
ಆನ್ಲೈನ್ 'ಫಾರ್ಮ್-6' ಹಳೆ ಮಾದರಿಗೆ ಮರುಸ್ಥಾಪನೆ: ಕಡ್ಡಾಯ ಘೋಷಣಾಪತ್ರ ತೆರವು
ಆನ್ಲೈನ್ ಫಾರ್ಮ್-6 ನಲ್ಲಿ ಈ ಹೆಚ್ಚುವರಿ ಘೋಷಣಾಪತ್ರವಿತ್ತು, ಆದರೆ ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಲು ಲಭ್ಯವಿದ್ದ ಫಾರ್ಮ್ನಲ್ಲಿ ಇದು ಇರಲಿಲ್ಲ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ಈ ಹಿಂದೆ ವರದಿ ಮಾಡಿತ್ತು.
ಭಾರತೀಯ ಚುನಾವಣಾ ಆಯೋಗವು (ಇಸಿಐ) ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಬಳಸಲಾಗುವ ಆನ್ಲೈನ್ 'ಫಾರ್ಮ್-6' ಪ್ರಕ್ರಿಯೆಯನ್ನು, ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯದಿರುವ ರಾಜ್ಯಗಳಲ್ಲಿ ಹಳೆಯ ಮಾದರಿಯಲ್ಲೇ ಮರುಸ್ಥಾಪಿಸಿದೆ. ಪರಿಷ್ಕರಣೆ ವೇಳೆ ಕಡ್ಡಾಯಗೊಳಿಸಲಾಗಿದ್ದ ವಿವಾದಾತ್ಮಕ 'ಹೆಚ್ಚುವರಿ ಸ್ವಯಂ ಘೋಷಣಾಪತ್ರ'ವನ್ನು ಆನ್ಲೈನ್ ಅರ್ಜಿಯಿಂದ ಇದೀಗ ತೆರವುಗೊಳಿಸಲಾಗಿದೆ. ಸಾಮಾನ್ಯವಾಗಿ ಹೊಸ ಮತದಾರರು ಫಾರ್ಮ್-6 ಅನ್ನು ಬಳಸುತ್ತಾರೆ. ಆದರೆ ಎಸ್ಐಆರ್ ಸಂದರ್ಭದಲ್ಲಿ, ಪಟ್ಟಿಯಿಂದ ಕೈಬಿಟ್ಟುಹೋದ ಹೆಸರನ್ನು ಮರಳಿ ಸೇರಿಸಲು ಕೂಡ ಇದೇ ಫಾರ್ಮ್ ಬಳಸಲಾಗುತ್ತಿತ್ತು. ಈ ಘೋಷಣಾಪತ್ರ ಸಲ್ಲಿಕೆಯನ್ನು ಕಡ್ಡಾಯಗೊಳಿಸಿದ್ದರ ಕುರಿತು ಆಯೋಗದ ಒಳಗೇ ತೀವ್ರ ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ ಈ ಮಹತ್ವದ ಬದಲಾವಣೆ ಮಾಡಲಾಗಿದೆ.
ಆಯುಕ್ತರ ಅಸಮ್ಮತಿ ಹಾಗೂ ಕಾನೂನು ತೊಡಕು
ಮತದಾರರ ನೋಂದಣಿ ನಿಯಮಾವಳಿಗಳು 1960ರ ಅಡಿಯಲ್ಲಿ ಫಾರ್ಮ್-6 ಅನ್ನು ನಿಗದಿಪಡಿಸಲಾಗಿದೆ. ನಿಯಮಗಳ ಪ್ರಕಾರ, ಈ ಫಾರ್ಮ್ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿ ಮಾಡಬೇಕಾದರೆ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಮುಖಾಂತರವೇ ಆಗಬೇಕು. ಆದರೆ, ಈ ನಿಯಮಗಳನ್ನು ಮೀರಿ ಆನ್ಲೈನ್ ಫಾರ್ಮ್-6 ಜೊತೆಗೆ ಹೆಚ್ಚುವರಿ ಘೋಷಣಾಪತ್ರವನ್ನು ಕಡ್ಡಾಯಗೊಳಿಸಲಾಗಿತ್ತು. ಈ ವಿಷಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತರಾದ ವಿವೇಕ್ ಜೋಶಿ ಹಾಗೂ ಸುಖ್ಬೀರ್ ಸಿಂಗ್ ಸಂಧು ಅವರು, 2026ರ ಮೇ ಮತ್ತು ಆಗಸ್ಟ್ ತಿಂಗಳಲ್ಲಿ ಪ್ರತ್ಯೇಕ ಪತ್ರಗಳ ಮೂಲಕ ತಮ್ಮ ಅಸಮ್ಮತಿಯನ್ನು ದಾಖಲಿಸಿದ್ದರು. ಜನಪ್ರತಿನಿಧಿ ಕಾಯ್ದೆ 1950ರ ಅನ್ವಯ ಇಂತಹ ಬದಲಾವಣೆಯ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇರುತ್ತದೆ ಎಂಬುದನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು.
