
ಪಂಚರಾಜ್ಯ ಚುನಾವಣೆ
Live| ಪಂಚರಾಜ್ಯ ಚುನಾವಣೋತ್ತರ ಸಮೀಕ್ಷೆ; ಪ.ಬಂಗಾಳ- ಬಿಜೆಪಿ, ಕೇರಳ- ಯುಡಿಎಫ್, ತ.ನಾಡಿನಲ್ಲಿ ಮತ್ತೆ ಡಿಎಂಕೆ
ಕೋಲ್ಕತ್ತಾ, ಹೌರಾ, ಉತ್ತರ ಮತ್ತು ದಕ್ಷಿಣ 24 ಪರಗಣಗಳು, ನಾಡಿಯಾ, ಹೂಗ್ಲಿ ಮತ್ತು ಪುರ್ಬಾ ಬರ್ಧಮಾನ್ ಸೇರಿದಂತೆ ರಾಜ್ಯದ ರಾಜಕೀಯ ಮತ್ತು ಚುನಾವಣಾ ಕೇಂದ್ರವಾಗಿರುವ ಜಿಲ್ಲೆಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಯಿತು.
2026 ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯು ಮುಕ್ತಾಯದ ಹಂತಕ್ಕೆ ತಲುಪಿದ್ದು, ಪಶ್ಚಿಮ ಬಂಗಾಳದಲ್ಲಿ ಅಂತಿಮ ಹಂತದ ಮತದಾನ ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ.ಕೇರಳ, ಅಸ್ಸಾಂ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶಗಳ ಕುರಿತಾದ ನಿರೀಕ್ಷೆಗಳು ಹೆಚ್ಚಾಗಿವೆ.
ಮತದಾನ ಪ್ರಕ್ರಿಯೆ ಮುಕ್ತಾಯಗೊಂಡ ನಂತರ, ಈ ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದ ಮತಗಟ್ಟೆ ಸಮೀಕ್ಷೆ (ಎಕ್ಸಿಟ್ ಪೋಲ್) ಫಲಿತಾಂಶಗಳು ಹೊರಬರಲಿವೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯಗೊಂಡ ನಂತರ, 6:30 ಗಂಟೆಯಿಂದ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಸಾರ ಮಾಡಲು ನಿರೀಕ್ಷಿಸಲಾಗಿದೆ. ಆದರೂ ಎಕ್ಸಿಟ್ ಪೋಲ್‌ಗಳು ಯಾವಾಗಲೂ ನಿಖರವಾಗಿರುವುದಿಲ್ಲ ಎಂದು ಎಚ್ಚರಿಸಲಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ ಸುಮಾರು 17 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ಏಪ್ರಿಲ್ 9 ರಂದು ಮತದಾನ ನಡೆದರೆ, ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 23 ರಂದು ನಡೆದಿತ್ತು ಮತ್ತು ಇಂದು ಎರಡನೇ ಹಾಗೂ ಅಂತಿಮ ಹಂತದ ಮತದಾನ ನಡೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೃಣಮೂಲ ಕಾಂಗ್ರೆಸ್ಸನ್ನು ಅಧಿಕಾರದಿಂದ ಕೆಳಗಿಳಿಸಬಲ್ಲುದೇ ಎಂಬುದು ಮತ್ತು ತಮಿಳುನಾಡಿನಲ್ಲಿ ನಟ ವಿಜಯ್ ಅವರು ಸಾಂಪ್ರದಾಯಿಕ ಡಿಎಂಕೆ-ಎಐಎಡಿಎಂಕೆ ಮತಬ್ಯಾಂಕ್ ಅನ್ನು ಭೇದಿಸುವಲ್ಲಿ ಯಶಸ್ವಿಯಾಗುತ್ತಾರೆಯೇ ಎಂಬುದು ಕುತೂಹಲ ಮೂಡಿಸಿದೆ.
