
ಬೈಕ್ ಚಲಾಯಿಸುತ್ತಿದ್ದ ಮಹಿಳೆಯನ್ನು ಬೆನ್ನಟ್ಟಿ ಕಿರುಕುಳ- ಡಿಕ್ಕಿ ಹೊಡೆದು ಎಸ್ಕೇಪ್ ಆದ ಕಾರು ಚಾಲಕ
ಗುರುಗ್ರಾಮ್‌ನ ಗೋಲ್ಫ್ ಕೋರ್ಸ್ ರಸ್ತೆಯಲ್ಲಿ ಮಹಿಳಾ ಬೈಕ್ ಸವಾರಿಯನ್ನು ಕಾರೊಂದು ಬೆನ್ನಟ್ಟಿ ಡಿಕ್ಕಿ ಹೊಡೆದಿದೆ ಎಂಬ ಆರೋಪ ಕೇಳಿಬಂದಿದೆ. ಅಪಘಾತದ ವಿಡಿಯೊ ವೈರಲ್ ಆಗಿದ್ದು, ಚಾಲಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಗುರುಗ್ರಾಮದ ರಸ್ತೆಯಲ್ಲಿ ಬೈಕ್‌ಗೆ ಕಾರು ಡಿಕ್ಕಿ ಹೊಡೆದು, ಬಳಿಕ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳಾ ಬೈಕರ್ ರಸ್ತೆಗೆ ಬಿದ್ದಿದ್ದು, ಅವರ ಬೈಕ್ ಅನ್ನು ಕಾರು ಕೆಲ ಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ ಎಂದು ಆರೋಪಿಸಲಾಗಿದೆ.
‘ಸಿಯಾ’ ಎಂದು ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿರುವ ಬೈಕರ್ ಘಟನೆಗೆ ಸಂಬಂಧಿಸಿದ ವಿಡಿಯೊವನ್ನು ಹಂಚಿಕೊಂಡು ತಮ್ಮ ಅನುಭವವನ್ನು ವಿವರಿಸಿದ್ದಾರೆ. ಘಟನೆಯ ಬಳಿಕ ಗುರುಗ್ರಾಮ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಬೆನ್ನಟ್ಟಿ ಬಂದು ಡಿಕ್ಕಿ
ಭಾನುವಾರ ಗುರುಗ್ರಾಮದ ಗೋಲ್ಫ್ ಕೋರ್ಸ್ ರಸ್ತೆಯಲ್ಲಿ ತಾವು ಏಪ್ರಿಲಿಯಾ ಆರ್‌ಎಸ್ 457 ಬೈಕ್‌ನಲ್ಲಿ ತಮ್ಮ ಬೈಕಿಂಗ್ ತಂಡದ ಸದಸ್ಯರೊಂದಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ಸಿಯಾ ತಿಳಿಸಿದ್ದಾರೆ. ತಮ್ಮ ಪ್ರಯಾಣ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ಕಾರಿನಲ್ಲಿದ್ದವರು ತಮ್ಮನ್ನು ಬೆನ್ನಟ್ಟಲು ಆರಂಭಿಸಿದ್ದರು ಎಂದು ಅವರು ಆರೋಪಿಸಿದ್ದಾರೆ. ಕಾರು ತಮ್ಮ ಸಮೀಪಕ್ಕೆ ಬಂದು ಅದರಲ್ಲಿದ್ದವರು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದರು. ಸ್ವಲ್ಪ ಅಂತರ ಕಾಯ್ದುಕೊಳ್ಳುವಂತೆ ತಾವು ಸೂಚಿಸಿದರೂ, ಬೈಕ್ ನಿಲ್ಲಿಸುವಂತೆ ಅವರು ಹೇಳಿದ್ದರು ಎಂದು ಸಿಯಾ ಹೇಳಿದ್ದಾರೆ.
