ಫ್ಲೈದುಬೈ ವಿಮಾನವನ್ನು ಆಯುಧವಾಗಿಸಲು ಯತ್ನಿಸಿದ್ದ ಹಮ್ಮಾಮಿ: ಟೆಲ್ ಅವೀವ್ ದಾಳಿ ಸಂಚಿನ ಸ್ಫೋಟಕ ರಹಸ್ಯಗಳು ಬಯಲು
ಕಾಕ್ಪಿಟ್ನಲ್ಲಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಅಶಕ್ತಗೊಳಿಸಿ, ವಿಮಾನದ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಳ್ಳುವುದು ಹಮ್ಮಾಮಿಯ ಮೊದಲ ಹೆಜ್ಜೆಯಾಗಿತ್ತು
ಫ್ಲೈದುಬೈ ವಿಮಾನದೊಳಗೆ ನಡೆದ ಕಾಕ್ಪಿಟ್ ಹೈಡ್ರಾಮ ಕೇವಲ ಒಂದು ಕ್ಷಣದ ಹುಚ್ಚುತನವಾಗಿರದೆ, ಇಸ್ರೇಲ್ನ ಗಗನಚುಂಬಿ ಕಟ್ಟಡಗಳಿಗೆ ವಿಮಾನವನ್ನು ಡಿಕ್ಕಿ ಹೊಡೆಸುವ ಅತ್ಯಂತ ವ್ಯವಸ್ಥಿತ ಸಂಚಾಗಿತ್ತು ಎಂಬ ಸ್ಫೋಟಕ ಮಾಹಿತಿ ತನಿಖೆಯಿಂದ ಬಯಲಾಗಿದೆ. ದಾಳಿಕೋರ ಸಹ ಪೈಲಟ್ ಹಮ್ಮಾಮ್ ಅಲ್-ಹಮ್ಮಾಮಿ ಹಲವಾರು ತಿಂಗಳುಗಳಿಂದಲೇ ಈ ಭೀಕರ ದಾಳಿಗೆ ಯೋಜನೆ ರೂಪಿಸಿದ್ದ ಎನ್ನುವುದು ಈಗ ಜಗತ್ತಿನೆದುರು ತೆರೆದುಕೊಂಡಿರುವ ಆಘಾತಕಾರಿ ಸತ್ಯ.
ಟೆಲ್ ಅವೀವ್ ಗುರಿಯಾಗಿಸಿಕೊಂಡೇ ಉದ್ಯೋಗಕ್ಕೆ ಅರ್ಜಿ
ಹಮ್ಮಾಮಿಯ ವಿಚಾರಣೆ ಮತ್ತು ತನಿಖೆಯಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಆತ ಮೊದಲೇ ವಿಮಾನವನ್ನು ಆಯುಧವಾಗಿ ಬಳಸುವ ಉದ್ದೇಶ ಹೊಂದಿದ್ದ. ಇಸ್ರೇಲ್ನ ರಾಜಧಾನಿ ಟೆಲ್ ಅವೀವ್ನ ಬೆನ್ ಗುರಿಯನ್ ವಿಮಾನ ನಿಲ್ದಾಣ ಅಥವಾ ಅಲ್ಲಿನ ಗಗನಚುಂಬಿ ಕಟ್ಟಡಗಳ ಮೇಲೆ ವಿಮಾನವನ್ನು ಅಪ್ಪಳಿಸುವುದು ಆತನ ಪ್ರಮುಖ ಗುರಿಯಾಗಿತ್ತು. ಇದಕ್ಕಾಗಿಯೇ ಆತ ಟೆಲ್ ಅವೀವ್ಗೆ ಹಾರಾಟ ನಡೆಸುವ ವಿಮಾನಯಾನ ಸಂಸ್ಥೆಗಳ ಬಗ್ಗೆ ಹುಡುಕಾಟ ನಡೆಸಿ, ಉದ್ದೇಶಪೂರ್ವಕವಾಗಿಯೇ ಫ್ಲೈದುಬೈ ಸಂಸ್ಥೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ ಎಂಬುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ.
