
ಶುದ್ಧ ಪೆಟ್ರೋಲ್‌ಗೆ ಮರಳುವ ಪ್ರಸ್ತಾಪವಿಲ್ಲ, ‘ಇ20’ ಇಂಧನವೇ ಭವಿಷ್ಯ : ಕೇಂದ್ರ ಸರ್ಕಾರದ ಸ್ಪಷ್ಟನೆ:
ಶೇಕಡಾ 85ರಷ್ಟು ಎಥೆನಾಲ್ ಹೊಂದಿರುವ 'ಇ85' ಇಂಧನವನ್ನು ಕೇವಲ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಪ್ರಮಾಣೀಕರಿಸಲಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಪೂರೈಕೆಯ ಭಾಗವಾಗಿಲ್ಲ ಎಂದು ಸರ್ಕಾರ ಹೇಳಿದೆ.
'ಇ20' ಅಂದರೆ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ ಸುರಕ್ಷಿತ, ಶುದ್ಧ ಹಾಗೂ ಸುಧಾರಿತ ತಂತ್ರಜ್ಞಾನದ ಇಂಧನವಾಗಿದೆ. ಹೀಗಾಗಿ ಮತ್ತೆ ಎಥೆನಾಲ್ ಮುಕ್ತವಾದ 'ಶುದ್ಧ' ಪೆಟ್ರೋಲ್ ಪೂರೈಕೆಗೆ ಮರಳುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ.
ಸುಧಾರಿತ ಮತ್ತು ಉತ್ತಮ ತಂತ್ರಜ್ಞಾನದತ್ತ ಸಾಗುವುದು ಸರ್ಕಾರದ ನೀತಿಯಾಗಿದ್ದು, ಹಳೆಯ ಹಾಗೂ ಕೆಳಮಟ್ಟದ ಗುಣಮಟ್ಟಕ್ಕೆ ಹಿಂದಿರುಗುವ ಪ್ರಶ್ನೆಯೇ ಇಲ್ಲ. ಹಾಗೆಯೇ, ಸದ್ಯಕ್ಕೆ ಶೇಕಡಾ 20ಕ್ಕಿಂತ ಹೆಚ್ಚು ಎಥೆನಾಲ್ ಮಿಶ್ರಣ ಮಾಡುವ ಯಾವುದೇ ನಿರ್ಧಾರವನ್ನು ಸಹ ಕೈಗೊಂಡಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಸುರೇಶ್ ಗೋಪಿ ಸಂಸತ್ತಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ನಿಗದಿತ ಅವಧಿಗಿಂತ ಮೊದಲೇ ಸಾಧನೆ
ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣದ ಗುರಿಯನ್ನು ಭಾರತವು ನಿಗದಿತ ಅವಧಿಗಿಂತ ಐದು ವರ್ಷ ಮುಂಚಿತವಾಗಿಯೇ ಸಾಧಿಸಿದೆ. 2022-23ನೇ ಸಾಲಿನಲ್ಲಿ ಸರಾಸರಿ ಎಥೆನಾಲ್ ಮಿಶ್ರಣ ಶೇಕಡಾ 12ರಷ್ಟಿತ್ತು. ಇದು 2023-24ರಲ್ಲಿ ಶೇಕಡಾ 14.6ಕ್ಕೆ ಹಾಗೂ 2024-25ರಲ್ಲಿ ಶೇಕಡಾ 19.2ಕ್ಕೆ ಏರಿಕೆಯಾಗಿತ್ತು. ಅಂತಿಮವಾಗಿ 2025-26ರ ನವೆಂಬರ್-ಜೂನ್ ವೇಳೆಗೆ ಈ ಪ್ರಮಾಣ ಯಶಸ್ವಿಯಾಗಿ ಶೇಕಡಾ 20ಕ್ಕೆ ತಲುಪಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ. ಇನ್ನು, ಶೇಕಡಾ 85ರಷ್ಟು ಎಥೆನಾಲ್ ಹೊಂದಿರುವ 'ಇ85' ಇಂಧನವನ್ನು ಕೇವಲ ಫ್ಲೆಕ್ಸ್-ಫ್ಯುಯೆಲ್ ವಾಹನಗಳಿಗೆ ಮಾತ್ರ ಪ್ರಮಾಣೀಕರಿಸಲಾಗಿದ್ದು, ಇದು ಸಾಮಾನ್ಯ ಪೆಟ್ರೋಲ್ ಪೂರೈಕೆಯ ಭಾಗವಾಗಿಲ್ಲ ಎಂದು ಸರ್ಕಾರ ವಿವರಿಸಿದೆ.
