
ಗ್ರೇಟರ್ ನೋಯ್ಡಾ ಬಸ್ ದುರಂತದ ಎಫ್ಐಆರ್ನಲ್ಲಿ ಚಾಲಕನ ನಿರ್ಲಕ್ಷ್ಯ, ಬಸ್ನಲ್ಲಿದ್ದ ಹೊಗೆ, ಸಂಚಾರ ದಂಡಗಳು ಹಾಗೂ 9 ಮಂದಿ ಸಾವಿನ ಕುರಿತು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ʼನೀವು ಸತ್ತರೂ ನಮಗೆ ಚಿಂತೆ ಇಲ್ಲʼ- ನೋಯ್ಡಾದಲ್ಲಿ ಬೆಂಕಿಗಾಹುತಿಯಾದ ಬಸ್ ಚಾಲಕನ ನಿರ್ಲಕ್ಷ್ಯ ಎಫ್ಐಆರ್ನಲ್ಲಿ ಬಯಲು
ಬಸ್ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಕಿರುಚಲು ಆರಂಭಿಸಿದಾಗಲೂ ಚಾಲಕ ಬಸ್ ನಿಲ್ಲಿಸಲು ನಿರಾಕರಿಸಿದ್ದಾನೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಯಮುನಾ ಎಕ್ಸ್ಪ್ರೆಸ್ವೇನಲ್ಲಿ ಡಬಲ್ಡೆಕ್ಕರ್ ಸ್ಲೀಪರ್ ಬಸ್ ಬೆಂಕಿಗಾಹುತಿಯಾಗಿ 9 ಮಂದಿ ಮೃತಪಟ್ಟ ದುರಂತದ ಕುರಿತು ಎಫ್ಐಆರ್ನಲ್ಲಿ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗಿದೆ. ಬೆಂಕಿ ಕಾಣಿಸಿಕೊಳ್ಳುವ ಕೆಲವೇ ನಿಮಿಷಗಳಿಗೂ ಮೊದಲು ಬಸ್ನಲ್ಲಿ ಸುಟ್ಟ ವಾಸನೆ ಬರುತ್ತಿದೆ ಎಂದು ಪ್ರಯಾಣಿಕರು ಚಾಲಕನಿಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ ಚಾಲಕ ಮತ್ತು ನಿರ್ವಾಹಕರು ಅದನ್ನು ನಿರ್ಲಕ್ಷಿಸಿ ಧೂಮಪಾನ ಮಾಡುತ್ತಿದ್ದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಬಸ್ನಲ್ಲಿ ಚಾಲಕ ಹಾಗೂ ನಿರ್ವಾಹಕರು ಸಿಗರೇಟ್ ಸೇದುತ್ತಿದ್ದಕ್ಕೆ ಪ್ರಯಾಣಿಕರು ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಇಬ್ಬರೂ ನಕ್ಕು ಸುಮ್ಮನಿರುವಂತೆ ಪ್ರಯಾಣಿಕರಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬಳಿಕ ಬಸ್ನಲ್ಲಿ ಸುಟ್ಟ ವಾಸನೆ ಹೆಚ್ಚಾದಾಗಲೂ ಚಾಲಕ ಯಾವುದೇ ಪರಿಶೀಲನೆ ನಡೆಸಿಲ್ಲ. ಅಲ್ಲದೇ ನೀವು ಸತ್ತರೆ ಸಾಯಿರಿ... ನಮಗೆ ಚಿಂತೆ ಇಲ್ಲ ಎಂದು ಹೇಳಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಎಫ್ಐಆರ್ ತಿಳಿಸಿದೆ.
ಕೆಲವೇ ನಿಮಿಷಗಳಲ್ಲಿ ಬಸ್ನ ಮುಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಯಾಣಿಕರು ಕಿರುಚಲು ಆರಂಭಿಸಿದಾಗಲೂ ಚಾಲಕ ಬಸ್ ನಿಲ್ಲಿಸಲು ನಿರಾಕರಿಸಿದ್ದಾನೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಬಿಹಾರ ನೋಂದಣಿಯ ಈ ಬಸ್ ದೆಹಲಿಯಿಂದ ಉತ್ತರ ಪ್ರದೇಶದ ಮಹೋಬಾಗೆ ತೆರಳುತ್ತಿದ್ದು, 35ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ದಟ್ಟ ಹೊಗೆಯಿಂದಾಗಿ ಹಲವರಿಗೆ ಹೊರಬರಲು ಸಾಧ್ಯವಾಗದೆ, 9 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಾಯಗೊಂಡಿದ್ದಾರೆ.
