
Vote Counting Live| ಬಿಜೆಪಿ ಅಬ್ಬರಕ್ಕೆ ಟಿಎಂಸಿ ಕೋಟೆ ಛಿದ್ರ, ತಮಿಳುನಾಡಿನಲ್ಲಿ ವಿಜಯ್ ಅಬ್ಬರ; ಕೇರಳದಲ್ಲಿ ಎಡಪಕ್ಷಗಳನ್ನು ಮಣಿಸಿದ ಕಾಂಗ್ರೆಸ್
ತಮಿಳುನಾಡು, ಪಶ್ಚಿಮ ಬಂಗಾಳ ಸೇರಿದಂತೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗುತ್ತಿದೆ. 824 ಕ್ಷೇತ್ರಗಳ ಮತ ಎಣಿಕೆಯ ಸಂಪೂರ್ಣ ವಿವರ ಇಲ್ಲಿದೆ.
ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಗಳ ಚುನಾವನಾ ಫಲಿತಾಂಶ ತೀವ್ರ ಕುತೂಹಲ ಮೂಡಿಸಿದೆ. ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆ ಸೇರಿ ಐದು ರಾಜ್ಯಗಳ ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆದಿದೆ. ಮಹತ್ವದ ವಿದ್ಯಾಮಾನದಲ್ಲಿ ಪಶ್ಚಿಮ ಬಂಗಾಳದಲ್ಲಿ ಕಮಲ ಅದ್ವಿತೀಯ ಸಾಧನೆ ಮಾಡಿದೆ. ಬಿಜೆಪಿ 202 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಟಿಎಂಸಿ ಕೇವಲ 85 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ತಮಿಳುನಾಡಿನ 234 ಸ್ಥಾನಗಳಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದ್ದು, 111 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಡಿಎಂಕೆ 71, ಎಐಎಡಿಎಂಕೆ 51 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ 89 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಎಲ್‌ಡಿಎಫ್ 35 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಸ್ಸಾಂನಲ್ಲಿ 101 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ. ಕಾಂಗ್ರೆಸ್ 22 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪುದುಚೇರಿ (UT)ಯಲ್ಲಿ ಎನ್‌ಆರ್‌ಸಿ ಮೈತ್ರಿಕೂಟ 15 ಸ್ಥಾನ, ಕಾಂಗ್ರೆಸ್ 8 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಫಲಿತಾಂಶದಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿನ ಲೆಕ್ಕಾಚಾರದ ಲೈವ್ ಇಲ್ಲಿದೆ.
Live Updates
- 4 May 2026 12:29 PM IST
ಖರಗ್‌ಪುರ ಸದರ್ ಕ್ಷೇತ್ರದಲ್ಲಿ ಮಾಜಿ ಬಿಜೆಪಿ ಸಂಸದ ದಿಲೀಪ್ ಘೋಷ್ ಮುನ್ನಡೆ
ಪಶ್ಚಿಮ ಬಂಗಾಳದ ಪಶ್ಚಿಮ ಮೇದಿನಿಪುರ ಜಿಲ್ಲೆಯ ಖರಗ್‌ಪುರ ಸದರ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಬಿಜೆಪಿ ಸಂಸದ ದಿಲೀಪ್ ಘೋಷ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ತೃಣಮೂಲ ಕಾಂಗ್ರೆಸ್‌ನ (TMC) ಪ್ರದೀಪ್ ಸರ್ಕಾರ್ ಅವರಿಗಿಂತ 3,156 ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷರೂ ಆಗಿರುವ ಘೋಷ್ ಅವರು 6,229 ಮತಗಳನ್ನು ಪಡೆದಿದ್ದರೆ, ಸರ್ಕಾರ್ ಅವರು 3,073 ಮತಗಳನ್ನು ಪಡೆದಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಮಧುಸೂದನ್ ರಾಯ್ ಕೇವಲ 344 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನದಲ್ಲಿದ್ದಾರೆ.