ಇ20 ಪೆಟ್ರೋಲ್ನಲ್ಲಿ ಯಾವುದೇ ಹಾನಿ ಇಲ್ಲ
ಸಾಮಾಜಿಕ ಜಾಲತಾಣಗಳಲ್ಲಿ ಇ20 ಪೆಟ್ರೋಲ್‌ನಿಂದ ವಾಹನಗಳ ಎಂಜಿನ್ ಹಾಳಾಗುತ್ತದೆ ಮತ್ತು ಮೈಲೇಜ್ ಕಡಿಮೆಯಾಗುತ್ತದೆ ಎಂಬ ಆತಂಕಗಳು ವ್ಯಕ್ತವಾಗಿದ್ದವು. ಆದರೆ, ನೀತಿ ಆಯೋಗ ಮತ್ತು ಇತರ ಸಂಸ್ಥೆಗಳು ನಡೆಸಿದ ವ್ಯಾಪಕ ಪ್ರಯೋಗಾಲಯ ಪರೀಕ್ಷೆಗಳು ಹಾಗೂ ನೈಜ ಬಳಕೆಯ ದತ್ತಾಂಶಗಳ ಪ್ರಕಾರ, ಇ20 ಪೆಟ್ರೋಲ್‌ನಿಂದ ವಾಹನದ ಎಂಜಿನ್‌ಗೆ ಯಾವುದೇ ಅಸಹಜ ಹಾನಿ ಅಥವಾ ಸವೆತ ಉಂಟಾಗುವುದಿಲ್ಲ ಎಂಬುದು ಸಾಬೀತಾಗಿದೆ. ಹಳೆಯ ವಾಹನಗಳೂ ಸೇರಿದಂತೆ 2025-26ನೇ ಸಾಲಿನಲ್ಲಿ 2.84 ಕೋಟಿ ಕಾರುಗಳಿಗೆ ಸರ್ವಿಸ್ ಮಾಡಿರುವ ಪ್ರಮುಖ ಕಾರು ತಯಾರಕ ಕಂಪನಿಯು, ಎಥೆನಾಲ್‌ನಿಂದಾಗಿ ಎಂಜಿನ್ ವೈಫಲ್ಯವಾಗಿರುವ ಯಾವುದೇ ದೂರುಗಳು ಬಂದಿಲ್ಲ ಎಂದು ವರದಿ ಮಾಡಿದೆ. ಸದ್ಯ ದೇಶಾದ್ಯಂತ 20 ಕೋಟಿಗೂ ಅಧಿಕ ದ್ವಿಚಕ್ರ ವಾಹನಗಳು ಹಾಗೂ 3 ಕೋಟಿಗೂ ಹೆಚ್ಚು ಪೆಟ್ರೋಲ್ ಕಾರುಗಳು ಇ15+ ಮತ್ತು ಇ20 ಇಂಧನದಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸಂಚರಿಸುತ್ತಿವೆ. ಇ10 ಇಂಧನಕ್ಕೆ ವಿನ್ಯಾಸಗೊಳಿಸಲಾದ ವಾಹನಗಳಲ್ಲಿ ಇ20 ಬಳಸಿದಾಗ ಮೈಲೇಜ್‌ನಲ್ಲಿ ಶೇಕಡಾ 3 ರಿಂದ 5ರಷ್ಟು ಇಳಿಕೆಯಾಗಬಹುದು. ಆದರೆ, ಇ20 ಇಂಧನದಲ್ಲಿರುವ ಹೆಚ್ಚಿನ ಆಕ್ಟೇನ್ ಸಂಖ್ಯೆಯಿಂದಾಗಿ ವಾಹನದ ಪಿಕ್-ಅಪ್, ಚಾಲನಾ ಗುಣಮಟ್ಟ ಮತ್ತು ಎಂಜಿನ್ ಕಾರ್ಯಕ್ಷಮತೆ ವೃದ್ಧಿಸುತ್ತದೆ ಎಂದು ಸ್ಪಷ್ಟನೆ ನೀಡಲಾಗಿದೆ.
ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯಿಂದಾಗಿ ಸುಮಾರು 2 ಲಕ್ಷ ಕೋಟಿ ರೂಪಾಯಿಗಳ ವಿದೇಶಿ ವಿನಿಮಯ ಉಳಿತಾಯವಾಗಿದೆ. ಇ20 ಪೆಟ್ರೋಲ್ ಬಳಕೆಯಿಂದ 316 ಲಕ್ಷ ಮೆಟ್ರಿಕ್ ಟನ್ ಕಚ್ಚಾ ತೈಲ ಆಮದು ಕಡಿಮೆಯಾಗಿದೆ. ಜತೆಗೆ, ಸುಮಾರು 952 ಲಕ್ಷ ಮೆಟ್ರಿಕ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆ ತಗ್ಗಿದೆ. ರೈತರಿಗೆ 1.66 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತ ಪಾವತಿಯಾಗಿದ್ದು, ಇದು ದೇಶಕ್ಕೆ ಭಾರಿ ಆರ್ಥಿಕ ಮತ್ತು ಪರಿಸರ ಲಾಭಗಳನ್ನು ತಂದುಕೊಟ್ಟಿದೆ. ಇ20 ಇಂಧನಕ್ಕೆ ಸಂಬಂಧಿಸಿದಂತೆ ದೂರುಗಳು ಅಥವಾ ಸಲಹೆಗಳಿದ್ದರೆ ಅದನ್ನು ನಿರ್ವಹಿಸಲು ಗ್ರಾಹಕರು ಪೆಟ್ರೋಲ್ ಬಂಕ್‌ಗಳ ದೂರು ಪುಸ್ತಕ, ಟೋಲ್-ಫ್ರೀ ಹೆಲ್ಪ್‌ಲೈನ್, ಸಾಮಾಜಿಕ ಜಾಲತಾಣಗಳು ಮತ್ತು ಮೀಸಲಾದ ಪೋರ್ಟಲ್‌ಗಳ ಮೂಲಕ ದೂರು ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ.

