ಬ್ರಿಟನ್ ಪೌರತ್ವ ಪಡೆದ ಬಳಿಕವೂ ಸರ್ಕಾರಿ ವೇತನ, ಪಿಂಚಣಿ ಪಡೆದ ಆರೋಪ: ಮದರಸಾ ಶಿಕ್ಷಕನ ಮೇಲೆ ಇಡಿ ರೇಡ್‌
x

ಬ್ರಿಟನ್ ಪೌರತ್ವ ಪಡೆದ ಬಳಿಕವೂ ಸರ್ಕಾರಿ ವೇತನ, ಪಿಂಚಣಿ ಪಡೆದ ಆರೋಪ: ಮದರಸಾ ಶಿಕ್ಷಕನ ಮೇಲೆ ಇಡಿ ರೇಡ್‌

ಬ್ರಿಟನ್ ಪೌರತ್ವ ಪಡೆದ ಬಳಿಕವೂ ಉತ್ತರ ಪ್ರದೇಶ ಸರ್ಕಾರದಿಂದ ವೇತನ, ಪಿಂಚಣಿ ಹಾಗೂ ಇತರ ಸೌಲಭ್ಯ ಪಡೆದ ಆರೋಪದ ಹಿನ್ನೆಲೆಯಲ್ಲಿ ಮದರಸಾ ಮೌಲಾನ ಶಮ್ಸುಲ್ ಹುದಾ ಖಾನ್‌ಗೆ ಸೇರಿದ 53.46 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಇಡಿ ತಾತ್ಕಾಲಿಕವಾಗಿ ಜಪ್ತಿ ಮಾಡಿದೆ.


ಬ್ರಿಟನ್ ಪೌರತ್ವ ಪಡೆದ ಬಳಿಕವೂ ಉತ್ತರ ಪ್ರದೇಶ ಸರ್ಕಾರದಿಂದ ವೇತನ, ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಮದರಸಾ ಶಿಕ್ಷಕರೊಬ್ಬರಿಗೆ ಸೇರಿದ 53.46 ಲಕ್ಷ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕವಾಗಿ ಜಪ್ತಿ ಮಾಡಿದೆ. ಉತ್ತರ ಪ್ರದೇಶದ ಸಂತ ಕಬೀರ ನಗರ ಜಿಲ್ಲೆಯಲ್ಲಿರುವ 189.75 ಚದರ ಮೀಟರ್ ವಿಸ್ತೀರ್ಣದ ವಸತಿ ನಿವೇಶನವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಜಪ್ತಿ ಮಾಡಲಾಗಿದೆ ಎಂದು ಇಡಿ ಶುಕ್ರವಾರ ಹೇಳಿದೆ. ಈ ಸಂಬಂಧ ಮೌಲಾನಾ ಶಮ್ಸುಲ್ ಹುದಾ ಖಾನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇಡಿ ಪ್ರಕಾರ, ಶಮ್ಸುಲ್ ಹುದಾ ಖಾನ್ 2013ರ ಡಿಸೆಂಬರ್‌ನಲ್ಲಿ ಬ್ರಿಟನ್ ಪೌರತ್ವ ಪಡೆದಿದ್ದರು. ಇದರಿಂದ ಅವರು ಭಾರತೀಯ ಪೌರತ್ವವನ್ನು ಕಳೆದುಕೊಂಡಿದ್ದರೂ, ಈ ಮಾಹಿತಿಯನ್ನು ಮುಚ್ಚಿಟ್ಟು ಆಜಂಗಢದ ಮುಬಾರಕ್‌ಪುರದಲ್ಲಿರುವ ಸರ್ಕಾರದಿಂದ ಅನುದಾನ ಪಡೆಯುತ್ತಿದ್ದ ಮದರಸಾದಲ್ಲಿ ಸಹಾಯಕ ಶಿಕ್ಷಕರಾಗಿ ಮುಂದುವರಿದಿದ್ದರು ಎಂದು ಸಂಸ್ಥೆ ಆರೋಪಿಸಿದೆ.