ಇತ್ತೀಚಿನ ವರದಿಗಳ ಪ್ರಕಾರ, ಬಂಗಾಳದಲ್ಲಿ ಮಧ್ಯಾಹ್ನ 3 ಗಂಟೆಯವರೆಗೆ ಶೇ. 78 ಕ್ಕಿಂತ ಹೆಚ್ಚು ಮತದಾನವಾಗಿದೆ. ಇದರ ನಡುವೆ, ಫಾಲ್ಟಾ ಮತಗಟ್ಟೆಗಳಲ್ಲಿ ಇವಿಎಂ (EVM) ತಿರುಚಲಾಗಿದೆ ಎಂದು ಬಿಜೆಪಿ ಆರೋಪಿಸಿದ ನಂತರ ಮತದಾನವನ್ನು ಸ್ಥಗಿತಗೊಳಿಸಲಾಗಿದೆ. ಬಿಜೆಪಿ ಮಾಧ್ಯಮ ಉಸ್ತುವಾರಿ ಅಮಿತ್ ಮಾಳವೀಯ ಅವರು ಈ ಬೂತ್‌ಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿದ್ದಾರೆ.
Live Updates
- 29 April 2026 7:02 PM IST
ಪುದುಚೇರಿ ಚುನಾವಣಾ ಫಲಿತಾಂಶ: ಎನ್.ಆರ್. ಕಾಂಗ್ರೆಸ್ ಮರು ಆಯ್ಕೆಯ ಹಾದಿಯಲ್ಲಿ
ಪುದುಚೇರಿ ವಿಧಾನಸಭೆ ಚುನಾವಣೆಯ ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದಿದ್ದು, ಎನ್. ರಂಗಸ್ವಾಮಿ ನೇತೃತ್ವದ ಎನ್.ಆರ್. ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂಬುದು ಬಹುತೇಕ ಖಚಿತವಾಗಿದೆ. ಆಕ್ಸಿಸ್ ಸಂಸ್ಥೆಯ ಸಮೀಕ್ಷೆಯ ಪ್ರಕಾರ, ಒಟ್ಟು 30 ಸ್ಥಾನಗಳ ಪೈಕಿ ಎನ್.ಆರ್. ಕಾಂಗ್ರೆಸ್ 16 ರಿಂದ 20 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಇದು ಈ ಹಿಂದೆ ಪೀಪಲ್ಸ್ ಪಲ್ಸ್ ಸಂಸ್ಥೆ ನೀಡಿದ್ದ 16 ರಿಂದ 19 ಸ್ಥಾನಗಳ ಮುನ್ಸೂಚನೆಗೆ ಹತ್ತಿರವಾಗಿದೆ.
ಆದರೆ, ಇತರ ಪಕ್ಷಗಳ ವಿಷಯದಲ್ಲಿ ಸಮೀಕ್ಷೆಗಳು ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿವೆ. ಆಕ್ಸಿಸ್ ಸಂಸ್ಥೆಯು ಕಾಂಗ್ರೆಸ್ ಪಕ್ಷಕ್ಕೆ ಕೇವಲ 6 ರಿಂದ 8 ಸ್ಥಾನಗಳನ್ನು ಮಾತ್ರ ನೀಡಿದ್ದು, ಇದು ಪೀಪಲ್ಸ್ ಪಲ್ಸ್ ನೀಡಿದ್ದ 10 ರಿಂದ 12 ಸ್ಥಾನಗಳ ಅಂದಾಜಿಗಿಂತ ಕಡಿಮೆಯಾಗಿದೆ. ವಿಜಯ್ ಅವರ ಟಿವಿ ಕೆ (TVK) ಪಕ್ಷದ ವಿಚಾರದಲ್ಲೂ ಭಿನ್ನಾಭಿಪ್ರಾಯಗಳಿದ್ದು, ಟಿವಿ ಕೆ ಖಾತೆ ತೆರೆಯುವುದಿಲ್ಲ ಎಂದು ಪೀಪಲ್ಸ್ ಪಲ್ಸ್ ಭವಿಷ್ಯ ನುಡಿದಿದ್ದರೆ, ಆಕ್ಸಿಸ್ ಸಮೀಕ್ಷೆಯು ಟಿವಿ ಕೆ 2 ರಿಂದ 4 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಿದೆ. ಉಳಿದ ಪಕ್ಷಗಳು 1 ರಿಂದ 3 ಸ್ಥಾನಗಳನ್ನು ಗಳಿಸಬಹುದು ಎಂದು ಆಕ್ಸಿಸ್ ವರದಿ ತಿಳಿಸಿದೆ.
