Five State Election Result| ಚುನಾವಣಾ ಫಲಿತಾಂಶ ಇಂದು;  ಪಂಚ ಕಜ್ಜಾಯ ಯಾರಿಗೆ ?
x

Five State Election Result| ಚುನಾವಣಾ ಫಲಿತಾಂಶ ಇಂದು; ಪಂಚ 'ಕಜ್ಜಾಯ' ಯಾರಿಗೆ ?

ದೇಶದಲ್ಲೇ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿ ಹಾಗೂ ಮೋದಿ ನಡುವೆ ನೇರ ಹಣಾಹಣೆ ಇದೆ. ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಫಲಿತಾಂಶ ಕುತೂಹಲ ಕೆರಳಿಸಿದೆ.


Click the Play button to hear this message in audio format

ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿರುವ ಪಂಚರಾಜ್ಯ ಚುನಾವಣೆಯ ಫಲಿತಾಂಶ ಇಂದು( ಮೇ4) ಪ್ರಕಟವಾಗಲಿದೆ. ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದೆ. ಮಧ್ಯಾಹ್ನದ ವೇಳೆಗೆ ಐದೂ ರಾಜ್ಯಗಳ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಈ ಐದೂ ರಾಜ್ಯಗಳ ಒಟ್ಟು 824 ವಿಧಾನಸಭಾ ಕ್ಷೇತ್ರಗಳ ಜನಾದೇಶವು ಕೇವಲ ಆಯಾ ರಾಜ್ಯಗಳ ಅಧಿಪತ್ಯದ ಪ್ರಶ್ನೆಯಾಗಿರದೇ ರಾಷ್ಟ್ರ ರಾಜಕಾರಣದ ಮೇಲೆ ಪ್ರಭಾವ ಬೀರಲಿದೆ.

ದೀದಿ vs ಮೋದಿ ಹಣಾಹಣಿ

ದೇಶದಲ್ಲೇ ಅತಿ ಹೆಚ್ಚು ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ದೀದಿ ಹಾಗೂ ಮೋದಿ ನಡುವೆ ನೇರ ಹಣಾಹಣೆ ನಡೆಯಲಿದೆ. ಈಗಾಗಲೇ ಮತದಾನೋತ್ತರ ಸಮೀಕ್ಷೆಗಳು ಎನ್‌ಡಿಎ ಹಾಗೂ ಟಿಎಂಸಿ ನಡುವೆ ನೇರ ಜಿದ್ದಾಜಿದ್ದು ಏರ್ಪಡಲಿದೆ ಎಂದು ಭವಿಷ್ಯ ನುಡಿದಿರುವುದರಿಂದ ಇಲ್ಲಿನ ಫಲಿತಾಂಶ ಕುತೂಹಲ ಕೆರಳಿಸಿದೆ.

ಸತತ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪಾರುಪತ್ಯ ಮೆರೆದಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್‌) ನಂತರ ನಡೆದ ಈ ಚುನಾವಣೆ ಪ್ರತಿಷ್ಠೆಯಾಗಿದೆ. ಕಳೆದ ಚುನಾವಣೆಗಿಂತ ಈ ಬಾರಿಯ ಚುನಾವಣೆಯಲ್ಲಿ ಸೀಟುಗಳ ಅಂತರ ಹೆಚ್ಚಿಸಿಕೊಳ್ಳುವ ವಿಶ್ವಾಸದಲ್ಲಿರುವ ಬಿಜೆಪಿಯು ಅಧಿಕಾರ ಹಿಡಿಯುವ ತವಕದಲ್ಲಿದೆ.

ಫಾಲ್ಟಾ ಕ್ಷೇತ್ರದಲ್ಲಿ ಮತದಾನದ ವೇಳೆ ಇವಿಎಂ ಚಿಹ್ನೆಗಳಿಗೆ ಕಪ್ಪು ಅಂಟು ಅಂಟಿಸಿ ಅಕ್ರಮ ಎಸಗಿದ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅಲ್ಲಿನ ಎಲ್ಲಾ 285 ಬೂತ್ಗಳ ಚುನಾವಣೆಯನ್ನು ರದ್ದುಗೊಳಿಸಿದೆ. ಫಾಲ್ಟಾ ಕ್ಷೇತ್ರದಲ್ಲಿ ಮೇ 21 ರಂದು ಮರುಮತದಾನ ನಡೆಯಲಿದ್ದು, ಮೇ 24 ರಂದು ಫಲಿತಾಂಶ ಪ್ರಕಟವಾಗಲಿದೆ. ಹೀಗಾಗಿ ಬಂಗಾಳದ 294 ಕ್ಷೇತ್ರಗಳ ಪೈಕಿ 293 ಕ್ಷೇತ್ರಗಳ ಫಲಿತಾಂಶ ಮಾತ್ರ ಸೋಮವಾರ (ಮೇ 4) ಹೊರಬೀಳಲಿದೆ.

