
ಸಾಂದರ್ಭಿಕ ಚಿತ್ರ
ಗ್ಲೋಬಲ್ ಪಾಸ್ಪೋರ್ಟ್ ಇಂಡೆಕ್ಸ್| ಒಂದು ಸ್ಥಾನ ಕೆಳಗಿಳಿದ ಭಾರತ; ಸ್ವೀಡನ್ಗೆ ಅಗ್ರಸ್ಥಾನ!
ಕೇವಲ ವೀಸಾ ಮುಕ್ತ ಪ್ರಯಾಣದ ಅವಕಾಶವನ್ನು ಮಾತ್ರ ಪರಿಗಣಿಸದೆ, ಜಾಗತಿಕ ಚಲನಶೀಲತೆ, ಹೂಡಿಕೆ ಅವಕಾಶಗಳು ಹಾಗೂ ಜೀವನದ ಗುಣಮಟ್ಟ ಸೇರಿದಂತೆ ಒಟ್ಟು 14 ಪ್ರಮುಖ ಸೂಚಕಗಳನ್ನು ಆಧರಿಸಿ ಒಟ್ಟು 197 ದೇಶಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಜಾಗತಿಕ ಪೌರತ್ವ ಸಲಹಾ ಸಂಸ್ಥೆಯಾದ ‘ಗ್ಲೋಬಲ್ ಸಿಟಿಜನ್ ಸೊಲ್ಯೂಷನ್ಸ್’ (CGS) ಪ್ರಕಟಿಸಿರುವ 5ನೇ ವಾರ್ಷಿಕ ‘ಗ್ಲೋಬಲ್ ಪಾಸ್ಪೋರ್ಟ್ ಸೂಚ್ಯಂಕ’ದಲ್ಲಿ (GPI) ಭಾರತವು ಒಂದು ಸ್ಥಾನ ಕುಸಿತ ಕಂಡಿದ್ದು, 125ನೇ ಶ್ರೇಯಾಂಕ ಪಡೆದುಕೊಂಡಿದೆ. ಕಳೆದ ವರ್ಷ ಭಾರತವು 124ನೇ ಸ್ಥಾನದಲ್ಲಿತ್ತು.
ಕೇವಲ ವೀಸಾ ಮುಕ್ತ ಪ್ರಯಾಣದ ಅವಕಾಶವನ್ನು ಮಾತ್ರ ಪರಿಗಣಿಸದೆ, ಜಾಗತಿಕ ಚಲನಶೀಲತೆ, ಹೂಡಿಕೆ ಅವಕಾಶಗಳು ಹಾಗೂ ಜೀವನದ ಗುಣಮಟ್ಟ ಸೇರಿದಂತೆ ಒಟ್ಟು 14 ಪ್ರಮುಖ ಸೂಚಕಗಳನ್ನು ಆಧರಿಸಿ ಒಟ್ಟು 197 ದೇಶಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತವು ನಮೀಬಿಯಾ ದೇಶಕ್ಕಿಂತ ಕೊಂಚ ಕೆಳಗೆ ಹಾಗೂ ಅಜೆರ್ಬೈಜಾನ್ಗಿಂತ ಸ್ವಲ್ಪ ಮೇಲಿನ ಸ್ಥಾನದಲ್ಲಿದೆ.
2021ಕ್ಕೆ ಹೋಲಿಸಿದರೆ ಸುಧಾರಣೆ
ಪ್ರಸಕ್ತ ವರ್ಷದಲ್ಲಿ ಭಾರತವು ಒಂದು ಸ್ಥಾನ ಕುಸಿದಿದ್ದರೂ, 2021ರ ಶ್ರೇಯಾಂಕಕ್ಕೆ (127ನೇ ಸ್ಥಾನ) ಹೋಲಿಸಿದರೆ ಒಟ್ಟಾರೆ ಪ್ರಗತಿ ಕಂಡುಬಂದಿದೆ. ಸದ್ಯ ಭಾರತೀಯ ಪಾಸ್ಪೋರ್ಟ್ ಹೊಂದಿರುವವರು ಭೂತಾನ್, ಜಮೈಕಾ, ಮಕಾವು, ನೇಪಾಳ, ಪ್ಯಾಲೆಸ್ಟೈನ್, ಟುನೀಶಿಯಾ, ಅಂಗೋಲಾ ಮತ್ತು ಬಾರ್ಬಡೋಸ್ ಸೇರಿದಂತೆ ವಿಶ್ವದ 26 ದೇಶಗಳಿಗೆ ವೀಸಾ ರಹಿತವಾಗಿ ಪ್ರವೇಶಿಸಬಹುದಾಗಿದೆ. ಆದರೆ ಅಮೆರಿಕ, ಜರ್ಮನಿ, ಫ್ರಾನ್ಸ್, ಚೀನಾ ಮತ್ತು ಯುಎಇ ಸೇರಿದಂತೆ ಕನಿಷ್ಠ 88 ದೇಶಗಳಿಗೆ ಭೇಟಿ ನೀಡಲು ವೀಸಾ ಕಡ್ಡಾಯವಾಗಿದೆ.