ಕಾರಿನಲ್ಲಿದ್ದವರು ಮದ್ಯ ಸೇವಿಸಿರುವಂತೆ ಕಂಡುಬಂದಿದ್ದರು ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಪರಿಸ್ಥಿತಿ ಮತ್ತಷ್ಟು ಗಂಭೀರವಾಗದಂತೆ ತಾವು ಬೈಕ್ ನಿಲ್ಲಿಸದೆ ಮುಂದೆ ಸಾಗಲು ಪ್ರಯತ್ನಿಸಿದ್ದಾಗಿ ತಿಳಿಸಿದ್ದಾರೆ. ಈ ವೇಳೆ ಹಿಂದೆ ಬರುತ್ತಿದ್ದ ತಮ್ಮ ಸ್ನೇಹಿತರೊಬ್ಬರು ಕಾರು ತಮ್ಮ ಬಳಿ ಬಾರದಂತೆ ತಡೆಯಲು ಪ್ರಯತ್ನಿಸಿದ್ದರು. ಆದರೆ ಕಾರು ತಮ್ಮನ್ನು ಹಿಂಬಾಲಿಸುತ್ತಲೇ ಇತ್ತು. ಬಳಿಕ ಚಾಲಕ ತಮ್ಮ ಬೈಕ್‌ನ ಮುಂದೆ ಕಾರನ್ನು ಅಡ್ಡವಾಗಿ ತರಲು ಪ್ರಯತ್ನಿಸಿದಾಗ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸಿಯಾ ಆರೋಪಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ತಾವು ಬೈಕ್‌ನಿಂದ ರಸ್ತೆಗೆ ಬಿದ್ದಿದ್ದು, ಬೈಕ್ ಅನ್ನು ಕಾರು ಕೆಲವು ಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಬೈಕ್‌ಗೆ ಅಳವಡಿಸಿದ್ದ ಕ್ಯಾಮೆರಾದಲ್ಲಿ ದಾಖಲಾಗಿದೆ.
ಚಾಲಕನನ್ನು ತಡೆಯಲು ಸ್ನೇಹಿತನ ಪ್ರಯತ್ನ
ಅಪಘಾತದ ಬಳಿಕ ಸಿಯಾ ಅವರ ಸ್ನೇಹಿತರೊಬ್ಬರು ಕಾರನ್ನು ಹಿಂಬಾಲಿಸಿ ಚಾಲಕನನ್ನು ತಡೆಯಲು ಪ್ರಯತ್ನಿಸಿದ್ದಾರೆ. ಸಂಚಾರ ದೀಪದ ಬಳಿ ಕಾರು ನಿಂತಾಗ ಸ್ನೇಹಿತರು ಚಾಲಕನನ್ನು ಪ್ರಶ್ನಿಸಿ, ಅಪಘಾತಕ್ಕೆ ಅವರೇ ಕಾರಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಚಾಲಕ ಆರೋಪವನ್ನು ಒಪ್ಪಿಕೊಳ್ಳದೆ ಅಲ್ಲಿಂದ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಸಿಯಾ ಹೇಳಿದ್ದಾರೆ.
ಗುರುಗ್ರಾಮ ಪೊಲೀಸರಿಗೆ ಕ್ರಮಕ್ಕೆ ಮನವಿ
ಘಟನೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಯಾ, ರಸ್ತೆ ಬಳಕೆದಾರರ ಸುರಕ್ಷತೆಗೆ ಅಪಾಯ ಉಂಟುಮಾಡುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗುರುಗ್ರಾಮ ಪೊಲೀಸರಿಗೆ ಮನವಿ ಮಾಡಿದ್ದಾರೆ. ಅಲ್ಲದೆ, ಅಪಘಾತಕ್ಕೆ ಕಾರಣವಾದ ಕಾರಿನ ನೋಂದಣಿ ಸಂಖ್ಯೆಯನ್ನೂ ಅವರು ಬಹಿರಂಗಪಡಿಸಿದ್ದು, ವಾಹನದ ನೋಂದಣಿ ದಾಖಲೆಗಳಲ್ಲಿ (ಆರ್‌ಸಿ) ಇರುವ ಮಾಲೀಕರ ಹೆಸರನ್ನೂ ಉಲ್ಲೇಖಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕ್ರಮಕ್ಕೆ ಒತ್ತಾಯ
ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಹಲವರು ಸಿಯಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೆಹಲಿ ಪೊಲೀಸರು, ಗುರುಗ್ರಾಮ್ ಪೊಲೀಸರು, ಗುರುಗ್ರಾಮ್ ಸಂಚಾರ ಪೊಲೀಸರು ಹಾಗೂ ಹರಿಯಾಣ ಪೊಲೀಸರನ್ನು ಟ್ಯಾಗ್ ಮಾಡಿ ಆರೋಪಿತ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ ದಾಖಲಿಸಿ ತನಿಖೆ ನಡೆಸಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಮತ್ತೊಂದೆಡೆ, ಗುರುಗ್ರಾಮ್‌ನ ರಸ್ತೆ ಸುರಕ್ಷತೆ, ಅಜಾಗರೂಕ ಚಾಲನೆ ಹಾಗೂ ಅಪಘಾತದ ಬಳಿಕ ಸ್ಥಳದಿಂದ ಪರಾರಿಯಾಗುವ ಪ್ರಕರಣಗಳ ಬಗ್ಗೆಯೂ ಸಾಮಾಜಿಕ ಜಾಲತಾಣ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