ಡಿಎಂಕೆ ಕೋಟೆ ಉಳಿಯುತ್ತಾ?

ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ಈ ಬಾರಿಯ ಚುನಾವಣೆಗೆ ಹೊಸ ಆಯಾಮ ನೀಡಿದೆ.

ಇನ್ನೊಂದೆಡೆ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಕೂಟವು ಡಿಎಂಕೆ ವಿರುದ್ಧ ಹೆಣೆದಿರುವ ತಂತ್ರಗಾರಿಕೆ ಎಷ್ಟು ಫಲ ನೀಡಲಿದೆ ಎಂಬ ಕುತೂಹಲವೂ ಇದೆ. ಮತದಾನೋತ್ತರ ಸಮೀಕ್ಷೆಗಳಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಮೈತ್ರಿಕೂಟವು ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವ ಮೂಲಕ ಇತಿಹಾಸ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಭವಿಷ್ಯ ನುಡಿಯಲಾಗಿದೆ.

ಅದೇ ರೀತಿ ತಮಿಳು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದು, ಭಾರಿ ಸಂಚಲನ ಮೂಡಿಸಿದೆ. ಕೆಲ ಸಮೀಕ್ಷೆಗಳು ಟಿವಿಕೆ ಪಕ್ಷವು 98 ರಿಂದ 120 ಸ್ಥಾನಗಳನ್ನು ಗೆದ್ದು ಅಚ್ಚರಿ ಮೂಡಿಸಬಹುದು ಎಂದು ಹೇಳಿವೆ. ಹೀಗಾದಲ್ಲಿ ವಿಜಯ್ ಕಿಂಗ್ ಮೇಕರ್ ಆಗಲಿದ್ದಾರೆ ಎಂಬ ನಿರೀಕ್ಷೆಯೂ ಗರಿಗೆದರಿದೆ. ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸಿದೆ. ಕೆಲವು ಸಮೀಕ್ಷೆಗಳು ಈ ಪಕ್ಷವು 100ರ ಸನಿಹಕ್ಕೆ ಬರಬಹುದು ಎಂದು ಅಂದಾಜಿಸಿವೆ.

ಕೇರಳದಲ್ಲಿ ಯಾರ ಕೈ ಮೇಲು ?

ಕೇರಳದಲ್ಲಿ ಪಿಣರಾಯಿ ವಿಜಯನ್ ಎಡರಂಗ ಸರ್ಕಾರವು ಸತತ ಎರಡನೇ ಬಾರಿಗೆ ಇತಿಹಾಸ ಬರೆದು ಅಧಿಕಾರಕ್ಕೆ ಮರಳುವ ವಿಶ್ವಾಸದಲ್ಲಿದೆ. ಆದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು ಆಡಳಿತ ವಿರೋಧಿ ಅಲೆಯನ್ನು ನಂಬಿ ಅಧಿಕಾರ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ. ಹಾಗಾಗಿ, ಕೇರಳದ ಚುನಾವಣಾ ಫಲಿತಾಂಶವು ತೀವ್ರ ಕುತೂಹಲ ಮೂಡಿಸಿದೆ.

ಅಸ್ಸಾಂ ಮತ್ತು ಪುದುಚೇರಿ

ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ಮೈತ್ರಿಕೂಟವು ತನ್ನ ಭದ್ರಕೋಟೆ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ಕಾಂಗ್ರೆಸ್ ನೇತೃತ್ವದ ಮಹಾ ಮೈತ್ರಿಕೂಟವು ಪ್ರಬಲ ಪೈಪೋಟಿ ನೀಡಿದೆ.

ಪುದುಚೇರಿಯಲ್ಲಿ ಎನ್ಡಿಎ ಮೈತ್ರಿಕೂಟವು 17 ರಿಂದ 21 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ, ಇಂದು ಪ್ರಕಟವಾಗುವ ಚುನಾವಣಾ ಫಲಿತಾಂಶದತ್ತಿ ಇಡೀ ದೇಶವೇ ಎದುರು ನೋಡುತ್ತಿದೆ.

Read More
Next Story