10 ವರ್ಷ ವೇತನ ಪಡೆದ ಆರೋಪ

2007ರಿಂದ 2017ರವರೆಗೆ ಖಾನ್ ಅವರ ಹೆಸರು ಸರ್ಕಾರಿ ದಾಖಲೆಗಳಲ್ಲಿ ಉದ್ಯೋಗಿಯಾಗಿ ಮುಂದುವರಿದಿತ್ತು. ಆದರೆ ಅವರ ಸೇವೆಯನ್ನು ಎಂದಿಗೂ ಪರಿಶೀಲಿಸಲಾಗಿರಲಿಲ್ಲ. ಇದರ ಹೊರತಾಗಿಯೂ ಅವರು ಈ ಅವಧಿಯಲ್ಲಿ ವೇತನ ಪಡೆದಿದ್ದಾರೆ ಎಂದು ಇಡಿ ಹೇಳಿದೆ. ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಇಲಾಖೆಯ ವಿಚಾರಣೆಯಲ್ಲೂ 2007ರಿಂದ 2017ರವರೆಗಿನ ಖಾನ್ ಅವರ ಸೇವೆಯನ್ನು ಪರಿಶೀಲಿಸಲಾಗಿರಲಿಲ್ಲ ಎಂಬುದು ಪತ್ತೆಯಾಗಿತ್ತು ಎಂದು ಇಡಿ ತಿಳಿಸಿದೆ. ಆದರೂ 2017ರಲ್ಲಿ ಅವರಿಗೆ ಸ್ವಯಂ ನಿವೃತ್ತಿ ನೀಡಲಾಗಿದ್ದು, ನಿಯಮಿತ ಪಿಂಚಣಿಯನ್ನೂ ಮಂಜೂರು ಮಾಡಲಾಗಿತ್ತು ಎಂದು ಸಂಸ್ಥೆ ಹೇಳಿದೆ.

ಇಡಿ ಪ್ರಕಾರ, ಖಾನ್ ಉತ್ತರ ಪ್ರದೇಶ ಸರ್ಕಾರದಿಂದ ವೇತನ, ಪಿಂಚಣಿ, ಸಾಮಾನ್ಯ ಭವಿಷ್ಯ ನಿಧಿ ಹಾಗೂ ಇತರ ಭತ್ಯೆಗಳ ರೂಪದಲ್ಲಿ ಒಟ್ಟು ಸುಮಾರು 53.46 ಲಕ್ಷ ರೂ. ಪಡೆದಿದ್ದರು. ಈ ಮೊತ್ತವನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ‘ಅಪರಾಧದಿಂದ ಬಂದ ಆದಾಯ’ ಎಂದು ಸಂಸ್ಥೆ ಪರಿಗಣಿಸಿದೆ.

ಭಾರತೀಯ ದಾಖಲೆ ಬಳಸಿ ಆಸ್ತಿ ಖರೀದಿ ಆರೋಪ

ಬ್ರಿಟನ್ ಪೌರತ್ವ ಪಡೆದ ಬಳಿಕವೂ ಖಾನ್ ತಮ್ಮ ಭಾರತೀಯ ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಯನ್ನು ಬಳಸಿಕೊಂಡು ಸಂತ ಕಬೀರ ನಗರದಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಿದ್ದರು ಎಂದು ಇಡಿ ಆರೋಪಿಸಿದೆ. ಖಲೀಲಾಬಾದ್‌ನಲ್ಲಿ 189.75 ಚದರ ಮೀಟರ್ ವಿಸ್ತೀರ್ಣದ ನಿವೇಶನವನ್ನು ಅವರು ಬ್ರಿಟನ್ ಪೌರತ್ವ ಪಡೆದ ನಂತರ ಖರೀದಿಸಿದ್ದರು ಎಂದು ಸಂಸ್ಥೆ ತಿಳಿಸಿದೆ.

ವೇತನ ಮತ್ತು ಇತರ ಸೌಲಭ್ಯಗಳ ಮೂಲಕ ಪಡೆದ ಹಣವನ್ನು ಈಗಾಗಲೇ ಬೇರೆಡೆ ಬಳಸಲಾಗಿರುವುದರಿಂದ, ಅದಕ್ಕೆ ಸಮಾನ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿದೆ. ಪ್ರಸ್ತುತ ಜಪ್ತಿ ಮಾಡಿರುವ ಆಸ್ತಿಯ ಮೌಲ್ಯ 53.46 ಲಕ್ಷ ರೂ. ಎಂದು ಸಂಸ್ಥೆ ತಿಳಿಸಿದೆ.

ಪೊಲೀಸ್ ಪ್ರಕರಣದಿಂದ ತನಿಖೆ ಆರಂಭ

ಈ ಹಣ ಅಕ್ರಮ ವರ್ಗಾವಣೆ ಪ್ರಕರಣವು ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಆಧರಿಸಿ ಆರಂಭವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2026ರ ಫೆಬ್ರವರಿ 11ರಂದು ಸಂತ ಕಬೀರ ನಗರದಲ್ಲಿ ಇಡಿ ಶೋಧ ನಡೆಸಿತ್ತು. ಶೋಧದ ವೇಳೆ ಹಲವು ದಾಖಲೆಗಳು ಪತ್ತೆಯಾಗಿದ್ದು, ಅವುಗಳ ಆಧಾರದ ಮೇಲೆ ಖಾನ್‌ಗೆ ಸೇರಿದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಇಡಿ ಹೇಳಿದೆ.

Read More
Next Story