ದಿಶಾ ಸಾಲಿಯನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ದಕ್ಷ ಅಧಿಕಾರಿ ಸೀಮಾ ಪಹೂಜಾ ನೇತೃತ್ವ
x

ದಿಶಾ ಸಾಲಿಯನ್ ಸಾವು ಪ್ರಕರಣ: ಸಿಬಿಐ ತನಿಖೆಗೆ ದಕ್ಷ ಅಧಿಕಾರಿ ಸೀಮಾ ಪಹೂಜಾ ನೇತೃತ್ವ

2020ರ ಜೂನ್ 8ರಂದು ಮುಂಬೈನ ಮಾಲಾಡ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನ 14ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯನ್ ಮೃತಪಟ್ಟಿದ್ದರು. ಇದಾದ ಕೆಲವೇ ದಿನಗಳ ಬಳಿಕ ಸುಶಾಂತ್ ಸಿಂಗ್ ರಜಪೂತ್ ಕೂಡ ಬಾಂದ್ರಾದ ನಿವಾಸದಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು.


ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ವ್ಯವಸ್ಥಾಪಕಿ ದಿಶಾ ಸಾಲಿಯನ್ ಅವರ 2020ರ ಸಾವಿನ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆಗೆ ಸಿಬಿಐನ ವಿಶೇಷ ಅಪರಾಧ ಘಟಕದ ಪೊಲೀಸ್ ಅಧೀಕ್ಷಕಿ ಸೀಮಾ ಪಹೂಜಾ ನೇತೃತ್ವ ವಹಿಸಲಿದ್ದಾರೆ.

ದಿಶಾ ಸಾಲಿಯನ್ ಅವರ ತಂದೆ ಸತೀಶ್ ಸಾಲಿಯನ್ ಸಲ್ಲಿಸಿದ್ದ ದೂರುಗಳು ಮತ್ತು ಆರೋಪಗಳ ಆಧಾರದ ಮೇಲೆ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, ನಟ ಡಿನೋ ಮೊರಿಯಾ ಸೇರಿದಂತೆ ಹಲವರ ಹೆಸರುಗಳು ದೂರಿನಲ್ಲಿ ಉಲ್ಲೇಖವಾಗಿವೆ. ಆದರೆ, ಎಫ್‌ಐಆರ್‌ನಲ್ಲಿ ಸದ್ಯ ಯಾವುದೇ ವ್ಯಕ್ತಿಯನ್ನು ಆರೋಪಿಯಾಗಿ ಹೆಸರಿಸಲಾಗಿಲ್ಲ.

2020ರಲ್ಲಿ ನಡೆದಿದ್ದೇನು?

2020ರ ಜೂನ್ 8ರಂದು ಮುಂಬೈನ ಮಾಲಾಡ್ ಪ್ರದೇಶದಲ್ಲಿರುವ ವಸತಿ ಕಟ್ಟಡದ 14ನೇ ಮಹಡಿಯಿಂದ ಬಿದ್ದು ದಿಶಾ ಸಾಲಿಯನ್ ಮೃತಪಟ್ಟಿದ್ದರು. ಇದಾದ ಕೆಲವೇ ದಿನಗಳ ಬಳಿಕ ಸುಶಾಂತ್ ಸಿಂಗ್ ರಜಪೂತ್ ಕೂಡ ಬಾಂದ್ರಾದ ನಿವಾಸದಲ್ಲಿ ಮೃತಪಟ್ಟಿದ್ದರು.

ದಿಶಾ ಅವರ ಸಾವನ್ನು ಆರಂಭದಲ್ಲಿ ಆಕಸ್ಮಿಕ ಸಾವು ಎಂದು ದಾಖಲಿಸಲಾಗಿತ್ತು. ಬಳಿಕ ಪೊಲೀಸರು ನಡೆಸಿದ ತನಿಖೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ದಿಶಾ ಅವರ ತಂದೆ ಸತೀಶ್ ಸಾಲಿಯನ್ ಕಳೆದ ವರ್ಷ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ದಿಶಾ ಸಾಲಿಯನ್ ಸಾವಿನ ಸುತ್ತಲಿನ ಪರಿಸ್ಥಿತಿಗಳ ಕುರಿತು ತನಿಖೆ ನಡೆಸಿ ಎಫ್‌ಐಆರ್ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಸೀಮಾ ಪಹೂಜಾ ಯಾರು?

ಸೀಮಾ ಪಹೂಜಾ ಪ್ರಸ್ತುತ ದೆಹಲಿಯ ಸಿಬಿಐ ಪ್ರಧಾನ ಕಚೇರಿಯ ವಿಶೇಷ ಅಪರಾಧ ಘಟಕದಲ್ಲಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಕರಣದ ತನಿಖೆಯಲ್ಲಿ ತನಿಖಾಧಿಕಾರಿ ಹಾಗೂ ಉಪ ಪೊಲೀಸ್ ಅಧೀಕ್ಷಕ ಪುರನ್ ಕುಮಾರ್ ಸೇರಿದಂತೆ ಇತರ ಸಿಬಿಐ ಅಧಿಕಾರಿಗಳು ಕೂಡ ಭಾಗಿಯಾಗಲಿದ್ದಾರೆ.