ಈವರೆಗೆ ಒಂದು ಸುತ್ತಿನ ಮತ ಎಣಿಕೆ ಮುಗಿದಿದ್ದು, ಇನ್ನೂ 19 ಸುತ್ತುಗಳ ಎಣಿಕೆ ಬಾಕಿ ಇದೆ. ಘೋಷ್ ಮತ್ತು ಸರ್ಕಾರ್ ಇಬ್ಬರೂ ಈ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಅಲ್ಲದೆ, ಘೋಷ್ ಅವರು ಈ ಹಿಂದೆ ಮೇದಿನಿಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
- 4 May 2026 12:15 PM IST
ಬಹುಮತದ ಗಡಿ ದಾಟಿದ ಕಾಂಗ್ರೆಸ್ ಮೈತ್ರಿಕೂಟ; ಮತದಾರರಿಗೆ ಸನ್ನಿ ಜೋಸೆಫ್ ಧನ್ಯವಾದ
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸನ್ನಿ ಜೋಸೆಫ್ ಅವರು ಮಾತನಾಡಿ, "ವಿಧಾನಸಭಾ ಚುನಾವಣೆಯಲ್ಲಿ ನಮಗೆ ಅಭೂತಪೂರ್ವ ಜಯ ನೀಡಿದ ಕೇರಳದ ಜನತೆಗೆ ನಾನು ಕೃತಜ್ಞನಾಗಿದ್ದೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನಡೆದ ಫಲಿತಾಂಶವೇ ಇಲ್ಲಿಯೂ ಪುನರಾವರ್ತನೆಯಾಗಿದೆ. ಇದು ಎಲ್‌ಡಿಎಫ್‌ನ ಜನವಿರೋಧಿ ಚಟುವಟಿಕೆಗಳು ಮತ್ತು ನೀತಿಗಳ ವಿರುದ್ಧ ಜನತೆ ನೀಡಿದ ಸ್ಪಷ್ಟ ತೀರ್ಪಾಗಿದೆ," ಎಂದು ಹೇಳಿದ್ದಾರೆ.
ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಬಹುಮತದ ಗಡಿಯನ್ನು ದಾಟಿದ್ದು, 83 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
- 4 May 2026 12:11 PM IST
ಆರಂಭಿಕ ಹಿನ್ನಡೆಯ ನಂತರ ಮಮತಾ ಮುನ್ನಡೆ; ಸುವೇಂದುಗಿಂತ 8,482 ಮತಗಳ ಅಂತರದಿಂದ ಮುಂದೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಸೋಮವಾರ ಭವಾನಿಪುರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ನಾಲ್ಕನೇ ಸುತ್ತಿನ ನಂತರ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಸುವೇಂದು ಅಧಿಕಾರಿ ಅವರಿಗಿಂತ 8,482 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ.
ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ತೀವ್ರ ಕುತೂಹಲ ಕೆರಳಿಸಿದ್ದ ಈ ಪೈಪೋಟಿಯಲ್ಲಿ ಮಮತಾ ಬ್ಯಾನರ್ಜಿ 17,244 ಮತಗಳನ್ನು ಪಡೆದರೆ, ಸುವೇಂದು ಅಧಿಕಾರಿ 8,762 ಮತಗಳನ್ನು ಪಡೆದಿದ್ದಾರೆ. ಆರಂಭಿಕ ಹಂತದಲ್ಲಿ ಈ ಸ್ಪರ್ಧೆಯು ಏರಿಳಿತಗಳಿಂದ ಕೂಡಿತ್ತು. ಮೊದಲ ಸುತ್ತಿನಲ್ಲಿ ಬ್ಯಾನರ್ಜಿ 3,666 ಮತಗಳನ್ನು ಪಡೆಯುವ ಮೂಲಕ 1,996 ಮತಗಳ ಮುನ್ನಡೆ ಸಾಧಿಸಿದ್ದರು. ಆದರೆ, ಎರಡನೇ ಸುತ್ತಿನಲ್ಲಿ ತಿರುಗೇಟು ನೀಡಿದ ಬಿಜೆಪಿ ನಾಯಕ ಸುವೇಂದು ಅಧಿಕಾರಿ 1,558 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ನಂತರ ಮೂರನೇ ಸುತ್ತಿನಲ್ಲಿ ಮತ್ತೆ ಪುಟಿದೆದ್ದ ಬ್ಯಾನರ್ಜಿ 898 ಮತಗಳ ಮುನ್ನಡೆ ಗಳಿಸಿದರು ಮತ್ತು ನಾಲ್ಕನೇ ಸುತ್ತಿನ ವೇಳೆಗೆ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.
