ಫಾರ್ಮ್ 6 ತಿದ್ದುಪಡಿ ವಿವಾದ: ರಾಹುಲ್ ಆರೋಪ ತಳ್ಳಿಹಾಕಿದ ಚುನಾವಣಾ ಆಯೋಗ
x

ಫಾರ್ಮ್ 6 ಅನ್ನು ಕಾನೂನುಬಾಹಿರವಾಗಿ ಬದಲಿಸಲಾಗಿದೆ ಎಂಬ ರಾಹುಲ್ ಗಾಂಧಿ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿದ್ದು, ಹೇಳಿಕೆ ದಾರಿ ತಪ್ಪಿಸುವಂತದ್ದು ಎಂದು ಸ್ಪಷ್ಟಪಡಿಸಿದೆ.

ಫಾರ್ಮ್ 6 ತಿದ್ದುಪಡಿ ವಿವಾದ: ರಾಹುಲ್ ಆರೋಪ ತಳ್ಳಿಹಾಕಿದ ಚುನಾವಣಾ ಆಯೋಗ

ಚುನಾವಣಾ ಆಯೋಗ ಈ ಆರೋಪಕ್ಕೆ ‘ಫ್ಯಾಕ್ಟ್ ಚೆಕ್’ ಮೂಲಕ ಪ್ರತಿಕ್ರಿಯಿಸಿ, ತನ್ನ ಹಿಂದಿನ ಆದೇಶ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ.


Click the Play button to hear this message in audio format

ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮಾಡಿದ್ದ ಗಂಭೀರ ಆರೋಪವನ್ನು ಕೇಂದ್ರ ಚುನಾವಣಾ ಆಯೋಗ ಸಾರಾಸಗಟಾಗಿ ತಳ್ಳಿಹಾಕಿದೆ. ಫಾರ್ಮ್ 6 ಅನ್ನು ಕಾನೂನುಬಾಹಿರವಾಗಿ ಹಾಗೂ ಏಕಪಕ್ಷೀಯವಾಗಿ ಬದಲಾವಣೆ ಮಾಡಲಾಗಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಯು ಸಂಪೂರ್ಣವಾಗಿ ದಾರಿ ತಪ್ಪಿಸುವಂತದ್ದು ಎಂದು ಆಯೋಗ ಸೋಮವಾರ ಸ್ಪಷ್ಟನೆ ನೀಡಿದೆ. ಈ ಮೂಲಕ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಎದ್ದಿದ್ದ ಭಾರೀ ರಾಜಕೀಯ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ರಾಹುಲ್ ಗಾಂಧಿ ಆರೋಪ ಮತ್ತು ಆಯೋಗದ ತಿರುಗೇಟು

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಭಾರತೀಯ ಜನತಾ ಪಾರ್ಟಿಗೆ (ಬಿಜೆಪಿ) ಅನುಕೂಲ ಮಾಡಿಕೊಡುವ ದುರುದ್ದೇಶದಿಂದ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಇದರ ಭಾಗವಾಗಿಯೇ ಅವರು ಫಾರ್ಮ್ 6 ಅನ್ನು ಏಕಪಕ್ಷೀಯವಾಗಿ ಮಾರ್ಪಾಡು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆದರೆ, ಈ ಆರೋಪಗಳಿಗೆ 'ಫ್ಯಾಕ್ಟ್ ಚೆಕ್' ಮೂಲಕ ಕಟುವಾಗಿ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, ಇದರಲ್ಲಿ ಯಾವುದೇ ಹುರುಳಿಲ್ಲ ಎಂದಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಕುರಿತು 2025ರ ಜೂನ್ 24ರಂದು ಹೊರಡಿಸಲಾಗಿದ್ದ ಆದೇಶಕ್ಕೆ ಚುನಾವಣಾ ಆಯೋಗದ ಸರ್ವಾನುಮತದ ಅನುಮೋದನೆ ಇತ್ತು. ಅಷ್ಟೇ ಅಲ್ಲದೆ, ಈ ಆದೇಶವನ್ನು 2026ರ ಮೇ 27ರಂದು ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ ಎಂದು ಆಯೋಗ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ಏನಿದು ಫಾರ್ಮ್ 6 ಮತ್ತು ಘೋಷಣಾಪತ್ರದ ಗೊಂದಲ?

ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಸಾಮಾನ್ಯವಾಗಿ ಫಾರ್ಮ್ 6 ಎಂಬ ಅರ್ಜಿಯನ್ನು ಬಳಸಲಾಗುತ್ತದೆ. ಇತ್ತೀಚೆಗೆ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಈ ಫಾರ್ಮ್ 6ರ ಜೊತೆಗೆ ಒಂದು ಹೆಚ್ಚುವರಿ ಘೋಷಣಾ ಪತ್ರವನ್ನು ಲಗತ್ತಿಸಲಾಗಿತ್ತು. ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಬಯಸುವವರು ತಮ್ಮ ಪೋಷಕರ ವಿವರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಘೋಷಣಾಪತ್ರದಲ್ಲಿ ನೀಡುವುದು ಕಡ್ಡಾಯವಾಗಿತ್ತು. ಆನ್‌ಲೈನ್ ಮೂಲಕ ಫಾರ್ಮ್ 6 ಭರ್ತಿ ಮಾಡುವಾಗ ಮತ್ತು ಹೆಚ್ಚುವರಿ ಘೋಷಣಾ ಪತ್ರವನ್ನು ಸಲ್ಲಿಸುವಾಗ ಒಂದೇ ಬಾರಿ 'ಒನ್‌ಟೈಮ್ ಪಾಸ್‌ವರ್ಡ್' (ಓಟಿಪಿ) ಕೇಳಲಾಗುತ್ತಿತ್ತು. ತಾಂತ್ರಿಕವಾಗಿ ಒಂದೇ ಓಟಿಪಿ ಬಳಕೆಯಾಗುತ್ತಿದ್ದ ಕಾರಣ, ಹೆಚ್ಚುವರಿ ಘೋಷಣಾ ಪತ್ರವೂ ಸಹ ಫಾರ್ಮ್ 6ರ ಅವಿಭಾಜ್ಯ ಅಂಗವೇ ಎಂಬ ದೊಡ್ಡ ಚರ್ಚೆ ಹುಟ್ಟಿಕೊಂಡಿತ್ತು. ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಆಯೋಗ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆಯದ ರಾಜ್ಯಗಳ ಆನ್‌ಲೈನ್ ಪೋರ್ಟಲ್‌ಗಳಿಂದ ಈ ಹೆಚ್ಚುವರಿ ಘೋಷಣಾ ಪತ್ರವನ್ನು ಹಿಂಪಡೆದುಕೊಂಡಿದೆ.

ಸುಪ್ರೀಂ ಕೋರ್ಟ್ ಸ್ಪಷ್ಟನೆ ಹಾಗೂ ಆಯೋಗದ ಫ್ಯಾಕ್ಟ್ ಚೆಕ್

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಮಹತ್ವದ ಸ್ಪಷ್ಟನೆ ನೀಡಿದೆ. ಚುನಾವಣಾ ಆಯೋಗ ಪ್ರಸ್ತುತ ಬಳಸುತ್ತಿರುವ ಫಾರ್ಮ್ 6ರ ಯಾವುದೇ ಮೂಲ ಮಾರ್ಪಾಡಿಗೆ ನ್ಯಾಯಾಲಯವು ಈವರೆಗೆ ಯಾವುದೇ ಅನುಮೋದನೆ ನೀಡಿಲ್ಲ ಎಂದು ಹೇಳಿದೆ. ಅಲ್ಲದೆ, ಸಂಬಂಧಪಟ್ಟ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಅಸಲಿಗೆ ಫಾರ್ಮ್ 6 ಅನ್ನು ಯಾರು ಮಾರ್ಪಡಿಸಿದ್ದಾರೆ ಹಾಗೂ ಯಾವ ನಿಯಮಗಳ ಅಡಿಯಲ್ಲಿ ಬದಲಾವಣೆ ಮಾಡಲಾಗಿದೆ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸುವುದಾಗಿ ಪೀಠವು ತಿಳಿಸಿದೆ. ಇದರ ಬೆನ್ನಲ್ಲೇ, ಸೆಪ್ಟೆಂಬರ್ 26ರ ಪತ್ರಿಕಾ ಪ್ರಕಟಣೆಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಅಳಿಸಿಹಾಕಲಾಗಿದೆ ಎಂಬ ಆರೋಪಗಳನ್ನೂ ನಿರಾಕರಿಸಿರುವ ಚುನಾವಣಾ ಆಯೋಗ, ವಿಪಕ್ಷಗಳ ಟೀಕೆಗಳಿಗೆ ಸಾಕ್ಷ್ಯಾಧಾರಗಳ ಸಮೇತ ಉತ್ತರ ನೀಡಿದೆ.

Read More
Next Story