x

ಎಸ್‌ಐಆರ್‌ ಬೆನ್ನಲ್ಲೇ ಚುನಾವಣಾ ಆಯೋಗದೊಳಗೇ ಭಿನ್ನಾಭಿಪ್ರಾಯ; ಕರ್ನಾಟಕದಲ್ಲೂ ಚರ್ಚೆ

ತಮ್ಮ ಅನುಮೋದನೆ ಅಥವಾ ಗಮನಕ್ಕೆ ತರದೆ ಹಲವು ನಿರ್ಧಾರ ಹಾಗೂ ಆದೇಶಗಳನ್ನು ಕೈಗೊಳ್ಳಲಾಗಿದೆ ಎಂಬುದು ಚುನಾವಣಾ ಆಯೋಗದ ಇಬ್ಬರು ಆಯುಕ್ತರ ಪ್ರಮುಖ ಆರೋಪವಾಗಿದೆ.


Click the Play button to hear this message in audio format

ದೇಶಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಶೀಲನೆ (SIR) ಪ್ರಕ್ರಿಯೆ ಹಾಗೂ ಮತದಾರರ ಪಟ್ಟಿಯ ನಿರ್ವಹಣೆ ವಿಚಾರವಾಗಿ ಭಾರತೀಯ ಚುನಾವಣಾ ಆಯೋಗದ ಒಳಗಡೆಯೇ ತೀವ್ರ ಭಿನ್ನಾಪ್ರಾಯಗಳು ಹೊರಬಿದ್ದಿವೆ. ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಹಲವು ಪ್ರಮುಖ ನಿರ್ಧಾರಗಳ ಬಗ್ಗೆ ಅಧಿಕೃತ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಇಸಿಐ ಒಳಗಿನ ಪ್ರಮುಖ ಆಕ್ಷೇಪಗಳು

ತಮ್ಮ ಅನುಮೋದನೆ ಅಥವಾ ಗಮನಕ್ಕೆ ತರದೆ ಹಲವು ನಿರ್ಧಾರ ಹಾಗೂ ಆದೇಶಗಳನ್ನು ಕೈಗೊಳ್ಳಲಾಗಿದೆ ಎಂಬುದು ಆಯುಕ್ತರ ಪ್ರಮುಖ ಆರೋಪವಾಗಿದೆ. ಹೊಸ ಮತದಾರರ ನೋಂದಣಿಗಾಗಿ ಬಳಸುವ ಫಾರ್ಮ್ 6 ರಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಸೇರಿಸಿರುವುದಕ್ಕೆ ಇಬ್ಬರೂ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಜೊತೆಗೆ ಮತದಾರರ ದತ್ತಾಂಶ ನಿರ್ವಹಣೆಯನ್ನು ವಿಕೇಂದ್ರೀಕರಣಗೊಳಿಸುವ ಬದಲು ಕೇಂದ್ರೀಕೃತ ತಂತ್ರಜ್ಞಾನ ವ್ಯವಸ್ಥೆಯಡಿ ತರಲಾಗುತ್ತಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಗೋವಾದಲ್ಲಿ ಅಧಿಕಾರಿಗಳು ಧೃಡೀಕರಿಸಿದ್ದ 97 ಮತದಾರರ ಹೆಸರುಗಳು ತಂತ್ರಾಂಶ ಸಮಸ್ಯೆಯಿಂದ ಮರುಸೇರ್ಪಡೆಯಾಗದಿರುವುದು ಹಾಗೂ ಪಶ್ಚಿಮ ಬಂಗಾಳದ ಮೇಲ್ಮನವಿ ಪ್ರಕ್ರಿಯೆಗಳ ಪ್ರಕ್ರಿಯೆಯ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗಿದೆ.

ಕಾನೂನು ಚೌಕಟ್ಟು ಹಾಗೂ ಆಯೋಗದ ಸ್ಪಷ್ಟನೆ

ಸಂವಿಧಾನದ 324ನೇ ವಿಧಿಯಡಿ ಚುನಾವಣಾ ಆಯೋಗವು ಮೂವರು ಸದಸ್ಯರನ್ನೊಳಗೊಂಡ ಸಾಂವಿಧಾನಿಕ ಸಂಸ್ಥೆಯಾಗಿದೆ. ನಿಯಮಗಳ ಪ್ರಕಾರ, ಆಯೋಗದ ನಿರ್ಧಾರಗಳನ್ನು ಸಾಧ್ಯವಾದಷ್ಟು ಸರ್ವಾನುಮತದಿಂದ ಅಥವಾ ಬಹುಮತದ ಆಧಾರದಲ್ಲಿ ತೆಗೆದುಕೊಳ್ಳಬೇಕು. ಈ ಆಕ್ಷೇಪಣೆಗಳ ಬೆನ್ನಲ್ಲೇ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರೊಂದಿಗೆ ಸಭೆ ನಡೆದಿದ್ದು, ಆಯೋಗವು ತಾವು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಸರ್ವಾನುಮತದಿಂದ ಕೂಡಿದೆ ಎಂದು ಅಧಿಕೃತ ಸ್ಪಷ್ಟನೆ ನೀಡಿದೆ.

ಕರ್ನಾಟಕದಲ್ಲಿ 'ತಾರ್ಕಿಕ ವ್ಯತ್ಯಾಸ' ಮತ್ತು ರಾಜಕೀಯ ಚರ್ಚೆ

ಕರ್ನಾಟಕದಲ್ಲೂ ಎಸ್‌ಐಆರ್ ಆರಂಭಿಕ ಹಂತದಲ್ಲಿ ಸುಮಾರು 46 ಲಕ್ಷ ಮತದಾರರ ದಾಖಲೆಗಳು ಹಳೆಯ ದಾಖಲೆಗಳೊಂದಿಗೆ ಜೋಡಣೆಯಾಗಿರಲಿಲ್ಲ. ಪ್ರಕಟವಾದ ಕರಡು ಪಟ್ಟಿಯಲ್ಲಿ 1.08 ಕೋಟಿ ಮತದಾರರನ್ನು ಗೈರು, ಸ್ಥಳಾಂತರ ಅಥವಾ ಮೃತಪಟ್ಟ ವರ್ಗದಲ್ಲಿ ಗುರುತಿಸಲಾಗಿದ್ದು, 42.8 ಲಕ್ಷ ಮತದಾರರಿಗೆ ತಾರ್ಕಿಕ ವ್ಯತ್ಯಾಸದ (Logical Discrepancy) ಆಧಾರದಲ್ಲಿ ನೋಟಿಸ್ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರು ಸೂಕ್ತ ದಾಖಲೆಗಳನ್ನು ಸಲ್ಲಿಸಲು ಕನಿಷ್ಠ 3 ರಿಂದ 4 ವಾರಗಳ ಕಾಲಾವಕಾಶ ನೀಡಬೇಕು ಹಾಗೂ ವಿರೋಧ ಪಕ್ಷಗಳಿರುವ ರಾಜ್ಯಗಳನ್ನೇ ಗುರಿಯಾಗಿಸಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಮತ್ತೊಂದೆಡೆ, 'ಎದ್ದೇಳು ಕರ್ನಾಟಕ' ಸೇರಿದಂತೆ ವಿವಿಧ ಸಂಘಟನೆಗಳು ಸಣ್ಣಪುಟ್ಟ ವ್ಯತ್ಯಾಸಗಳ ಹೆಸರಿನಲ್ಲಿ ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಗಿಡಬಾರದು ಎಂದು ಒತ್ತಾಯಿಸಿವೆ.

Read More
Next Story