
ಜಂತರ್ ಮಂತರ್ನಲ್ಲಿ ಪತ್ರಕರ್ತೆಯರ ಮೇಲೆ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ಕ್ರೈಂ ಬ್ರಾಂಚ್ಗೆ ವರ್ಗಾವಣೆ
ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಭದ್ರತೆಗೆ ನಿಯೋಜಿಸಲಾದ ದೆಹಲಿ ಪೊಲೀಸರು ಮಹಿಳಾ ಪತ್ರಕರ್ತೆಯರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನಾ ಸ್ಥಳದಲ್ಲಿ ಕರ್ತವ್ಯನಿರತವಾಗಿದ್ದ ಮೂವರು ಮಹಿಳಾ ಪತ್ರಕರ್ತೆಯರಿಗೆ ದೆಹಲಿ ಪೊಲೀಸರಿಂದ ಲೈಂಗಿಕ ಕಿರುಕುಳ ಮತ್ತು ದುರ್ವರ್ತನೆ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯು ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಗಿದ್ದು, ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲು ದೆಹಲಿ ಪೊಲೀಸರು ಈ ದೂರುಗಳನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಿದ್ದಾರೆ.
ಶನಿವಾರದಂದು (ಅ.3) ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ದೆಹಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಿಳಾ ಪತ್ರಕರ್ತೆಯರ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ನೀಡಿದ್ದಾರೆ ಹಾಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ದೂರು ನೀಡಿದ ಮೂವರು ಮಹಿಳಾ ಪತ್ರಕರ್ತೆಯರು, ತಮಗೆ ಅನ್ಯಾಯವಾಗಿದೆ ಎಂದು ತಿಳಿಸಿದ್ದರು. ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ದೆಹಲಿ ಪೊಲೀಸ್ ಇಲಾಖೆ, ದೆಹಲಿ ಪ್ರದೇಶದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ವೇಳೆ ಮೂವರು ಮಹಿಳಾ ಪತ್ರಕರ್ತೆಯರು ಪೊಲೀಸ್ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೂರುಗಳನ್ನು ಸ್ವೀಕರಿಸಲಾಗಿದ್ದು, ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಕ್ರೈಂ ಬ್ರಾಂಚ್ಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕ್ರೈಂ ಬ್ರಾಂಚ್ ಅಧಿಕಾರಿಗಳು ಈ ಮೂವರು ಪತ್ರಕರ್ತೆಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಿದ್ದು, ಘಟನೆಗೆ ಸಂಬಂಧಿಸಿದ ಇತರ ಸಾಕ್ಷ್ಯಗಳನ್ನು ಸಂಗ್ರಹಿಸಲಿದ್ದಾರೆ.
ರಾಹುಲ್ ಗಾಂಧಿ ಕಿಡಿ: ಗೃಹ ಸಚಿವ ಅಮಿತ್ ಶಾ ಮೌನದ ವಿರುದ್ಧ ಆಕ್ರೋಶ
ಈ ಘಟನೆಯು ರಾಷ್ಟ್ರ ಮಟ್ಟದಲ್ಲಿ ರಾಜಕೀಯ ಸಂಚಲನ ಮೂಡಿಸಿದೆ. ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. "ಜಂತರ್ ಮಂತರ್ನಲ್ಲಿ ಪತ್ರಕರ್ತೆಯರ ಮೇಲೆ ಪೊಲೀಸರು ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ನೂರಾರು ಪತ್ರಕರ್ತರು ಗಂಟೆಗಟ್ಟಲೆ ಧರಣಿ ಕುಳಿತು ಕೇವಲ ಒಂದೇ ಒಂದು ಬೇಡಿಕೆ ಇಟ್ಟಿದ್ದಾರೆ. ಅದೇ ಎಫ್ಐಆರ್ ದಾಖಲಿಸಬೇಕು ಎಂಬುದಾಗಿದೆ. ಇದು ಪೊಲೀಸರ ಮೂಲಭೂತ ಕರ್ತವ್ಯವಲ್ಲವೇ? ಅದನ್ನು ಕೂಡ ಅವರು ಮಾಡಿಲ್ಲ" ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ ಅವರು, "ಪ್ರತಿಭಟನಾ ನಿರತ ಮಹಿಳೆಯರ ಮೇಲೆ ದುರ್ವರ್ತನೆ ನಡೆಸಲಾಗಿದೆ ಎಂಬ ಆರೋಪಗಳಿವೆ. ಪತ್ರಕರ್ತರ ಕ್ಯಾಮೆರಾಗಳನ್ನು ಕಸಿದುಕೊಳ್ಳಲಾಗಿದೆ, ಅವರನ್ನು ಎಳೆದಾಡಲಾಗಿದೆ. ಇದು ಮೊದಲ ಬಾರಿಯೇನಲ್ಲ; ಈ ಹಿಂದೆಯೂ ಪೊಲೀಸರು ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಕ್ಷ್ಯಗಳನ್ನು ನಾವು ನೋಡಿದ್ದೇವೆ" ಎಂದು ದೂರಿದ್ದಾರೆ.
ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ರಾಹುಲ್ ಗಾಂಧಿ ಅವರು, ದೆಹಲಿ ಪೊಲೀಸರು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಬರುವುದರಿಂದ, ಈ ಘಟನೆಗೆ ಗೃಹ ಸಚಿವ ಅಮಿತ್ ಶಾ ಉತ್ತರದಾಯಿಗಳಾಗಬೇಕು ಎಂದು ಒತ್ತಾಯಿಸಿದ್ದಾರೆ. "ದೆಹಲಿಯಾದ್ಯಂತ ಮಹಿಳೆಯರು ಮತ್ತು ವಿದ್ಯಾರ್ಥಿಗಳು ತಮ್ಮ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರ ಮೇಲೆ ಪೊಲೀಸರು ಬಲಪ್ರಯೋಗ ಮಾಡುತ್ತಿದ್ದಾರೆ. ಮಹಿಳೆಯೊಬ್ಬರ ದೂರನ್ನು ದಾಖಲಿಸಿಕೊಳ್ಳಲು ಹೆದರುವ ಸರ್ಕಾರ, ಅಸಲಿಗೆ ಯಾವುದನ್ನು ರಕ್ಷಿಸುತ್ತಿದೆ?" ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ. "ದೆಹಲಿ ಪೊಲೀಸರು ಗೃಹ ಸಚಿವಾಲಯದ ಅಡಿಯಲ್ಲಿ ಬರ್ತಾರೆ. ಅಮಿತ್ ಶಾ ಜೀ, ನೀವು ಎಲ್ಲಿದ್ದೀರಿ? ಈ ಘಟನೆಗೆ ನೀವು ಉತ್ತರಿಸಲೇಬೇಕು" ಎಂದು ಆಗ್ರಹಿಸಿದ್ದಾರೆ.
ಪತ್ರಕರ್ತರ ಪ್ರತಿಭಟನೆ
ದೆಹಲಿಯ ಪತ್ರಕರ್ತರು ದೂರು ದಾಖಲಿಸಲು ಮೀನಮೇಷ ಎಣಿಸುತ್ತಿರುವ ಪೊಲೀಸರ ಕ್ರಮವನ್ನು ವಿರೋಧಿಸಿ ಜಂತರ್ ಮಂತರ್ ಬಳಿ ಪ್ರತಿಭಟನೆಯನ್ನು ನಡೆಸಿದರು. ಮಹಿಳಾ ಪತ್ರಕರ್ತೆಯರ ಮೇಲಿನ ದೌರ್ಜನ್ಯವು ಮಾಧ್ಯಮ ಸ್ವಾತಂತ್ರ್ಯ ಮತ್ತು ಮಹಿಳಾ ಸುರಕ್ಷತೆಯ ಮೇಲೆ ನೇರ ದಾಳಿಯಾಗಿದೆ ಎಂದು ಪತ್ರಕರ್ತ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಕ್ರೈಂ ಬ್ರಾಂಚ್ಗೆ ಪ್ರಕರಣ ವರ್ಗಾವಣೆಯಾಗಿರುವುದು ಒಂದು ಮೊದಲ ಹೆಜ್ಜೆಯಾದರೂ, ತನಿಖೆಯು ಎಷ್ಟು ಪಾರದರ್ಶಕವಾಗಿ ನಡೆಯುತ್ತದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. ಕ್ರೈಂ ಬ್ರಾಂಚ್ನ ವಿಶೇಷ ತನಿಖಾ ತಂಡವು ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ. ಆರೋಪಿತ ಪೊಲೀಸ್ ಸಿಬ್ಬಂದಿಯ ಗುರುತು ಪತ್ತೆ ಹಚ್ಚುವುದು ಮತ್ತು ವಿಡಿಯೋ ಸಾಕ್ಷ್ಯಗಳನ್ನು ವಿಶ್ಲೇಷಿಸುವುದು ತನಿಖೆಯ ಪ್ರಮುಖ ಭಾಗವಾಗಿದೆ. ಪತ್ರಕರ್ತೆಯರು ನೀಡಿರುವ ದೂರಿನಲ್ಲಿ ದೌರ್ಜನ್ಯದ ಸ್ವರೂಪವೇನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದ್ದು, ಇದು ಕಾನೂನು ಕ್ರಮಕ್ಕೆ ದಾರಿ ಮಾಡಿಕೊಡಲಿದೆ.