- 4 May 2026 12:07 PM IST
ಬೆಂಬಲಿಗರ ಪಾಲಿಗೆ 'ದಳಪತಿ' ವಿಜಯ್ ಈಗ 'ಮುಖ್ಯಮಂತ್ರಿ' ವಿಜಯ್
ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳ ಪೈಕಿ, ನಟ-ರಾಜಕಾರಣಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷವು ಬಹುಮತಕ್ಕೆ ಬೇಕಾದ 118 ಸ್ಥಾನಗಳ ಸಮೀಪಕ್ಕೆ ಮುನ್ನುಗ್ಗುತ್ತಿದ್ದಂತೆ, ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
'ಟಿವಿಕೆ' ಮತ್ತು 'ವಿಜಯ್' ಎಂಬ ಘೋಷಣೆಗಳ ನಡುವೆ, ಇಲ್ಲಿನ ಸಮೀಪದ ಪಣೈಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯ ಹೊರಗೆ ಜಮಾಯಿಸಿದ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು. ಸಿನಿಮಾಗಳಲ್ಲಿ 'ದಳಪತಿ' (ಸೇನಾಧಿಪತಿ) ಎಂದೇ ಜನಪ್ರಿಯರಾಗಿರುವ ತಮ್ಮ ಪಕ್ಷದ ಸಂಸ್ಥಾಪಕನನ್ನು "ಮುಖ್ಯಮಂತ್ರಿ ವಿಜಯ್" ಎಂದು ಘೋಷಣೆ ಕೂಗುತ್ತಾ ಸ್ವಾಗತಿಸಿದರು.
ಇದೇ ವೇಳೆ, ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ಮತ್ತು ಕುಟುಂಬದ ಇತರ ಸದಸ್ಯರು ಹರ್ಷ ವ್ಯಕ್ತಪಡಿಸುತ್ತಿರುವ ದೃಶ್ಯಗಳು ಕೆಲವು ದೂರದರ್ಶನ ವಾಹಿನಿಗಳಲ್ಲಿ ಪ್ರಸಾರವಾಗಿವೆ. ಒಟ್ಟು 234 ಕ್ಷೇತ್ರಗಳ ಪೈಕಿ ವಿಜಯ್ ಅವರ ಪಕ್ಷವು ಸದ್ಯ ಕನಿಷ್ಠ 108 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
- 4 May 2026 12:05 PM IST
ಕೊತ್ತೂರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೇ ಶಾಕ್; ಟಿವಿ ಕೆ ಅಭ್ಯರ್ಥಿ ವಿರುದ್ಧ ಹಿನ್ನಡೆ
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸೇರಿದಂತೆ ಡಿಎಂಕೆ ಪಕ್ಷದ 14 ಸಚಿವರು ಮೂರನೇ ಸುತ್ತಿನ ಮತ ಎಣಿಕೆಯ ನಂತರವೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ, ಕೊಳತ್ತೂರು ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ಟಾಲಿನ್ ಅವರು 2,277 ಮತಗಳ ಹಿನ್ನಡೆಯಲ್ಲಿದ್ದಾರೆ. ಅದೇ ರೀತಿ, ಚೇಪಾಕ್-ತಿರುವಲ್ಲಿಕೇಣಿ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು 1,244 ಮತಗಳ ಹಿನ್ನಡೆ ಕಂಡಿದ್ದಾರೆ. ಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ಹಿರಿಯ ಸಚಿವ ದುರೈ ಮುರುಗನ್ ಅವರು ಕಾಟ್ಪಾಡಿ ವಿಧಾನಸಭಾ ಕ್ಷೇತ್ರದಲ್ಲಿ 2,293 ಮತಗಳಿಂದ ಹಿಂದೆ ಬಿದ್ದಿದ್ದಾರೆ. ಇವರೊಂದಿಗೆ ಸಚಿವರಾದ ಪಿ. ಗೀತಾ ಜೀವನ್ (ತೂತುಕುಡಿ), ಮಾ. ಸುಬ್ರಮಣಿಯನ್ (ಸೈದಾ ಪೇಟೆ), ಇ.ವಿ. ವೇಲು (ತಿರುವಣ್ಣಾಮಲೈ), ಪಿ.ಕೆ. ಶೇಖರ್ ಬಾಬು (ಹಾರ್ಬರ್), ಟಿ.ಎಂ. ಅನ್ಬರಸನ್ (ಆಲಂದೂರು), ಕೆ.ಎನ್. ನೆಹರು (ತಿರುಚ್ಚಿ ಪಶ್ಚಿಮ), ಗೋವಿ ಚೆಜಿಯನ್ (ತಿರುವಿಡೈ ಮರುದೂರ್), ನಾಸರ್ (ಆವಡಿ), ಮತಿವೇಂದನ್ (ರಾಸಿಪುರಂ), ಟಿ.ಆರ್.ಬಿ. ರಾಜಾ (ಮನ್ನಾರ್ಗುಡಿ), ಕೆ.ಕೆ.ಎಸ್.ಎಸ್.ಆರ್. ರಾಮಚಂದ್ರನ್ ಮತ್ತು ತಿರುಚ್ಚುಳಿಯ ತಂಗಂ ತೇನರಸು ಕೂಡ ಹಿನ್ನಡೆಯಲ್ಲಿದ್ದಾರೆ.
- 4 May 2026 12:03 PM IST
2026ರ ವಿಧಾನಸಭಾ ಚುನಾವಣೆ ಫಲಿತಾಂಶ: ಪ್ರಮುಖ ರಾಜ್ಯಗಳ ಇತ್ತೀಚಿನ ಮುನ್ನಡೆ ವಿವರ
ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಅಚ್ಚರಿಯ ಮುನ್ನಡೆ ಕಾಯ್ದುಕೊಂಡಿದೆ. ಕೇರಳದಲ್ಲಿ ಯುಡಿಎಫ್ (UDF) ಅಧಿಕಾರದತ್ತ ಮುನ್ನಗ್ಗುತ್ತಿದೆ.
ತಮಿಳುನಾಡು (ಒಟ್ಟು ಸ್ಥಾನಗಳು: 234)
ನಟ ವಿಜಯ್ ಅವರ ಪಕ್ಷವು ಮೊದಲ ಚುನಾವಣೆಯಲ್ಲೇ ದೊಡ್ಡ ಮಟ್ಟದ ಪ್ರಭಾವ ಬೀರಿದೆ.
ಟಿವಿಕೆ: 108
ಅಇಅಡಿಎಂಕೆ ಮೈತ್ರಿಕೂಟ: 73
ಡಿಎಂಕೆ ಮೈತ್ರಿಕೂಟ: 52
ಪಶ್ಚಿಮ ಬಂಗಾಳ (ಒಟ್ಟು ಸ್ಥಾನಗಳು: 294
ಬಂಗಾಳದಲ್ಲಿ ಬಿಜೆಪಿ ಬಹುಮತದ ಗಡಿ ದಾಟಿ ಮುನ್ನುಗ್ಗುತ್ತಿದೆ.
ಬಿಜೆಪಿ ಮೈತ್ರಿಕೂಟ: 194
ಟಿಎಂಸಿ ಮೈತ್ರಿಕೂಟ: 96
ಕೇರಳ (ಒಟ್ಟು ಸ್ಥಾನಗಳು: 140
ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಲೆ ಕಂಡುಬರುತ್ತಿದೆ.
UDF (ಯುಡಿಎಫ್): 83
LDF (ಎಲ್ಡಿಎಫ್): 42
BJP+ (ಬಿಜೆಪಿ ಮೈತ್ರಿಕೂಟ):02
ಅಸ್ಸಾಂ (ಒಟ್ಟು ಸ್ಥಾನಗಳು: 126
ಅಸ್ಸಾಂನಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯುವತ್ತ ಸಾಗಿದೆ.
BJP+ (ಬಿಜೆಪಿ ಮೈತ್ರಿಕೂಟ):99
Congress (ಕಾಂಗ್ರೆಸ್): 25
AIUDF+ (ಎಐಯುಡಿಎಫ್): 02
ಪುದುಚೇರಿ (ಒಟ್ಟು ಸ್ಥಾನಗಳು: 30
NRC+ (ಎನ್ಆರ್ ಸಿ ಮೈತ್ರಿಕೂಟ):15
Congress+ (ಕಾಂಗ್ರೆಸ್ ಮೈತ್ರಿಕೂಟ): 11
- 4 May 2026 11:54 AM IST
ಅಸ್ಸಾಂ ವಿಧಾನಸಭಾ ಚುನಾವಣೆ: ಮುನ್ನಡೆಯತ್ತ ಪ್ರಮುಖ ಸಚಿವರು
ಚುನಾವಣಾ ಆಯೋಗವು ಹಂಚಿಕೊಂಡಿರುವ ಟ್ರೆಂಡ್‌ಗಳ ಪ್ರಕಾರ, ನಿರ್ಗಮಿತ ಬಿಜೆಪಿ ನೇತೃತ್ವದ ಅಸ್ಸಾಂ ಸರ್ಕಾರದ ಬಹುತೇಕ ಸಚಿವರು ಮುನ್ನಡೆಯಲ್ಲಿದ್ದಾರೆ. ಅಸೋಮ್ ಗಣ ಪರಿಷತ್ (ಎಜಿಪಿ) ಅಧ್ಯಕ್ಷ ಮತ್ತು ಕೃಷಿ ಸಚಿವ ಅತುಲ್ ಬೋರಾ ಅವರು ಬೊಕಾಖಾತ್ ಕ್ಷೇತ್ರದಿಂದ ತಮ್ಮ ಹತ್ತಿರದ ರೈಜೋರ್ ದಳದ ಅಭ್ಯರ್ಥಿಗಿಂತ 3,000 ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ.
ಒಟ್ಟು 16 ಸುತ್ತುಗಳ ಎಣಿಕೆಯಲ್ಲಿ ಮೊದಲ ಸುತ್ತಿನ ಅಂತ್ಯಕ್ಕೆ ಬೋರಾ ಅವರು ರೈಜೋರ್ ದಳದ ಹರಿ ಪ್ರಸಾದ್ ಸೈಕಿಯಾ ಅವರ 1,440 ಮತಗಳ ವಿರುದ್ಧ 4,682 ಮತಗಳನ್ನು ಪಡೆದಿದ್ದಾರೆ. ಮುನ್ನಡೆಯಲಿರುವ ನಿರ್ಗಮಿತ ಸರ್ಕಾರದ ಇತರ ಸಚಿವರಲ್ಲಿ ತಿಹು ಕ್ಷೇತ್ರದಿಂದ ಚಂದ್ರ ಮೋಹನ್ ಪಟೋವರಿ ಸೇರಿದ್ದಾರೆ. ಬಿಜೆಪಿ ನಾಯಕ ಪಟೋವರಿ ಅವರು ಒಟ್ಟು 19 ಸುತ್ತುಗಳ ಎಣಿಕೆಯಲ್ಲಿ ಎರಡನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್‌ನ ರತುಲ್ ಪಟೋವರಿ ಅವರ 5,523 ಮತಗಳ ವಿರುದ್ಧ 10,991 ಮತಗಳನ್ನು ಪಡೆಯುವ ಮೂಲಕ 5,468 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪಟೋವರಿ ಅವರು ಧರ್ಮಾಪುರ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ, ಇದನ್ನು ಡಿಲಿಮಿಟೇಶನ್ ಪ್ರಕ್ರಿಯೆಯಲ್ಲಿ ರದ್ದುಗೊಳಿಸಲಾಗಿತ್ತು.
