ಗೌತಮ್ ಅದಾನಿಗೆ ಅಮೆರಿಕ ಕೋರ್ಟ್‌ನಲ್ಲಿ ಬಿಗ್ ರಿಲೀಫ್: ಕ್ರಿಮಿನಲ್ ಪ್ರಕರಣ ವಜಾ
x

ಗೌತಮ್ ಅದಾನಿಗೆ ಅಮೆರಿಕ ಕೋರ್ಟ್‌ನಲ್ಲಿ ಬಿಗ್ ರಿಲೀಫ್: ಕ್ರಿಮಿನಲ್ ಪ್ರಕರಣ ವಜಾ

ಭಾರತದಲ್ಲಿ ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ ಲಂಚ ನೀಡುವ ಸಂಚು ನಡೆಸಲಾಗಿದೆ ಎಂಬುದು ಅಮೆರಿಕದ ಆರೋಪವಾಗಿತ್ತು.


ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರಿಗೆ ಅಮೆರಿಕದಲ್ಲಿ ದೊಡ್ಡ ಕಾನೂನು ಗೆಲುವು ಸಿಕ್ಕಿದೆ. ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ಕೋರ್ಟ್ ವಜಾಗೊಳಿಸಿದೆ. ಇದರೊಂದಿಗೆ ಸುಮಾರು ಎರಡು ವರ್ಷಗಳಿಂದ ನಡೆಯುತ್ತಿದ್ದ ಆರೋಪಿತ ವಂಚನೆ ಮತ್ತು ಲಂಚ ಪ್ರಕರಣಕ್ಕೆ ಪೂರ್ಣ ವಿರಾಮ ಬಿದ್ದಿದೆ.

ನ್ಯೂಯಾರ್ಕ್‌ನ ಈಸ್ಟರ್ನ್ ಡಿಸ್ಟ್ರಿಕ್ಟ್‌ನ ಯುಎಸ್ ಡಿಸ್ಟ್ರಿಕ್ಟ್ ಕೋರ್ಟ್, ಅಮೆರಿಕದ ನ್ಯಾಯಾಂಗ ಇಲಾಖೆಯಾದ ಡಿಪಾರ್ಟ್‌ಮೆಂಟ್‌ ಆಫ್‌ ಜಸ್ಟೀಸ್‌ (DoJ) ಸಲ್ಲಿಸಿದ್ದ ರೂಲ್‌ 48(a) ಅರ್ಜಿಯನ್ನು ಅಂಗೀಕರಿಸಿ ಪ್ರಕರಣದ ಆರೋಪಪಟ್ಟಿಯನ್ನು ವಜಾಗೊಳಿಸಿದೆ.

ಏನಿದು ಅದಾನಿ ಪ್ರಕರಣ?

2024ರ ನವೆಂಬರ್‌ನಲ್ಲಿ ಅಮೆರಿಕದ ಪ್ರಾಸಿಕ್ಯೂಟರ್‌ಗಳು ಗೌತಮ್ ಅದಾನಿ, ಸಾಗರ್ ಅದಾನಿ, ಮಾಜಿ ಅದಾನಿ ಗ್ರೀನ್ ಎನರ್ಜಿ ಸಿಇಒ ವ್ನೀತ್ ಜೈನ್ ಸೇರಿದಂತೆ ಕೆಲವರ ವಿರುದ್ಧ ಆರೋಪಗಳನ್ನು ಹೊರಿಸಿದ್ದರು. ಭಾರತದಲ್ಲಿ ಸೌರ ವಿದ್ಯುತ್ ಯೋಜನೆಗಳ ಗುತ್ತಿಗೆ ಪಡೆಯಲು ಸರ್ಕಾರಿ ಅಧಿಕಾರಿಗಳಿಗೆ ಸುಮಾರು 250 ಮಿಲಿಯನ್ ಡಾಲರ್ ಲಂಚ ನೀಡುವ ಸಂಚು ನಡೆಸಲಾಗಿದೆ ಎಂಬುದು ಅಮೆರಿಕದ ಆರೋಪವಾಗಿತ್ತು.

