್ಚದಲ್ಲಿ 30-40% ಇಂಧನ ವೆಚ್ಚವೇ ಇರುವುದರಿಂದ, ಈ ಏರಿಕೆ ವಿಮಾನ ಸೇವೆಗಳ ಮೇಲೆ ನೇರ ಪರಿಣಾಮ ಬೀರಿದೆ.
ಹಜ್ ಯಾತ್ರಿಕರಿಗೆ ವಿಮಾನ ಪ್ರಯಾಣ ದರದಲ್ಲಿ 10,000 ರೂಪಾಯಿ ಏಕಾಏಕಿ ಹೆಚ್ಚಳ ಮಾಡಿದ ಹಜ್ ಸಮಿತಿಯ ನಿರ್ಧಾರ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇಂಧನದ ಬೆಲೆ ಏರಿಕೆ, ವಿಶೇಷವಾಗಿ ಇರಾನ್ ಸಂಘರ್ಷದ ಪರಿಣಾಮವಾಗಿ ಏವಿಯೇಷನ್ ಟರ್ಬೈನ್ ಫ್ಯುಯೆಲ್ (ATF) ದರಗಳು ಏರಿರುವುದನ್ನು ಸರ್ಕಾರ ಕಾರಣವಾಗಿ ಉಲ್ಲೇಖಿಸಿದರೆ, ಯಾತ್ರಿಕರು ಮತ್ತು ವಿರೋಧ ಪಕ್ಷಗಳು ಇದನ್ನು ಅನ್ಯಾಯಕರ ಕ್ರಮವೆಂದು ಆರೋಪಿಸಿವೆ.
ಹಜ್ ಸಮಿತಿ ಹೊರಡಿಸಿರುವ ಸರ್ಕ್ಯುಲರ್ ಪ್ರಕಾರ, ಪ್ರತಿಯೊಬ್ಬ ಯಾತ್ರಿಕನೂ ಹೆಚ್ಚುವರಿ 100 ಡಾಲರ್ (ಸುಮಾರು 10,000 ರೂಪಾಯಿ) ಪಾವತಿಸಬೇಕಿದ್ದು, ಮೇ 15ರೊಳಗೆ ಈ ಮೊತ್ತವನ್ನು ಜಮಾ ಮಾಡಬೇಕು ಎಂದು ಸೂಚಿಸಲಾಗಿದೆ. ಈ ಹೆಚ್ಚುವರಿ ಶುಲ್ಕವು ಎಲ್ಲಾ ಎಂಬಾರ್ಕೇಶನ್ ಪಾಯಿಂಟ್‌ಗಳಿಗೆ ಸಮಾನವಾಗಿ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಇರಾನ್ ಸಂಘರ್ಷ ಆರಂಭವಾದ ಬಳಿಕ ಜಾಗತಿಕ ಮಟ್ಟದಲ್ಲಿ ಎಟಿಎಫ್ ದರಗಳು ಎರಡು ಪಟ್ಟು ಹೆಚ್ಚು ಏರಿಕೆಯಾಗಿದೆ. ಸಾಮಾನ್ಯವಾಗಿ ವಿಮಾನಯಾನ ಕಂಪನಿಗಳ ಒಟ್ಟು ವೆಚ್ಚದಲ್ಲಿ 30-40% ಇಂಧನ ವೆಚ್ಚವೇ ಇರುವುದರಿಂದ, ಈ ಏರಿಕೆ ವಿಮಾನ ಸೇವೆಗಳ ಮೇಲೆ ನೇರ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಹಜ್ ಪ್ರಯಾಣದ ದರವನ್ನು ಹೆಚ್ಚಿಸುವ ಅನಿವಾರ್ಯತೆ ಎದುರಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಯಾತ್ರಿಕರಿಗೆ ಹಚ್ಚುವರಿ ಹೊರೆ
ಈ ಕ್ರಮ ಯಾತ್ರಿಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹಲವು ವರ್ಷಗಳ ಸಂಗ್ರಹದ ನಂತರ ಹಜ್ ಯಾತ್ರೆಗೆ ತೆರಳುವ ಸಾಮಾನ್ಯ ಜನರಿಗೆ ಇದು ಹೆಚ್ಚುವರಿ ಹೊರೆ ಎಂದು ವಿರೋಧ ಪಕ್ಷಗಳು ವಾದಿಸಿವೆ. ಎಐಎಮ್ಐಎಮ್ ನಾಯಕ ಅಸದುದ್ದೀನ್ ಓವೈಸಿ ಈ ನಿರ್ಧಾರವನ್ನು ತೀವ್ರವಾಗಿ ಟೀಕಿಸಿ, “ಇದು ಯಾತ್ರಿಕರ ಶೋಷಣೆ. ಈಗಾಗಲೇ 90, 844 ರೂಪಾಯಿ ವಸೂಲಿ ಮಾಡಿರುವ ಸಂದರ್ಭದಲ್ಲಿ ಮತ್ತೆ 10,000 ರೂಪಾಯಿ ಹೆಚ್ಚಳ ಅನ್ಯಾಯ,” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಕೂಡ ಈ ಕ್ರಮವನ್ನು ಪ್ರಶ್ನಿಸಿ, “ಮುಂಚಿತವಾಗಿ ದರ ನಿಗದಿ ಮಾಡಿದ ಬಳಿಕ ಕೊನೆಯ ಕ್ಷಣದಲ್ಲಿ ಏಕೆ ಹೆಚ್ಚಳ?” ಎಂದು ಕೇಳಿದ್ದಾರೆ.
ಈ ವಿವಾದ ತೀವ್ರಗೊಳ್ಳುತ್ತಿದ್ದಂತೆ, ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರೆನ್ ರಿಜಿಜು ಸ್ಪಷ್ಟನೆ ನೀಡಿದರು. ವಿಮಾನ ಕಂಪನಿಗಳು ಆರಂಭದಲ್ಲಿ ಪ್ರತಿ ಯಾತ್ರಿಕನಿಗೆ 300- 400 ರೂಪಾಯಿ ಹೆಚ್ಚಳ ಬೇಡಿಕೆ ಇಟ್ಟಿದ್ದರೂ, ಸರ್ಕಾರ ಮಧ್ಯಪ್ರವೇಶ ಮಾಡಿ ಅದನ್ನು 100 ಡಾಲರ್ ಇಳಿಸಿತು ಎಂದು ಹೇಳಿದರು. “ಸರ್ಕಾರ ಯಾತ್ರಿಕರ ಹಿತವನ್ನು ಗಮನದಲ್ಲಿಟ್ಟು ದೊಡ್ಡ ಹೊರೆ ತಪ್ಪಿಸಿದೆ,” ಎಂದು ಅವರು ಹೇಳಿದರು.
ಸಚಿವಾಲಯದ ಪ್ರಕಾರ, ಈ ಕ್ರಮವು ಪಾರದರ್ಶಕವಾಗಿ ಕೈಗೊಳ್ಳಲ್ಪಟ್ಟಿದ್ದು, ಹಜ್ ಕಾರ್ಯಾಚರಣೆಗಳಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮವೆಂದು ವಿವರಿಸಲಾಗಿದೆ. ಆದಾಗ್ಯೂ, ದರ ಏರಿಕೆ ಕುರಿತು ರಾಜಕೀಯ ವಾಗ್ವಾದ ಮುಂದುವರಿಯುವ ಸಾಧ್ಯತೆ ಇದೆ.