2023 ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆಯ ನಂತರ ಮೊದಲ ಬಾರಿಗೆ 126 ಸದಸ್ಯರ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಎಜಿಪಿ ನಾಯಕ ಮತ್ತು ಸಚಿವ ಕೇಶಬ್ ಮಹಂತ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಜಿತೇನ್ ಗೌರ್ ಅವರಿಗಿಂತ 8,800 ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿಯ ಮತ್ತೊಬ್ಬ ಸಚಿವ ರಂಜಿತ್ ಕುಮಾರ್ ದಾಸ್ ನಾಲ್ಕನೇ ಸುತ್ತಿನ ಎಣಿಕೆಯ ನಂತರ ಭವಾನಿಪುರ-ಸೋರ್ಭೋಗ್ ಕ್ಷೇತ್ರದಲ್ಲಿ 658 ಮತಗಳ ಮುನ್ನಡೆಯಲ್ಲಿದ್ದಾರೆ.
ಅವರು ಇದುವರೆಗೆ 19,444 ಮತಗಳನ್ನು ಪಡೆದಿದ್ದರೆ, ಅವರ ಹತ್ತಿರದ ಪ್ರತಿಸ್ಪರ್ಧಿ ಸಿಪಿಐ(ಎಂ) ನ ಮನೋರಂಜನ್ ತಾಲುಕ್ದಾರ್ 18,786 ಮತಗಳನ್ನು ಪಡೆದಿದ್ದಾರೆ. ದಾಸ್ ಅವರು ನಿರ್ಗಮಿತ ವಿಧಾನಸಭೆಯಲ್ಲಿ ಪಟಾಚಾರ್‌ಕುಚಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು, ತಾಲುಕ್ದಾರ್ ಅವರು ಸೋರ್ಭೋಗ್‌ನ ಹಾಲಿ ಶಾಸಕರಾಗಿದ್ದಾರೆ. ಡಿಲಿಮಿಟೇಶನ್ ಸಮಯದಲ್ಲಿ ಎರಡೂ ಕ್ಷೇತ್ರಗಳ ಗಡಿ ಮತ್ತು ನಾಮಕರಣವನ್ನು ಬದಲಾಯಿಸಲಾಗಿತ್ತು. ಹಣಕಾಸು ಸಚಿವ ಅಜಂತಾ ನಿಯೋಗ್ ಅವರು ತಮ್ಮ ಗೋಲಾಘಾಟ್ ಕ್ಷೇತ್ರದಿಂದ 11,000 ಕ್ಕೂ ಹೆಚ್ಚು ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಅವರ ಹತ್ತಿರದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಿಟುಪನ್ ಸೈಕಿಯಾ. ಜಾಗಿರೋಡ್ ಕ್ಷೇತ್ರದಲ್ಲಿ, ಕ್ಯಾಬಿನೆಟ್ ಸಚಿವ ಪಿಜುಶ್ ಹಜಾರಿಕಾ (ಬಿಜೆಪಿ) ಒಟ್ಟು 24 ಸುತ್ತುಗಳ ಎಣಿಕೆಯಲ್ಲಿ ಐದನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್‌ನ ಬುಬುಲ್ ದಾಸ್ ವಿರುದ್ಧ ಸುಮಾರು 16,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಅವರ ಕ್ಯಾಬಿನೆಟ್ ಸಹೋದ್ಯೋಗಿ ಅಶೋಕ್ ಸಿಂಘಾಲ್ (ಬಿಜೆಪಿ) ಮೊದಲ ಸುತ್ತಿನ ಎಣಿಕೆಯ ಕೊನೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬತಾಶ್ ಒರಾಂಗ್ ವಿರುದ್ಧ ಧೇಕಿಯಾಜುಲಿ ಕ್ಷೇತ್ರದಲ್ಲಿ 3,230 ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದಾರೆ.
ಸಚಿವ ರನೋಜ್ ಪೆಗು (ಬಿಜೆಪಿ) ಕೂಡ ಧೇಮಾಜಿ ಕ್ಷೇತ್ರದಲ್ಲಿ ಆರು ಸುತ್ತಿನ ಎಣಿಕೆಯ ನಂತರ ಕಾಂಗ್ರೆಸ್‌ನ ಸೈಲೆನ್ ಸೋನೋವಾಲ್ ಅವರಿಗಿಂತ 15,000 ಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿದ್ದಾರೆ. ಆದಾಗ್ಯೂ, ಹಫ್ಲಾಂಗ್‌ನಿಂದ ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ಕಾಂಗ್ರೆಸ್‌ಗೆ ಸೇರಿದ ಕ್ಯಾಬಿನೆಟ್ ಸಚಿವೆ ನಂದಿತಾ ಗರ್ಲೋಸಾ ಅವರು ಇಸಿ ಡೇಟಾದ ಪ್ರಕಾರ ಹಿನ್ನಡೆಯಲ್ಲಿದ್ದಾರೆ. ಅವರು ಬಿಜೆಪಿ ಅಭ್ಯರ್ಥಿ ರೂಪಾಲಿ ಲಾಂಘತಾಸಾ ವಿರುದ್ಧ ಸುಮಾರು 5,000 ಮತಗಳಿಂದ ಹಿಂದೆ ಬಿದ್ದಿದ್ದಾರೆ.
