ಎಲೋನ್ ಮಸ್ಕ್ ಆರೋಪಕ್ಕೆ ರಿಲಯನ್ಸ್ ತಿರುಗೇಟು; ಪೈಪೋಟಿಗೆ ಹೆದರುವುದಿಲ್ಲ ಎಂದ ಜಿಯೋ
x

ಎಲೋನ್ ಮಸ್ಕ್ ಆರೋಪಕ್ಕೆ ರಿಲಯನ್ಸ್ ತಿರುಗೇಟು; ಪೈಪೋಟಿಗೆ ಹೆದರುವುದಿಲ್ಲ ಎಂದ ಜಿಯೋ

ರಿಲಯನ್ಸ್ ಯಾವಾಗಲೂ ಹೂಡಿಕೆ ಮತ್ತು ಆವಿಷ್ಕಾರಗಳನ್ನು ಸ್ವಾಗತಿಸುತ್ತದೆ. ಜನರು ಬದುಕನ್ನು ಉತ್ತಮಗೊಳಿಸುವ ಯಾವುದೇ ತಂತ್ರಜ್ಞಾನಕ್ಕೆ ಭಾರತದ ಮಾರುಕಟ್ಟೆ ಮುಕ್ತವಾಗಿದೆ ಎಂದು ಜಿಯೋ ಹೇಳಿದೆ.


Click the Play button to hear this message in audio format

ಭಾರತೀಯ ದೂರಸಂಪರ್ಕ ಮತ್ತು ಉಪಗ್ರಹ ಆಧಾರಿತ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಇದೀಗ ದೊಡ್ಡ ಮಟ್ಟದ ವಾಕ್ಸಮರ ಏರ್ಪಟ್ಟಿದೆ. ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲೋನ್ ಮಸ್ಕ್ ಅವರು ಭಾರತದ ಕೈಗಾರಿಕೋದ್ಯಮಿಗಳನ್ನು ಗುರಿಯಾಗಿಸಿಕೊಂಡು ಮಾಡಿದ ಒಲಿಗಾರ್ಕ್‌ಗಳು (ಧನಿಕರು) ಎಂಬ ಆರೋಪಕ್ಕೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ತೀವ್ರವಾಗಿ ಪ್ರತಿಕ್ರಿಯಿಸಿದೆ. ಮಸ್ಕ್ ಅವರ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ರಿಲಯನ್ಸ್, "ನಾವು ಪೈಪೋಟಿಗೆ ಹೆದರುವುದಿಲ್ಲ, ಇದು ಗ್ರಾಹಕ ಸೇವೆಗೆ ಒಡ್ಡುವ ಅಂತಿಮ ಪರೀಕ್ಷೆ" ಎಂದು ಖಡಕ್ ಉತ್ತರ ನೀಡಿದೆ.

ಸ್ಟಾರ್‌ಲಿಂಕ್ ಎಂಬ ತನ್ನ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಭಾರತದಲ್ಲಿ ಪ್ರಾರಂಭಿಸಲು ಎಲೋನ್ ಮಸ್ಕ್ ಕಳೆದ ಐದು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ, ಭಾರತೀಯ ನಿಯಂತ್ರಣ ಪ್ರಾಧಿಕಾರಗಳಿಂದ ತಮಗೆ ಅಂತಿಮ ಅನುಮೋದನೆ ಸಿಗುತ್ತಿಲ್ಲ ಎಂದು ಮಸ್ಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಳಂಬಕ್ಕೆ ಭಾರತದ ಕೆಲವು ಧನಿಕರು ಕಾರಣ ಎಂದು ಮಸ್ಕ್ ನೇರವಾಗಿಯೇ ಆರೋಪಿಸಿದ್ದರು. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ್ದ ಮಸ್ಕ್, "ಭಾರತೀಯರ ಮೇಲೆ ತಮ್ಮ ಏಕಸ್ವಾಮ್ಯದ ಹಿಡಿತವನ್ನು ಕಾಪಾಡಿಕೊಳ್ಳಲು ಈ ಧನಿಕರು ಸ್ಟಾರ್‌ಲಿಂಕ್ ಅನ್ನು ತಡೆಯುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದ್ದರು. ವಿಶೇಷವಾಗಿ ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರನ್ನು ಉದ್ದೇಶಿಸಿ, "ಅಂಬಾನಿ ಭಾರತದ ನಿಜವಾದ ದೊರೆಯೇ?" ಎಂದು ಪ್ರಶ್ನಿಸುವ ಮೂಲಕ ವಿವಾದವನ್ನು ತೀವ್ರಗೊಳಿಸಿದರು. ಭಾರತದ ಗ್ರಾಹಕರಿಗೆ ನ್ಯಾಯಯುತ ಸೇವೆ ಸಿಗದಂತೆ ತಡೆಹಿಡಿದಿರುವುದು ದೊಡ್ಡ ಅನ್ಯಾಯ ಎಂಬರ್ಥದಲ್ಲಿ ಅವರು ಟೀಕಿಸಿದ್ದರು.

