
ದೆಹಲಿಯಲ್ಲಿ E85 ಇಂಧನ ಬಿಡುಗಡೆ, ಲೀಟರ್‌ಗೆ 20 ರೂ. ಉಳಿತಾಯ
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ದೆಹಲಿಯ ಪುಸಾ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಔಟ್ಲೆಟ್‌ನಲ್ಲಿ ರಾಷ್ಟ್ರ ರಾಜಧಾನಿಯ ಮೊದಲ ಇ85 ಇಂಧನ ಕೇಂದ್ರವನ್ನು ಉದ್ಘಾಟಿಸಿದರು.
ದೇಶದ ಇಂಧನ ಸ್ವಾವಲಂಬನೆಯ ಪಥದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಿದೆ. ಪರಿಸರ ಸ್ನೇಹಿ ಮತ್ತು ಆರ್ಥಿಕವಾಗಿ ಲಾಭದಾಯಕವಾದ 'ಇ85' ಇಂಧನವು ಅಧಿಕೃತವಾಗಿ ದೇಶದ ರಾಜಧಾನಿ ದೆಹಲಿಗೆ ಪ್ರವೇಶಿಸಿದೆ. ವಿಶ್ವ ಪರಿಸರ ದಿನ ಪ್ರಯುಕ್ತ ನಡೆದ ಈ ಮಹತ್ವದ ಬೆಳವಣಿಗೆ ನಡೆದಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, ದೆಹಲಿಯ ಪುಸಾ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಔಟ್ಲೆಟ್‌ನಲ್ಲಿ ರಾಷ್ಟ್ರ ರಾಜಧಾನಿಯ ಮೊದಲ ಇ85 ಇಂಧನ ಕೇಂದ್ರವನ್ನು ಉದ್ಘಾಟಿಸಿದರು. ಇದು ಕೇವಲ ಒಂದು ಬಂಕ್‌ನ ಉದ್ಘಾಟನೆಯಲ್ಲ, ಬದಲಾಗಿ ಭಾರತವು ಪಳೆಯುಳಿಕೆ ಇಂಧನಗಳಿಂದ ಜೈವಿಕ ಇಂಧನಗಳತ್ತ ಸಾಗುತ್ತಿರುವ ಮಹತ್ವದ ಪರಿವರ್ತನೆಯ ಸಂಕೇತವಾಗಿದೆ.
ಏನಿದು ಎ85 ಇಂಧನ?
ಎ85 ಇಂಧನವು ಪರಿಸರ ಸ್ನೇಹಿ ಎಥೆನಾಲ್ ಆಧಾರಿತ ಮಿಶ್ರಣವಾಗಿದೆ. ಶೇ.85 ಎಥೆನಾಲ್ ಕಬ್ಬು, ಜೋಳ ಮತ್ತು ಅಕ್ಕಿಯಂತಹ ಕೃಷಿ ಉತ್ಪನ್ನಗಳಿಂದ ಉತ್ಪಾದಿಸಲಾಗುತ್ತದೆ. ಶೇ.15 ಪೆಟ್ರೋಲ್ ಇಂಧನದ ದಹನ ಸಾಮರ್ಥ್ಯವನ್ನು ಹೆಚ್ಚಿಸಲು ಬಳಸಲಾಗುತ್ತದೆ. ಈಗಾಗಲೇ ದೇಶದಲ್ಲಿ ಚಾಲ್ತಿಯಲ್ಲಿರುವ ಎ20 (ಶೇ.20 ಎಥೆನಾಲ್, ಶೇ.80 ಪೆಟ್ರೋಲ್) ಇಂಧನಕ್ಕೆ ಹೋಲಿಸಿದರೆ, ಎ85 ಇಂಧನವು ಎಥೆನಾಲ್‌ನ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿದೆ. ಇದು ವಾಹನಗಳಿಂದ ಹೊರಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಪರಿಸರ ಮಾಲಿನ್ಯವನ್ನು ತಗ್ಗಿಸಲು ಸಹಕಾರಿಯಾಗಿದೆ.
ಎ85 ಇಂಧನದ ಅತ್ಯಂತ ಆಕರ್ಷಕ ಅಂಶವೆಂದರೆ ಅದರ ಬೆಲೆ. ಸದ್ಯ ದೆಹಲಿಯಲ್ಲಿ ಇದರ ಬೆಲೆಯನ್ನು ಲೀಟರ್‌ಗೆ 82.12 ರೂ.ಗೆ ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ಇ20 ಪೆಟ್ರೋಲ್‌ಗಿಂತ ಸುಮಾರು 20 ರೂ. ರಷ್ಟು ಅಗ್ಗವಾಗಿದೆ. ಹಣದುಬ್ಬರದ ಈ ದಿನಗಳಲ್ಲಿ ಇಂಧನ ಬೆಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದ ಇಳಿಕೆಯು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಆರ್ಥಿಕ ನೆಮ್ಮದಿಯನ್ನು ನೀಡಲಿದೆ.