- 4 May 2026 11:34 AM IST
ತಮಿಳುನಾಡಿನಲ್ಲಿ ಟಿವಿಕೆ ಮುನ್ನಡೆ; ಬಂಗಾಳದಲ್ಲಿ 190ರ ಗಡಿ ದಾಟಿದ ಬಿಜೆಪಿ
ತಮಿಳುನಾಡು
ಟಿವಿಕೆ (TVK): 112
ಎಐಎಡಿಎಂಕೆ ಮೈತ್ರಿಕೂಟ (AIADMK+): 71
ಡಿಎಂಕೆ ಮೈತ್ರಿಕೂಟ (DMK+): 50
ಪಶ್ಚಿಮ ಬಂಗಾಳ
ಬಿಜೆಪಿ ಮೈತ್ರಿಕೂಟ (BJP+): 191
ಟಿಎಂಸಿ (TMC+): 100
ಕೇರಳ
ಯುಡಿಎಫ್ (UDF): 84
ಎಲ್ಡಿಎಫ್ (LDF): 41
ಬಿಜೆಪಿ ಮೈತ್ರಿಕೂಟ (BJP+): 02
ಅಸ್ಸಾಂ
ಬಿಜೆಪಿ ಮೈತ್ರಿಕೂಟ (BJP+): 98
ಕಾಂಗ್ರೆಸ್ (Congress): 25
ಎಐಯುಡಿಎಫ್ (AIUDF+): 02
ಪುದುಚೇರಿ
ಎನ್ಆರ್ಸಿ ಮೈತ್ರಿಕೂಟ (NRC+): 17
ಟಿವಿಕೆ ಮೈತ್ರಿಕೂಟ (TVK+): 04
ಕಾಂಗ್ರೆಸ್ ಮೈತ್ರಿಕೂಟ (Congress+): 03
- 4 May 2026 11:07 AM IST
ತಮಿಳುನಾಡು: ವಿಜಯ್ ಅವರ ಟಿವಿಎಕೆ ಮುನ್ನಡೆ
ತಮಿಳುನಾಡು: ಟಿವಿಎಕೆ 106, ಎಐಎಡಿಎಂಕೆ ಮೈತ್ರಿಕೂಟ 78, ಡಿಎಂಕೆ ಮೈತ್ರಿಕೂಟ 48.
ಪಶ್ಚಿಮ ಬಂಗಾಳ: ಬಿಜೆಪಿ ಮೈತ್ರಿಕೂಟ 181, ಟಿಎಂಸಿ ಮೈತ್ರಿಕೂಟ 110.
ಕೇರಳ: ಯುಡಿಎಫ್ 86, ಎಲ್ಡಿಎಫ್ 41, ಬಿಜೆಪಿ ಮೈತ್ರಿಕೂಟ 1.
ಅಸ್ಸಾಂ: ಬಿಜೆಪಿ ಮೈತ್ರಿಕೂಟ 97, ಕಾಂಗ್ರೆಸ್ 26, ಎಐಯುಡಿಎಫ್ ಮೈತ್ರಿಕೂಟ 2.
ಪುದುಚೇರಿ: ಎನ್ಆರ್ಸಿ ಮೈತ್ರಿಕೂಟ 17, ಟಿವಿಎಕೆ ಮೈತ್ರಿಕೂಟ 4, ಕಾಂಗ್ರೆಸ್ ಮೈತ್ರಿಕೂಟ 3.