ರಿಲಯನ್ಸ್ ಪ್ರತಿಕ್ರಿಯೆ: ಪೈಪೋಟಿಗೆ ನಾವು ಸಿದ್ಧ

ಮಸ್ಕ್ ಅವರ ಈ ಸರಣಿ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್, ತಾವು ಸ್ಪರ್ಧೆಗೆ ಹೆದರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. "ರಿಲಯನ್ಸ್ ಯಾವಾಗಲೂ ದೇಶೀಯ ಅಥವಾ ಅಂತಾರಾಷ್ಟ್ರೀಯ ಹೂಡಿಕೆ ಮತ್ತು ಆವಿಷ್ಕಾರಗಳನ್ನು ಸ್ವಾಗತಿಸುತ್ತದೆ. ಜನರು ಬದುಕನ್ನು ಉತ್ತಮಗೊಳಿಸುವ ಯಾವುದೇ ತಂತ್ರಜ್ಞಾನಕ್ಕೆ ಭಾರತದ ಮಾರುಕಟ್ಟೆ ಮುಕ್ತವಾಗಿದೆ" ಎಂದು ಕಂಪನಿ ಹೇಳಿದೆ. ರಿಲಯನ್ಸ್ ತನ್ನ ಜಿಯೋ ದೂರಸಂಪರ್ಕ ಸಂಸ್ಥೆಯ ಬೆಳವಣಿಗೆಯನ್ನು ಉದಾಹರಣೆಯಾಗಿ ನೀಡಿದೆ. "2016ರಲ್ಲಿ ಜಿಯೋ ಮಾರುಕಟ್ಟೆಗೆ ಬಂದಾಗ ಶೂನ್ಯ ಗ್ರಾಹಕರನ್ನು ಹೊಂದಿತ್ತು. ಇಂದು ಹತ್ತು ವರ್ಷಗಳ ಅವಧಿಯಲ್ಲಿ 530 ದಶಲಕ್ಷಕ್ಕೂ ಹೆಚ್ಚು ಗ್ರಾಹಕರ ವಿಶ್ವಾಸವನ್ನು ಗಳಿಸಿದೆ. ನಾವು ಅತೀ ಕಡಿಮೆ ದರದಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಡಿಜಿಟಲ್ ಮೂಲಸೌಕರ್ಯವನ್ನು ನೀಡುತ್ತಿದ್ದೇವೆ. ಇದು ಪೈಪೋಟಿ ಇದ್ದರೆ ಮಾತ್ರ ಸಾಧ್ಯ. ಆದ್ದರಿಂದ ನಮಗೆ ಪೈಪೋಟಿಯ ಬಗ್ಗೆ ಭಯವಿಲ್ಲ" ಎಂದು ರಿಲಯನ್ಸ್ ತಿಳಿಸಿದೆ.