ವಿವಿಧ ವಿಭಾಗಗಳಲ್ಲಿ ಭಾರತದ ಸಾಧನೆ
ಚಲನಶೀಲತೆ ಸೂಚ್ಯಂಕದ ಒಟ್ಟು ಅಂಕಗಳಲ್ಲಿ ಶೇ. 50 ರಷ್ಟು ಪಾಲು ಹೊಂದಿರುವ ಈ ವಿಭಾಗದಲ್ಲಿ ಭಾರತವು 136ನೇ ಸ್ಥಾನದಲ್ಲಿದೆ. ಇದು ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕಡಿಮೆಯಾಗಿದೆ. ಜೀವನ ಗುಣಮಟ್ಟದ ಸೂಚ್ಯಂಕದಲ್ಲಿ ಭಾರತವು ಬರೋಬ್ಬರಿ 11 ಸ್ಥಾನಗಳ ಜಿಗಿತ ಕಂಡು 118ನೇ ರ್ಯಾಂಕ್ ಪಡೆದಿದೆ. ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ವೈಯಕ್ತಿಕ ಸುರಕ್ಷತೆಯ ಸುಧಾರಣೆಯು ಇದಕ್ಕೆ ಕಾರಣವಾಗಿದೆ. ಹೂಡಿಕೆ ಸೂಚ್ಯಂಕದಲ್ಲಿ ಆರ್ಥಿಕ ಮತ್ತು ವ್ಯಾಪಾರ ಅವಕಾಶಗಳ ಹೂಡಿಕೆ ಸೂಚ್ಯಂಕದಲ್ಲೂ ಭಾರತ 3 ಸ್ಥಾನ ಏರಿಕೆ ಕಂಡು 100ನೇ ಸ್ಥಾನಕ್ಕೇರಿದೆ.
ಟಾಪ್ 10 ರಲ್ಲಿ ಯುರೋಪ್ ದೇಶಗಳೇ ಮೇಲುಗೈ
ಈ ಬಾರಿಯ ಜಾಗತಿಕ ಪಾಸ್ಪೋರ್ಟ್ ಸೂಚ್ಯಂಕದ ಮೊದಲ 10 ಸ್ಥಾನಗಳಲ್ಲಿ ಯುರೋಪಿಯನ್ ರಾಷ್ಟ್ರಗಳೇ ಪ್ರಾಬಲ್ಯ ಸಾಧಿಸಿವೆ. ಸ್ವೀಡನ್ ವಿಶ್ವದ ಅತ್ಯಂತ ಶಕ್ತಿಶಾಲಿ ಪಾಸ್ಪೋರ್ಟ್ ಹೊಂದಿದ ದೇಶವಾಗಿ ಮೊದಲ ಸ್ಥಾನ ಪಡೆದರೆ, ಸ್ವಿಟ್ಜರ್ಲೆಂಡ್, ಫಿನ್ಲ್ಯಾಂಡ್, ಜರ್ಮನಿ ಮತ್ತು ನೆದರ್ಲ್ಯಾಂಡ್ಸ್ ನಂತರದ ಸ್ಥಾನಗಳನ್ನು ಹಂಚಿಕೊಂಡಿವೆ. ಡೆನ್ಮಾರ್ಕ್, ಐರ್ಲೆಂಡ್, ಯುಕೆ ಮತ್ತು ನಾರ್ವೆ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಇನ್ನು 10ನೇ ಸ್ಥಾನದಲ್ಲಿರುವ ಸಿಂಗಾಪುರ, ಮೊದಲ ಹತ್ತು ಸ್ಥಾನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಏಷ್ಯಾದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

