
ದೆಹಲಿ-ಎನ್ಸಿಆರ್ ಲೈಂಗಿಕ ದೌರ್ಜನ್ಯ: ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ದೆಹಲಿಯಲ್ಲಿ ಇತ್ತೀಚೆಗೆ ವರದಿಯಾದ ಹಲವು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ.
ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತ ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಸೋಮವಾರ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಕೈಗೆತ್ತಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಪ್ರತಿಕ್ರಿಯೆ ಕೇಳಿರುವ ನ್ಯಾಯಾಲಯ, ಉದ್ಯಾನಗಳು, ಬಸ್ಗಳು, ರಸ್ತೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ‘ಅಪಾಯ ಹೆಚ್ಚಿರುವ ಪ್ರದೇಶ’ಗಳಾಗಿ ಮಾರ್ಪಡಬಾರದು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ಪೀಠವು ದೆಹಲಿಯಲ್ಲಿ ಇತ್ತೀಚೆಗೆ ವರದಿಯಾದ ಹಲವು ಪ್ರಕರಣಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ. ಲೇಡಿ ಶ್ರೀರಾಮ್ ಕಾಲೇಜು ಸಮೀಪದ ಆಸ್ತಾ ಕುಂಜ್ ಉದ್ಯಾನದಲ್ಲಿ 17 ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಸ್ವರೂಪ್ ನಗರದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಬರುತ್ತಿದ್ದ ಬಸ್ನಲ್ಲಿ ಮತ್ತೊಬ್ಬ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಗಳು ವಿಚಾರಣೆಯ ವ್ಯಾಪ್ತಿಗೆ ಬಂದಿವೆ.
‘ನಿರ್ಭಯಾ ಪ್ರಕರಣದ ಜೊತೆ ಹೋಲಿಕೆ’
ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪದೇಪದೇ ವರದಿಯಾಗುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, 2012ರ ನಿರ್ಭಯಾ ಪ್ರಕರಣದೊಂದಿಗೆ ಇಂತಹ ಘಟನೆಗಳ ಹೋಲಿಕೆ ಕಂಡು ಬರುತ್ತಿವೆ ಎಂದು ಹೇಳಿದೆ. ಆ ಪ್ರಕರಣದಿಂದ ಅಗತ್ಯ ಪಾಠಗಳನ್ನು ಕಲಿಯಲಾಗಿದೆಯೇ ಎಂಬ ಪ್ರಶ್ನೆಯನ್ನೂ ನ್ಯಾಯಾಲಯ ಎತ್ತಿದೆ. ಸಂವಿಧಾನದ 21ನೇ ವಿಧಿಯಡಿ ಹಿಂಸೆಯಿಂದ ಮುಕ್ತವಾಗಿ ಗೌರವಯುತ ಜೀವನ ನಡೆಸುವ ಹಕ್ಕು ಮೂಲಭೂತ ಹಕ್ಕಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ಸಾರ್ವಜನಿಕ ಸ್ಥಳಗಳ ಸುರಕ್ಷತೆ ಬಗ್ಗೆ ಕಳವಳ
ಇತ್ತೀಚಿನ ಘಟನೆಗಳು ಉದ್ಯಾನ, ರಸ್ತೆ ಮತ್ತು ಬಸ್ಗಳಲ್ಲಿ ನಡೆದಿರುವುದನ್ನು ಗಮನಿಸಿದ ನ್ಯಾಯಪೀಠ, ಗಸ್ತು ವ್ಯವಸ್ಥೆಯ ಕೊರತೆ ಮತ್ತು ಸೂಕ್ತ ನಿಗಾ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕ ಸ್ಥಳಗಳಾದ ಉದ್ಯಾನಗಳು, ರಸ್ತೆಗಳು, ಬಸ್ಗಳು, ಮೆಟ್ರೋ ನಿಲ್ದಾಣಗಳು ಹಾಗೂ ಸುರಂಗ ಮಾರ್ಗಗಳು ಹೆಚ್ಚಿನ ಅಪಾಯದ ಪ್ರದೇಶಗಳಾಗಿ ಮಾರ್ಪಡಬಾರದು ಎಂದು ಹೇಳಿದೆ. ಆಸ್ತಾ ಕುಂಜ್ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನೂ ನ್ಯಾಯಾಲಯ ಗಮನಿಸಿದೆ. ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿಯರು ಈ ಹಿಂದೆ ಲೈಂಗಿಕ ಕಿರುಕುಳದ ಘಟನೆಗಳ ಬಗ್ಗೆ ದೂರು ನೀಡಿದ್ದರೂ, ಅವುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿತ್ತು.

