
ವಿಮಾನದಲ್ಲೇ ಹೈಡ್ರಾಮಾ: ದೆಹಲಿಯಲ್ಲಿ ಸಿಜೆಪಿ ನಾಯಕರ ಬಂಧನ, ಯೂಟ್ಯೂಬರ್ ಧ್ರುವ್ ರಾಠೀ ಬಿಡುಗಡೆ
ಗುರುಂಗಾವ್ನ ತಮ್ಮ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠೀ ಅವರನ್ನು ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಭಾನುವಾರ ಜಂತರ್ ಮಂತರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿದ್ದ ಪ್ರತಿಭಟನೆಗೂ ಮುನ್ನ ದೆಹಲಿಯಲ್ಲಿ ಹೈಡ್ರಾಮಾ ನಡೆದಿದೆ. ಸಿಜೆಪಿ ನಾಯಕರಾದ ಅಭಿಜೀತ್ ಡಿಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಶನಿವಾರ ವಿಮಾನದಿಂದ ಇಳಿಯುವ ಮುನ್ನವೇ ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು, ಭಾನುವಾರ ದೆಹಲಿ ಕಂಟೋನ್ಮೆಂಟ್ನ ಹೆಚ್ಚುವರಿ ನಗರ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಗುರ್ಗಾಂವ್ನಲ್ಲಿರುವ ತಮ್ಮ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದ್ದ ಖ್ಯಾತ ಯೂಟ್ಯೂಬರ್ ಧ್ರುವ್ ರಾಠೀ ಅವರನ್ನು ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪೊಲೀಸರು ಬಿಡುಗಡೆ ಮಾಡಿದ್ದಾರೆ.
ವಿಮಾನದೊಳಗೆ ಪೊಲೀಸರ ಕಾರ್ಯಾಚರಣೆ
ಶನಿವಾರ ಮುಂಬೈನಿಂದ ದೆಹಲಿಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ಈ ನಾಟಕೀಯ ಬೆಳವಣಿಗೆಗಳು ನಡೆದಿವೆ. ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗುತ್ತಿದ್ದಂತೆಯೇ ಮಹಿಳಾ ಪೊಲೀಸರನ್ನು ಒಳಗೊಂಡ ತಂಡವು ಒಳನುಗ್ಗಿ ಮೂವರನ್ನೂ ವಶಕ್ಕೆ ಪಡೆದಿದೆ. ಈ ವೇಳೆ ವಿಮಾನದಲ್ಲಿದ್ದ ಇತರ ಪ್ರಯಾಣಿಕರು ತಮ್ಮ ಮೊಬೈಲ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ. ಪೊಲೀಸರ ಕಾರ್ಯಾಚರಣೆ ವೇಳೆ ಆಕ್ರೋಶಗೊಂಡ ಡಿಪ್ಕೆ, "ನಾನು ದೆಹಲಿಗೆ ಬಂದಿರುವುದೇ ಬಂಧನಕ್ಕೊಳಗಾಗಲು" ಎಂದು ಹೇಳಿರುವ ದೃಶ್ಯಗಳು ವೈರಲ್ ಆಗಿವೆ. ಈ ಮೂವರನ್ನು ಯಾವುದೇ ಅಧಿಕೃತ ಆರೋಪದ ಮೇಲೆ ಬಂಧಿಸಿಲ್ಲ, ಬದಲಿಗೆ ಹಳೆಯ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 107 ಮತ್ತು 151 ರ ಅಡಿಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಮ್ಯಾಜಿಸ್ಟ್ರೇಟ್ ಮುಂದೆ ಹಾಜರು
ಈ ಕುರಿತು ಮಾಹಿತಿ ನೀಡಿರುವ ಸಿಜೆಪಿ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಮೂವರನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಖಚಿತಪಡಿಸಿದ್ದಾರೆ. ದೆಹಲಿ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಈ ಮೂವರನ್ನೂ ಹಾಜರುಪಡಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 126 ರ ಅಡಿಯಲ್ಲಿ ಶಾಂತಿ ಕಾಪಾಡುವ ಭರವಸೆ ಪಡೆದು ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳುವ ಅಧಿಕಾರ ಮ್ಯಾಜಿಸ್ಟ್ರೇಟ್ಗಿದೆ. ಯಾವುದೇ ವಾರಂಟ್ ಇಲ್ಲದೆ ವಶಕ್ಕೆ ಪಡೆದ ವ್ಯಕ್ತಿಯನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಕಸ್ಟಡಿಯಲ್ಲಿ ಇಡುವಂತಿಲ್ಲ ಎನ್ನುವುದು ಕಾನೂನು ನಿಯಮವಾಗಿದೆ.
ಜಂತರ್ ಮಂತರ್ನಲ್ಲಿ ಬಿಗಿ ಭದ್ರತೆ
ತಮ್ಮ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿರುವ ನಡುವೆಯೂ, ಸಿಜೆಪಿ ಭಾನುವಾರ ಜಂತರ್ ಮಂತರ್ನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಶನಿವಾರವಷ್ಟೇ ಭಾರಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದ ದೆಹಲಿ ಪೊಲೀಸರು, 3,000ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದರು. ಜಂತರ್ ಮಂತರ್ ಸುತ್ತಮುತ್ತ 6,500ಕ್ಕೂ ಹೆಚ್ಚು ಸಿಬ್ಬಂದಿ ಸೇರಿದಂತೆ 20,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಕೇವಲ ಕಾನಾಟ್ ಪ್ಲೇಸ್ ಒಂದರಲ್ಲೇ 150 ಜನರನ್ನು ವಶಕ್ಕೆ ಪಡೆಯಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲವು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು, ಇಂಟರ್ನೆಟ್ ಸೇವೆ ಕಡಿತಗೊಳಿಸಲಾಗಿತ್ತು, ಜೊತೆಗೆ ವಾಹನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿತ್ತು. ಭಾನುವಾರ ಕೂಡ ಪ್ರತಿಭಟನೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.