ಉದ್ದೇಶ ಹಾಗೂ ಗುರಿಗಳು
ಭಾರತವು ತನ್ನ ತೈಲ ಆಮದಿನ ಮೇಲೆ ಅತಿಯಾದ ಅವಲಂಬನೆಯನ್ನು ಹೊಂದಿದೆ. ಪ್ರತಿವರ್ಷ ಕಚ್ಚಾ ತೈಲಕ್ಕಾಗಿ ವಿದೇಶಿ ವಿನಿಮಯದ ಬೃಹತ್ ಮೊತ್ತವನ್ನು ಖರ್ಚು ಮಾಡಬೇಕಾಗುತ್ತದೆ. ಇ85 ಬಳಕೆ ಹೆಚ್ಚಾಗುವುದರಿಂದ ಎಥೆನಾಲ್ ಅನ್ನು ಸ್ಥಳೀಯವಾಗಿ ಉತ್ಪಾದಿಸುವುದರಿಂದ ವಿದೇಶಿ ತೈಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಕಬ್ಬು ಮತ್ತು ಧಾನ್ಯಗಳಿಂದ ಎಥೆನಾಲ್ ತಯಾರಿಸುವುದರಿಂದ ರೈತರಿಗೆ ಉತ್ತಮ ಮಾರುಕಟ್ಟೆ ಸಿಗುತ್ತದೆ. ಹಸಿರುಮನೆ ಅನಿಲಗಳ ಹೊರಸೂಸುವಿಕೆ ಕಡಿಮೆಯಾಗುತ್ತದೆ.
ಸರ್ಕಾರವು ಈ ಯೋಜನೆಯನ್ನು ಹಂತ ಹಂತವಾಗಿ ವಿಸ್ತರಿಸಲು ಬೃಹತ್ ಯೋಜನೆಗಳನ್ನು ರೂಪಿಸಿದೆ. ಮೊದಲ ಹಂತದಲ್ಲಿ ದೆಹಲಿ ಮತ್ತು ಮುಂಬೈ-ಪುಣೆ-ನಾಗ್ಪುರ ಕಾರಿಡಾರ್‌ಗಳಲ್ಲಿ 50 ರಿಂದ 100 ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು. ಈ ವರ್ಷದ ಅಂತ್ಯದ ವೇಳೆಗೆ 500 ಸ್ಟೇಷನ್‌ಗಳನ್ನು ಮತ್ತು 2027ರ ಅಂತ್ಯದ ವೇಳೆಗೆ ಭಾರತದ ಪ್ರಮುಖ ನಗರಗಳಲ್ಲಿ 5 ಸಾವಿರಕ್ಕೂ ಹೆಚ್ಚು ಇ85 ಇಂಧನ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.
ಯಾವ ವಾಹನಗಳಿಗೆ ಇದು ಸೂಕ್ತ?
E85 ಇಂಧನವು ಸಾಮಾನ್ಯ ವಾಹನಗಳಿಗೆ ಸೂಕ್ತವಲ್ಲ. ಇದನ್ನು 'ಫ್ಲೆಕ್ಸ್-ಫ್ಯೂಯಲ್' ತಂತ್ರಜ್ಞಾನವಿರುವ ವಾಹನಗಳಲ್ಲಿ ಮಾತ್ರ ಬಳಸಬೇಕು. ಎಂಜಿನ್ ಅನ್ನು E85 ಇಂಧನಕ್ಕೆ ಅನುಗುಣವಾಗಿ ಮಾರ್ಪಡಿಸಿರಬೇಕು. ಹೀರೋ ಕಂಪನಿಯು ತನ್ನ ಜನಪ್ರಿಯ ಸ್ಪ್ಲೆಂಡರ್ ಪ್ಲಸ್ ಮತ್ತು ಎಚ್‌ಎಫ್ ಡಿಲಕ್ಸ್ ಬೈಕ್‌ಗಳ ಫ್ಲೆಕ್ಸ್-ಫ್ಯೂಯಲ್ ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಈ ಬೈಕ್‌ಗಳ ಎಂಜಿನ್‌ನಲ್ಲಿ ಸುಮಾರು 39 ಮಾರ್ಪಾಡುಗಳನ್ನು ಮಾಡಲಾಗಿದ್ದು, ಇವು ಎ85 ಇಂಧನದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುತ್ತವೆ. ವಿಶೇಷವೆಂದರೆ, ಇಂಧನ ಬದಲಾದರೂ ಬೈಕ್‌ನ ಪವರ್ ಉತ್ಪಾದನೆ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಿಲ್ಲ.
ಸದ್ಯ ರಸ್ತೆಗಳಲ್ಲಿರುವ ವಾಹನಗಳಲ್ಲಿ E85 ಕಾಂಪ್ಲೈಂಟ್ ವಾಹನಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಹೊಸ ವಾಹನಗಳನ್ನು ಖರೀದಿಸುವಾಗ ಗ್ರಾಹಕರು ಫ್ಲೆಕ್ಸ್-ಫ್ಯೂಯಲ್ ಆಯ್ಕೆಯನ್ನು ಆರಿಸಿಕೊಳ್ಳುವ ಅಗತ್ಯವಿದೆ. ವಾಹನ ತಯಾರಕ ಕಂಪನಿಗಳು ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಫ್ಲೆಕ್ಸ್-ಫ್ಯೂಯಲ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆಸಿವೆ.

