ಮಹಿಳಾ ಬೈಕ್ ರೈಡರ್​​ಗೆ ಕಾರು ಡಿಕ್ಕಿ ಹೊಡಿಸಿ ಪರಾರಿ; ರಾಜಸ್ಥಾನದಲ್ಲಿ ಆರೋಪಿ ಬಂಧನ
x

ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದು, ಕೊಲೆ ಯತ್ನದ ಆರೋಪ ಸೇರಿಸಲಾಗಿದೆ.

ಮಹಿಳಾ ಬೈಕ್ ರೈಡರ್​​ಗೆ ಕಾರು ಡಿಕ್ಕಿ ಹೊಡಿಸಿ ಪರಾರಿ; ರಾಜಸ್ಥಾನದಲ್ಲಿ ಆರೋಪಿ ಬಂಧನ

ಗುರುಗ್ರಾಮ್‌ನಲ್ಲಿ ಮಹಿಳಾ ಬೈಕರ್‌ಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಆರೋಪಿ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ್ದು, ಕೊಲೆ ಯತ್ನದ ಆರೋಪ ಸೇರಿಸಲಾಗಿದೆ.


Click the Play button to hear this message in audio format

ಮಹಿಳಾ ಬೈಕ್ ಸವಾರೊಬ್ಬರಿಗೆ ಕಾರಿನಿಂದ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದ ಆರೋಪದ ಮೇಲೆ ಕಲ್ಯಾಣ್ ಬೈನ್ಸ್ಲಾನನ್ನು ಪೊಲೀಸರು ರಾಜಸ್ಥಾನದ ದೌಸಾದಲ್ಲಿ ಬಂಧಿಸಿದ್ದಾರೆ. ಗುರುಗ್ರಾಮ್‌ನ ಗಾಲ್ಫ್​ ಕೋರ್ಸ್ ರಸ್ತೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದೀಗ ಕೊಲೆ ಯತ್ನದ ಆರೋಪವನ್ನೂ ಪ್ರಕರಣಕ್ಕೆ ಸೇರಿಸಿದ್ದು, ಘಟನೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.

ಭಾನುವಾರ ಗಾಲ್ಫ್​​ ಕೋರ್ಸ್ ರಸ್ತೆಯಲ್ಲಿ ಸಿಯಾ ಎಂಬ ಮಹಿಳೆ ಇತರ ಬೈಕ್ ಸವಾರರ ಗುಂಪಿನೊಂದಿಗೆ ತೆರಳುತ್ತಿದ್ದರು. ಈ ವೇಳೆ ಕಾರೊಂದು ಅವರ ಬೈಕ್‌ಗೆ ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸಿಯಾ ಬೈಕ್‌ನಿಂದ ರಸ್ತೆಗೆ ಬಿದ್ದಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಅವರ ಬೈಕ್‌ಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸಿಯಾ ನೀಡಿರುವ ದೂರಿನ ಪ್ರಕಾರ, ಕಾರು ಕೆಲಕಾಲ ಅವರ ಬೈಕ್ ಅನ್ನು ಹಿಂಬಾಲಿಸುತ್ತಿತ್ತು. ಬಳಿಕ ಏಕಾಏಕಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು ನಿಲ್ಲದೆ ಅಲ್ಲಿಂದ ತೆರಳಿದೆ ಎಂದು ಆರೋಪಿಸಲಾಗಿದೆ. ಘಟನೆಯಿಂದ ಸಿಯಾ ರಸ್ತೆಗೆ ಬಿದ್ದರೂ, ಅವರು ಸುರಕ್ಷತಾ ಸಾಧನಗಳನ್ನು ಧರಿಸಿದ್ದರಿಂದ ಗಂಭೀರ ಗಾಯಗಳಾಗದೇ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರಂಭದಲ್ಲಿ ಎರಡು ಸೆಕ್ಷನ್‌ಗಳಡಿ ಪ್ರಕರಣ

ಘಟನೆ ಸಂಬಂಧ ಗುರುಗ್ರಾಮ್ ಪೊಲೀಸರು ಆರಂಭದಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 281 ಮತ್ತು 125ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಮುಂದುವರಿದಂತೆ ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ತನಿಖೆಯ ವೇಳೆ ಲಭ್ಯವಾದ ದೃಶ್ಯಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣಕ್ಕೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109ನ್ನೂ ಸೇರಿಸಲಾಗಿದೆ. ಈ ಸೆಕ್ಷನ್ ಕೊಲೆ ಯತ್ನಕ್ಕೆ ಸಂಬಂಧಿಸಿದ್ದು, ಆರೋಪ ಸಾಬೀತಾದರೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ. ಹೀಗಾಗಿ ಆರಂಭದಲ್ಲಿ ರಸ್ತೆ ಅಪಘಾತವೆಂದು ಕಾಣಿಸಿಕೊಂಡಿದ್ದ ಪ್ರಕರಣ ಇದೀಗ ಗಂಭೀರ ಕ್ರಿಮಿನಲ್ ಪ್ರಕರಣವಾಗಿ ಮಾರ್ಪಟ್ಟಿದೆ.

‘ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿಲ್ಲ’ ಎಂದ ಆರೋಪಿ

ಆರೋಪಿ ಕಲ್ಯಾಣ್ ಬೈನ್ಸ್ಲಾ ತನ್ನ ವಿರುದ್ಧದ ಉದ್ದೇಶಪೂರ್ವಕವಾಗಿ ಬೈಕ್‌ಗೆ ಡಿಕ್ಕಿ ಹೊಡೆದ ಆರೋಪವನ್ನು ನಿರಾಕರಿಸಿದ್ದಾನೆ. ಬೈಕ್ ಸವಾರರ ವರ್ತನೆಯಿಂದ ರಸ್ತೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೇ ವೇಳೆ ಯು-ಟರ್ನ್ ಬಳಿ ಕಾರಿನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಸಂಭವಿಸಿತು ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ವೈರಲ್ ದೃಶ್ಯಗಳಿಂದ ಪ್ರಕರಣಕ್ಕೆ ತಿರುವು

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಪ್ರಕರಣಕ್ಕೆ ಹೆಚ್ಚಿನ ಗಮನ ಸೆಳೆದಿದೆ. ಬೈಕ್‌ಗೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯಗಳು ಹಾಗೂ ಸಿಸಿಟಿವಿ ದಾಖಲೆಗಳನ್ನು ಪೊಲೀಸರು ತನಿಖೆಯ ಪ್ರಮುಖ ಸಾಕ್ಷ್ಯಗಳಾಗಿ ಪರಿಶೀಲಿಸುತ್ತಿದ್ದಾರೆ. ಘಟನೆ ಅಪಘಾತವೇ ಅಥವಾ ಉದ್ದೇಶಪೂರ್ವಕವಾಗಿ ನಡೆಸಿದ ಕೃತ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

Read More
Next Story