
ಸಾಂದರ್ಭಿಕ ಚಿತ್ರ
'ಕಾಕ್ರೋಚ್ ಜನತಾ ಪಕ್ಷ'ದ ಎಕ್ಸ್ ಖಾತೆ ಅನ್‌ಬ್ಲಾಕ್ ಮಾಡಲು ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಆದೇಶ
ವಾದ ಆಲಿಸಿದ ನ್ಯಾಯಮೂರ್ತಿ ಶರ್ಮಾ ಅವರು, "ನೀಟ್ ಪರೀಕ್ಷೆಯು ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದರಿಂದ, ಕೇಂದ್ರ ಸರ್ಕಾರ ಹೊಂದಿದ್ದ ಪ್ರಾಥಮಿಕ ಕಳಕಳಿ ಅಥವಾ ಆತಂಕಕ್ಕೆ ಈಗ ಯಾವುದೇ ಪ್ರಸ್ತುತತೆ ಉಳಿದಿಲ್ಲ" ಎಂದು ತಿಳಿಸಿದರು.
ಮೇ ತಿಂಗಳಲ್ಲಿ ಬ್ಲಾಕ್ ಮಾಡಲಾಗಿದ್ದ 'ಕಾಕ್ರೋಚ್ ಜನತಾ ಪಕ್ಷ'ದ ಅಧಿಕೃತ 'ಎಕ್ಸ್' ಹ್ಯಾಂಡಲ್ ಅನ್ನು ತಕ್ಷಣವೇ ಅನ್‌ಬ್ಲಾಕ್ ಮಾಡುವಂತೆ ದೆಹಲಿ ಹೈಕೋರ್ಟ್ ಮಂಗಳವಾರ(ಜು.7) ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಕೇಂದ್ರದ ನಿರ್ಬಂಧದ ಆದೇಶವನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರ ಪೀಠವು ಈ ಮಹತ್ವದ ತೀರ್ಪು ನೀಡಿದೆ.
ಕೇಂದ್ರ ಸರ್ಕಾರದ ವಾದವೇನಿತ್ತು?
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, "ಜೂ. 21 ರಂದು ನಡೆದ ನೀಟ್ ಮರು ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಅನಗತ್ಯ ಗೊಂದಲ ಹಾಗೂ ಅವ್ಯವಸ್ಥೆ ಸೃಷ್ಟಿಯಾಗುವುದನ್ನು ತಡೆಯಲು ಸಿಜೆಪಿಯ ಸಾಮಾಜಿಕ ಮಾಧ್ಯಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು" ಎಂದು ಕೋರ್ಟ್‌ಗೆ ತಿಳಿಸಿದರು.
ಹೈಕೋರ್ಟ್ ತೀರ್ಪು
ಉಭಯ ಪಕ್ಷಗಳ ವಾದ ಆಲಿಸಿದ ನ್ಯಾಯಮೂರ್ತಿ ಶರ್ಮಾ ಅವರು, "ನೀಟ್ ಪರೀಕ್ಷೆಯು ಈಗಾಗಲೇ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದರಿಂದ, ಕೇಂದ್ರ ಸರ್ಕಾರ ಹೊಂದಿದ್ದ ಪ್ರಾಥಮಿಕ ಕಳಕಳಿ ಅಥವಾ ಆತಂಕಕ್ಕೆ ಈಗ ಯಾವುದೇ ಪ್ರಸ್ತುತತೆ ಉಳಿದಿಲ್ಲ. ಈ ಹಿನ್ನೆಲೆಯಲ್ಲಿ ನಿರ್ಬಂಧದ ಆದೇಶವನ್ನು ರದ್ದುಗೊಳಿಸಲಾಗಿದ್ದು, ಅರ್ಜಿಯನ್ನು ಪುರಸ್ಕರಿಸಲಾಗಿದೆ" ಎಂದು ಆದೇಶಿಸಿದರು.
ಘಟನೆಯ ಹಿನ್ನೆಲೆ ಏನು?
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಹೇಳಿಕೆಯೊಂದರ ವಿವಾದದ ನಂತರ, ಮೇ 15 ರಂದು 'ಕಾಕ್ರೋಚ್ ಜನತಾ ಪಕ್ಷ' (ಸಿಜೆಪಿ) ಎಂಬ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯನ್ನು ಆರಂಭಿಸಲಾಯಿತು. ಈ ಸಂಘಟನೆಯ ಮೂಲ 'ಎಕ್ಸ್' ಖಾತೆಯನ್ನು ಮೇ 21 ರಂದು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಖಾತೆ ಬ್ಲಾಕ್ ಆದ ಬೆನ್ನಲ್ಲೇ ಈ ಗುಂಪು 'ಕಾಕ್ರೋಚ್ ಈಸ್ ಬ್ಯಾಕ್' (#CockroachIsBack) ಎಂಬ ಹೊಸ ಹ್ಯಾಂಡಲ್‌ನೊಂದಿಗೆ ಮತ್ತೆ ಸಕ್ರಿಯಗೊಂಡಿತ್ತು. ಪ್ರಸ್ತುತ ಈ ಖಾತೆಯು 2.27 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದೆ.
ಯುವ ಚಾಲಿತ ಆಂದೋಲನ
ತನ್ನ ವಿಭಿನ್ನ ಹಾಗೂ ಅಸಾಂಪ್ರದಾಯಿಕ ಸಂಕೇತಗಳ ಮೂಲಕ ಡಿಜಿಟಲ್ ಜಗತ್ತಿನಲ್ಲಿ ಭಾರೀ ಗಮನ ಸೆಳೆದಿರುವ ಈ ಆಂದೋಲನದ ಬೆಂಬಲಿಗರು, ʼಜಿರಳೆʼ ಗುರುತನ್ನು ಒಂದು ಪ್ರತಿಭಟನೆಯ ರೂಪವಾಗಿ ಬಳಸುತ್ತಿದ್ದಾರೆ. ಯುವಕರ ಧ್ವನಿಯನ್ನು ಬಲಪಡಿಸಲು ಮತ್ತು ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಈ ಸ್ವತಂತ್ರ ಯುವ ಚಾಲಿತ ಚಳುವಳಿಯನ್ನು ಕಟ್ಟಲಾಗಿದೆ ಎಂದು ಸಿಜೆಪಿ ಹೇಳಿಕೊಂಡಿದೆ.
ಶಿಕ್ಷಣ ಕ್ಷೇತ್ರದಲ್ಲಿನ ವ್ಯವಸ್ಥಿತ ವೈಫಲ್ಯಗಳು ಮತ್ತು ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಈ ಸಂಘಟನೆಯು ದೇಶದಾದ್ಯಂತ ದೊಡ್ಡ ಮಟ್ಟದ ಡಿಜಿಟಲ್ ಅಭಿಯಾನವನ್ನು ನಡೆಸುತ್ತಿದೆ.