ಒಂದೇ ನಿಯಮ, ಎಲ್ಲರಿಗೂ ಅನ್ವಯ

ರಿಲಯನ್ಸ್ ತನ್ನ ಹೇಳಿಕೆಯಲ್ಲಿ ಒಂದು ಪ್ರಮುಖ ಅಂಶವನ್ನು ಒತ್ತಿ ಹೇಳಿದೆ. "ರಿಲಯನ್ಸ್‌ನ ಉಪಗ್ರಹ ಸಂವಹನ ಸಂಸ್ಥೆಯಾದ 'ಜಿಯೋ ಸ್ಯಾಟಲೈಟ್' ಕೂಡ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ. ಹೀಗಾಗಿ ಸ್ಟಾರ್‌ಲಿಂಕ್‌ಗೂ ಮತ್ತು ಇತರ ಕಂಪನಿಗಳಿಗೂ ಒಂದೇ ರೀತಿಯ ನಿಯಮಗಳು ಅನ್ವಯವಾಗಬೇಕು. ಭಾರತದ ಕಾನೂನು ಮತ್ತು ನೀತಿಗಳಿಗೆ ಬದ್ಧರಾಗಿ ಕೆಲಸ ಮಾಡುವುದು ಪ್ರತಿಯೊಬ್ಬ ಆಟಗಾರನ ಜವಾಬ್ದಾರಿ" ಎಂದು ಕಂಪನಿ ಸ್ಪಷ್ಟಪಡಿಸಿದೆ. ಮಸ್ಕ್ ಅವರು ನಿಯಮಗಳನ್ನು ಪಾಲಿಸುವುದರಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂಬ ಧ್ವನಿಯೂ ಈ ಹೇಳಿಕೆಯಲ್ಲಿ ಅಡಗಿದೆ. "ಸ್ಟಾರ್‌ಲಿಂಕ್ ಭಾರತದ ನಿಯಮಗಳನ್ನು ಅನುಸರಿಸಿದರೆ ಪೈಪೋಟಿ ಮಾಡಲು ನಮಗೆ ಯಾವುದೇ ಅಭ್ಯಂತರವಿಲ್ಲ. ನಾವು ಪೈಪೋಟಿಯನ್ನು ಸ್ವಾಗತಿಸುತ್ತೇವೆ" ಎಂದು ರಿಲಯನ್ಸ್ ತಿಳಿಸಿದೆ.

ಉಪಗ್ರಹ ಇಂಟರ್ನೆಟ್ ಮಾರುಕಟ್ಟೆಯ ಮೇಲಾಟ

ಭಾರತದಂತಹ ವಿಶಾಲ ಮತ್ತು ಭೌಗೋಳಿಕ ವೈವಿಧ್ಯಮಯ ದೇಶದಲ್ಲಿ ಉಪಗ್ರಹ ಆಧಾರಿತ ಇಂಟರ್ನೆಟ್ ಭವಿಷ್ಯದ ತಂತ್ರಜ್ಞಾನವಾಗಿದೆ. ದುರ್ಗಮ ಪ್ರದೇಶಗಳು, ಅರಣ್ಯಗಳು ಮತ್ತು ಹಳ್ಳಿಗಳಲ್ಲಿ ತಂತಿಯಿಲ್ಲದ ವೇಗದ ಇಂಟರ್ನೆಟ್ ಒದಗಿಸಲು ಸ್ಪೇಸ್‌ಎಕ್ಸ್‌ನ ಸ್ಟಾರ್‌ಲಿಂಕ್ ದೊಡ್ಡ ಹೂಡಿಕೆ ಮಾಡಲು ಸಜ್ಜಾಗಿದೆ. ಆದರೆ, ಭಾರತದಲ್ಲಿ ಸ್ಪೆಕ್ಟ್ರಮ್ ಹಂಚಿಕೆ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ರಿಲಯನ್ಸ್ ಜಿಯೋ ಸಂಸ್ಥೆಯು ಸ್ಪೆಕ್ಟ್ರಮ್ ಅನ್ನು ಹರಾಜು ಪ್ರಕ್ರಿಯೆ ಮೂಲಕವೇ ನೀಡಬೇಕು ಎಂದು ವಾದಿಸುತ್ತಿದೆ. ಆದರೆ, ಸ್ಟಾರ್‌ಲಿಂಕ್‌ನಂತಹ ಜಾಗತಿಕ ಕಂಪನಿಗಳು ಇದನ್ನು ಆಡಳಿತಾತ್ಮಕವಾಗಿ ಹಂಚಿಕೆ ಮಾಡಬೇಕು ಎಂದು ಬಯಸುತ್ತಿವೆ. ಈ ನೀತಿ ನಿರೂಪಣೆಯು ಮಸ್ಕ್ ಮತ್ತು ಅಂಬಾನಿ ನಡುವಿನ ಸಂಘರ್ಷಕ್ಕೆ ಮೂಲ ಕಾರಣವಾಗಿದೆ. ಭಾರತದ ದೂರಸಂಪರ್ಕ ಇಲಾಖೆಯ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಇಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ಜಿಯೋ ಕೇವಲ 10 ವರ್ಷಗಳಲ್ಲಿ ಮಾರುಕಟ್ಟೆಯ ಚಿತ್ರಣವನ್ನೇ ಬದಲಿಸಿದೆ. ಇದು ಪೈಪೋಟಿಯ ಫಲ, ಏಕಸ್ವಾಮ್ಯದ ಫಲವಲ್ಲ ಎಂಬುದು ರಿಲಯನ್ಸ್ ವಾದವಾಗಿದೆ.

Read More
Next Story