ಆರಂಭಿಕ ತನಿಖೆಯ ಪ್ರಕಾರ, ಬಸ್ನ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಎಂಜಿನ್ನ ಲೂಬ್ರಿಕೇಟಿಂಗ್ ಆಯಿಲ್ಗೆ ಬೆಂಕಿ ತಗುಲಿ, ಕ್ಷಿಪ್ರವಾಗಿ ಇಡೀ ಬಸ್ಗೆ ಬೆಂಕಿ ವ್ಯಾಪಿಸಿದೆ ಎಂದು ತಿಳಿದುಬಂದಿದೆ. ಚಾಲಕ ಹಾಗೂ ನಿರ್ವಾಹಕರು ಅಪಾಯದಿಂದ ಪಾರಾಗಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
‘ಎಲ್ಲೆಡೆ ಹೊಗೆ ಆವರಿಸಿತ್ತು’
ಅಪಘಾತದಿಂದ ಪಾರಾದ 64 ವರ್ಷದ ಮಹಿಳೆಯೊಬ್ಬರು, ಬೆಂಕಿ ಹೊತ್ತಿಕೊಂಡಾಗ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ಪರಸ್ಪರ ತಳ್ಳಿಕೊಂಡು ಹೊರಬರಲು ಯತ್ನಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣ ಹೊಗೆಯಿಂದ ಆವೃತವಾಗಿತ್ತು. ತಮ್ಮ ಪತಿ ಎದ್ದು ಹೊರಬರಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಮತ್ತೊಬ್ಬ ಪ್ರಯಾಣಿಕರ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಬಹುತೇಕರು ನಿದ್ರೆಯಲ್ಲಿದ್ದರು. ತಕ್ಷಣ ಎದ್ದು ಯಾವುದೇ ವಸ್ತುಗಳನ್ನು ತೆಗೆದುಕೊಳ್ಳದೆ, ಮೊಬೈಲ್ ಮಾತ್ರ ಹಿಡಿದು ಬಸ್ನಿಂದ ಹೊರಬಂದಿದ್ದಾಗಿ ತಿಳಿಸಿದ್ದಾರೆ. ಹೊರಬರಲು ಪ್ರಯತ್ನಿಸುತ್ತಿದ್ದ ವೇಳೆ ಜನರು ಪರಸ್ಪರ ತಳ್ಳಾಡಿಕೊಂಡಿದ್ದು, ಕೆಲವರನ್ನು ಇತರರು ಎಳೆದು ಹೊರಗೆ ತಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಬಸ್ ವಿರುದ್ಧ 60ಕ್ಕೂ ಹೆಚ್ಚು ಸಂಚಾರ ದಂಡ
ತನಿಖೆಯ ವೇಳೆ ಈ ಬಸ್ ವಿರುದ್ಧ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ 60ಕ್ಕೂ ಹೆಚ್ಚು ದಂಡಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ. ಅವುಗಳಲ್ಲಿ 20 ದಂಡಗಳು ಇನ್ನೂ ಪಾವತಿಯಾಗಿಲ್ಲ. ವಾಹನದ ದಾಖಲೆಗಳ ಪ್ರಕಾರ, ಬಸ್ನ ಬಾಕಿ ದಂಡದ ಮೊತ್ತ 1.7 ಲಕ್ಷ ರೂ.ಗಳಿಗೂ ಹೆಚ್ಚಿದೆ. ಆಗಸ್ಟ್ 19ರಂದು ದೆಹಲಿಯ ಮಯೂರ್ ವಿಹಾರ್ನಲ್ಲಿ ಸಂಚಾರ ನಿಯಮ ಉಲ್ಲಂಘನೆಗಾಗಿ 18,500 ರೂ. ದಂಡ ವಿಧಿಸಲಾಗಿತ್ತು ಎಂದು ದಾಖಲೆಗಳು ತೋರಿಸಿವೆ.
ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ
ಬಸ್ ಅಗ್ನಿ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

