Ebola Virus | Ebola suspected in Gujarat: Four people including Congolese businessman in isolation
x

ಸಾಂದರ್ಭಿಕ ಚಿತ್ರ

Ebola Virus | ಗುಜರಾತ್‌ನಲ್ಲಿ ಎಬೋಲಾ ಶಂಕೆ: ಕಾಂಗೋ ಮೂಲದ ಉದ್ಯಮಿ ಸೇರಿ ನಾಲ್ವರು ಐಸೋಲೇಷನ್‌ಗೆ

ಕಾಂಗೋ ಮೂಲದ ಉದ್ಯಮಿಯಲ್ಲಿ ಎಬೋಲಾ ಶಂಕೆ ಹಿನ್ನೆಲೆ ಗುಜರಾತ್‌ನಲ್ಲಿ ನಾಲ್ವರನ್ನು ಐಸೋಲೇಷನ್‌ಗೆ ದಾಖಲಿಸಲಾಗಿದೆ. ಭಾರತದಲ್ಲಿ ಇನ್ನೂ ಎಬೋಲಾ ಪ್ರಕರಣ ದೃಢಪಟ್ಟಿಲ್ಲ ಎಂದು ಆರೋಗ್ಯ ಸಚಿವ ಪ್ರಫುಲ್ ಪನ್ಶೇರಿಯಾ ಸ್ಪಷ್ಟನೆ ನೀಡಿದ್ದಾರೆ.


Click the Play button to hear this message in audio format

ಕಾಂಗೋ ಮೂಲದ ಉದ್ಯಮಿಯೊಬ್ಬರಲ್ಲಿ ಎಬೋಲಾ ವೈರಸ್ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರೊಂದಿಗೆ ಸಂಪರ್ಕಕ್ಕೆ ಬಂದ ಮೂವರನ್ನು ಸೇರಿಸಿ ಒಟ್ಟು ನಾಲ್ವರನ್ನು ಗುಜರಾತ್‌ನ ವಿವಿಧ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಗೆ ದಾಖಲಿಸಲಾಗಿದೆ. ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಪುಣೆಗೆ ಕಳುಹಿಸಲಾಗಿದೆ ಎಂದು ಗುಜರಾತ್ ಆರೋಗ್ಯ ಸಚಿವ ಪ್ರಫುಲ್‌ ಪನ್ಶೆರಿಯಾತಿಳಿಸಿದ್ದಾರೆ.

37 ವರ್ಷದ ಉದ್ಯಮಿ ಸುಮಾರು ಐದುರಿಂದ ಏಳು ದಿನಗಳ ಹಿಂದೆ ಕಾಂಗೋದಿಂದ ಮುಂಬೈಗೆ ಆಗಮಿಸಿ ನಂತರ ವಡೋದರಕ್ಕೆ ತೆರಳಿದ್ದರು. ಬಳಿಕ ಅವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಡೋದರಾದ ಬ್ಯಾಂಕರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.

ನಂತರ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಸ್ಥಳಾಂತರಿಸಿ ಎಬೋಲಾ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ರೋಗಿಯ ಆರೋಗ್ಯ ಸ್ಥಿರವಾಗಿದ್ದು, ದೇಹದ ತಾಪಮಾನ ನಿಯಂತ್ರಣದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ. ಉದ್ಯಮಿಯೊಂದಿಗೆ ಬಂದಿದ್ದ ಇನ್ನಿಬ್ಬರನ್ನು ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಅಹಮದಾಬಾದ್‌ನ ಎಸ್‌ವಿಪಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರ ಸಂಪರ್ಕಕ್ಕೆ ಬಂದ ಮತ್ತೊಬ್ಬ ವ್ಯಕ್ತಿಯನ್ನೂ ಪ್ರತ್ಯೇಕವಾಗಿ ಇರಿಸಲಾಗಿದೆ.