ಸಂಕೀರ್ಣ ಅಪರಾಧ ಪ್ರಕರಣಗಳು ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳ ತನಿಖೆಯಲ್ಲಿ ಸೀಮಾ ಪಹೂಜಾಗೆ ಅನುಭವವಿದೆ. 2024ರಲ್ಲಿ ಕೊಲ್ಕತ್ತಾದ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆ ನಡೆಸಿದ ಸಿಬಿಐ ತಂಡದಲ್ಲೂ ಅವರು ಇದ್ದರು.

ಉತ್ತರ ಪ್ರದೇಶದ ಹತ್ರಾಸ್ ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ 15 ಸದಸ್ಯರ ಸಿಬಿಐ ತಂಡದಲ್ಲೂ ಪಹೂಜಾ ಭಾಗವಾಗಿದ್ದರು. ಉನ್ನಾವೋ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿಯೂ ಅವರು ಪಾತ್ರ ವಹಿಸಿದ್ದರು. ಹಿಮಾಚಲ ಹಿಮಾಚಲ ಪ್ರದೇಶದ ಚರ್ಚಿತ ಗುಡಿಯಾ ಪ್ರಕರಣದ ತನಿಖೆಯ ಜವಾಬ್ದಾರಿಯನ್ನೂ ಸಿಬಿಐ ಅವರಿಗೆ ನೀಡಿತ್ತು. ಶಿಮ್ಲಾದಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ತನಿಖೆಯಲ್ಲಿಯೂ ಅವರು ಭಾಗಿಯಾಗಿದ್ದರು. 2021ರಲ್ಲಿ ಅತ್ಯುತ್ತಮ ತನಿಖಾಧಿಕಾರಿಗೆ ನೀಡಲಾಗುವ ಚಿನ್ನದ ಪದಕವನ್ನು ಸೀಮಾ ಪಹೂಜಾ ಪಡೆದಿದ್ದರು.

ಯಾವ ಆರೋಪಗಳ ಅಡಿಯಲ್ಲಿ ಎಫ್‌ಐಆರ್?

ದಿಶಾ ಸಾಲಿಯನ್ ಪ್ರಕರಣದಲ್ಲಿ ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿ ಅಪರಾಧ ಸಂಚು, ಸಾಮೂಹಿಕ ಅತ್ಯಾಚಾರ, ಕೊಲೆ, ಸಾಕ್ಷ್ಯ ನಾಶ ಹಾಗೂ ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಸರ್ಕಾರಿ ನೌಕರರಿಂದ ದಾಖಲೆಗಳನ್ನು ತಿರುಚಿದ ಆರೋಪಗಳಿಗೆ ಸಂಬಂಧಿಸಿದ ಕಲಂಗಳನ್ನು ಸೇರಿಸಲಾಗಿದೆ. ಆದರೆ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಈ ಆರೋಪಗಳ ಆಧಾರದ ಮೇಲೆ ಸದ್ಯ ಯಾರನ್ನೂ ಆರೋಪಿಯಾಗಿ ಹೆಸರಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಟಿಯಲ್ಲಿ ಇದ್ದವರ ಹೇಳಿಕೆ ದಾಖಲು

ತನಿಖೆಯ ಪ್ರಮುಖ ಭಾಗವಾಗಿ ದಿಶಾ ಸಾಲಿಯನ್ ಸಾವಿಗೂ ಮುನ್ನ ರಾತ್ರಿ ನಡೆದಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದವರ ಹೇಳಿಕೆಗಳನ್ನು ಸಿಬಿಐ ದಾಖಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಿಶಾ ಅವರ ನಿಶ್ಚಿತಾರ್ಥವಾಗಿದ್ದ ರೋಹನ್ ರಾಯ್ ಅವರ ಮುಂಬೈನ ನಿವಾಸದಲ್ಲಿ ಈ ಪಾರ್ಟಿ ನಡೆದಿತ್ತು ಎನ್ನಲಾಗಿದ್ದು, ಆ ರಾತ್ರಿ ನಡೆದ ಘಟನೆಗಳು ಹಾಗೂ ಲಭ್ಯವಿರುವ ಸಾಕ್ಷ್ಯಗಳ ನಡುವಿನ ಸಂಬಂಧವನ್ನು ತನಿಖಾಧಿಕಾರಿಗಳು ಪರಿಶೀಲಿಸಲಿದ್ದಾರೆ.

Read More
Next Story