
ದೆಹಲಿಯಲ್ಲಿ ಸಿಜೆಪಿ ನಡೆಸಿದ 'ಸಂಸದ್ ಚಲೋ' ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, 118ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.
ದೆಹಲಿ 'ಸಂಸದ್ ಚಲೋ' ಹಿಂಸಾಚಾರ: 118 ಪೊಲೀಸರಿಗೆ ಗಾಯ, 70 ಪ್ರತಿಭಟನಾಕಾರರು ವಶಕ್ಕೆ
ನೀಟ್ ಅಕ್ರಮ ತಡೆಯುವಲ್ಲಿ ಕೇಂದ್ರ ಶಿಕ್ಷಣ ಸಚಿವರು ವಿಫಲರಾಗಿದ್ದಾರೆ ಎಂದು ಆರೋಪಿಸಿ 'ಕಾಕ್ರೋಚ್ ಜನತಾ ಪಾರ್ಟಿ' ನೇತೃತ್ವದಲ್ಲಿ ಸಾವಿರಾರು ಯುವಜನರು ಬೀದಿಗೆ ಇಳಿದು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಮುಂಗಾರು ಅಧಿವೇಶನದ ಆರಂಭದ ದಿನವೇ ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಟೀಚಾರ್ಜ್, ಆಶ್ರುವಾಯು ಹಾಗೂ ಜಲಫಿರಂಗಿ ಪ್ರಯೋಗ ಮಾಡಿದ್ದರಿಂದ ಆವರಣ ರಣಾಂಗಣವಾಗಿ ಮಾರ್ಪಟ್ಟಿತ್ತು.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಮ್ಮಿಕೊಂಡಿದ್ದ "ಸಂಸದ್ ಚಲೋ" ಪ್ರತಿಭಟನಾ ಮೆರವಣಿಗೆ ನವದೆಹಲಿಯಲ್ಲಿ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಈ ಘಟನೆಯಲ್ಲಿ ಹಿರಿಯ ಅಧಿಕಾರಿಗಳು ಸೇರಿದಂತೆ 118 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಸುಮಾರು 70 ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ದೆಹಲಿ ಪೊಲೀಸರು, ಪ್ರತಿಭಟನಾಕಾರರು ನಿಯಮಗಳನ್ನು ಉಲ್ಲಂಘಿಸಿ ತೀವ್ರ ಅಕ್ರಮ, ಉಗ್ರ ಹಾಗೂ ಹಿಂಸಾತ್ಮಕ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ನೀಡಿದ ಕಾನೂನುಬದ್ಧ ಸೂಚನೆಗಳು ಮತ್ತು ಪದೇ ಪದೇ ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಪ್ರತಿಭಟನಾಕಾರರು, ಜಾರಿಯಲ್ಲಿದ್ದ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಚದುರಲು ನಿರಾಕರಿಸಿದರು.
ಸಾರ್ವಜನಿಕ ಆಸ್ತಿಯ ಮೇಲಿನ ದಾಳಿ
ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಮತ್ತು ಇತರ ವಸ್ತುಗಳಿಂದ ದಾಳಿ ನಡೆಸಿದ್ದಲ್ಲದೆ, ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದರು. ಪೊಲೀಸ್ ಹಾಗೂ ಇತರ ಸರ್ಕಾರಿ ವಾಹನಗಳನ್ನು ಜಖಂಗೊಳಿಸಿ, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ. ಈ ಬೃಹತ್ ಪ್ರಮಾಣದ ಹಿಂಸಾಚಾರವು ಸಾರ್ವಜನಿಕ ಶಾಂತಿ, ಭದ್ರತಾ ವ್ಯವಸ್ಥೆ ಹಾಗೂ ಕರ್ತವ್ಯನಿರತ ಪೊಲೀಸರ ಸುರಕ್ಷತೆಗೆ ಗಂಭೀರ ಬೆದರಿಕೆಯನ್ನೊಡ್ಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರಿಗೆ ಗಾಯ
ಈ ಹಿಂಸಾಚಾರದಲ್ಲಿ ವಿಶೇಷ ಪೊಲೀಸ್ ಕಮಿಷನರ್, ಜಂಟಿ ಕಮಿಷನರ್, ಹೆಚ್ಚುವರಿ ಕಮಿಷನರ್, ಡಿಸಿಪಿ, ಹೆಚ್ಚುವರಿ ಡಿಸಿಪಿ ಮತ್ತು ಎಸಿಪಿ ದರ್ಜೆಯ ಹಿರಿಯ ಅಧಿಕಾರಿಗಳು ಹಾಗೂ ಹಲವು ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ 118 ಕ್ಕೂ ಹೆಚ್ಚು ಸಿಬ್ಬಂದಿ ಗಾಯಗೊಂಡಿದ್ದಾರೆ. ಇತ್ತ ಘಟನೆಯಲ್ಲಿ ಸುಮಾರು 60 ಪ್ರತಿಭಟನಾಕಾರರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಗೊಂಡಿರುವ ಉಳಿದ ಪೊಲೀಸ್ ಸಿಬ್ಬಂದಿಯ ವೈದ್ಯಕೀಯ ಪರೀಕ್ಷೆ (MLC) ಪ್ರಕ್ರಿಯೆ ಪ್ರಸ್ತುತ ನಡೆಯುತ್ತಿದೆ.
ಸರ್ಕಾರಿ ವಾಹನಗಳಿಗೆ ಹಾನಿ
ಪ್ರತಿಭಟನಾಕಾರರು ಸಾರ್ವಜನಿಕ ಆಸ್ತಿಗೆ ಭಾರಿ ಪ್ರಮಾಣದ ಹಾನಿ ಉಂಟುಮಾಡಿದ್ದು, ಘಟನೆಯಲ್ಲಿ ಸುಮಾರು 15 ರಿಂದ 20 ಸರ್ಕಾರಿ ವಾಹನಗಳು ಹಾಗೂ ಇತರ ಆಸ್ತಿಪಾಸ್ತಿಗಳು ಜಖಂಗೊಂಡಿವೆ. ಸದ್ಯ 70 ಪ್ರತಿಭಟನಾಕಾರರನ್ನು ಬಂಧಿಸಲಾಗಿದ್ದು, ಗಲಭೆ, ಸಾರ್ವಜನಿಕ ಸೇವಕರ ಮೇಲೆ ದಾಳಿ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಎಸಗಿದ ಆರೋಪದಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಇತರ ಸೂಕ್ತ ಕಾನೂನುಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿ ಪೊಲೀಸರು ಬದ್ಧರಾಗಿದ್ದು, ಅಕ್ರಮ ಹಾಗೂ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾದ ಎಲ್ಲರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

