
ದೆಹಲಿಯ ಮಾಳವೀಯ ನಗರದ ಹೋಟೆಲ್‌ನಲ್ಲಿ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ.
ದೆಹಲಿ ಹೋಟೆಲ್‌ನಲ್ಲಿ ಭೀಕರ ಅಗ್ನಿ ಅನಾಹುತ: 20 ಜನರ ಸಾವು, ಹಲವರಿಗೆ ಗಾಯ
ದೆಹಲಿಯ ಮಾಳವೀಯ ನಗರದ ಹೋಟೆಲ್‌ನಲ್ಲಿ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 20 ಮಂದಿ ಸಾವನ್ನಪ್ಪಿದ್ದಾರೆ. ಬೇಸ್‌ಮೆಂಟ್ ರೆಸ್ಟೋರೆಂಟ್‌ನಿಂದ ಬೆಂಕಿ ಹರಡಿದೆ ಎಂದು ಶಂಕಿಸಲಾಗಿದೆ.
ದಕ್ಷಿಣ ದೆಹಲಿಯ ಮಾಳವೀಯ ನಗರದಲ್ಲಿರುವ ಹೋಟೆಲ್ ಒಂದರಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 20 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಕಿಯ ಜ್ವಾಲೆಯಿಂದ ರಕ್ಷಿಸಿಕೊಳ್ಳಲು ಹೋಟೆಲ್‌ನಲ್ಲಿದ್ದ ಗ್ರಾಹಕರು ಮೇಲಿನ ಮಹಡಿಗಳಿಂದ ಕೆಳಗೆ ಜಿಗಿದಿದ್ದು, ಸ್ಥಳದಲ್ಲಿ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ದಟ್ಟ ಜನಸಂದಣಿ ಇರುವ ಹೌಜ್ ರಾಣಿ ಪ್ರದೇಶದ ಐದು ಅಂತಸ್ತಿನ 'ಮಿಕಾಸಾ ಇನ್' ಹೋಟೆಲ್‌ನಲ್ಲಿ ಮುಂಜಾನೆ ಸುಮಾರು 8.50 ರ ಸುಮಾರಿಗೆ ಈ ಅಗ್ನಿ ಅವಘಡ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಹಲವಾರು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ, ಒಳಗಿದ್ದವರನ್ನು ರಕ್ಷಿಸಲು ಸುದೀರ್ಘ ಕಾರ್ಯಾಚರಣೆ ನಡೆಸಿದರು. ಬೆಂಕಿ ಕಾಣಿಸಿಕೊಂಡಾಗ ಹೋಟೆಲ್‌ನಲ್ಲಿ ಸುಮಾರು 40 ಜನರು ಇದ್ದರು ಎನ್ನಲಾಗಿದ್ದು, ಬಹುತೇಕರು ನಿದ್ರೆಯಲ್ಲಿದ್ದ ಕಾರಣ ತಕ್ಷಣವೇ ಹೊರಬರಲು ಸಾಧ್ಯವಾಗಲಿಲ್ಲ. ದಟ್ಟವಾದ ಹೊಗೆ ಇಡೀ ಕಟ್ಟಡವನ್ನು ಆವರಿಸಿಕೊಂಡಿದ್ದರಿಂದ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆ ಉಂಟಾಯಿತು.
ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ಚಿತ್ರೀಕರಿಸಿದ ದೃಶ್ಯಗಳು ಅತ್ಯಂತ ಭಯಾನಕವಾಗಿದ್ದು, ಕಿಟಕಿ ಮತ್ತು ಬಾಲ್ಕನಿಗಳಿಂದ ಜನರು ಪ್ರಾಣ ಉಳಿಸಿಕೊಳ್ಳಲು ಕೆಳಗೆ ಜಿಗಿಯುತ್ತಿರುವುದು ಕಂಡುಬಂದಿದೆ. ಬೆಂಕಿಯ ತೀವ್ರತೆ ಹಾಗೂ ಹೊಗೆಯಿಂದ ಪಾರಾಗಲು ಇಬ್ಬರು ಮಹಿಳೆಯರು ಹೋಟೆಲ್ ಮೇಲಿಂದ ಕೆಳಗೆ ಬಿದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಗಾಯಗೊಂಡವರನ್ನು ತಕ್ಷಣವೇ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆ ಮತ್ತು ಏಮ್ಸ್ ಟ್ರೌಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳೀಯ ನಿವಾಸಿಗಳ ಪ್ರಕಾರ, ಸುಮಾರು 25 ಕೊಠಡಿಗಳನ್ನು ಹೊಂದಿದ್ದ ಈ ಹೋಟೆಲ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಬರುವ ವಿದೇಶಿ ಪ್ರವಾಸಿಗರು ಹೆಚ್ಚಾಗಿ ತಂಗುತ್ತಿದ್ದರು. ಕಟ್ಟಡದ ಬೇಸ್‌ಮೆಂಟ್‌ನಲ್ಲಿ ರೆಸ್ಟೋರೆಂಟ್ ಒಂದು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿಂದಲೇ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಹೋಟೆಲ್‌ನ ಬೇಸ್‌ಮೆಂಟ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಬಾಣಸಿಗ ಕೇಸರ್ ಸಿಂಗ್ ಮಾತನಾಡಿ, ತಾವು ಮುಂಜಾನೆ ಎಲೆಕ್ಟ್ರಿಕ್ ಸ್ಟವ್ ಆನ್ ಮಾಡಲು ಹೋದಾಗ ಇದ್ದಕ್ಕಿದ್ದಂತೆ ಜ್ವಾಲೆಗಳು ಕಾಣಿಸಿಕೊಂಡವು ಮತ್ತು ಕ್ಷಣಾರ್ಧದಲ್ಲಿ ಇಡೀ ಕಟ್ಟಡಕ್ಕೆ ಬೆಂಕಿ ಆವರಿಸಿತು ಎಂದು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ.
ಘಟನೆಗೆ ನಿಖರವಾದ ಕಾರಣ ಏನೆಂಬುದರ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಹೋಟೆಲ್‌ನಲ್ಲಿ ಕಡ್ಡಾಯ ಅಗ್ನಿಶಾಮಕ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿದೆಯೇ ಇಲ್ಲವೇ ಎಂಬುದರ ತಪಾಸಣೆಯೂ ನಡೆಯುತ್ತಿದೆ. ಸದ್ಯ ಸ್ಥಳದಲ್ಲಿ ರಕ್ಷಣಾ ಮತ್ತು ಕಟ್ಟಡವನ್ನು ತಂಪಾಗಿಸುವ ಕಾರ್ಯ ಮುಂದುವರಿದಿದ್ದು, ಕೊಠಡಿಗಳ ಸಂಪೂರ್ಣ ಶೋಧ ಕಾರ್ಯ ಮುಗಿದ ನಂತರ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