ಈ ನಾಲ್ವರು 10 ರಿಂದ 11 ದಿನಗಳವರೆಗೆ ಐಸೋಲೇಷನ್‌ನಲ್ಲಿ ಇರಲಿದ್ದು, ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ಪುಣೆಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಭಾರತದಲ್ಲಿ ಎಬೋಲಾ ದೃಢಪಟ್ಟಿಲ್ಲ

ಆರೋಗ್ಯ ಸಚಿವರು ಮಾತನಾಡಿ, “ಇದುವರೆಗೆ ಭಾರತದಲ್ಲಿಯೂ, ಗುಜರಾತ್‌ನಲ್ಲಿಯೂ ಒಂದೇ ಒಂದು ಎಬೋಲಾ ಪ್ರಕರಣವೂ ದೃಢಪಟ್ಟಿಲ್ಲ. ಇದು ಕೇವಲ ಮುನ್ನೆಚ್ಚರಿಕಾ ಕ್ರಮ ಮಾತ್ರ. ಜನರು ಆತಂಕ ಪಡುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮೊದಲು ಇದೇ ರೀತಿಯ ಪ್ರಕರಣವೊಂದರಲ್ಲಿ ವ್ಯಕ್ತಿಯನ್ನು ಐಸೋಲೇಷನ್‌ಗೆ ಒಳಪಡಿಸಲಾಗಿದ್ದು, ನಂತರ ವರದಿ ನೆಗೆಟಿವ್ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ವಿಮಾನ ನಿಲ್ದಾಣಗಳಲ್ಲಿ ತೀವ್ರ ತಪಾಸಣೆ

ಉಗಾಂಡಾ, ಕಾಂಗೋ ಹಾಗೂ ದಕ್ಷಿಣ ಸೂಡಾನ್ ಸೇರಿ ಕೆಲವು ಆಫ್ರಿಕಾ ದೇಶಗಳಲ್ಲಿ ಎಬೋಲಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ, ಗುಜರಾತ್ ಆರೋಗ್ಯ ಇಲಾಖೆ ಅಹಮದಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ತಪಾಸಣೆ ಆರಂಭಿಸಿದೆ.

ಈ ದೇಶಗಳಿಂದ ಬರುವ ಪ್ರಯಾಣಿಕರನ್ನು ತೀವ್ರವಾಗಿ ಸ್ಕ್ರೀನಿಂಗ್ ಮಾಡಲಾಗುತ್ತಿದ್ದು, ಜ್ವರ, ಕೆಮ್ಮು ಅಥವಾ ಶೀತದ ಲಕ್ಷಣಗಳಿದ್ದರೆ ತಕ್ಷಣ ವೈದ್ಯಕೀಯ ನಿಗಾದಲ್ಲಿ ಇರಿಸಲಾಗುತ್ತಿದೆ.

WHO ಎಚ್ಚರಿಕೆ

ವಿಶ್ವ ಆರೋಗ್ಯ ಸಂಸ್ಥೆ (WHO) ಮೇ 17ರಂದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಹಾಗೂ ಉಗಾಂಡಾದಲ್ಲಿ ಹರಡುತ್ತಿರುವ ಎಬೋಲಾ ಸೋಂಕನ್ನು ಅಂತರರಾಷ್ಟ್ರೀಯ ಮಟ್ಟದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿತ್ತು. ಈ ಹಿನ್ನೆಲೆ ಭಾರತದಲ್ಲೂ ಆರೋಗ್ಯ ಇಲಾಖೆ ಎಚ್ಚರಿಕೆ ಕ್ರಮಗಳನ್ನು ಹೆಚ್ಚಿಸಿದೆ.

ವದಂತಿಗಳಿಗೆ ಕಿವಿಗೊಡಬೇಡಿ

ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ. ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ತಕ್ಷಣ ಸಮೀಪದ ಆರೋಗ್ಯ ಅಧಿಕಾರಿಗಳು, ಆಸ್ಪತ್ರೆಗಳು ಅಥವಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

Read More
Next Story