ಈ ಯೋಜನೆಗಳಿಂದ ಮುಂದಿನ ಎರಡು ದಶಕಗಳಲ್ಲಿ 2 ಬಿಲಿಯನ್ ಡಾಲರ್‌ಗೂ ಹೆಚ್ಚು ತೆರಿಗೆ ನಂತರದ ಲಾಭ ಗಳಿಸುವ ನಿರೀಕ್ಷೆಯಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದರು. ಅದೇ ವೇಳೆ, ಅಮೆರಿಕದ ಹೂಡಿಕೆದಾರರನ್ನು ತಪ್ಪುದಾರಿಗೆಳೆದು, ಸಾಲ ಮತ್ತು ಬಾಂಡ್‌ಗಳ ಮೂಲಕ 3 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ಸಂಗ್ರಹಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು.

ಆದರೆ ಅದಾನಿ ಗ್ರೂಪ್ ಈ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ನಿರಂತರವಾಗಿ ತಳ್ಳಿ ಹಾಕಿತ್ತು. ಆರೋಪಗಳು ಆಧಾರರಹಿತವಾಗಿದ್ದು, ಅನ್ವಯವಾಗುವ ಕಾನೂನು ಮತ್ತು ನಿಯಂತ್ರಣ ನಿಯಮಗಳನ್ನು ಪಾಲಿಸಲಾಗಿದೆ ಎಂದು ಸಮೂಹ ಹೇಳಿಕೊಂಡಿತ್ತು.

‘ವಿಥ್‌ ಪ್ರೆಜುಡೈಸ್‌ ಅಂದರೆ ಏನು?

ಕೋರ್ಟ್ ಪ್ರಕರಣವನ್ನು ‘dismissed with prejudice’ ಎಂದು ವಜಾಗೊಳಿಸಿರುವುದು ಅತ್ಯಂತ ಮಹತ್ವದ ಅಂಶ. ಇದರ ಅರ್ಥ, ಇದೇ ಆರೋಪಗಳ ಆಧಾರದ ಮೇಲೆ ಈ ಕ್ರಿಮಿನಲ್ ಪ್ರಕರಣವನ್ನು ಮತ್ತೆ ದಾಖಲಿಸಲು ಅವಕಾಶ ಇರುವುದಿಲ್ಲ. ಅಂದರೆ ಪ್ರಕರಣವನ್ನು ಶಾಶ್ವತವಾಗಿ ಮುಚ್ಚಲಾಗಿದೆ.

ಆದರೆ ಇದನ್ನು ಗಮನಿಸಬೇಕು—ಪ್ರಕರಣ ವಜಾಗೊಂಡಿರುವುದು ಆರೋಪಗಳು ಸತ್ಯ ಅಥವಾ ಸುಳ್ಳು ಎಂದು ಕೋರ್ಟ್ ನೀಡಿರುವ ತೀರ್ಪು ಅಲ್ಲ. ಬದಲಾಗಿ, ಕ್ರಿಮಿನಲ್ ವಿಚಾರಣೆಯನ್ನೇ ಮುಂದುವರಿಸದಂತೆ ಪ್ರಕರಣವನ್ನು ಶಾಶ್ವತವಾಗಿ ಮುಕ್ತಾಯಗೊಳಿಸಲಾಗಿದೆ.

ಅದಾನಿ ಪ್ರತಿಕ್ರಿಯೆ ಏನು?

ಕೋರ್ಟ್ ತೀರ್ಪಿನ ಬಳಿಕ ಗೌತಮ್ ಅದಾನಿ ಸಂತಸ ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯ ಬಗ್ಗೆ ಗೌರವವಿದೆ ಎಂದು ಹೇಳಿರುವ ಅವರು, ಕಠಿಣ ಸಮಯದಲ್ಲೂ ಸತ್ಯ, ನ್ಯಾಯಸಮ್ಮತತೆ ಮತ್ತು ಕಾನೂನಿನ ಆಳ್ವಿಕೆಯ ಮೇಲಿನ ನಂಬಿಕೆ ಅಚಲವಾಗಿತ್ತು ಎಂದು ಹೇಳಿದ್ದಾರೆ.

Read More
Next Story