- 29 April 2026 6:56 PM IST
ಹಿನ್ನಡೆ ಅನುಭವಿಸಿದ ಕಾಂಗ್ರೆಸ್ ಮೈತ್ರಿಕೂಟ
ವಿರೋಧ ಪಕ್ಷವಾದ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟವು ಈ ಬಾರಿಯೂ ಮ್ಯಾಜಿಕ್ ನಂಬರ್ ತಲುಪುವಲ್ಲಿ ವಿಫಲವಾಗಲಿದೆ ಎಂದು ಸಮೀಕ್ಷೆ ಹೇಳಿದೆ. ಕಳೆದ ಬಾರಿ 29 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿ 22 ರಿಂದ 30 ಸ್ಥಾನಗಳಿಗೆ ಕುಸಿಯುವ ಸಾಧ್ಯತೆಯಿದೆ. ಇತರ ಮಿತ್ರಪಕ್ಷಗಳಾದ ರೈಜೋರ್ ದಳ (1-4), ಎಜೆಪಿ (1-2) ಮತ್ತು ಸಿಪಿಐ(ಎಂ) (0-1) ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ. ಮೈತ್ರಿಕೂಟವು ಒಟ್ಟಾರೆಯಾಗಿ 24 ರಿಂದ 36 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
- 29 April 2026 6:56 PM IST
ಪಂಚರಾಜ್ಯ ಚುನಾವಣೆ ಮುಕ್ತಾಯ
ದೇಶದ ಪಂಚರಾಜ್ಯ ಚುನಾವಣೆಗೆ ಮತದಾನ ಮುಕ್ತಾಯಗೊಂಡಿದ್ದು, ಐದು ಪ್ರಮುಖ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ.
ಅಸ್ಸಾಂ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆಗಳು ಹೊರಬಂದಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ರಾಜ್ಯದಲ್ಲಿ ಸತತವಾಗಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸ್ಪಷ್ಟ ಮುನ್ಸೂಚನೆ ನೀಡಿದೆ. ಒಟ್ಟು 126 ಸ್ಥಾನಗಳ ಪೈಕಿ ಎನ್‌ಡಿಎ ಮೈತ್ರಿಕೂಟವು ಅತಿ ದೊಡ್ಡ ಅಂತರದ ಜಯ ಸಾಧಿಸುವ ಸಾಧ್ಯತೆಯಿದೆ. ಸಮೀಕ್ಷೆಯ ಪ್ರಕಾರ, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 88 ರಿಂದ 100 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.
ಕಳೆದ ಬಾರಿ 60 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ, ಈ ಬಾರಿ ತನ್ನ ಬಲವನ್ನು ಹೆಚ್ಚಿಸಿಕೊಂಡು 70 ರಿಂದ 80 ಸ್ಥಾನಗಳನ್ನು ಏಕಾಂಗಿಯಾಗಿ ಗೆಲ್ಲುವ ಸಾಧ್ಯತೆಯಿದೆ. ಬಿಪಿಎಫ್ ಕಳೆದ ಚುನಾವಣೆಯಲ್ಲಿ ಕೇವಲ 4 ಸ್ಥಾನ ಪಡೆದಿದ್ದು, ಈ ಬಾರಿ 9 ರಿಂದ 11 ಸ್ಥಾನಗಳನ್ನು ಪಡೆಯುವ ಮೂಲಕ ಮೈತ್ರಿಕೂಟಕ್ಕೆ ಬಲ ತುಂಬಲಿದೆ. ಅಸ್ಸಾಂ ಗಣ ಪರಿಷತ್ ಈ ಬಾರಿ 7 ರಿಂದ 9 ಸ್ಥಾನಗಳಲ್ಲಿ ಜಯಗಳಿಸಬಹುದು ಎಂದು ಅಂದಾಜಿಸಲಾಗಿದೆ.



