ದೆಹಲಿ ಪ್ರತಿಭಟನೆಯಲ್ಲಿ ಸುನೀತಾ ವಿಲಿಯಮ್ಸ್, ನಾಸಿರುದ್ದೀನ್ ಶಾ? ವೈರಲ್ ವಿಡಿಯೋಗಳ ಅಸಲಿಯತ್ತೇನು?
ದೆಹಲಿ ವಿದ್ಯಾರ್ಥಿ ಪ್ರತಿಭಟನೆ ಬಳಿಕ ವೈರಲ್ ಆದ ಸುನೀತಾ ವಿಲಿಯಮ್ಸ್, ವಿಜಯ್, ನಾಸಿರುದ್ದೀನ್ ಶಾ ಹಾಗೂ ರೈಲು ಕಲ್ಲುತೂರಾಟದ ವಿಡಿಯೋಗಳ ಸತ್ಯಾಸತ್ಯತೆಯ ಫ್ಯಾಕ್ಟ್ ಚೆಕ್ ಇಲ್ಲಿದೆ.
ದೆಹಲಿ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷದ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಡಿಯೋಗಳು ವೈರಲ್ ಆಗಿವೆ. ಈ ವಿಡಿಯೋಗಳಲ್ಲಿ ಹಲವು ಪ್ರಮುಖ ವ್ಯಕ್ತಿಗಳು ಪ್ರತಿಭಟನೆಗೆ ಬೆಂಬಲ ನೀಡಿರುವಂತೆ, ಕೆಲವು ಘಟನೆಗಳು ನಡೆದಿರುವಂತೆ ಹೇಳಲಾಗುತ್ತಿದೆ. ಆದರೆ ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ಬಹುತೇಕವು ಸುಳ್ಳು ಅಥವಾ ತಪ್ಪು ಮಾಹಿತಿ ಆಧಾರಿತವಾಗಿರುವುದು ಬೆಳಕಿಗೆ ಬಂದಿದೆ.
ಸುನೀತಾ ವಿಲಿಯಮ್ಸ್ ವಿಡಿಯೋ ಸುಳ್ಳು
ವೈರಲ್ ವಿಡಿಯೋದಲ್ಲಿ ಬಾಹ್ಯಾಕಾಶ ಯಾತ್ರಿ ಸುನೀತಾ ವಿಲಿಯಮ್ಸ್ ಪ್ರತಿಭಟನೆಗೆ ಬೆಂಬಲ ನೀಡಿ ದೆಹಲಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಆದರೆ ಅದು ಸತ್ಯವಲ್ಲ. ವಿಡಿಯೋ ಕೇರಳ ಲಿಟರೇಚರ್ ಫೆಸ್ಟಿವಲ್‌ನಲ್ಲಿ ಅವರು ಭಾಗವಹಿಸಿದ್ದ ಸಂದರ್ಭದದ್ದು. ಅವರ ಕುತ್ತಿಗೆಯಲ್ಲಿರುವ ‘KLF’ (Kerala Literature Festival) ಗುರುತಿನ ಚೀಟಿ ಕೂಡ ಇದನ್ನು ಸ್ಪಷ್ಟಪಡಿಸುತ್ತದೆ.
ತಮಿಳುನಾಡು ಸಿಎಂ ವಿಜಯ್ ಬಗ್ಗೆ ತಪ್ಪು ಮಾಹಿತಿ
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಪ್ರತಿಭಟನೆಗೆ ಬೆಂಬಲ ನೀಡಲು ದೆಹಲಿಗೆ ಬಂದಿದ್ದಾರೆ ಎಂಬ ವಿಡಿಯೋ ಕೂಡ ಹರಿದಾಡುತ್ತಿದೆ. ಆದರೆ ಅದು ಚೆನ್ನೈನ ಲೊಯೊಲಾ ಕಾಲೇಜಿನಲ್ಲಿ ಜುಲೈ 4ರಂದು ನಡೆದ ವಿದ್ಯಾರ್ಥಿಗಳ ಕಾರ್ಯಕ್ರಮದ ದೃಶ್ಯವಾಗಿದ್ದು, ಪ್ರತಿಭಟನೆಗೆ ಯಾವುದೇ ಸಂಬಂಧ ಹೊಂದಿಲ್ಲ.
ನಾಸಿರುದ್ದೀನ್ ಶಾ ವಿಡಿಯೋವೂ ಮಾರ್ಫ್
ಹಿರಿಯ ನಟ ನಾಸಿರುದ್ದೀನ್ ಶಾ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ ಎನ್ನುವ ವಿಡಿಯೋ ಕೂಡ ಸುಳ್ಳಾಗಿದೆ. ಅದು ಮುಂಬೈನಲ್ಲಿ ನಡೆದ ರಂಗಭೂಮಿ ಕಾರ್ಯಕ್ರಮದ ವಿಡಿಯೋವಾಗಿದ್ದು, ಅದನ್ನು ಎಐ ಅಥವಾ ಇತರೆ ತಂತ್ರಜ್ಞಾನ ಬಳಸಿ ತಪ್ಪಾಗಿ ಪ್ರಚಾರ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ರೈಲಿಗೆ ಕಲ್ಲು ತೂರಾಟ ಮತ್ತು ವಿದ್ಯಾರ್ಥಿನಿ ಸಾವು – ಎರಡೂ ಸುಳ್ಳು
ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಹೈಡ್ರೋಜನ್ ರೈಲಿಗೆ ಕಲ್ಲು ತೂರಾಟ ನಡೆದಿದೆ ಎಂಬ ವಿಡಿಯೋ ಕೂಡ ತಪ್ಪು ಮಾಹಿತಿ. ರೈಲ್ವೆ ಇಲಾಖೆ ಈ ಘಟನೆಗೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಪೊಲೀಸ್ ಲಾಠಿಚಾರ್ಜ್‌ನಲ್ಲಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಸುದ್ದಿಯೂ ಸುಳ್ಳಾಗಿದೆ. ಕೆಲವರು ಗಾಯಗೊಂಡಿರುವುದು ನಿಜವಾದರೂ, ಸಾವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ಅಗತ್ಯ
ಯಾವುದೇ ದೊಡ್ಡ ಘಟನೆ ನಡೆದಾಗ ಹಳೆಯ ಅಥವಾ ಮಾರ್ಫ್ ಮಾಡಿದ ವಿಡಿಯೋಗಳನ್ನು ಹೊಸ ಘಟನೆಗಳಿಗೆ ಸಂಬಂಧಿಸಿ ಹರಡುವ ಪ್ರವೃತ್ತಿ ಹೆಚ್ಚುತ್ತಿದೆ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ವಿಡಿಯೋಗಳು ಮತ್ತು ಮಾಹಿತಿಯನ್ನು ನಂಬುವ ಮುನ್ನ ಅಧಿಕೃತ ಮೂಲಗಳಿಂದ ಪರಿಶೀಲನೆ ಮಾಡುವುದು ಅಗತ್ಯ ಎಂದು ಈ ಫ್ಯಾಕ್ಟ್ ಚೆಕ್ ವಿಡಿಯೋ ತಿಳಿಸಿದೆ.