- 4 May 2026 11:01 AM IST
3ನೇ ಸ್ಥಾನಕ್ಕೆ ಕುಸಿದ ಡಿಎಂಕೆ; ಪ್ರಧಾನ ಕಚೇರಿಯಲ್ಲಿ ಪೆಂಡಾಲ್‌ಗಳ ತೆರವು
ತಮಿಳುನಾಡು ವಿಧಾನಸಭೆ ಚುನಾವಣೆಯ ಆರಂಭಿಕ ಮತ ಎಣಿಕೆ ಟ್ರೆಂಡ್‌ಗಳಲ್ಲಿ ಆಡಳಿತಾರೂಢ ಡಿಎಂಕೆ ಪಕ್ಷವು ಅನಿರೀಕ್ಷಿತವಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ಪ್ರಧಾನ ಕಚೇರಿ ಅಣ್ಣಾ ಅರಿವಾಲಯಂನಲ್ಲಿ ಹಾಕಲಾಗಿದ್ದ ಸಂಭ್ರಮಾಚರಣೆಯ ಪೆಂಡಾಲ್‌ಗಳನ್ನು ಸೋಮವಾರ ಬೆಳಿಗ್ಗೆ ತೆರವುಗೊಳಿಸಲಾಗುತ್ತಿದ್ದು, ಅಲ್ಲಿನ ವಾತಾವರಣ ಮೌನಕ್ಕೆ ಶರಣಾಗಿದೆ.
ಡಿಎಂಕೆ ನೇತೃತ್ವದ ಮೈತ್ರಿಕೂಟ ಹಿನ್ನಡೆ ಅನುಭವಿಸುತ್ತಿದ್ದರೆ, ಟಿವಿಕೆ ಪಕ್ಷದ ಭದ್ರಕೋಟೆಗಳಾದ ಪಣೈಯೂರ್ ಮತ್ತು ನೀಲಂಕರೈನಲ್ಲಿ ಸಂಪೂರ್ಣ ಭಿನ್ನವಾದ ಚಿತ್ರಣ ಕಂಡುಬರುತ್ತಿದೆ. ನೀಲಂಕರೈನಲ್ಲಿರುವ ನಟ ಹಾಗೂ ರಾಜಕಾರಣಿ ವಿಜಯ್ ಅವರ ನಿವಾಸ ಮತ್ತು ಪಣೈಯೂರ್‌ನಲ್ಲಿರುವ ಟಿವಿಕೆ ಕಚೇರಿಯ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್ ಪ್ರಕಾರ, ಚೊಚ್ಚಲ ಚುನಾವಣೆಯಲ್ಲೇ ಭರ್ಜರಿ ಪ್ರದರ್ಶನ ನೀಡುತ್ತಿರುವ ವಿಜಯ್ ಅವರ ಪಕ್ಷವು 97 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಎಐಎಡಿಎಂಕೆ ಜೊತೆಗೆ ತೀವ್ರ ಪೈಪೋಟಿ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನೂರಾರು ಉತ್ಸಾಹಿ ಬೆಂಬಲಿಗರು ಅಲ್ಲಿ ಜಮಾಯಿಸಲು ಪ್ರಾರಂಭಿಸಿದ್ದಾರೆ.
ಪ್ರಸ್ತುತ ಲಭ್ಯವಿರುವ ಅಂಕಿಅಂಶಗಳು ರಾಜ್ಯದ ರಾಜಕೀಯ ಭೂಪಟದಲ್ಲಿ ದೊಡ್ಡ ಬದಲಾವಣೆಯ ಮುನ್ಸೂಚನೆಯನ್ನು ನೀಡುತ್ತಿದ್ದು, ಡಿಎಂಕೆ ಪಕ್ಷದ ಪ್ರಮುಖ ನಾಯಕರು ತಮ್ಮ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ರಾಜ್ಯಾದ್ಯಂತ ಇರುವ 62 ಮತ ಎಣಿಕೆ ಕೇಂದ್ರಗಳಿಂದ ಫಲಿತಾಂಶದ ಟ್ರೆಂಡ್‌ಗಳು ಹೊರಬರುತ್ತಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ರಾಜಧಾನಿ ಚೆನ್ನೈನಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