ತಾಂತ್ರಿಕ ಗೊಂದಲ ಹಾಗೂ ಘೋಷಣಾಪತ್ರದ ಹಿನ್ನೆಲೆ
ಬಿಹಾರದಲ್ಲಿ ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದಾಗ, ಪೂರ್ಣ ಆಯೋಗದ ಅನುಮೋದನೆಯೊಂದಿಗೆ ಫಾರ್ಮ್-6 ಮತ್ತು ಫಾರ್ಮ್-8ರ ಜೊತೆಗೆ ಈ ಸ್ವಯಂ ಘೋಷಣಾಪತ್ರವನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಈ ಘೋಷಣಾಪತ್ರದಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರು, ಅಜ್ಜ-ಅಜ್ಜಿಯಂದಿರು ಹಿಂದಿನ ಎಸ್ಐಆರ್ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿದ್ದರೇ ಎಂಬ ಮಾಹಿತಿ ಹಾಗೂ ಬೂತ್ ಮತ್ತು ಸೀರಿಯಲ್ ಸಂಖ್ಯೆಗಳನ್ನು ಒದಗಿಸುವುದು ಕಡ್ಡಾಯವಾಗಿತ್ತು. ತಾಂತ್ರಿಕವಾಗಿ, ಅರ್ಜಿದಾರರು ಫಾರ್ಮ್-6 ಮತ್ತು ಘೋಷಣಾಪತ್ರ ಎರಡಕ್ಕೂ ಪ್ರತ್ಯೇಕವಾಗಿ ಇ-ಸಹಿ ಮಾಡುವುದನ್ನು ತಪ್ಪಿಸಲು ಐಟಿ ವಿಭಾಗವು ಈ ಎರಡನ್ನೂ ಜೋಡಿಸಿತ್ತು. ಇದರಿಂದಾಗಿ, ಘೋಷಣಾಪತ್ರ ಭರ್ತಿ ಮಾಡದೆ ಆನ್ಲೈನ್ ಫಾರ್ಮ್ ಸಬ್ಮಿಟ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಕುತೂಹಲಕಾರಿ ಅಂಶವೆಂದರೆ, ಆನ್ಲೈನ್ನಲ್ಲಿ ಕಡ್ಡಾಯವಾಗಿದ್ದ ಈ ನಿಯಮ, ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾದ ಮುದ್ರಿತ ಫಾರ್ಮ್ನಲ್ಲಿ ಇರಲಿಲ್ಲ.
ಎಸ್ಐಆರ್ ರಾಜ್ಯಗಳಿಗೆ ಮಾತ್ರ ಸೀಮಿತಗೊಳಿಸಿದ ಆಯೋಗ
ಆಂತರಿಕ ಆಕ್ಷೇಪಣೆಗಳು ಹಾಗೂ ತಾಂತ್ರಿಕ ಗೊಂದಲಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26ರಂದು ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗವು, ಈ ಹೆಚ್ಚುವರಿ ಘೋಷಣಾಪತ್ರವು ಪ್ರಸ್ತುತ ಎಸ್ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವ ರಾಜ್ಯಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ತಿಳಿಸಿದೆ. ಸೆಪ್ಟೆಂಬರ್ 29ರ ವೇಳೆಗೆ ಆನ್ಲೈನ್ ಪೋರ್ಟಲ್ನಲ್ಲಿ ತಾಂತ್ರಿಕ ಬದಲಾವಣೆಗಳನ್ನು ಮಾಡಲಾಗಿದ್ದು, ಪೋಷಕರ ವಿವರಗಳನ್ನು ಕೇಳುವ ಕಾಲಮ್ಗಳನ್ನು ತೆಗೆದುಹಾಕಲಾಗಿದೆ. ಮತ್ತೊಂದೆಡೆ, ಫಾರ್ಮ್-6 ನಲ್ಲೇ ಯಾವುದೇ ನೇರ ತಿದ್ದುಪಡಿ ಮಾಡಿಲ್ಲ ಹಾಗೂ ಈ ಹೆಚ್ಚುವರಿ ಘೋಷಣಾಪತ್ರವನ್ನು ಸೇರಿಸುವ ಆಯೋಗದ ಅಧಿಕಾರವನ್ನು ಕಳೆದ ಮೇ 27ರಂದು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿತ್ತು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