ಜುಲೈನಲ್ಲೇ ವಿಫಲವಾಗಿದ್ದ ಪ್ಲ್ಯಾನ್!
ಈ ಭೀಕರ ದಾಳಿಯ ಕಲ್ಪನೆ ಸೆಪ್ಟೆಂಬರ್ 30ರಂದು ಏಕಾಏಕಿ ಹುಟ್ಟಿಕೊಂಡಿದ್ದಲ್ಲ. ಇದೇ ವರ್ಷದ ಜುಲೈ ತಿಂಗಳಲ್ಲೇ ಟೆಲ್ ಅವೀವ್ಗೆ ತೆರಳುತ್ತಿದ್ದ ಮತ್ತೊಂದು ಫ್ಲೈದುಬೈ ವಿಮಾನವನ್ನು ಅಪಹರಿಸಿ, ಡಿಕ್ಕಿ ಹೊಡೆಸಲು ಆತ ಮುಂದಾಗಿದ್ದ. ಆದರೆ, ಆ ವಿಮಾನದ ಸಿಬ್ಬಂದಿಯೊಬ್ಬರು ಆತನಿಗೆ ಪರಿಚಿತರಾಗಿದ್ದ ಕಾರಣ, ಅವರಿಗೆ ಹಾನಿಯಾಗದಿರಲಿ ಎಂಬ ಏಕೈಕ ಉದ್ದೇಶದಿಂದ ಕೊನೆಯ ಕ್ಷಣದಲ್ಲಿ ತನ್ನ ಪ್ಲ್ಯಾನ್ನಿಂದ ಹಿಂದೆ ಸರಿದಿದ್ದ ಎಂದು ವರದಿಗಳು ಹೇಳಿವೆ. ಇದಾದ ಬಳಿಕ ಸೂಕ್ತ ಅವಕಾಶಕ್ಕಾಗಿ ಕಾದು ಕುಳಿತಿದ್ದ ಹಮ್ಮಾಮಿಗೆ, ಸೆಪ್ಟೆಂಬರ್ 30ರಂದು ಮತ್ತೆ ಟೆಲ್ ಅವೀವ್ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಒದಗಿಬಂದಾಗ ತನ್ನ ಭಯಾನಕ ಸಂಚನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾನೆ.
ಕ್ಯಾಪ್ಟನ್ ಮೇಲೆ ಹಲ್ಲೆ ಮತ್ತು 16 ಸಾವಿರ ಅಡಿ ಕುಸಿದ ವಿಮಾನ
ಕಾಕ್ಪಿಟ್ನಲ್ಲಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಅಶಕ್ತಗೊಳಿಸಿ, ವಿಮಾನದ ನಿಯಂತ್ರಣವನ್ನು ಸಂಪೂರ್ಣವಾಗಿ ತನ್ನ ಕೈಗೆ ತೆಗೆದುಕೊಳ್ಳುವುದು ಹಮ್ಮಾಮಿಯ ಮೊದಲ ಹೆಜ್ಜೆಯಾಗಿತ್ತು. ಆದರೆ, ದಾಳಿಗೊಳಗಾದರೂ ಕ್ಯಾಪ್ಟನ್ ಮಚ್ಚಾರ್ ತಮ್ಮೆಲ್ಲ ಶಕ್ತಿ ಬಳಸಿ ಕಾಕ್ಪಿಟ್ನ ತುರ್ತು ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆದುಕೊಳ್ಳುತ್ತಿದ್ದಂತೆ ಒಳನುಗ್ಗಿದ ಪ್ರಯಾಣಿಕರು ಹಮ್ಮಾಮಿಯನ್ನು ಹಿಮ್ಮೆಟ್ಟಿಸಿದರು. ತನ್ನ ಮೊದಲ ಯೋಜನೆ ವಿಫಲವಾಗುತ್ತಿದ್ದಂತೆ 'ಪ್ಲ್ಯಾನ್ ಬಿ' ಜಾರಿಗೊಳಿಸಲು ಮುಂದಾದ ಹಮ್ಮಾಮಿ, ವಿಮಾನವನ್ನು ಏಕಾಏಕಿ ಕೆಳಕ್ಕೆ ತಳ್ಳಲು ಯತ್ನಿಸಿದ. ಆತ ಎಂಜಿನ್ನ ಇಂಧನ ಪೂರೈಕೆ ಸ್ಥಗಿತಗೊಳಿಸಿದ ಪರಿಣಾಮ, ಆಟೋ ಪೈಲಟ್ ವ್ಯವಸ್ಥೆ ಕಡಿತಗೊಂಡು ಕೇವಲ 30 ಸೆಕೆಂಡ್ಗಳಲ್ಲಿ ವಿಮಾನ ಬರೋಬ್ಬರಿ 16 ಸಾವಿರ ಅಡಿಗಳಷ್ಟು ತೀವ್ರವಾಗಿ ಕೆಳಕ್ಕೆ ಕುಸಿಯಿತು. ಈ ವೇಳೆ ತುರ್ತು ದೀಪಗಳು ಹೊತ್ತಿಕೊಂಡಿದ್ದವು.
ಮೂರು ದೇಶಗಳ ಭದ್ರತಾ ವೈಫಲ್ಯ
ಈ ಇಡೀ ಘಟನೆಯಲ್ಲಿ ಅತ್ಯಂತ ಆತಂಕಕಾರಿ ವಿಚಾರವೆಂದರೆ ಭದ್ರತಾ ವ್ಯವಸ್ಥೆಗಳ ವೈಫಲ್ಯ. ಈ ಹಿಂದೆ ಒಮಾನ್ನಲ್ಲಿ ತೀವ್ರಗಾಮಿ ವಿಚಾರಧಾರೆ ಹೊಂದಿದ್ದ ಎಂಬ ಕಾರಣಕ್ಕೆ ಹಮ್ಮಾಮಿಯನ್ನು ವಿಮಾನ ಹಾರಾಟದಿಂದ ದೂರವಿಟ್ಟು, ಕಚೇರಿ ಕೆಲಸಕ್ಕೆ ಸೀಮಿತಗೊಳಿಸಲಾಗಿತ್ತು. ಇಂಥ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಫ್ಲೈದುಬೈನಲ್ಲಿ ಉದ್ಯೋಗ ಪಡೆಯುವಾಗ ಯಾವುದೇ ಭದ್ರತಾ ತಪಾಸಣೆಯಲ್ಲಿ ಸಿಕ್ಕಿಬೀಳದಿರುವುದು ದೊಡ್ಡ ಪ್ರಶ್ನೆಯಾಗಿದೆ. ಜತೆಗೆ, ಹಾರಾಟಕ್ಕೂ ಮುನ್ನವೇ ಸಿಬ್ಬಂದಿ ಪಟ್ಟಿಯನ್ನು ಇಸ್ರೇಲ್ಗೆ ಕಳುಹಿಸಲಾಗಿದ್ದರೂ, ಆತನನ್ನು ಗುರುತಿಸುವಲ್ಲಿ ಮೂರೂ ದೇಶಗಳ ಭದ್ರತಾ ಸಂಸ್ಥೆಗಳು ಎಡವಿರುವುದು ತನಿಖೆಯಲ್ಲಿ ಬಹುದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಹಮ್ಮಾಮಿಯ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆಯೇ ಅಥವಾ ಇದೊಂದು ಒಂಟಿ ತೋಳದ ದಾಳಿಯೇ ಎನ್ನುವುದರ ಕುರಿತು ತನಿಖೆ ಮುಂದುವರಿದಿದೆ.

